ಅಕ್ಕಪಕ್ಕದಲ್ಲೇ ಚಲಿಸುತ್ತಿದ್ದ ಎರಡೂ ಕಾರುಗಳ ಚಾಲಕರು ಮರ ರಸ್ತೆಗೆ ವಾಲುತ್ತಿರುವುದನ್ನು ದೂರದಿಂದಲೇ ಗಮನಿಸಿ ಬ್ರೇಕ್ ಹಾಕಿದ್ದಾರೆ. ಕಾರು ನಿಯಂತ್ರಣಕ್ಕೆ ಬರುವ ವೇಳೆಗೆ ಮರ ಎರಡೂ ಕಾರಿನ ಬಾನೆಟ್ ಮೇಲೆ ಉರುಳಿ ಬಿದ್ದಿದೆ. ಕೂದಲೆಳೆ ಅಂತರದಲ್ಲಿ ಚಾಲಕರು ಪಾರಾಗಿದ್ದಾರೆ. ಮತ್ತೊಂದು ಬದಿಯಲ್ಲಿ ನಿಂತಿದ್ದ ಆಟೋ ರಿಕ್ಷಾ ಮೇಲೆ ಮರ ಬಿದ್ದಿರುವುದರಿಂದ ಸಂಪೂರ್ಣ ಜಖಂಗೊಂಡಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು(ಜು.26): ನಿರಂತರ ಬಿರುಗಾಳಿ-ಮಳೆಗೆ ಚಿಕ್ಕಮಗಳೂರು ನಗರ ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ಅನಾಹುತಗಳ ಸರಣಿ ಮುಂದುವರಿದಿದೆ. ಇಂದು(ಶುಕ್ರವಾರ) ಬೆಳಗ್ಗೆ ನಗರದ ಗವನಗಳ್ಳಿ ಬಳಿ ರಸ್ತೆ ಬದಿಯ ಭಾರೀ ಗಾತ್ರದ ಸಿಲ್ವರ್ ಮರವೊಂದು ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಉರುಳಿ ಬಿದ್ದ ಪರಿಣಾಮ ಚಲಿಸುತ್ತಿದ್ದ ಎರಡು ಕಾರುಗಳು ಹಾಗೂ ಒಂದು ಆಟೋರಿಕ್ಷ ಜಖಂಗೊಂಡಿದ್ದು, ಪವಾಡ ಸದೃಶ ರೀತಿಯಲ್ಲಿ ಚಾಲಕರು ಜೀವಾಪಾಯದಿಂದ ಪಾರಾಗಿದ್ದಾರೆ.
ಅಕ್ಕಪಕ್ಕದಲ್ಲೇ ಚಲಿಸುತ್ತಿದ್ದ ಎರಡೂ ಕಾರುಗಳ ಚಾಲಕರು ಮರ ರಸ್ತೆಗೆ ವಾಲುತ್ತಿರುವುದನ್ನು ದೂರದಿಂದಲೇ ಗಮನಿಸಿ ಬ್ರೇಕ್ ಹಾಕಿದ್ದಾರೆ. ಕಾರು ನಿಯಂತ್ರಣಕ್ಕೆ ಬರುವ ವೇಳೆಗೆ ಮರ ಎರಡೂ ಕಾರಿನ ಬಾನೆಟ್ ಮೇಲೆ ಉರುಳಿ ಬಿದ್ದಿದೆ. ಕೂದಲೆಳೆ ಅಂತರದಲ್ಲಿ ಚಾಲಕರು ಪಾರಾಗಿದ್ದಾರೆ. ಮತ್ತೊಂದು ಬದಿಯಲ್ಲಿ ನಿಂತಿದ್ದ ಆಟೋ ರಿಕ್ಷಾ ಮೇಲೆ ಮರ ಬಿದ್ದಿರುವುದರಿಂದ ಸಂಪೂರ್ಣ ಜಖಂಗೊಂಡಿದೆ. ಮರ ಬಿದ್ದ ಕೂಡಲೇ ಸ್ಥಳೀಯರು ಧಾವಿಸಿ ಬಂದಿದ್ದಾರೆ. ಅಲ್ಲೇ ಇರುವ ಸಾಮಿಲ್‌ನ ಕಾರ್ಮಿಕರ ಸಹಕಾರದೊಂದಿಗೆ ಯಂತ್ರಗಳನ್ನು ಬಳಸಿ ಗಂಟೆಗಳ ಶ್ರಮದೊಂದಿಗೆ ಮರವನ್ನು ಕತ್ತರಿಸಿ ತೆರವು ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಘನಟೆ ಸಂಭವಿಸಿದ್ದರಿಂದ ಎರಡೂ ಬದಿಯಲ್ಲಿ ನೂರಾರು ವಾಹನಗಳು ಸಿಕ್ಕಿಕೊಂಡು ಟ್ರಾಫಿಕ್ ಜಾಮ್ ಉಂಟಾಯಿತು.
ಚಿಕ್ಕಮಗಳೂರು: ಹೆಬ್ಬಾಳೆ ಸೇತುವೆ ಮೇಲೆ ಜೀಪ್ ಗ್ರೇಟ್ ಎಸ್ಕೇಪ್, ಮೊಬೈಲ್‌ನಲ್ಲಿ ದೃಶ್ಯ ಸೆರೆ..!
ತೋಟಗಳು ಜಲಾವೃತ
ಭಾರೀ ಮಳೆಯಿಂದಾಗಿ ಭದ್ರ ನದಿಯ ಅಬ್ಬರಕ್ಕೆ ಬಾಳೆಹೊನ್ನೂರಿನಲ್ಲಿ ತೋಟಗಳು ಮುಳುಗಡೆಯಾಗಿವೆ. ಪಟ್ಟಣದ ಸಂತೆ ಮೈದಾನವೂ ಜಲಾವೃತಗೊಂಡಿದೆ. ಪಟ್ಟಣದೊಳಗೆ ಭದ್ರಾ ನದಿ ನೀರು ನುಗ್ಗಿದೆ. ನದಿ ಪಾತ್ರದ ಅಡಿಕೆ, ಕಾಫಿ ತೋಟಗಳು ಸಂಪೂರ್ಣ ಜಲಾವೃತಗೊಂಡಿವೆ. ಎರಡು ವರ್ಷಗಳ ನಂತರ ನೆರೆ ಪರಿಸ್ಥಿತಿ ಮರುಕಳಿಸಿದೆ. ಮುನ್ನೆಚ್ಚರಿಕೆ ವಹಿಸಿರುವ ಪೊಲೀಸ್ರು ಜನರ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ.
ಧರೆಗುರುಳಿದ ಕಂಬಗಳು
ಭಾರಿ ಗಾಳಿ ಮಳೆಗೆ ಸಾಲು ಸಾಲಾಗಿ ಧರೆಗುರುಳಿದ ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ಬಾಳೆಹೊನ್ನೂರು ಪಟ್ಟಣದ ರಂಭಾಪುರಿ ಮಠದ ರಸ್ತೆಯಲ್ಲಿ ನಡೆದಿದೆ. ಸ್ಥಳೀಯರ ಮಾಹಿತಿಯಿಂದ ಮೆಸ್ಕಾಂ ಸಿಬ್ಬಂಧಿ ತಕ್ಷಣ ಸ್ಥಳಕ್ಕೆ ಧಾವಿಸಿದ ಪರಿಣಾಮ ಅನಾಹುತ ತಪ್ಪಿದೆ.ರಸ್ತೆಯಲ್ಲಿ ವಿದ್ಯುತ್ ತಂತಿ ಬಿದ್ದ ಪರಿಣಾಮ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ಮಠದ ರಸ್ತೆಯ 7ರಿಂದ 8೮ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಕಳೆದ ನಾಲ್ಕೈದು ದಿನಗಳಿಂದ ಈ ಭಾಗದಲ್ಲಿ ವಿದ್ಯುತ್ ಕಣ್ಣ ಮುಚ್ಚಾಲೆ ನಡೆಯುತ್ತಲೇ ಇದೆ.
ಮುಂಗಾರು ಮಳೆ ಅಬ್ಬರಕ್ಕೆ ಕಾಫಿನಾಡಿನಲ್ಲಿ 100 ಕೋಟಿಗೂ ಅಧಿಕ ನಷ್ಟ: ಮುಳ್ಳಯ್ಯನಗಿರಿ ಪ್ರದೇಶಕ್ಕೆ ನಿಷೇಧ ಮುಂದುವರಿಕೆ
ದೇವಾಲಯ ನೆಲಸಮ
ಭಾರೀ ಮಳೆಯಿಂದಾಗಿ ತಡೆಗೊಡೆ ಕುಸಿದು ದೇವಾಲಯ ನೆಲಸಮಗೊಂಡ ಘಟನೆ ಕೊಪ್ಪ ತಾಲ್ಲೂಕು ಬಸರಿಕಟ್ಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೊಡಮಣಿ ತಾಯಿ ದೇವಾಲಯ ನೆಲೆಸಮಗೊಂಡಿದೆ. ಮುತ್ತೊಂದು ದೇವಾಲಯ ಬಳಿಯು ಮಣ್ಣು ಕುಸಿಯುವ ಭೀತಿ ಎದುರಾಗಿದೆ.
ಶನಿವಾರವೂ ರಜೆ
ಗಾಳಿ-ಮಳೆಯಿಂದಾಗಿ ಅನಾಹುತಗಳು ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶನಿವಾರವೂ ಜಿಲ್ಲೆಯ ಮಲೆನಾಡಿನ 6 ತಾಲ್ಲೂಕುಗಳ ಅಂಗನವಾಡಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ರಜೆ ಘೋಷಿಸಿ ಆದೇಶಿಸಿದ್ದಾರೆ.ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ ಹಾಗು ಎನ್.ಆರ್.ಪುರ ತಾಲ್ಲೂಕುಗಳಿಗೆ ರಜೆ ಅನ್ವಯಿಸಲಿದ್ದು, ಕಡೂರು, ತರೀಕೆರೆ, ಅಜ್ಜಂಪುರ ತಾಲ್ಲೂಕುಗಳಿಗೆ ರಜೆ ಇರುವುದಿಲ್ಲ.