ರಾಮನಗರದ ತಿರುಪತಿ ಮಾಧರಿಯಲ್ಲಿ ಬೃಹತ್ ದೇಗುಲ ನಿರ್ಮಾಣವಾಗಲಿದೆ. ಈಗಾಗಲೇ ಜಾಗ ವೀಕ್ಷಣೆಗೂ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಎಂ. ಅಫ್ರೋಜ್ ಖಾನ್
ರಾಮನಗರ [ಜ.04]: ರಾಮನಗರದಲ್ಲಿ ಸೂಕ್ತ ಜಾಗ ಸಿಗದ ಕಾರಣ ತಿರುಮಲ ತಿರುಪತಿ ಮಾದರಿಯ ದೇವಸ್ಥಾನ ನಿರ್ಮಾಣಕ್ಕೆ ಹಿಂದೇಟು ಹಾಕಿದ್ದ ತಿರುಪತಿ ದೇಗುಲ ಆಡಳಿತ ಮಂಡಳಿ (ಟಿಟಿಡಿ) ಇದೀಗ ಮತ್ತೆ ಜಮೀನು ವೀಕ್ಷಿಸಲು ಮುಂದಾಗಿದೆ.
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ತಿರುಪತಿ ದೇಗುಲ ಆಡಳಿತ ಮಂಡಳಿ ರಾಮನಗರದಲ್ಲಿ ತಿರುಪತಿ ಮಾದರಿಯ ದೇಗುಲ ನಿರ್ಮಾಣ ಮಾಡುವ ಕುರಿತು ಪ್ರಸ್ತಾವ ಸಲ್ಲಿಸಿತ್ತು. ಇದರಿಂದ ಉತ್ಸುಕರಾಗಿದ್ದ ಕುಮಾರಸ್ವಾಮಿ, ಜಮೀನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಜಿಲ್ಲಾಡಳಿತಕ್ಕೆ ಮನವಿ: ದೇಗುಲದ ಆಡಳಿತ ಮಂಡಳಿ ದೇವಾಲಯ ನಿರ್ಮಾಣಕ್ಕೆ ಬೆಂಗಳೂರು - ಮೈಸೂರು ಹೆದ್ದಾರಿ ಅಥವಾ ಬೆಂಗಳೂರು - ಹಾಸನ ಹೆದ್ದಾರಿ ಸಮೀಪದಲ್ಲಿಯೇ 15ರಿಂದ 25ಎಕರೆ ಭೂಮಿ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಅದರಂತೆ ಕಂದಾಯ ಇಲಾಖೆ ಅಧಿಕಾರಿಗಳು ಜಾಗ ಗುರುತಿಸಲು ಸಭೆಗಳ ಮೇಲೆ ಸಭೆಗಳನ್ನು ನಡೆಸಿದ್ದರು.
ದೇಗುಲ ಕಟ್ಟಲು ಆಡಳಿತ ಮಂಡಳಿಗೆ ಕಂದಾಯ ಇಲಾಖೆ ಕೂಟಗಲ್, ಬಸವನಪುರ, ಚಾಮುಂಡಿಪುರ ಬಳಿಯ ಜಾಗಗಳನ್ನು ತೋರಿಸಿತ್ತು. ಆದರೆ, ಈ ಪ್ರದೇಶಗಳು ಸಮತಟ್ಟು ಇಲ್ಲದ ಕಾರಣ ಆಡಳಿತ ಮಂಡಳಿ ನಿರಾಕರಿಸಿತ್ತು. ಹೆದ್ದಾರಿ ಬದಿಯಲ್ಲಿಯೇ ಸಮತಟ್ಟಿನ ಜಾಗ ಬೇಕೆಂದು ಆಡಳಿತ ಮಂಡಳಿ ಪಟ್ಟು ಹಿಡಿದಿತ್ತು.
ರಾಮನಗರ ಜಿಲ್ಲೆಗೆ ಹೊಸ ಹೆಸರು!?...
ಕಳೆದ ಒಂದೂವರೆ ವರ್ಷದಿಂದ ಹುಡುಕುತ್ತಿದ್ದರೂ ಜಿಲ್ಲೆಯಲ್ಲಿ ದೇಗುಲ ನಿರ್ಮಾಣಕ್ಕೆ ಸೂಕ್ತ ಜಾಗವೇ ದೊರೆಯದ ಕಾರಣ ಜಿಲ್ಲಾಡಳಿತವೂ ಭೂಮಿ ಹುಡುಕಾಟ ಪ್ರಯತ್ನವನ್ನು ಕೈಚೆಲ್ಲಿತ್ತು. ಆದರೀಗ ಆಡಳಿತ ಮಂಡಳಿ ಉಪಮುಖ್ಯಮಂತ್ರಿಗಳಾದ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಅಶ್ವತ್ಥ್ ನಾರಾಯಣ್ ಅವರಿಗೆ ರಾಮನಗರದಲ್ಲಿ ತಿರುಪತಿ ದೇಗುಲ ನಿರ್ಮಾಣಕ್ಕೆ ಯಾವುದಾದರೂ ಜಾಗ ಮಂಜೂರು ಮಾಡಿಸಿಕೊಡುವಂತೆ ಕೋರಿಕೆ ಸಲ್ಲಿಸಿದೆ.
ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ರವರು ದೇಗುಲ ನಿರ್ಮಾಣಕ್ಕಾಗಿ ಸೂಕ್ತ ಭೂಮಿ ತೋರಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಆಡಳಿತ ಮಂಡಳಿ ಹೆದ್ದಾರಿ ಪಕ್ಕ ಹಾಗೂ ಸಮತಟ್ಟು ಭೂಮಿಗೆ ಪಟ್ಟು ಹಿಡಿಯದೆ ಬೆಟ್ಟಗುಡ್ಡ ಪ್ರದೇಶವಾದರೂ ಸರಿ ಸೂಕ್ತವಾದ ಜಾಗ ತೋರಿಸುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ನಾಲ್ಕೈದು ಜಾಗಗಳನ್ನು ತೋರಿಸಲು ಸಿದ್ಧತೆ ಮಾಡಿಕೊಂಡಿದೆ.
ಷರತ್ತುರಹಿತ ಬೇಡಿಕೆ
ಈ ಮೊದಲು ದೇವಾಲಯ ನಿರ್ಮಿಸಲು ಬೇಕಿರುವ 15ರಿಂದ 20 ಎಕರೆ ಜಾಗವನ್ನು ಹೊಂದಿಸುವುದು ಕಂದಾಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿತ್ತು. ಆದರೀಗ ಆಡಳಿತ ಮಂಡಳಿ ಯಾವುದೇ ಷರತ್ತು ಹಾಕದಿರುವ ಕಾರಣ ಅಧಿಕಾರಿಗಳು ಭೂಮಿ ಹುಡುಕಾಟಕ್ಕೆ ಕಾರ್ಯಪ್ರವೃತ್ತರಾಗಿದ್ದಾರೆ.
ಯಾವ ಉದ್ದೇಶಕ್ಕೆ ದೇಗುಲ ನಿರ್ಮಾಣ:
ರಾಮನಗರದಲ್ಲಿ ದೇಗುಲ ನಿರ್ಮಾಣಗೊಂಡರೆ, ರಾಜ್ಯದಲ್ಲಿ ಮೊದಲ ಹಾಗು ದೇಶದ 4ನೇ ತಿರುಪತಿ ದೇವಾಲಯ ಇದಾಗಲಿದೆ. ಪುಣೆಯಲ್ಲಿ ಈಗಾಗಲೇ ತಿರುಪತಿ ದೇವಾಲಯ ಇದೆ. ಹೀಗಾಗಿ ಜಿಲ್ಲಾಡಳಿತ ಮಾತ್ರವಲ್ಲ, ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರ ಸಹ ಜಿಲ್ಲೆಯಲ್ಲಿ ದೇವಾಲಯ ನಿರ್ಮಿಸಲು ಉತ್ಸಕರಾಗಿದ್ದಾರೆ.
‘ಡಿ.ಕೆ.ಶಿವಕುಮಾರ್ ಅವರು ಬಾಬರ್ ಸಂತತಿಗೆ ಸೇರಿದವರು...
ತಿರುಮಲ ತಿರುಪತಿ ದೇವಸ್ಥಾನದ ಮಾದರಿಯಲ್ಲಿ ದೇಶದಾದ್ಯಂತ ದೇವಸ್ಥಾನ ನಿರ್ಮಾಣ, ಹಿಂದೂ ಸನಾತನ ಪರಂಪರೆಯನ್ನು ಎತ್ತಿ ಹಿಡಿಯುವ ಹಾಗೂ ಶ್ರೀ ವೆಂಕಟೇಶ್ವರ ಭಕ್ತಿ ಪಂಥವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತಿರುಪತಿ ದೇಗುಲ ಆಡಳಿತ ಮಂಡಲಿ ಮುಂದಡಿಯಿಟ್ಟಿದೆ. ರಾಜ್ಯ ಸರ್ಕಾರ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ವ್ ಜತೆ ಕೈ ಜೋಡಿಸಿ ಈ ದೇಗುಲ ನಿರ್ಮಿಸಲಿದೆ. ಇದರ ನಿರ್ವಹಣೆಯನ್ನು ಟಿಟಿಡಿ ನೋಡಿಕೊಳ್ಳಲಿದೆ.
ತಿರುಮಲ ತಿರುಪತಿ ಮಾದರಿಯ ದೇವಸ್ಥಾನ ನಿರ್ಮಿಸಲು ರಾಮನಗರದಲ್ಲಿ ಭೂಮಿ ಒದಗಿಸಿಕೊಡುವಂತೆ ಉಪಮುಖ್ಯಮಂತ್ರಿ ಅಶ್ವತ್‌್ಥ ನಾರಾಯಣ್ ಅವರನ್ನು ಭೇಟಿಯಾಗಿದ್ದಾರೆ. ಉಪಮುಖ್ಯಮಂತ್ರಿಗಳು ನಮಗೆ ಭೂಮಿ ಗುರುತಿಸಿ ತೋರಿಸುವಂತೆ ಸೂಚನೆ ನೀಡಿದ್ದಾರೆ. ಆಡಳಿತ ಮಂಡಳಿಯವರು ಬಂದಲ್ಲಿ ಜಾಗ ತೋರಿಸುತ್ತೇವೆ.
- ಎಂ.ಎಸ್. ಅರ್ಚನಾ, ಜಿಲ್ಲಾಧಿಕಾರಿಗಳು, ರಾಮನಗರ