
ಬೆಂಗಳೂರು(ಸೆ.29): ರಾಜಧಾನಿ ಮಂದಿಗೆ ಗುರುವಾರವೂ ಟ್ರಾಫಿಕ್ ಜಾಮ್ ಬಿಸಿ ತಟ್ಟಿತು. ಒಂದೆಡೆ ಸಾಲು ರಜೆ ಹಾಗೂ ಮತ್ತೊಂದೆಡೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಗರದಿಂದ ಊರುಗಳತ್ತ ತೆರಳುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ನಗರದ ಹಲವೆಡೆ ವಾಹನ ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡಿದರು.
ನಗರದ ಕೆಲವು ಕಡೆ ಬೆಳಗ್ಗೆಯಿಂದಲೂ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಮೈದಾನಗಳಿಗೆ ತೆರಳಿದ ಪರಿಣಾಮ ಕೆಲ ಕಡೆ ಸಂಚಾರ ದಟ್ಟಣೆ ಉಂಟಾಯಿತು. ಸಂಚಾರ ಪೊಲೀಸರು ಈದ್ ಮಿಲಾದ್ ಹಿನ್ನೆಲೆಯಲ್ಲಿ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ, ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದರು. ಪ್ರಮುಖವಾಗಿ ನೃಪತುಂಗ ರಸ್ತೆ, ಅಂಬೇಡ್ಕರ್ ರಸ್ತೆ, ನಾಯಂಡಹಳ್ಳಿ ಜಂಕ್ಷನ್, ಕಿಂಕೋ ಜಂಕ್ಷನ್, ಬಾಪೂಜಿನಗರ, ಮಾರ್ಕೆಟ್ ಸರ್ಕಲ್, ಶಿವಾಜಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಕ್ಕಾಕೊಂಡಿದ್ದ ಗ್ರಾಹಕರಿಗೆ ರಸ್ತೆಯಲ್ಲೇ ಪಿಜ್ಜಾ ಡೆಲಿವರಿ ಮಾಡಿದ ಡೊಮಿನೋಸ್!
ಇನ್ನು ಮಧ್ಯಾಹ್ನದ ವೇಳೆಗೆ ಉರುಗಳತ್ತ ತೆರಳುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಸೇರಿದಂತೆ ಸುತ್ತಮುತ್ತಲ ರಸ್ತೆಗಳು, ಏರ್‌ಪೋರ್ಟ್ ರಸ್ತೆ, ಕಾವೇರಿ ಜಂಕ್ಷನ್, ಹೆಬ್ಬಾಳ ಮೇಲ್ಸೇತುವೆ, ನಾಯಂಡಹಳ್ಳಿ ಜಂಕ್ಷನ್, ಕೆಂಗೇರಿ, ಹಳೇ ಮದ್ರಾಸ್ ರಸ್ತೆ, ಕೆ.ಆರ್.ಪುರ, ತುಮಕೂರು ರಸ್ತೆ, ಗೊರಗುಂಟೆಪಾಳ್ಯ, 8ನೇ ಮೈಲಿ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಸಂಜೆ ವೇಳೆ ಈ ಕಿಲೋ ಮೀಟರ್‌ನಷ್ಟು ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನ ಸಂಚಾರ ಮದಗತಿಯಲ್ಲಿ ಸಾಗಿದ ಪರಿಣಾಮ ಸವಾರರು ಕಿರಿಕಿರಿ ಅನುಭವಿಸಿದರು.
ಮಳೆ, ಟ್ರಾಫಿಕ್ ಜಾಮ್
ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ನಗರದ ವಿವಿಧೆಡೆ ಮಳೆ ಆರಂಭವಾಯಿತು. ರಸ್ತೆಗಳಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ವಾಹನ ಸವಾರರು ಮಳೆಯಿಂದ ತೋಯ್ದರು. ದ್ವಿಚಕ್ರ ವಾಹನ ಸವಾರರು ರಸ್ತೆಯೇ ದ್ವಿಚಕ್ರ ವಾಹನ ನಿಲುಗಡೆ ಮಾಡಿ ಕಟ್ಟಡಗಳು, ಮರಗಳು, ಮೇಲ್ಸೇತುವೆ ತಡೆಗೋಡೆಗಳ ಆಶ್ರಯ ಪಡೆದರು. ಇದರಿಂದ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಳವಾಯಿತು. ವಾಹನಗಳು ಆಮೆಗತಿಯಲ್ಲಿ ಸಾಗಿದ ಪರಿಣಾಮ ಸವಾರರು ಮಳೆ ಹಾಗೂ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಹೈರಾಣಾದರು.
