Tumkur: ಪ್ರೀತಿಯಿಂದ ಸಾಕಿದ ಮಗ, ಒಡಹುಟ್ಟಿದ ತಂಗಿಯೇ ಹಂತಕರು; ಚಿಕ್ಕನಾಯಕನಹಳ್ಳಿಯ ಜಯಲಕ್ಷ್ಮಿ ಸಾವಿನ ರಹಸ್ಯ ಬಯಲು!

Published : Feb 19, 2026, 11:11 PM IST
Tumkur Murder News

ಸಾರಾಂಶ

ಚಿಕ್ಕನಾಯಕನಹಳ್ಳಿಯ ಎಫ್‌ಡಿಎ ಅಧಿಕಾರಿ ಜಯಲಕ್ಷ್ಮಿ ಅವರ ಅನುಮಾನಾಸ್ಪದ ಸಾವು ಕೊಲೆ ಎಂದು ಸಾಬೀತಾಗಿದೆ. ಆಸ್ತಿಗಾಗಿ ಆಕೆಯ ಸ್ವಂತ ಸಹೋದರಿ ಮತ್ತು ದತ್ತು ಪುತ್ರನೇ ಉಸಿರುಗಟ್ಟಿಸಿ ಕೊಲೆ ಮಾಡಿ, ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದರು. 

ತುಮಕೂರು (ಫೆ.19): ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಶಿಕ್ಷಣ ಇಲಾಖೆಯ ಎಫ್‌ಡಿಎ (FDA) ಅಧಿಕಾರಿ ಜಯಲಕ್ಷ್ಮಿ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಈಗ ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು, ಆಸ್ತಿಗಾಗಿ ಆಕೆಯನ್ನು ಸ್ವಂತ ತಂಗಿ ಮತ್ತು ದತ್ತು ಪುತ್ರನೇ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಮೂಲತಃ ತುರುವೇಕೆರೆ ತಾಲ್ಲೂಕಿನ ಕಂಟಲಗೆರೆ ಗ್ರಾಮದ ಜಯಲಕ್ಷ್ಮಿ (58), ತಾಲ್ಲೂಕಿನ ಬಿಇಓ ಕಚೇರಿಯಲ್ಲಿ ಎಫ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಇವರಿಗೆ ಮಕ್ಕಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ಅವರಿಗೆ ಕೆಲಸ ಸಿಕ್ಕಿತ್ತು. ಜಯಲಕ್ಷ್ಮಿ ಅವರು ತಮ್ಮ ಸ್ವಂತ ಸಹೋದರಿ ಅನುಸೂಯ ಎಂಬಾಕೆಯ ಮಗ ಚಂದ್ರಶೇಖರ್‌ನನ್ನು ದತ್ತು ಪಡೆದು ಸಾಕುತ್ತಿದ್ದರು. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೋಗಿಹಳ್ಳಿಯಲ್ಲಿರುವ ಮನೆಯಲ್ಲಿ ಇವರೆಲ್ಲರೂ ವಾಸವಾಗಿದ್ದರು. ಜಯಲಕ್ಷ್ಮಿ ಅವರು ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನೆಲ್ಲಾ ದತ್ತು ಮಗ ಚಂದ್ರಶೇಖರ್ ಹೆಸರಿಗೆ ವಿಲ್ ಮಾಡಿದ್ದರು ಎನ್ನಲಾಗಿದೆ.

ಬುಧವಾರ ರಾತ್ರಿ ಜಯಲಕ್ಷ್ಮಿ ಮನೆಯಲ್ಲಿ ಮೃತಪಟ್ಟಿದ್ದರು. ಮರುದಿನ ಬೆಳಗ್ಗೆ ಆರೋಪಿಗಳಾದ ಅನುಸೂಯಾ ಮತ್ತು ಚಂದ್ರಶೇಖರ್, ಜಯಲಕ್ಷ್ಮಿ ಅವರದ್ದು ಸಹಜ ಸಾವು ಎಂದು ಬಿಂಬಿಸಿ ಗುಟ್ಟಾಗಿ ಅಂತ್ಯಕ್ರಿಯೆ ಮಾಡಲು ಸಿದ್ಧತೆ ನಡೆಸಿದ್ದರು. ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಚಿಕ್ಕನಾಯಕನಹಳ್ಳಿ ಪೊಲೀಸರು, ಸಿನಿಮಾ ಮಾದರಿಯಲ್ಲಿ ಸ್ಮಶಾನಕ್ಕೆ ಎಂಟ್ರಿ ಕೊಟ್ಟು ಅಂತ್ಯಕ್ರಿಯೆಯನ್ನು ಅರ್ಧಕ್ಕೆ ನಿಲ್ಲಿಸಿದರು.

ತನಿಖೆಯಲ್ಲಿ ಬಯಲಾದ ಸತ್ಯ

ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದಾಗ, ಜಯಲಕ್ಷ್ಮಿ ಅವರ ಸಾವು ಸಹಜವಲ್ಲ ಎಂಬುದು ಸಾಬೀತಾಗಿದೆ. ಆರೋಪಿಗಳು ಹಣ ಮತ್ತು ಆಸ್ತಿಯ ಹಪಾಹಪಿಯಿಂದ ಜಯಲಕ್ಷ್ಮಿ ಅವರ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಸದ್ಯ ಚಿಕ್ಕನಾಯಕನಹಳ್ಳಿ ಪೊಲೀಸರು ಸಹೋದರಿ ಅನುಸೂಯಾ ಮತ್ತು ದತ್ತು ಪುತ್ರ ಚಂದ್ರಶೇಖರ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆಸ್ತಿಗಾಗಿ ಪ್ರೀತಿಯಿಂದ ಸಾಕಿದ ಮಗ ಮತ್ತು ಸ್ವಂತ ತಂಗಿಯೇ ಕೊಲೆಗಾರರಾಗಿರುವುದು ಇಡೀ ಜೋಗಿಹಳ್ಳಿಯನ್ನು ಬೆಚ್ಚಿಬೀಳಿಸಿದೆ.

 

PREV
Read more Articles on
click me!

Recommended Stories

Udupi: ಫೇಸ್‌ಬುಕ್ ಫ್ರೆಂಡ್ ಕಳುಹಿಸಿದ 'ಡಾಲರ್‌' ನಂಬಿ ₹7.10 ಲಕ್ಷ ಕಳೆದುಕೊಂಡ ಕುಂದಾಪುರ ಮಹಿಳೆ; ನೀವೂ ಹುಷಾರ್!
ನಂದಿನಿ ಉತ್ಪನ್ನ 'ವಿಷ' ಎಂದ ವೈದ್ಯೆಗೆ ಶಾಕ್: ಡಾ. ಶರಣ್ಯಾ ಪದ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ ಕೆಎಂಎಫ್!