ಲಾಕ್‌ಡೌನ್‌ ಎಫೆಕ್ಟ್‌: ಮಂಗಳಮುಖಿಯರ ಅನ್ನಕ್ಕೂ ಕಲ್ಲು ಹಾಕಿದ ಮಹಾಮಾರಿ ಕೊರೋನಾ..!

By Kannadaprabha NewsFirst Published Apr 22, 2020, 10:40 AM IST
Highlights

ಲಾಕ್‌ಡೌನ್‌ನಿಂದಾಗಿ ಜೀವನ ನಿರ್ವಹಣೆ ಕಷ್ಟ| ರೇಷನ್‌ ಕಾರ್ಡ್‌ ಇಲ್ಲದೆ ಪರಿತಪಿಸುತ್ತಿರುವ ಮಂಗಳಮುಖಿಯರು| ಮಹಾಮಾರಿ ಕೊರೋನಾ ಮಂಗಳಮುಖಿಯರ ಅನ್ನದ ಮೇಲೂ ಕಲ್ಲು ಹಾಕಿದೆ| ಕೊರೋನಾದಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಲಾಕ್‌ಡೌನ್‌ ಘೋಷಿಸಿವೆ| ಜನರ ಜೀವನವೇ ಸಂಪೂರ್ಣ ಸ್ತಬ್ದ| ಮಂಗಳಮುಖಿಯರಿಗೆ ಇದು ನುಂಗಲಾರದ ತುತ್ತಾಗಿಯೂ ಪರಿಣಮಿಸಿದೆ|

ಚಿಕ್ಕೋಡಿ(ಏ.22): ತಿಂಗಳಾಯಿತು ಚಪ್ಪಾಳೆ ತಟ್ಟಲಿಲ್ಲ. ಹೊಟ್ಟೆಗೆ ಸರಿಯಾದ ಹಿಟ್ಟೂ ಸಿಕ್ಕಿಲ್ಲ. ದಾನವೋ, ಧರ್ಮವೋ ನೀಡುತ್ತಿದ್ದ ಕೈಗಳು ಈಗ ಕಾಣದಂತಾಗಿವೆ. ಒಂದು ತುತ್ತು ನೀಡಿದರೆ ಅದರಲ್ಲಿನ ಒಂದು ಅಗಳನ್ನು ಆಶೀರ್ವಾದ ರೂಪದಲ್ಲಿ ಹಿಂದಿರುಗಿಸುವುದು ಇವರ ಪದ್ಧತಿ. ಇಂದು ಅದೇ ಒಂದು ಅಗಳಿಗೆ ಎದುರು ನೋಡುವಂತಹ ಸಂದಿಗ್ದ ಪರಿಸ್ಥಿತಿ.

ಹೌದು. ಇದು ನಮ್ಮ ನಿಮ್ಮ ಮಧ್ಯೆಯೇ ಇರುವ ತೃತೀಯ ಲಿಂಗಿ (ಮಂಗಳಮುಖಿಯರ)ಗಳ ಸದ್ಯದ ಬದುಕಿನ ಬವಣೆ. ಕಾರಣ ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೋನಾ ಮಂಗಳಮುಖಿಯರ ಅನ್ನದ ಮೇಲೂ ಕಲ್ಲು ಹಾಕಿದೆ. ಕೊರೋನಾದಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಲಾಕ್‌ಡೌನ್‌ ಘೋಷಿಸಿವೆ. ಇದರಿಂದ ಜನರ ಜೀವನವೇ ಸಂಪೂರ್ಣ ಸ್ತಬ್ದಗೊಂಡಿದೆ. ಹೀಗಾಗಿ ಮಂಗಳಮುಖಿಯರಿಗೆ ಇದು ನುಂಗಲಾರದ ತುತ್ತಾಗಿಯೂ ಪರಿಣಮಿಸಿದೆ.

ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ PSI..!

