ಬೆಂಗಳೂರಿನ ಜನಪ್ರಿಯ 'ಆನಂದ್ ರಾವ್' ಸರ್ಕಲ್‌ಗೆ ಹೆಸರು ಹೇಗೆ ಬಂತು? ಯಾರು ಈ ಆನಂದ್ ರಾವ್?

Published : Nov 19, 2026, 12:45 PM IST
anand rao circle history

ಸಾರಾಂಶ

ದಿನಾ ಹಾದು ಹೋಗ್ತೀರಾ, ಆದ್ರೆ ಆನಂದ್ ರಾವ್ ಯಾರು ಗೊತ್ತಾ? ಬೆಂಗಳೂರಿನ ಕುತೂಹಲಕಾರಿ ಕಥೆ ಇಲ್ಲಿದೆ. ಫ್ಲೈಓವರ್‌ ನಿರ್ಮಾಣದ ಬಳಿಕ ಅದು ತನ್ನ ಸ್ವರೂಪವನ್ನೇ ಕಳೆದುಕೊಂಡರೂ ಅದರ ಇತಿಹಾಸ ತುಂಬಾ ರೋಚಕವಾಗಿದೆ.

ಬೆಂಗಳೂರು: ನೀವು ಬೆಂಗಳೂರು ಬಿಟ್ಟು ಊರುಗಳಿಗೆ ಹೊರಡುವಾಗ ಅಥವಾ ಊರುಗಳಿಂದ ಬೆಂಗಳೂರಿಗೆ ತಲುಪುವಾಗ ಬಸ್ ಕಂಡಕ್ಟರ್ 'ಯಾರ್ರೀ ಅದು ಆನಂದ್ ರಾವ್ ಸರ್ಕಲ್?' ಅಂತ ಜೋರಾಗಿ ಕೂಗುತ್ತಾರೆ. ಹಗಲು-ರಾತ್ರಿ ಸಾವಿರಾರು ಜನ ಓಡಾಡೋ ಈ ಸರ್ಕಲ್‌ಗೆ 'ಆನಂದ್ ರಾವ್' ಅನ್ನೋ ಹೆಸರು ಯಾಕೆ ಬಂತು? ಈ ಆನಂದ್ ರಾವ್ ಯಾರು? ಮೆಜೆಸ್ಟಿಕ್ ಸಮೀಪದ ಈ ಸರ್ಕಲ್‌ನ ರೋಚಕ ಇತಿಹಾಸ ಇಲ್ಲಿದೆ!

KRS ಡ್ಯಾಂಗೆ ಅಡಿಪಾಯ ಹಾಕಿದ್ದೇ ಇವರು!

ಮೆಜೆಸ್ಟಿಕ್ ಸಮೀಪದ ಈ ವೃತ್ತಕ್ಕೆ ಹೆಸರು ಬಂದಿದ್ದು ಮೈಸೂರು ಸಂಸ್ಥಾನದ 18ನೇ ದಿವಾನರಾಗಿದ್ದ ಸರ್.ತಂಜಾವೂರು ಆನಂದ ರಾವ್ ನೆನಪಿಗಾಗಿ! ನಮಗೆ ಕೆಆರ್‌ಎಸ್ ಅಣೆಕಟ್ಟು ಅಂದಾಕ್ಷಣ ಸರ್ ಎಂ. ವಿಶ್ವೇಶ್ವರಯ್ಯ ನೆನಪಾಗುತ್ತಾರೆ. ಆದರೆ 1911-12ರಲ್ಲಿ ಕನ್ನಂಬಾಡಿ ಕಟ್ಟೆಗೆ ನೀಲನಕ್ಷೆ ತಯಾರಿಸಿ ಆ ಬೃಹತ್ ಯೋಜನೆಗಾಗಿ ವಿಶ್ವೇಶ್ವರಯ್ಯನವರನ್ನು ಮುಖ್ಯ ಎಂಜಿನಿಯರ್ ಆಗಿ ಕರೆತಂದಿದ್ದೇ ಇದೇ ಆನಂದ ರಾವ್!

ಆಗಿನ ದಿವಾನರ ಹುದ್ದೆಯು ಇಂದಿನ ಮುಖ್ಯಮಂತ್ರಿ ಹುದ್ದೆಗೆ ಸಮನಾಗಿತ್ತು. 1852ರಲ್ಲಿ ಜನಿಸಿದ ಇವರು, 1909ರಿಂದ 1912ರವರೆಗೆ ಮೈಸೂರಿನ ದಿವಾನರಾಗಿ ಆಡಳಿತ ನೀಡಿದ್ದರು. ಇವರು ಮೈಸೂರು-ಬೆಂಗಳೂರಿನ ದಿಕ್ಕನ್ನೇ ಬದಲಿಸಿದರು. ಮೈಸೂರು, ಬೆಂಗಳೂರು ಮತ್ತು ಕೋಲಾರದ ಚಿನ್ನದ ಗಣಿಗಳಿಗೆ ವಿದ್ಯುತ್ ನೀಡಲು 1910ರಲ್ಲಿ ಶಿವನಸಮುದ್ರ ಜಲಾಶಯ ನಿರ್ಮಿಸಿದರು. ಬೆಂಗಳೂರಿನ ಪ್ರಸಿದ್ಧ ಮಿಂಟೋ ಕಣ್ಣಿನ ಆಸ್ಪತ್ರೆ ಆರಂಭವಾಗಿದ್ದೂ ಇವರ ಕಾಲದಲ್ಲೇ! ಮೈಸೂರು-ಹಾಸನ ರೈಲು ಮಾರ್ಗ ವಿಸ್ತರಿಸಿ ಶಿಕ್ಷಣಕ್ಕೂ ಭರಪೂರ ಅನುದಾನ ನೀಡಿದರು.

