ಮೈದಾಳ ಮತ್ತು ನಾಗವಲ್ಲಿ ಕೆರೆಯಿಂದ ಮುಂದಿನ ಒಂದು ವಾರದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಮೂಲಕ ಯೋಜನಾ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ತಾಕೀತು ಮಾಡಿದ್ದಾರೆ.
ತುಮಕೂರು : ಮೈದಾಳ ಮತ್ತು ನಾಗವಲ್ಲಿ ಕೆರೆಯಿಂದ ಮುಂದಿನ ಒಂದು ವಾರದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಮೂಲಕ ಯೋಜನಾ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ತಾಕೀತು ಮಾಡಿದ್ದಾರೆ.
ಕ್ಷೇತ್ರದಲ್ಲಿರುವ ಕುಡಿಯವ ನೀರಿನ ಯೋಜನೆಗಳಾದ ಬಹುಗ್ರಾಮ ಕುಡಿಯುವ , ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಜೆ.ಜೆ.ಎಂ.ಗಳ ಸ್ಥಿತಿಗತಿ ಕುರಿತಂತೆ ಭಾನುವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮೈದಾಳ, ನಾಗವಲ್ಲಿ ಕರಡಿಗುಡ್ಡ ಕೆರೆಗಳ ಯೋಜನೆಗಳಿಗೆ ಭೇಟಿ ನೀಡಿ, ಶುದ್ಧೀಕರಣ ಘಟಕ, ಕೆರೆಯಿಂದ ನೀರೆತ್ತುವ ಜಾಕ್‌ವೆಲ್‌ಗಳನ್ನು ಪರಿಶೀಲನೆ ನಡೆಸಿದ ನಂತರ ಮಾತನಾಡಿದರು.
ಈ ಮೂರು ಯೋಜನೆ ಗಳಿಂದ ಮುಂದಿನ ಒಂದು ವಾರದಲ್ಲಿ ಮನೆಗಳಿಗೆ ಕುಡಿಯುವ ನೀರು ಸರಬರಾಜಾಗುವಂತೆ ಮಾಡಬೇಕೆಂದರು.
ಈ ವೇಳೆ ಮಾತನಾಡಿದ ಅವರು,ಮೈದಾಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದಲ್ಲಿ ಅನುಷ್ಠಾನಕ್ಕೆ ಬಂದ ಬಹು ನಿರೀಕ್ಷಿತ ಯೋಜನೆ.ಕಳೆದ ಐದು ವರ್ಷಗಳಿಂದ ಇದನ್ನು ಈ ಹಿಂದಿನ ಶಾಸಕ ನನಗೆ ಒಳ್ಳೆಯ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಹಾಳು ಮಾಡಿ ಇಟ್ಟಿದ್ದಾರೆ.ನೂರಾರು ಕೋಟಿ ರು.ಖರ್ಚು ಮಾಡಿದ್ದರೂ ಜನರಿಗೆ ಇದರಿಂದ ಉಪಯೋಗವಿಲ್ಲದಂತಾಗಿದೆ. 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ, ನಾನು ಶಾಸಕನಾಗಿದ್ದ ಸಂದರ್ಭದಲ್ಲಿ 11 ಹಳ್ಳಿಗಳಿಗೆ ಶುದ್ದ ಕುಡಿಯುವ ನೀರು ಒದಗಿಸಲು ಈ ಯೋಜನೆ ರೂಪಿಸ ಲಾಗಿತ್ತು. ಸುಮಾರು ಆರು ಕೋಟಿ ರು. ವೆಚ್ಚದಲ್ಲಿ ಮೈದಾಳ ಕೆರೆಯಲ್ಲಿ ಮಳೆ ನೀರಿನಿಂದ ಸಂಗ್ರಹವಾಗುವ ನೀರನ್ನು ಆಧಾರವಾಗಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿತ್ತು ಎಂದರು.
