
ಚಾಮರಾಜನಗರ (ಮಾ.22): ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದೇಶಿಪುರ ಗ್ರಾಮದಲ್ಲಿ ಮಾನವೀಯತೆ ಮರೆತ ಘಟನೆಯೊಂದು ಬೆಳಕಿಗೆ ಬಂದಿದೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗುವ ಮಾರ್ಗಮಧ್ಯೆಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆಯ ಬೆನ್ನಲ್ಲೇ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 46 ವರ್ಷದ ವ್ಯಕ್ತಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ದೇಶಿಪುರ ಗ್ರಾಮದ 17 ವರ್ಷದ ಬಾಲಕಿಗೆ ಮೂರು ದಿನಗಳ ಹಿಂದೆ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಬಾಲಕಿ ಮತ್ತು ಆಕೆಯ ಪೋಷಕರು ಇದು ಸಾಮಾನ್ಯ ಹೊಟ್ಟೆನೋವು ಎಂದು ಭಾವಿಸಿ ಗುಂಡ್ಲುಪೇಟೆಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಬಾಲಕಿ ಗರ್ಭಿಣಿ ಇರುವುದನ್ನು ಪತ್ತೆಹಚ್ಚಿ, ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರದ ಸಿಮ್ಸ್ (CIMS) ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು. ವೈದ್ಯರ ಸಲಹೆಯಂತೆ ಬಾಲಕಿಯನ್ನು ಆ್ಯಂಬುಲೆನ್ಸ್‌ನಲ್ಲಿ ಚಾಮರಾಜನಗರಕ್ಕೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಬಾಲಕಿಗೆ ಹೆರಿಗೆ ನೋವು ಕಾಣಿಸಿಕೊಂಡು, ಆ್ಯಂಬುಲೆನ್ಸ್‌ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ತಾಯಿ ಮತ್ತು ಮಗು ಚಾಮರಾಜನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಆಘಾತಕಾರಿ ಘಟನೆಯ ನಂತರ ಮಗುವಿನ ತಂದೆ ಯಾರು ಎಂಬ ಪ್ರಶ್ನೆ ಎದುರಾದಾಗ, ಬಾಲಕಿ ತನ್ನ ತಂದೆಯ ಮುಂದೆ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ. ತನ್ನದೇ ಗ್ರಾಮದ ನಿವಾಸಿಯಾಗಿದ್ದು, ಸಂಬಂಧಿಯೂ ಆಗಿರುವ 46 ವರ್ಷದ ಸುರೇಶ್ ಎಂಬಾತ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಲು ಕಾರಣ ಎಂದು ನಿವೇದಿಸಿಕೊಂಡಿದ್ದಾಳೆ. 17 ವರ್ಷದ ಬಾಲಕಿಯ ಮೇಲೆ ತನ್ನ ಅರ್ಧ ವಯಸ್ಸಿನ ಮಗಳ ಪ್ರಾಯದವಳು ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಸುರೇಶ್ ಎಸಗಿರುವ ಈ ಕೃತ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬಾಲಕಿಯ ಹೇಳಿಕೆಯನ್ನಾಧರಿಸಿ ಆಕೆಯ ತಂದೆ ಕೂಡಲೇ ಬೇಗೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಸುರೇಶ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಅಪ್ರಾಪ್ತ ಬಾಲಕಿಯ ಗರ್ಭಧಾರಣೆಯ ವಿಷಯ ಪೋಷಕರಿಗೆ ಇಷ್ಟು ದಿನ ತಿಳಿಯದೆ ಹೋಗಿದ್ದು ಹೇಗೆ ಮತ್ತು ಆರೋಪಿ ಸುರೇಶ್ ಬಾಲಕಿಯ ಮೇಲೆ ಯಾವ ರೀತಿ ಒತ್ತಡ ಹೇರಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಂಬಂಧಿಕರೇ ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಹೆಣ್ಣುಮಕ್ಕಳ ರಕ್ಷಣೆ ಮತ್ತು ಜಾಗೃತಿಯ ಅಗತ್ಯತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.