ವಾರದ ಬಳಿಕ ಕೇರಳ-ಮುಂಬೈ ನೇರ ರೈಲು ಸಂಪರ್ಕ ಪುನರಾರಂಭ

By Kannadaprabha NewsFirst Published Sep 1, 2019, 3:45 PM IST
Highlights

ಒಂದು ವಾರದಿಂದ ರದ್ದುಗೊಂಡಿದ್ದ ಕೇರಳ-ಮಂಗಳೂರು-ಮುಂಬಯಿ ನೇರ ರೈಲು ಯಾನ ಶನಿವಾರರಿಂದ ಆರಂಭಗೊಂಡಿದೆ. ಕುಲಶೇಖರದಲ್ಲಿ ಭೂ ಕುಸಿತ ಹಿನ್ನೆಲೆಯಲ್ಲಿ ಇಲ್ಲಿ ನಿರ್ಮಿಸಲಾದ ಪರ್ಯಾಯ ಹಳಿ ಪ್ರಯಾಣಕ್ಕೆ ಅರ್ಹವಾಗಿರುವುದನ್ನು ಇಲಾಖೆಯ ತಂತ್ರಜ್ಞರು ಖಾತರಿಪಡಿಸಿದ್ದಾರೆ. ಇದರಿಂದಾಗಿ ಎಂಟು ದಿನಗಳ ಬಳಿಕ ಶನಿವಾರ ಮಧ್ಯಾಹ್ನ ಬಳಿಕ ಹೊಸ ಮಾರ್ಗದಲ್ಲಿ ಪ್ರಯಾಣಿಕ ರೈಲು ಸಂಚಾರ ಆರಂಭಗೊಂಡಿದೆ.

ಮಂಗಳೂರು(ಸೆ.01): ನಗರದ ಕುಲಶೇಖರದಲ್ಲಿ ಭೂ ಕುಸಿತ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ರದ್ದುಗೊಂಡಿದ್ದ ಕೇರಳ-ಮಂಗಳೂರು-ಮುಂಬಯಿ ನೇರ ರೈಲು ಯಾನ ಶನಿವಾರರಿಂದ ಆರಂಭಗೊಂಡಿದೆ.

ಇಲ್ಲಿ ನಿರ್ಮಿಸಲಾದ ಪರ್ಯಾಯ ಹಳಿ ಪ್ರಯಾಣಕ್ಕೆ ಅರ್ಹವಾಗಿರುವುದನ್ನು ಇಲಾಖೆಯ ತಂತ್ರಜ್ಞರು ಖಾತರಿಪಡಿಸಿದ್ದಾರೆ. ಇದರಿಂದಾಗಿ ಎಂಟು ದಿನಗಳ ಬಳಿಕ ಶನಿವಾರ ಮಧ್ಯಾಹ್ನ ಬಳಿಕ ಹೊಸ ಮಾರ್ಗದಲ್ಲಿ ಪ್ರಯಾಣಿಕ ರೈಲು ಸಂಚಾರ ಆರಂಭಗೊಂಡಿದೆ. ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾದ 400 ಮೀ. ಹೊಸ ಹಳಿ ಪ್ರಯಾಣಕ್ಕೆ ಸಿದ್ದವಾಗಿರುವ ಬಗ್ಗೆ ದಕ್ಷಿಣ ರೈಲ್ವೆ ಶನಿವಾರ ಸಂಜೆ 4.15ಕ್ಕೆ ಫಿಟ್‌ ಸರ್ಟಿಫಿಕೇಟ್‌ (ಅರ್ಹತಾ ಪ್ರಮಾಣಪತ್ರ) ಒದಗಿಸಿದೆ. ಬಳಿಕವೇ ರೈಲು ಸಂಚಾರ ಸಾಧ್ಯವಾಗಿದೆ. ಆದರೆ ಹಳೆ ಹಳಿಯಲ್ಲಿ ಇನ್ನೂ ಕೆಸರು ನೀರು ತುಂಬಿಕೊಂಡಿರುವುದರಿಂದ ಹೊಸ ಹಳಿಯಲ್ಲಿ ರೈಲು ಸಂಚರಿಸುತ್ತಿದೆ.

ಕುಡ್ಲದಲ್ಲಿ ಬ್ಯಾಂಕಿಗೂ-ಬ್ಯಾಂಕಿಗೂ ಮದುವೆ..!

