ತುಮಕೂರು ಸರ್ಕಾರಿ ಅಧಿಕಾರಿ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ಜಂಟಿ ನಿರ್ದೇಶಕ ಕೃಷ್ಣಪ್ಪ ಕೊಟ್ರು ರೋಚಕ ತಿರುವು!

Published : Mar 22, 2026, 04:01 PM IST
Tumakuru Mallikarjunayya Death

ಸಾರಾಂಶ

ನಿವೃತ್ತಿಗೆ 10 ದಿನ ಬಾಕಿ ಇರುವಾಗ ಆತ್ಮ*ಹತ್ಯೆ ಮಾಡಿಕೊಂಡ ಪಾವಗಡ ಸರ್ಕಾರಿ ಅಧಿಕಾರಿ ಮಲ್ಲಿಕಾರ್ಜುನಯ್ಯ ಪ್ರಕರಣದ ಕುರಿತು, ಆರೋಪಿತ ಜಂಟಿ ನಿರ್ದೇಶಕ ಕೃಷ್ಣಪ್ಪ ಸ್ಪಷ್ಟನೆ ನೀಡಿದ್ದಾರೆ. ಮೃತರ ಪೆನ್ಷನ್ ದಾಖಲೆಗಳನ್ನು ತಾವೇ ದೃಢೀಕರಿಸಿದ್ದಾಗಿ ಹೇಳಿದ್ದು, ಪ್ರಕರಣದಲ್ಲಿ ರೋಚಕ ತಿರುವು ಸಿಕ್ಕಿದೆ.

ತುಮಕೂರು (ಮಾ.22): ಪಾವಗಡದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯ ಅವರು ನಿವೃತ್ತಿಗೆ ಕೇವಲ 10 ದಿನ ಬಾಕಿ ಇರುವಾಗ ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಮೃತರ ಡೆತ್ ನೋಟ್ ಮತ್ತು ವಿಡಿಯೋದಲ್ಲಿ ಕೇಳಿಬಂದಿದ್ದ ಗಂಭೀರ ಆರೋಪಗಳ ಬೆನ್ನಲ್ಲೇ, ಈಗ ಆರೋಪಿತ ಅಧಿಕಾರಿ, ತುಮಕೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರು ಮಾಧ್ಯಮಗಳ ಮುಂದೆ ಬಂದು ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ.

ಘಟನೆ ದುರದೃಷ್ಟಕರ, ನನ್ನ ಮನಸ್ಸಿಗೆ ನೋವಾಗಿದೆ:

ಸುದ್ದಿಗಾರರೊಂದಿಗೆ ಮಾತನಾಡಿದ ಜಂಟಿ ನಿರ್ದೇಶಕ ಕೃಷ್ಣಪ್ಪ, 'ಮಲ್ಲಿಕಾರ್ಜುನಯ್ಯ ಅವರು ನನ್ನ ಸಹೋದ್ಯೋಗಿ ಮಿತ್ರರು. ಅವರು ಕಚೇರಿಯಲ್ಲೇ ಆತ್ಮ*ಹತ್ಯೆ ಮಾಡಿಕೊಂಡ ವಿಷಯ ತಿಳಿದು ನನಗೆ ತುಂಬಾ ಆಘಾತವಾಗಿದೆ. ಕೇವಲ 10 ದಿನಗಳ ಸೇವಾವಧಿ ಬಾಕಿ ಇರುವಾಗ ಅವರು ಈ ರೀತಿಯ ನಿರ್ಧಾರ ಮಾಡಬಾರದಿತ್ತು. ನಿವೃತ್ತಿಯ ನಂತರ ಅವರು ಸುಖವಾಗಿ ಜೀವನ ನಡೆಸಬಹುದಿತ್ತು. ಅವರ ಸಾವು ಅತ್ಯಂತ ದುರದೃಷ್ಟಕರ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಶೇ. 1 ರಷ್ಟು ಕಿರುಕುಳ ನೀಡಿಲ್ಲ:

ಮಲ್ಲಿಕಾರ್ಜುನಯ್ಯ ಅವರು ಮಾಡಿರುವ ಕಿರುಕುಳದ ಆರೋಪವನ್ನು ಕೃಷ್ಣಪ್ಪ ಅವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. 'ನಾನು ವೈಯಕ್ತಿಕವಾಗಿ ಮಲ್ಲಿಕಾರ್ಜುನಯ್ಯ ಅವರಿಗೆ ಶೇ. 1 ರಷ್ಟು ಕೂಡ ತೊಂದರೆ ನೀಡಿಲ್ಲ. ನಾನು ಅವರ ಕಚೇರಿಗೆ ಭೇಟಿ ನೀಡಿ ಅವರಿಗೆ ನೋಟಿಸ್ ನೀಡಿದ ಅಥವಾ ಕಿರುಕುಳ ನೀಡಿದ ಒಂದೇ ಒಂದು ಉದಾಹರಣೆ ಇಲ್ಲ. ಪಾವಗಡ ಕಚೇರಿಯ ಸಿಬ್ಬಂದಿ ಅಥವಾ ಅಲ್ಲಿನ ನಿಲಯ ಪಾಲಕರನ್ನು ಕೇಳಿದರೆ ಸತ್ಯಾಂಶ ತಿಳಿಯುತ್ತದೆ. ನಾನು ಇಡೀ ಜಿಲ್ಲೆಯ ಎಲ್ಲಾ ಸಿಬ್ಬಂದಿಯೊಂದಿಗೆ ಕುಟುಂಬದ ಸದಸ್ಯನಂತೆ ಕೆಲಸ ಮಾಡುತ್ತಾ ಬಂದಿದ್ದೇನೆ' ಎಂದು ಹೇಳಿದ್ದಾರೆ.

ತನಿಖೆಗೆ ಪತ್ರ ಬರೆದಿದ್ದು ನಿಜ, ಆದರೆ ಅದು ಕರ್ತವ್ಯ:

ಅಧಿಕಾರಿ ಮಲ್ಲಿಕಾರ್ಜುನಯ್ಯ ಅವರ ವಿರುದ್ಧ ಕೇಳಿಬಂದಿದ್ದ ಕೆಲವು ಅಕ್ರಮಗಳ ದೂರಿನ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಸೂಚನೆಯಂತೆ ನಾನು ಪತ್ರ ಬರೆದಿದ್ದು ನಿಜ ಎಂದು ಕೃಷ್ಣಪ್ಪ ಒಪ್ಪಿಕೊಂಡಿದ್ದಾರೆ. 'ಮೇಲಾಧಿಕಾರಿಗಳಿಂದ ಬಂದ ಅರ್ಜಿಯ ಆಧಾರದ ಮೇಲೆ ತನಿಖೆ ನಡೆಸಲು ಇಬ್ಬರು ಸಿಬ್ಬಂದಿಯನ್ನು ನೇಮಕ ಮಾಡಿ ಪತ್ರ ಬರೆದಿದ್ದೆ. ಅದನ್ನು ಹೊರತುಪಡಿಸಿ ನಾನು ಯಾವುದೇ ಮಾನಸಿಕ ಕಿರುಕುಳ ನೀಡಿಲ್ಲ. ತನಿಖೆಗಾಗಿ ನಾನು ಅವರ ಕಚೇರಿಗೆ ಒಮ್ಮೆಯೂ ಭೇಟಿ ನೀಡಿರಲಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

 

ಪೆನ್ಷನ್ ದಾಖಲೆಗಳನ್ನ ನಾನೇ ದೃಢೀಕರಿಸಿದ್ದೆ:

ಇನ್ನೊಂದು ಪ್ರಮುಖ ಅಂಶವನ್ನು ಬಿಚ್ಚಿಟ್ಟ ಕೃಷ್ಣಪ್ಪ, 'ಮಲ್ಲಿಕಾರ್ಜುನಯ್ಯ ಅವರ ನಿವೃತ್ತಿಗೆ 10 ದಿನಗಳಷ್ಟೇ ಬಾಕಿ ಇತ್ತು. ಅವರ ಪೆನ್ಷನ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಾನೇ ಸ್ವತಃ ಪರಿಶೀಲಿಸಿ, ದೃಢೀಕರಿಸಿ ಮೂರು ತಿಂಗಳ ಹಿಂದೆಯೇ ಕಳುಹಿಸಿಕೊಟ್ಟಿದ್ದೇನೆ. ಅವರ ನಿವೃತ್ತಿ ಸೌಲಭ್ಯಗಳನ್ನು ತಡೆಯುವ ಯಾವುದೇ ಉದ್ದೇಶ ಅಥವಾ ಅಧಿಕಾರ ನನಗಿರಲಿಲ್ಲ. ಹೀಗಿದ್ದರೂ ಅವರು ಯಾವ ಉದ್ದೇಶಕ್ಕೆ ನನ್ನ ಹೆಸರನ್ನು ಪ್ರಸ್ತಾಪಿಸಿ ವಿಡಿಯೋ ಮಾಡಿದ್ದಾರೋ ಎಂಬುದು ನನಗೆ ತಿಳಿಯುತ್ತಿಲ್ಲ' ಎಂದು ಪ್ರಶ್ನಿಸಿದ್ದಾರೆ.