ಸರಳ ಜೀವಿ

ತಿರುವನಂತಪುರಂನಲ್ಲಿ ಹುಟ್ಟಿ ಮದ್ರಾಸ್‌ನಲ್ಲಿ ಓದಿ, ಕೊನೆಗೆ ಮೈಸೂರು ಸಂಸ್ಥಾನಕ್ಕೆ ಬಂದು ಅಪ್ಪಟ ಕನ್ನಡಿಗರಾಗಿ ಹೋದವರು ಇವರು. ಇವರ ದಕ್ಷತೆಗೆ ಮೈಸೂರು ಮಹಾರಾಜರು 'ಪ್ರಧಾನ ಶಿರೋಮಣಿ' ಬಿರುದು, ಬ್ರಿಟಿಷರು 'ಸರ್' ಪದವಿ ನೀಡಿ ಗೌರವಿಸಿದ್ದರು. 1912ರಲ್ಲಿ ನಿವೃತ್ತರಾದಾಗ ದೊಡ್ಡ ವಸತಿಯಲ್ಲಿ ಸವಲತ್ತು ಇದ್ದರೂ ಆನಂದ ರಾವ್ ಅದನ್ನು ಬಿಟ್ಟು ಶೇಷಾದ್ರಿ ರಸ್ತೆಯ ತಮ್ಮ ಸಾಧಾರಣ ಮನೆಯಲ್ಲೇ ಉಳಿದರು! 1919ರಲ್ಲಿ ಕೊನೆಯುಸಿರೆಳೆದಾಗ ಮಹಾರಾಜರೇ ಮನೆಗೆ ವೈದ್ಯರನ್ನು ಕಳುಹಿಸಿ ಕಾಳಜಿ ವಹಿಸಿದ್ದರಂತೆ.

ಬೆಂಗಳೂರಿನ ಮೊದಲ ಸಿಗ್ನಲ್ ನಿಂತ ಜಾಗ!

ಮಲ್ಲೇಶ್ವರ, ಶೇಷಾದ್ರಿಪುರ, ರೇಸ್ ಕೋರ್ಸ್ ರಸ್ತೆ ಮತ್ತು ಅಣ್ಣಮ್ಮ ದೇವಸ್ಥಾನ ಬೆಸೆಯುವ ವೃತ್ತಕ್ಕೆ ಇನ್ನೊಂದು ವಿಶೇಷತೆಯಿದೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಸಿಗ್ನಲ್ ಅಳವಡಿಸಿದ್ದೇ ಈ ಜಾಗಗಳಲ್ಲಿ! ಇಂದು ಫ್ಲೈಓವರ್ ಬಂದು ಹಳೆಯ ವೃತ್ತ ಮಾಯವಾಗಿದ್ದರೂ, ಖಾಸಗಿ ಬಸ್‌ಗಳ ಪ್ರಮುಖ ಕೇಂದ್ರವಾಗಿ 'ಆನಂದ್ ರಾವ್ ಸರ್ಕಲ್' ಜೀವಂತವಾಗಿದೆ. ಇಂದು ಫ್ಲೈಓವರ್ ನಿರ್ಮಾಣವಾಗಿ ವೃತ್ತದ ರೂಪ ಬದಲಾಗಿದ್ದರೂ ಹೊರಜಿಲ್ಲೆ ಹಾಗೂ ಹೊರರಾಜ್ಯದ ಖಾಸಗಿ ಬಸ್‌ಗಳ ಪ್ರಮುಖ ಕೇಂದ್ರವಾಗಿ 'ಆನಂದ್ ರಾವ್ ಸರ್ಕಲ್' ಜನಜನಿತವಾಗಿದೆ. ಮುಂದಿನ ಬಾರಿ ಈ ಸರ್ಕಲ್ ದಾಟುವಾಗ ಮೈಸೂರು-ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸಿದ ಆನಂದ ರಾವ್ ಅವರನ್ನು ಒಮ್ಮೆ ಸ್ಮರಿಸಿ.

PREV
Read more Articles on
click me!

Recommended Stories

ಬಸವ ಮಂಟಪ ಪುಸ್ತಕ ವಿವಾದ: ಲೇಖಕ ರವಿ ಹಂಜ್ ವಿರುದ್ಧ ಎಂಬಿ ಪಾಟೀಲ್ ಕೆಂಡಾಮಂಡಲ! 600 ಪುಟಗಳ ಕೃತಿಯಲ್ಲೇನಿದೆ?
ಗೆದ್ದಲಹಳ್ಳಿಯ ರೈಲ್ವೆ ವೆಂಟ್ ಯೋಜನೆ ಪೂರ್ಣ; ಬೆಂಗಳೂರಿನ ಈ ಭಾಗ ಪ್ರವಾಹದಿಂದ ಮುಕ್ತ!