2018ರಲ್ಲಿ ನಾನು ಸೋಲು ಅನುಭವಿಸಿದ ನಂತರ ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ನಿರ್ವಹಣೆಯ ನಿರ್ಲಕ್ಷ್ಯದಿಂದಾಗಿ ಉಪಯೋಗವಿಲ್ಲದಂತಾಗಿದ್ದು,ಹಳೆಯ ಮರಳು ತೆಗೆದು ಹೊಸ ಮರಳು ಹಾಕುವುದು. ಹಾಲಮ್ ಹಾಕುವ ಮೋಟಾರ್ ರಿಪೇರಿ, ಕ್ಲೋರಿನೇಷನ್ ಮೋಟರ್ ರಿಪೇರಿ, ಶುದ್ಧ ನೀರೆತ್ತುವ ಪಂಪ್‌ಗಳ ರಿಪೇರಿ, ಈ ರೀತಿ ಹಲವು ಸಮಸ್ಯೆಗಳಿದ್ದು,ಇವುಗಳನ್ನೆಲ್ಲಾ ಸರಿಪಡಿಸಿ, ಇನ್ನೊಂದು ವಾರದಲ್ಲಿ ಜನರಿಗೆ ನೀರು ಕೊಡಲು ಸೂಚನೆ ನೀಡಿದ್ದಾರೆ. ಇನ್ನೊಂದು ವಾರದ ನಂತರ ನಾನೇ ಬಂದು,ನೀರು ಕುಡಿದು ಶುದ್ಧತೆಯನ್ನು ಪರಿಶೀಲಿಸಿ, ಜನರಿಗೂ ಈ ನೀರನ್ನೇ ಕುಡಿಯುವಂತೆ ಮನವಿ ಮಾಡುತ್ತೇನೆ ಎಂದು ಶಾಸಕ ಬಿ.ಸುರೇಶಗೌಡ ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಅವರಿಗೆ ಅತ್ಯಂತ ತುರ್ತಾಗಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ತಿಳಿಸಿದ್ದೇವೆ. ಇನ್ನೊಂದು ವಾರದಲ್ಲಿ ಮೈದಾಳ, ನಾಗವಲ್ಲಿ ಮತ್ತು ಕರಡಿಗುಡ್ಡ ಕೆರೆ ಯೋಜನೆಗಳು ತಮ್ಮ ವ್ಯಾಪ್ತಿಯ ಮನೆಗಳಿಗೆ ಶುದ್ದ ಕುಡಿಯುವ ನೀರು ಒದಗಿಸಲಿವೆ. ಈ ಹಿಂದಿನ ಶಾಸಕರು ಎಂ.ವಿ.ಎಸ್. ಕುರಿತು ಒಂದು ದಿನವೂ ಸಭೆ ನಡೆಸಿಲ್ಲ. ನನ್ನ ಕಾಲದಲ್ಲಿ ಆದ ಯೋಜನೆಯನ್ನು ಹಾಳು ಮಾಡಬೇಕೆಂಬುದೇ ಅವರ ಉದ್ದೇಶವಾಗಿತ್ತು ಎಂದು ಮಾಜಿ ಶಾಸಕರ ವಿರುದ್ಧ ಹರಿಹಾಯ್ದರು.
ಅಧಿಕಾರಿಗಳು ಹಳ್ಳಿಗಳಿಗೆ ನೀರು ನೀಡುವ ಮೊದಲು ನೀರಿನಲ್ಲಿರುವ ಫೆä್ಲೕರೈಡ್,ಟಿ.ಡಿ.ಎಸ್ ಅಂಶಗಳನ್ನು ಪರಿಶೀಲಿಸಿ, ನಾವು ಸರಬರಾಜು ಮಾಡುವ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಪರಿಶೀಲಿಸಿ, ನಂತರ ನೀಡಬೇಕೆಂದು ಸೂಚನೆ ನೀಡಿದ್ದೇನೆ. ನಾನು ಕೂಡ ಬಂದು ಪರಿಶೀಲನೆ ನಡೆಸುತ್ತಿದೆ.ಇದು ಸುರೇಶಗೌಡ ಯೋಜನೆಯಲ್ಲಿ ಜನರ ಯೋಜನೆ ನಾನು ಇರಲಿ, ಇಲ್ಲದಿರಲಿ ಯೋಜನೆ ಚಾಲ್ತಿಯಲ್ಲಿರಬೇಕು ಎಂಬುದೇ ನನ್ನ ಕಾಳಜಿಯಾಗಿದೆ.ಅಧಿಕಾರಿಗಳು ಸಹ ಎಚ್ಚೆತ್ತು ಕೆಲಸ ಮಾಡುತ್ತಿದ್ದಾರೆ. ಗ್ರಾಮಪಂಚಾಯಿತಿ ಅಧಿಕಾರಿಗಳು, ಚುನಾಯಿತ ಮಂಡಳಿಗಳು ಸಹ ಸಹಕಾರ ನೀಡಿವೆ ಎಂದು ಬಿ. ಸುರೇಶಗೌಡ ನುಡಿದರು.
ಈ ವೇಳೆ ಮೈದಾಳ ಗ್ರಾಮಪಂಚಾಯಿತಿ ಅಧ್ಯಕ್ಷೆ ಮಾಲಾ ಮಂಜುನಾಥ್, ಸದಸ್ಯರಾದ ಗಂಗಾಧರಯ್ಯ, ಕುಂಭಯ್ಯ,ಉಮೇಶ್,ಕಾಂತರಾಜು, ಮಾಜಿ ಸದಸ್ಯರಾದ ಅಯ್ಯನಪಾಳ್ಯ ಪ್ರಮೀಳಮ್ಮ,ಅರ್.ಡಬ್ಲ್ಯುಎಸ್‌ನ ಇಇ ರವಿ,ಎಇಇ ಅಶೋಕ್, ಮೈದಾಳ ಗ್ರಾ.ಪಂ ಪಿಡಿಓಗಳು, ಗುತ್ತಿಗೆದಾರರು ಉಪಸ್ಥಿತರಿದ್ದರು.