ಆನೆಗೊಂದಿ ಉತ್ಸವಕ್ಕೆ ದಿನಗಣನೆ: ಪ್ರೇಕ್ಷಕರ ಮೈನವಿರೇಳಿಸಿದ ಬೈಕ್‌ ಸ್ಟಂಟ್‌

By Suvarna NewsFirst Published Jan 4, 2020, 10:44 AM IST
Highlights

ಆನೆಗೊಂದಿ ಉತ್ಸವದ ಅಂಗವಾಗಿ ಬೈಕ್‌ ಸಾಹಸ ಮತ್ತು ಗಾಳಿಪಟಗಳ ಹಾರಾಟ ಪ್ರದರ್ಶನ| ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಬೈಕ್ ಸಾಹಸ ಪ್ರದರ್ಶನ|  ಗಾಳಿ ಪಟ ಹಾರಿಸುವ ಮೂಲಕ ಚಾಲನೆ ನೀಡಿದ ಶಾಸಕ ಪರಣ್ಣ ಮುನವಳ್ಳಿ ಮತ್ತು ಜಿಲ್ಲಾಧಿಕಾರಿ ಸುನೀಲ್‌ ಕುಮಾರ|

ಗಂಗಾವತಿ(ಜ.04): ತಾಲೂಕಿನ ಆನೆಗೊಂದಿ ಉತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಇದರ ಅಂಗವಾಗಿ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೈಕ್‌ ಸಾಹಸ ಮತ್ತು ಗಾಳಿಪಟಗಳ ಹಾರಾಟ ಗಮನ ಸೆಳೆಯಿತು.

ಜ. 9 ಮತ್ತು 10ರಂದು ನಡೆಯುವ ಆನೆಗೊಂದಿ ಉತ್ಸವದ ಪೂರ್ವಭಾವಿಯಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕ್ರೀಡಾ ಸಮಿತಿ ಉತ್ಸವ ಏರ್ಪಡಿಸಿದ್ದ ಈ ಕಾರ್ಯಕ್ರಮವನ್ನು ಶಾಸಕ ಪರಣ್ಣ ಮುನವಳ್ಳಿ ಮತ್ತು ಜಿಲ್ಲಾಧಿಕಾರಿ ಸುನೀಲ್‌ ಕುಮಾರ ಗಾಳಿ ಪಟ ಹಾರಿಸುವ ಮೂಲಕ ಚಾಲನೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಳ್ಳಾರಿಯ ಶಕೀಬ್‌ ನೋಪಾಸನ ತಂಡ ಮೂರು ಬೈಕ್‌ಗಳಲ್ಲಿ ಸಂಟ್‌ ಮಾಡುವ ಮೂಲಕ ನೆರದವರು ಕಣ್ಣು ಮಿಟುಕಿಸದಂತೆ, ಮೈಯಲ್ಲಿನ ರೋಮ ಸೆಟೆದು ನಿಲ್ಲುವಂತಹ ಸಾಹಸ ಪ್ರದರ್ಶಿಸಿದರು. ಇವುಗಳನ್ನು ಕಣ್ಮುಂಬಿಕೊಂಡ ಪ್ರೇಕ್ಷಕರ ಸಿಳ್ಳೆ, ಕೇಕೆಯಿಂದ ಉತ್ಸಾಹಕೊಂಡು ಬೈಕ್‌ ಸವಾರರು ಮತ್ತಷ್ಟು ಸಾಹಸಗಳನ್ನು ಪ್ರದರ್ಶಿಸಿದರು. ಭಟ್ಕಳದ ಸೈಯದ್‌ ಗೌಸ್‌, ಅಖಿಲ್‌ ಮತ್ತು ಸಚಿನ್‌ ಬೈಕ್‌ ಮೇಲೆ ಸಾಹಸ ಮಾಡಿದರೆ, ಬೈಕ್‌ ಮೇಲೆ ನಿಂತು ಓಡಿಸುವದು, ಹಿಂಭಾಗ ಗಾಳಿಯ ಮೇಲೆ ಚಲಿಸುವುದು, ಯೋಗಾಸನ, ಸೀಟ್‌ ಮೇಲೆ ಹಿಂಭಾಗದಲ್ಲಿ ಕುಳಿತು ಬೈಕ್‌ ಓಡಿಸುವುದು, ಕತಕ ದ್ವಾರ ರಚಿಸಿ ಸುತ್ತಲು ಬೆಂಕಿ ಹಚ್ಚಿ ಒಳಗಿನಿಂದ ಬೈಕ್‌ ಓಡಿಸುತ್ತಿದ್ದಂತೆ ಜನರು ಕರಡಾತನ ಮುಗಿಲು ಮುಟ್ಟಿತ್ತು.