ತುತ್ತಿನ ಚೀಲವನ್ನು ತುಂಬಿಸಲು ಅಂಗೈ ಸಪ್ಪಳ ಮಾಡುವುದು ಇವರ ಆದಾಯದ ಮೂಲ. ಎಲ್ಲರಂತೆ ಕೆಲಸ ಮಾಡಿಕೊಂಡು ತಾವು ಬದುಕಬೇಕು ಎಂಬ ಆಸೆ ಇವರಿಗೆ ಇದ್ದರೂ ಅದಕ್ಕೆ ಸಮಾಜ ಒಪ್ಪಬೇಕಲ್ಲ? ಹೀಗಾಗಿ ಅನಿವಾರ್ಯ ಎಂಬಂತೆ ಬೇಡಿಕೊಂಡೇ ಜೀವನ ನಡೆಸುವುದು ಇವರಿಗೆ ದಾರಿಯಾಗಿ ಪರಿಣಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳಮುಖಿಯರು ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳು, ಬಸ್‌, ರೈಲ್ವೆ ನಿಲ್ದಾಣ, ಟೋಲ್‌ ನಾಕಾಗಳು, ಟ್ರಾಫಿಕ್‌ ಸಿಗ್ನಲ್‌ಗಳು ಸೇರಿದಂತೆ ಬೇರೆ ಬೇರೆ ಪ್ರದೇಶಗಳೇ ಇವರ ಆಶ್ರಯ ತಾಣಗಳಾಗಿವೆ. ಹೀಗಾಗಿ ಲಾರಿ ಚಾಲಕರು, ಪ್ರಯಾಣಿಕರೇ ಇವರಿಗೆ ದೇವರು. ಆದರೆ, ಸದ್ಯದ ಕೊರೋನಾದಂತಹ ಪರಿಸ್ಥಿತಿಯಲ್ಲಿ ಎಲ್ಲವೂ ಲಾಕ್‌ಡೌನ್‌ ಆಗಿದ್ದರಿಂದ ಒಂದು ವಾಹನ ಕೂಡ ರಸ್ತೆಗೆ ಇಳಿಯುತ್ತಿಲ್ಲ. ಹೀಗಾಗಿ ಸವಾರರಾಗಲಿ, ಚಾಲಕರಾಗಲಿ ವಾಹನಗಳನ್ನು ಏರುತ್ತಿಲ್ಲ. ಹೀಗಾಗಿ ಮಂಗಳಮುಖಿಯರ ಬದುಕು ಅಕ್ಷರಶಃ ಈಗ ಬೀದಿಗೆ ಬಂದಿದ್ದು ತುತ್ತು ಅನ್ನಕ್ಕಾಗಿ ಪರದಾಡುವಂತಹ ಶೋಚನಿಯ ಸ್ಥಿತಿ ಬಂದೊದಗಿದೆ.

ರೇಷನ್‌ ಕಾರ್ಡ್‌ ಕೂಡ ಇಲ್ಲ:

ಸರ್ಕಾರ ಈಗಾಗಲೇ ಎಲ್ಲರಿಗೂ ರೇಷನ್‌ ಕಾರ್ಡ್‌ ಕೊಟ್ಟಿದೆ. ಈ ಮೂಲಕ ಎರಡು ತಿಂಗಳ ಉಚಿತ ಪಡಿತರವನ್ನು ಈಗಾಗಲೇ ಬಿಪಿಎಲ್‌ ಕಾರ್ಡ್‌ ಹೊಂದಿದವರಿಗೆ ರಾಜ್ಯ ಸರ್ಕಾರ ನೀಡಿದೆ. ಆದರೆ, ಈ ಮಂಗಳಮುಖಿಯರ ಬಳಿ ಯಾವುದೇ ರೇಷನ್‌ ಕಾರ್ಡ್‌ ಕೂಡ ಇಲ್ಲ. ಹೀಗಾಗಿ ಅವರು ಹೇಗೆ ನ್ಯಾಯಬೆಲೆ ಅಂಗಡಿಯಲ್ಲಿ ಹೇಗೆ ಪಡಿತರ ಪಡೆಯಬೇಕು ಎಂಬ ಪ್ರಶ್ನೆ ಕೂಡ ಈಗ ಉದ್ಭವವಾಗಿದೆ. ಈಗಲಾದರೂ ಸರ್ಕಾರ ಅವರಿಗೆ ನೆರವಾಗಬೇಕು ಎಂಬುವುದು ಸಾರ್ವಜನಿಕರು ಆಗ್ರಹ.