Bengaluru traffic: ರಿಂಗ್ ರೋಡ್‌ನಲ್ಲಿ ಭಾರೀ ಸಂಚಾರ ದಟ್ಟಣೆ, ಐಟಿ ಕಚೇರಿಗಳಿಗೆ ಪೊಲೀಸರ ವಿಶೇಷ ಮನವಿ!
ಏರ್‌ಪೋರ್ಟ್ ರಸ್ತೆಯಲ್ಲಿ ಪರದಾಟ
ಗುರುವಾರ ಸಂಜೆ ಏರ್‌ಪೋರ್ಟ್ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿ ಕಿಲೋ ಮೀಟರ್‌ನಷ್ಟು ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅದರಲ್ಲೂ ಕಾವೇರಿ ಜಂಕ್ಷನ್, ಹೆಬ್ಬಾಳ ಮೇಲ್ಸೇತುವೆ ಬಳಿ ವಾಹನಗಳು ಒಂದಕ್ಕೊಂದು ಅಂಟಿಕೊಂಡಂತೆ ಒಂದರ ಹಿಂದೆ ಒಂದು ನಿಂತಿದ್ದವು. ಏರ್‌ಪೋರ್ಟ್ ಕಡೆಯಿಂದ ನಗರಕ್ಕೆ ಬರುವ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಕೊಂಚ ಕಡಿಮೆ ಇತ್ತು. ನಗರದಿಂದ ಏರ್‌ಪೋರ್ಟ್‌ಗೆ ತೆರಳುವ ರಸ್ತೆಯಲ್ಲಿ ಇರುವೆ ಸಾಲಿನಂತೆ ವಾಹನಗಳು ದಟ್ಟಣೆಯಲ್ಲಿ ಸಿಲುಕಿದ್ದವು. ಏರ್‌ಪೋರ್ಟ್‌ಗೆ ತೆರಳುವ ಪ್ರಯಾಣಿಕರು ಈ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದರಿಂದ ವಿಮಾನ ತಪ್ಪಿಸಿಕೊಳ್ಳುವ ಆತಂಕದಲ್ಲಿದ್ದರು. ಕಚೇರಿ, ಉದ್ಯೋಗಿ ಮುಗಿಸಿ ಮನೆಗೆ ತೆರಳುವವರು ಈ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡಿದರು. ಸಂಚಾರ ಪೊಲೀಸರು ವಾಹನ ಸಂಚಾರ ದಟ್ಟಣೆ ನಿರ್ವಹಿಸಲು ಸುಸ್ತುಹೊಡೆದರು.
ಹೊರವಲಯದ ರಸ್ತೆಗಳಲ್ಲಿ ದಟ್ಟಣೆ
ಇನ್ನು ಶುಕ್ರವಾರ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸಾರಿಗೆ ಬಸ್‌ಗಳು ಸಂಚಾರ ಅನುಮಾನವಿರುವುದರಿಂದ ಶುಕ್ರವಾರ ರಾತ್ರಿಯೇ ಸಾಕಷ್ಟು ಮಂದಿ ಊರುಗಳತ್ತ ತೆರಳಿದರು. ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಮೈಸೂರು ರಸ್ತೆಯ ಸ್ಯಾಟಲೆಟ್ ಬಸ್ ನಿಲ್ದಾಣ, ಶಾಂತಿನಗರದ ಬಸ್ ನಿಲ್ದಾಣಗಳಿಂದ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್‌ಗಳಲ್ಲಿ ತಮ್ಮ ಊರುಗಳತ್ತ ತೆರಳಿದರು. ಹೀಗಾಗಿ ರಾತ್ರಿಯೂ ನಗರದಿಂದ ಹೊರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೊರವಲಯದ ಹೆದ್ದಾರಿಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ತುಮಕೂರು ರಸ್ತೆಯ ನವಯುಗ ಟೋಲ್, ಮೈಸೂರು ರಸ್ತೆಯ ಕೆಂಗೇರಿ, ಏರ್‌ಪೋರ್ಟ್ ರಸ್ತೆಯ ಯಲಹಂಕ, ಹೊಸೂರು ರಸ್ತೆ, ಸಿಲ್ಕ್ ಬೋರ್ಡ್ ಸೇರಿದಂತೆ ಹೆದ್ದಾರಿ ಸಂಪರ್ಕಿಸುವ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ತುಸು ಹೆಚ್ಚೇ ಇತ್ತು.