ಶನಿವಾರ ಮಧ್ಯಾಹ್ನ ವೇಳೆಗೆ ಹಳಿ ನಿರ್ಮಾಣ ಹಾಗೂ ಪರಿಶೀಲನೆ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಥಮ ಹಂತದಲ್ಲಿ ಮಂಗಳೂರು ಜಂಕ್ಷನ್‌ನಿಂದ ಪಣಂಬೂರಿಗೆ ಈ ಮಾರ್ಗದಲ್ಲಿ ರೈಲ್ವೆ ಸರಕು ಬೋಗಿಗಳನ್ನು ಓಡಿಸಲಾಯಿತು. ಬಳಿಕ ಇದೇ ಮಾರ್ಗದಲ್ಲಿ ಸರಕು ತುಂಬಿದ ಬೋಗಿಗಳಿರುವ ಗೂಡ್ಸ್‌ ರೈಲು ವಾಪಸ್‌ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಕ್ಕೆ ಬಂದಿದೆ. ಬಳಿಕ ಪ್ರಯಾಣಿಕರ ರೈಲು ಓಡಾಟಕ್ಕೆ ಹಳಿ ಸಜ್ಜುಗೊಂಡಿರುವುದನ್ನು ಹಿರಿಯ ಅಧಿಕಾರಿಗಳು ಖಚಿತಪಡಿಸಿದರು.

ನಿಜಾಮುದ್ದೀನ್‌ (ನವದೆಹಲಿ)- ಎರ್ನಾಕುಳಂ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್‌ ನಂ. 12618 ಪ್ರಯಾಣಿಕರ ರೈಲು ಸಂಜೆ ವೇಳೆಗೆ ಹೊಸ ಹಳಿಯಲ್ಲಿ ಪ್ರಥಮವಾಗಿ ಸಂಚರಿಸಿತು. 30 ಬಸ್‌ ವ್ಯವಸ್ಥೆ: ಇದಕ್ಕೂ ಮೊದಲು ಬೆಳಗ್ಗೆ ಉಭಯ ದಿಕ್ಕುಗಳಲ್ಲಿ ಪ್ರಯಾಣಿಸುವ ಕುರ್ಲಾ- ತಿರುವನಂತಪುರ ಎಕ್ಸ್‌ಪ್ರೆಸ್‌ಗಳ ಒಟ್ಟು ಸುಮಾರು ಎರಡು ಸಾವಿರ ಪ್ರಯಾಣಿಕರು ಒಂದು ರೈಲಿನಿಂದ ಇನ್ನೊಂದು ರೈಲಿಗೆ ಸಂಪರ್ಕ ಬೆಳೆಸಲು ಸಾಧ್ಯವಾಗುವಂತೆ ಕೊಂಕಣ ರೈಲು 30 ಬಸ್‌ಗಳ ವ್ಯವಸ್ಥೆ ಮಾಡಿತ್ತು.

ಮಂಗಳೂರು: ನೇತ್ರಾವತಿ ಎಕ್ಸಪ್ರೆಸ್‌ ರೈಲಿನಲ್ಲಿ ಡೀಸೆಲ್‌ ಸೋರಿಕೆ

ಮುಂಬಯಿ- ಮಂಗಳೂರು ಮತ್ಸ್ಯಗಂಧ ಎಕ್ಸ್‌ಪ್ರೆಸ್‌ (ನಂ.12620) ಸುರತ್ಕಲ್‌ ತನಕ ಬಂದಿದ್ದು, ಅಲ್ಲಿಂದಲೇ ವಾಪಸಾಗಿದೆ. ಸುರತ್ಕಲ್‌ ಮತ್ತು ಮಂಗಳೂರು ಸೆಂಟ್ರಲ್‌ ನಡುವಿನ ಪ್ರಯಾಣವನ್ನು ರದ್ದುಪಡಿಸಲಾಯಿತು. ಮಂಗಳೂರು ಜಂಕ್ಷನ್‌- ಮುಂಬಯಿ ಸಿಎಸ್‌ಎಂಟಿ ಎಕ್ಸ್‌ಪ್ರೆಸ್‌ (ನಂ.12134) ಪ್ರಯಾಣ ಮಂಗಳೂರು ಜಂಕ್ಷನ್‌ಮತ್ತು ಸುರತ್ಕಲ್‌ ನಡುವೆ ರದ್ದುಗೊಂಡಿದೆ. ಈ ರೈಲು ಸುರತ್ಕಲ್‌ನಿಂದಲೇ ಪ್ರಯಾಣ ಆರಂಭಿಸಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

click me!