ಸಾವಿನ ಹಿಂದಿರೋ ಉದ್ದೇಶ ಬೇರೆಯದ್ದೇ ಇರಬಹುದು?

ತಮ್ಮ ಮೇಲಿನ ಆರೋಪದಿಂದ ಮುಕ್ತರಾಗಲು ಕೃಷ್ಣಪ್ಪ ಅವರು ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. 'ಇದರ ಹಿಂದೆ ಯಾವುದೋ ದುರುದ್ದೇಶ ಇರುವಂತೆ ಕಾಣುತ್ತಿದೆ. ಮಲ್ಲಿಕಾರ್ಜುನಯ್ಯ ಅವರು ಮೊದಲೇ ಅನುಕಂಪದ ಆಧಾರದಲ್ಲಿ ಕೆಲಸ ಪಡೆದಿದ್ದರು. ಇದೀಗ ನಿವೃತ್ತಿಗೆ 10 ದಿನಗಳು ಬಾಕಿ ಇರುವಾಗ ತಾವು ನೇಣಿಗೆ ಶರಣಾಗಿರುವುದರ ಹಿಂದೆಯೂ ಬೇರೆಯದೇ ಉದ್ದೇಶವೂ ಇರಬಹುದು. ಈ ಹಿನ್ನೆಲೆಯಲ್ಲಿ ಅವರ ಸಾವಿನ ಬಗ್ಗೆ ಹಾಗೂ ನನ್ನ ಮೇಲಿನ ಆರೋಪಗಳ ಬಗ್ಗೆ ಸಮಗ್ರ ತನಿಖೆಯಾಗಲಿ. ಮಲ್ಲಿಕಾರ್ಜುನಯ್ಯ ಅವರ ಸಾವಿನಲ್ಲಿ ನನ್ನ 1% ಹಸ್ತಕ್ಷೇಪವೂ ಇಲ್ಲ ಎಂದು ನನ್ನ ಆತ್ಮಸಾಕ್ಷಿಯಿಂದ ಹೇಳುತ್ತಿದ್ದೇನೆ ಎಂದು ಕೃಷ್ಣಪ್ಪ ತಿಳಿಸಿದ್ದಾರೆ.

ಮಲ್ಲಿಕಾರ್ಜುನಯ್ಯ ಅವರ ಆತ್ಮ*ಹತ್ಯೆಯ ಹಿಂದೆ ಹಿರಿಯ ಅಧಿಕಾರಿಯ ಕಿರುಕುಳವಿದೆಯೇ ಅಥವಾ ಇಲಾಖೆಯೊಳಗಿನ ಬೇರೆ ಯಾವುದಾದರೂ ಒತ್ತಡಗಳಿವೆಯೇ ಎಂಬುದು ಈಗ ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.

PREV
Read more Articles on
click me!

Recommended Stories

ಫ್ಯಾನ್ 10, ಕೋಲ್ಡ್ ವಾಟರ್ 12 ರೂ, ಚಾರ್ಜಿಂಗ್ ಫ್ರಿ, ಬೆಂಗಳೂರಿನ ಪ್ರಿಮಿಯಂ ಆಟೋ ವೈರಲ್
ಮಗಳ ವಯಸ್ಸಿನ ಅಪ್ರಾಪ್ತ ಬಾಲಕಿಗೆ ಮಗು ಕರುಣಿಸಿದ ಸುರೇಶ ಅಂಕಲ್; ಆ್ಯಂಬುಲೆನ್ಸ್‌ನಲ್ಲೇ ಹೆಣ್ಣುಮಗು ಜನನ!