ರೈತರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಯ ಜೊತೆಗೆ, ರಸಗೊಬ್ಬರ, ಗುಣಮಟ್ಟದ ಬಿತ್ತನೆ ಬೀಜದ ಕೊರತೆ ಅನುಭವಿಸುತ್ತಿದ್ದು, ರೈತನೇ ದೇಶದ ಬೆನ್ನೆಲುಬು ಎಂಬುದಕ್ಕೆ ಬಿಜೆಪಿ ಸರ್ಕಾರದಲ್ಲಿ ಯಾವುದೇ ಬೆಲೆ ಇಲ್ಲದಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ತಿಳಿಸಿದ್ದಾರೆ.
ತುಮಕೂರು ( j. 06 ) : ರೈತರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಯ ಜೊತೆಗೆ, ರಸಗೊಬ್ಬರ, ಗುಣಮಟ್ಟದ ಬಿತ್ತನೆ ಬೀಜದ ಕೊರತೆ ಅನುಭವಿಸುತ್ತಿದ್ದು, ರೈತನೇ ದೇಶದ ಬೆನ್ನೆಲುಬು ಎಂಬುದಕ್ಕೆ ಬಿಜೆಪಿ ಸರ್ಕಾರದಲ್ಲಿ ಯಾವುದೇ ಬೆಲೆ ಇಲ್ಲದಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್ ರೈತ ಘಟಕದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದ ಜಿಡಿಪಿಗೆ ತನ್ನದೇ ಆದ ಕೊಡುಗೆ ನೀಡಿರುವ ರೈತರನ್ನು ಕಡೆಗಣಿಸಿ,ಉದ್ಯಮಿಗಳ ಪರವಾದ ನಿಲುವನ್ನು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಕೈಗೊಳ್ಳುತ್ತಿದ್ದು, ಇದರ ಭಾಗವಾಗಿಯೇ ರೈತರ ಆತ್ಮಹತ್ಯೆಗಳು ದ್ವಿಗುಣಗೊಳ್ಳುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದ ಕೃಷಿಕರಿಗೆ ಮಾರಕವಾದ ಎಪಿಎಂಸಿ ತಿದ್ದುಪಡಿ ಕಾಯ್ದೆ, ಕಂಪನಿ ಕೃಷಿ ಪದ್ದತಿ ಹಾಗೂ ಗುತ್ತಿಗೆ ಕೃಷಿ ಪದ್ದತಿಯ ವಿರುದ್ಧ ನಿರಂತರವಾಗಿ ದೆಹಲಿಯ ನಾಲ್ಕು ಗಡಿಗಳಲ್ಲಿ ಒಂದು ವರ್ಷಕ್ಕೂ ಹೆಚ್ಚುಕಾಲ ಹೋರಾಟ ನಡೆಸಿದ ರೈತರಲ್ಲಿ ಸುಮಾರು 700ಕ್ಕು ಹೆಚ್ಚು ರೈತರು ಹುತಾತ್ಮರಾದರು ಎಂದರು.
ಇದಲ್ಲೆದೆ ದೇಶದ ಹಲವೆಡೆ ಲಕ್ಷಾಂತರ ರೈತರು ಆತ್ಮಹತ್ಯೆಗೆ ಶರಣಾದರು. ಸೌಜನ್ಯಕ್ಕೂ ಮೃತ ರೈತರ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸವನ್ನು ಪ್ರಧಾನಿ ಮಾಡಲಿಲ್ಲ. ಇದು ಅವರ ರೈತಪರ ಕಾಳಜಿಯನ್ನು ವ್ಯಕ್ತಪಡಿಸುತ್ತದೆ. ಇಂತಹವರು ಕೃಷಿಗೆ ಅಗತ್ಯವಾದ ನೀರಾವರಿ ಯೋಜನೆಗಳನ್ನು ಜಾರಿಗೆ ತಂದ, ಗೇಣಿ ಪದ್ದತಿ ರದ್ದು ಮಾಡಿ, ಉಳುವವನೇ ಭೂಮಿಯ ಒಡೆಯನನ್ನಾಗಿ ಮಾಡಿದ ಕಾಂಗ್ರೆಸ್ ಪಕ್ಷ ದೇಶದ ರೈತರಿಗೆ ಏನು ಮಾಡಿದೆ ಎಂದು ಪ್ರಶ್ನಿಸಲು ಬಿಜೆಪಿಯವರಿಗೆ ನಾಚಿಕೆಯಾಗವುದಿಲ್ಲವೇ ಎಂದು ಚಂದ್ರಶೇಖರಗೌಡ ಪ್ರಶ್ನಿಸಿದರು.