ಹಾರಾಡಿದ ಗಾಳಿಪಟ:

ಮೈಸೂರು ಮತ್ತು ದೊಡ್ಡ ಬಳ್ಳಾಪುರದಿಂದ ಬಂದಿದ್ದ ಗಾಳಿ ಪಟ ಸ್ಪರ್ಧಿಗಳು ರಂಗು ರಂಗಿನ ಗಾಳಿ ಪಟ ಆರಿಸಿ ನೆರದವರನ್ನು ರಂಜಿಸಿದರು. ಬೈಕ್‌ ಸಂಟ್‌ ಹಾಗೂ ಗಾಳಿ ಪಟ ಸ್ಪರ್ಧೆ ನೋಡಲು ಸಾರ್ವಜನಿಕರು ತಂಡೋಪ ತಡವಾಗಿ ಬಂದರೆ, ಯುವಕರು ಬೈಕ್‌ ಸಂಟ್‌ ನೋಡಲು ತಾ ಮುಂದು, ನಾ ಮುಂದು ಎಂದು ಕ್ರೀಡಾಂಗಣದತ್ತ ಹೆಜ್ಜೆ ಹಾಕಿದರು.

ಆನೆಗೊಂದಿ ಉತ್ಸವ ಯಶಸ್ವಿಗೊಳಿಸಿ

ಗತ ವೈಭವ ಸಾರುವ ಆನೆಗೊಂದಿ ಉತ್ಸವದಲ್ಲಿ ಸರ್ವರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.ನಗರದ ತಾಲೂಕು ಕ್ರೀಡಾಂಗಣದಲ್ಲಿ ಬೈಕ್‌ ಸಾಹಸ ಮತ್ತು ಗಾಳಿ ಪಟ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಆನೆಗೊಂದಿ ಈ ಭಾಗದಲ್ಲಿ ಐತಿಹಾಸಿಕ ಪ್ರಸಿದ್ಧಿ ಪಡೆದಿದೆ. ಉತ್ಸವಕ್ಕೆ ಸರ್ಕಾರ ಅನುದಾನ ನೀಡಿದ್ದು ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನೋತ್ಸವ ಆಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಪಂ ಅಧ್ಯಕ್ಷ ವಿಶ್ವನಾಥರೆಡ್ಡಿ ಮಾತನಾಡಿ, ಉತ್ಸವಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು. ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ ಮಾತನಾಡಿ, ಉತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ವೇಳೆ ಎಸ್ಪಿ ಸಂಗೀತಾ, ಸಹಾಯಕ ಆಯುಕ್ತೆ ಸಿ.ಡಿ. ಗೀತಾ, ಜಿಪಂ ಮಾಜಿ ಸದಸ್ಯ ಎಚ್‌.ಎಂ. ಸಿದ್ದರಾಮಸ್ವಾಮಿ, ತಹಸೀಲ್ದಾರ್‌ ಚಂದ್ರಕಾಂತ, ಇಒ ಡಾ. ಮೋಹನ್‌, ಬಿಇಒ ಸೋಮಶೇಖರಗೌಡ ಉಪಸ್ಥಿತರಿದ್ದರು.
 

click me!