
ಬೆಂಗಳೂರು: ರಸ್ತೆ ಮಾರ್ಗ ಬದಲಾವಣೆ ಬಗ್ಗೆ ಸೂಚನೆ ನೀಡುತ್ತಿದ್ದ ಸಂಚಾರ ವಿಭಾಗದ ಪೊಲೀಸರ ಮೇಲೆ ಸರಕು ಸಾಗಾಣಿಕೆ ವಾಹನ ಹರಿಸಿ ದುಂಡಾವರ್ತನೆ ತೋರಿದ್ದ ಚಾಲಕನನ್ನು ಚಿಕ್ಕಜಾಲ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಯಲಹಂಕದ ನಿವಾಸಿ ಬರ್ಖಾತ್ ಖಾನ್ ಬಂಧಿತನಾಗಿದ್ದು, ಹುಣಸಮಾರನಹಳ್ಳಿ ಸಮೀಪ ಚಿಕ್ಕಜಾಲ ಸಂಚಾರ ಠಾಣೆ ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಈ ಕೃತ್ಯ ನಡೆದಿದೆ. ಈ ಘಟನೆಯಲ್ಲಿ ಗಾಯಗೊಂಡಿರುವ ಹೆಡ್ ಕಾನ್‌ಸ್ಟೇಬಲ್ ಬಿ.ವಿಕಾಸ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹುಣಸಮಾರನಹಳ್ಳಿ ಬಳಿ ಮಾರ್ಗ ಬದಲಾವಣೆ ಸ್ಥಳದಲ್ಲಿ ಕರ್ತವ್ಯದಲ್ಲಿ ನಿರತನಾಗಿದ್ದ ವೇಳೆ ಹುಣಸಮಾರನಹಳ್ಳಿಯಿಂದ ನಗರಕ್ಕೆ ಸರ್ವೀಸ್ ರಸ್ತೆಯಲ್ಲಿ ಸರಕು ಸಾಗಾಣಿಕೆ ವಾಹನ ಬರುತ್ತಿತ್ತು. ಆವಾಹನದ ಚಾಲಕನಿಗೆ ದೂರದಿಂದಲೇ ನಿಲ್ಲಿಸುವಂತೆ ನೀಡಿದ ಸೂಚನೆಯನ್ನು ಧಿಕ್ಕರಿಸಿ ಮುಂದೆಯೇ ಬರುತ್ತಿದ್ದನು. ಆಗ ಆತನನ್ನು ತಡೆದು ವಾಹನಗಳಿಗೆ ನಗರಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಲಾಯಿತು, ಆದರೆ ಆತ ಮಾತು ಕೇಳದೇ ವಾಹನ ಚಲಾಯಿಸಲು ಚಾಲಕ ಮುಂದಾದ. ಇದಕ್ಕೆ ಆಕ್ಷೇಪಿಸಿದಾಗ ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾತ್ರವಲ್ಲದೆ ತನ್ನ ವಾಹನವನ್ನು ಗುದ್ದಿಸಿದ ಎಂದು ದೂರಿನಲ್ಲಿ ವಿಕಾಸ್ ವಿವರಿಸಿದ್ದಾರೆ.
ಈ ಘಟನೆಯಿಂದ ವಿಕಾಸ್ ಅವರ ಎರಡು ಕಾಲುಗಳಿಗೆ ಪೆಟ್ಟಾಗಿದೆ. ಮೊಣಕಾಲಿಗೆ ತೀವ್ರವಾಗಿ ರಕ್ತ ಗಾಯಗಳಾಗಿದೆ. ತಕ್ಷಣ ವಿಕಾಸ್ ಅವರನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದರು.
ಆರೋಪಿ ಮೂಲತಃ ರಾಜಸ್ಥಾನ ರಾಜ್ಯದವನಾಗಿದ್ದು, ಹಲವು ದಿನಗಳ ಹಿಂದೆ ಕೆಲಸ ಅರಸಿ ಆತ ನಗರಕ್ಕೆ ಬಂದಿದ್ದ. ಯಲಹಂಕ ಸಮೀಪ ಗ್ಯಾಸ್ ಏಜೆನ್ಸಿಯಲ್ಲಿ ವಾಹನ ಚಾಲಕನಾಗಿ ಖಾನ್ ಕೆಲಸ ಮಾಡುತ್ತಿದ್ದ. ನಗರಕ್ಕೆ ಗ್ಯಾಸ್ ಪೂರೈಕೆ ಸಲುವಾಗಿ ಹೋಗುವಾಗ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.