ಜಿಲ್ಲಾ ಕಾಂಗ್ರೆಸ್ ರೈತ ಘಟಕದ ಅಧ್ಯಕ್ಷ ಬಿ. ಜಿ. ಗೌಡ ಮಾತನಾಡಿ, ತುಮಕೂರು ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಗಳೆಂದರೆ ಕೊಬ್ಬರಿ ಮತ್ತು ಅಡಿಕೆ. ಪ್ರಸ್ತುತ ಸರ್ಕಾರ ನಿರ್ಲಕ್ಷದಿಂದಾಗಿ ಅಡಿಕೆ ಮತ್ತು ಕೊಬ್ಬರಿ ಬೆಳೆ ಬಿದ್ದು ಹೋಗಿದೆ. ನೂರಾರು ರೈತರು ಬೀದಿಪಾಲಾಗಲಿದ್ದಾರೆ. ಕಳ್ಳತನದ ಮೂಲಕ ದೇಶಕ್ಕೆ ಬರುತ್ತಿರುವ ಅಡಿಕೆಯನ್ನು ನಿಲ್ಲಿಸಿ, ನೇರವಾಗಿ ಬರುತ್ತಿರುವ ಅಡಿಕೆಯ ಮೇಲೆ ಅತಿ ಹೆಚ್ಚು ಸೆಸ್ ಹಾಕಿ, ದೇಶದ ಅಡಿಕೆ ಬೆಳೆಗಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವಂತೆ ನಾವೆಲ್ಲರೂ ಸರ್ಕಾರವನ್ನು ಎಚ್ಚರಿಸಬೇಕಿದೆ. ಈ ನಿಟ್ಟಿನಲ್ಲಿ ಹಲವಾರು ಹೋರಾಟಗಳು ಮುಂದಿನ ದಿನಗಳಲ್ಲಿ ನಡೆಯಲಿ ಎಂದರು.
ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಆತೀಕ್ ಅಹಮದ್ ಮಾತನಾಡಿ, ರೈತನಿಂದ ಈ ದೇಶಕ್ಕೆ ಆಗುತ್ತಿರುವ ಅನುಕೂಲಗಳನ್ನು ಅರ್ಥ ಮಾಡಿಕೊಂಡಿದ್ದ ಪ್ರಧಾನಿ ಲಾಲ್‌ಬಹದ್ದೂರ ಶಾಸ್ತ್ರಿ ಜೈ ಜವಾನ್ - ಜೈ ಕಿಸಾನ್ ಎಂದು ಹೇಳಿ ರೈತನಿಗೆ ಮಹತ್ವದ ಸ್ಥಾನ ನೀಡಿದ್ದರು. ಆದರೆ ಇಂದಿನ ಬಿಜೆಪಿ ಸರ್ಕಾರ ರೈತರ ಮೇಲೆ ಲಾಠಿ ಚಾಜ್‌ರ್, ಗೋಲಿ ಬಾರಿ ನಡೆಸಿ, ಅವರನ್ನು ಅತ್ಯಂತ ತುಚ್ಚವಾಗಿ ನಡೆಸಿಕೊಳ್ಳುತ್ತಿದೆ.ಇದರ ಪರಿಣಾಮ ದೇಶದ ಅರ್ಥಿಕತೆ ಅಧೋಗತಿಗೆ ತಲುಪಿದ್ದು, ಇದಕ್ಕೆ ಉತ್ತರ ಕೊಡುವ ಕಾಲ ಈಗ ಬಂದಿದೆ. ರೈತರು ಎಚ್ಚೆತ್ತು ರೈತ ವಿರೋಧಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಪ್ರಯತ್ನಿಸಬೇಕೆಂದರು.
ವೇದಿಕೆಯಲ್ಲಿ ಮಂಚೂಣಿ ಘಟಕಗಳ ಅಧ್ಯಕ್ಷರಾದ ಲಿಂಗರಾಜು, ನರಸಿಂಹಯ್ಯ, ರೆಡ್ಡಿ, ಶಿವಾಜಿ, ರಮೇಶ್ ಸೇರಿದಂತೆ ನೂರಾರು ರೈತ ಮುಖಂಡರು ಪಾಲ್ಗೊಂಡಿದ್ದರು.
ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿದರು.