ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸಂಪೂರ್ಣ ಬಂದ್‌

By Kannadaprabha News  |  First Published Aug 8, 2020, 10:33 AM IST

ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಭೂಕುಸಿತಗಳಾಗುತ್ತಿದೆ. ಆಲೇಕಾನ್‌ ಹೊರಟಿ ಸಮೀಪ ರಸ್ತೆಯಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದು, ಅಪಾಯಕಾರಿ ಸ್ಥಿತಿಯಿರುವ ಕಾರಣ ಘಾಟಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ತಡೆಹಿಡಿಯಲಾಗಿದೆ.


ಬೆಳ್ತಂಗಡಿ(ಆ.08): ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಭೂಕುಸಿತಗಳಾಗುತ್ತಿದೆ. ಆಲೇಕಾನ್‌ ಹೊರಟಿ ಸಮೀಪ ರಸ್ತೆಯಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದು, ಅಪಾಯಕಾರಿ ಸ್ಥಿತಿಯಿರುವ ಕಾರಣ ಘಾಟಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ತಡೆಹಿಡಿಯಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಟ್ಟಿಗೆ ಹಾರ ಸಮೀಪದಲ್ಲಿ ಆಲೇಖಾನ್‌ ಹೊರಟಿ ಎಂಬಲ್ಲಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇಲ್ಲಿ ಮೂರು ದಿನಗಳ ಹಿಂದೆ ಭೂ ಕುಸಿತವಾಗಿತ್ತು. ರಸ್ತೆಯಲ್ಲಿ ಸುಮಾರು 15 ಅಡಿ ಅಂತರದಲ್ಲಿ ಸಮನಾಂತರವಾಗಿ ಎರಡೂ ಕಡೆ ಬಿರುಕು ಕಾಣಿಸಿಕೊಂಡಿದೆ. ಈ ಬಿರುಕುಗಳ ಮೂಲಕ ನೀರು ಇಳಿಯುತ್ತಿದ್ದು, ಇನ್ನಷ್ಟುಭೂ ಕುಸಿತವಾಗುವ ಆತಂಕವಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೀಗ ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

Tap to resize

Latest Videos

ದಾಖಲೆಯ ಮಳೆ: ಮುಂಗಾರಲ್ಲಿ ಮುಳುಗಿದ ಭಾರತ..!

ಘಾಟಿಯಲ್ಲಿ ಹಲವೆಡೆ ಭೂ ಕುಸಿತಗಳಾಗಿವೆ ಹಾಗೂ ಮರಗಳು ಉರುಳಿ ಬಿದ್ದಿದೆ. ಅವುಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಎರಡು ಮತ್ತು ಮೂರನೇ ತಿರುವಿನ ನಡುವೆ ಬಿದ್ದಿರುವ ಬೃಹತ್‌ ಬಂಡೆಯನ್ನು ರಸ್ತೆಯಿಂದ ತೆರವುಗೊಳಿಸಲು ಸಾಧ್ಯವಾಗಿಲ್ಲ. ಆಗಾಗ ಭೂ ಕುಸಿತಗಳಾಗುತ್ತಿದ್ದು, ತೆರವು ಕಾರ್ಯಾಚರಣೆಗಾಗಿ ಮೂರು ಜೆಸಿಬಿಗಳು ಘಾಟಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ದಡಮೀರಿ ಹರಿಯುತ್ತಿದೆ ನದಿಗಳು: ತಾಲೂಕಿನಲ್ಲಿ ಸತತ ನಾಲ್ಕನೆಯ ದಿನವೂ ಭಾರೀ ಮಳೆ ಮುಂದುವರಿದಿದ್ದು, ನದಿಗಳು ದಡ ಮೀರಿ ಹರಿಯುತ್ತಿದೆ. ಚಾರ್ಮಾಡಿ ಗ್ರಾಮದ ಕೊಳಂಬೆಯಲ್ಲಿ ನದಿಬದಿಯಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.

ವರುಣನ ಆರ್ಭಟ: ಕೊಡಗು ಜಿಲ್ಲೆಯಲ್ಲಿ ಸತತ ಮೂರನೇ ವರ್ಷ ಪ್ರಕೃತಿ ದುರಂತ..!

ಕಳೆದ ಮಳೆಗಾಲದಲ್ಲಿ ಇಲ್ಲಿ ಮೃತ್ಯುಂಜಯ ನದಿ ಪತ್ರ ಬದಲಿಸಿ ಹರಿದು ಭರೀ ಪ್ರಮಾಣದಲ್ಲಿ ನಾಶ ಸಂಭವಿಸಿತ್ತು. ಕೃಷಿ ಭೂಮಿಗೆ ನೀರು ನುಗ್ಗದಿರಲೆಂದು ಪ್ರವಾಹದ ಬಳಿಕ ಇಲ್ಲಿ 280 ಮೀಟರ್‌ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ, ಗುರುವಾರ ರಾತ್ರಿ ನದಿ ನೀರಿನ ರಭಸಕ್ಕೆ ಸುಮಾರು 30 ಅಡಿಯಷ್ಟುತಡೆಗೋಡೆ ಕುಸಿದು ನೀರಿನಲ್ಲಿ ಕೊಚ್ಚಿ ಹೋಗಿದೆ. ಇದೀಗ ಮತ್ತೆ ನೀರು ತೋಟಕ್ಕೆ ನುಗ್ಗುವ ಭಯವಿದ್ದು, ಕಳಪೆ ಕಾಮಗಾರಿಯಿಂದಾಗಿ ತಡೆಗೋಡೆ ಕುಸಿದಿದೆ ಎಂದು ಜನರು ಆರೋಪಿಸುತ್ತಿದ್ದಾರೆ.

ತಾಲೂಕಿನ ಕಾಜೂರು ನಿವಾಸಿ ಮರಿಯಮ್ಮ ಎಂಬವರ ಮನೆ ಭಾಗಶಃ ಕುಸಿದಿದೆ. ಬಜಿರೆ ಗ್ರಾಮದ ಸುಂದರ ಹೆಗ್ಡೆ ಎಂಬವರ ಮನೆ ಭಾಗಶಃ ಕುಸಿದಿದ್ದು ನಷ್ಟಸಂಭವಿಸಿದೆ. ಚಾರ್ಮಾಡಿ ಗ್ರಾಮದ ವಿವಿಧೆಡೆ ಮನೆಗಳ ಮೇಲೆ ಮರಗಳು ಬಿದ್ದು ಸಣ್ಣಪುಟ್ಟಹಾನಿಗಳಾಗಿವೆ. ಚಾರ್ಮಾಡಿ ಅಂತರ ಎಂಬಲ್ಲಿ ಮರಳಿನ ತಡೆಗೋಡೆ ನೀರು ಪಾಲಾಗಿದ್ದು, ನದಿ ತೋಟಗಳಿಗೆ ನುಗ್ಗುವ ಅಪಾಯವಿದೆ. ಇಲ್ಲಿ ಸೇತುವೆಯ ಸಂಪರ್ಕ ರಸ್ತೆಯಲ್ಲಿಯೂ ನೀರು ಹರಿಯುತ್ತಿದ್ದು ವಾಹನ ಸಂಚಾರ ಅಸಾಧ್ಯವಾಗಿದೆ.

click me!