ಚಿಕ್ಕೋಡಿ ಗಡಿ ತಾಲೂಕಿನಲ್ಲಿ ಪ್ರದೇಶದಲ್ಲಿಯೇ ಸರಿಸುಮಾರು ನೂರಕ್ಕಿಂತ ಹೆಚ್ಚು ಮಂಗಳಮುಖಿಯರು ಇದ್ದಾರೆ. ಈ ಪೈಕಿ ನಿಪ್ಪಾಣಿ ನಗರದಲ್ಲಿ 40ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದಿನಬೆಳಗಾದರೆ ಕಂಡ ಕಂಡವರ ಮುಂದೆ ಕೈ ಚಾಚಿದರೆ ಮಾತ್ರ ಇವರ ಮನೆ ದೀಪ ಹತ್ತಬೇಕು. ಮಾತ್ರವಲ್ಲ, ಅವರ ಬದುಕು ನಡೆಯಬೇಕು. ಜತೆಗೆ ಹೊಟ್ಟೆಗೂ ಈ ಕಾಸಿನಿಂದಲೇ ನಡೆಯಬೇಕು. ಜನರು ಕೂಡ ಇವರ ಸ್ಥಿತಿ ನೋಡಿ ತಮಗೆ ಕೈಲಾದಷ್ಟುಸಹಾಯವನ್ನೂ ಮಾಡುತ್ತಿದ್ದಾರೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಅವರಿಗೆ ಯಾರೂ ಕೂಡ ನೆರವಾಗುತ್ತಿಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ.

ಒಂದು ದಿನ ಚಪ್ಪಾಳೆ ತಟ್ಟಲಿಲ್ಲ ಅಂದರೆ, ಆ ದಿನ ಉಪವಾಸವೇ ಗತಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಕೊರೋನಾದಿಂದ ಲಾಕ್‌ಡೌನ್‌ ಆಗಿ ಒಂದು ತಿಂಗಳಾಯಿತು. ಹೀಗಾಗಿ ಅದು ಇವರ ಹೊಟ್ಟೆಯ ಮೇಲೆ ಬರೆ ಎಳೆದಿದೆ. ಎಲ್ಲ ರೀತಿಯಲ್ಲಿ ಇವರು ಹಿಜ್ಡಾ, ಚಕ್ಕಾ, ಜೂಗ್ಯಾ ಆರ್ವನಿಸ್‌, ಸಲಿಂಗಿ ಮುಂತಾದ ಹೆಸರಿನಿಂದ ಕರೆಯುವ ಮಂಗಳಮುಖಿಯರಲ್ಲಿ ಎರಡು ಜಾತಿಗಳು. ಒಂದು ಬೇಡಿ ತಿನ್ನುವುದು. ಇನ್ನೊಂದು ಹಾಡಿ ತಿನ್ನುವುದು. ಈಗ ಅದ್ಯಾವುದೂ ಇಲ್ಲ.

ಬಡವರಿಗೆ, ನಿರ್ಗತಿಕರಿಗೆ ಸಹಾಯಹಸ್ತ ಚಾಚುತ್ತಿರುವ ಅನೇಕ ಸಂಘ ಸಂಸ್ಥಗಳು, ದಾನಿಗಳು ಇಂತಹ ತೃತೀಯ ಲಿಂಗಿಗಳು ಸಹಾಯ ಮಾಡಲು ಮುಂದಾಗುತ್ತಾರಾ ನೋಡಬೇಕು? ಬದುಕು ಅತಂತ್ರವಾಗಿದೆ. ಪ್ರಾರಂಭದಲ್ಲಿ ಕೆಲವರು ಸಹಾಯ ಮಾಡಿದರು. ನಂತರ ಯಾರೊಬ್ಬರು ಬರಲಿಲ್ಲ. ನಮ್ಮ ಬಳಿ ರೇಷನ್‌ ಕಾರ್ಡ್‌, ಆಧಾರ ಕಾರ್ಡ್‌ ಇಲ್ಲ. ದಯಮಾಡಿ ನ್ಯಾಯ ಬೆಲೆ ಅಂಗಡಿಗಳ ಮೂಲಕ ನಮಗೂ ಉಚಿತ ಪಡಿತರ ನೀಡಬೇಕು ಎಂದು (ಮಂಗಳಮುಖಿ) ಕಾಮಗಾರ ಚೌಕ ನಿಪ್ಪಾಣಿ ಜಿತೇಶ ಹೇಳಿದ್ದಾರೆ. 
 

click me!