Chikkaballapur: ಗಗನಕ್ಕೆ ಏರಿದ್ದ ಟೊಮೆಟೋ ದರ ಪಾತಾಳಕ್ಕೆ: ರೈತರು ಕಂಗಾಲು!

By Kannadaprabha News  |  First Published Sep 28, 2023, 10:23 PM IST

ಕಳೆದ ಒಂದೂವರೆ ತಿಂಗಳಿನ ಹಿಂದೆ ಗಗನ ಮುಖಿಯಾಗಿ ಏರುಗತಿಯಲ್ಲಿ ಸಾಗಿದ್ದ ಟೊಮೆಟೋ ಬೆಲೆ ದಿಢೀರ್‌ ಪಾತಾಳಕ್ಕೆ ಕುಸಿತ ಕಂಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮೆಟೋ ಬೆಳೆಯುವ ರೈತರು ಕಂಗಾಲಾಗಿದ್ದಾರೆ. 


ಚಿಕ್ಕಬಳ್ಳಾಪುರ (ಸೆ.28): ಕಳೆದ ಒಂದೂವರೆ ತಿಂಗಳಿನ ಹಿಂದೆ ಗಗನ ಮುಖಿಯಾಗಿ ಏರುಗತಿಯಲ್ಲಿ ಸಾಗಿದ್ದ ಟೊಮೆಟೋ ಬೆಲೆ ದಿಢೀರ್‌ ಪಾತಾಳಕ್ಕೆ ಕುಸಿತ ಕಂಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮೆಟೋ ಬೆಳೆಯುವ ರೈತರು ಕಂಗಾಲಾಗಿದ್ದಾರೆ. ಉತ್ತಮ ಬೆಲೆ ನಿರೀಕ್ಷಿಸಿ ಮಾರುಕಟ್ಟೆಗೆ ಟೊಮೆಟೋ ತರುವ ಜಿಲ್ಲೆಯ ರೈತರಿಗೆ ಬೆಲೆ ಕುಸಿತದಿಂದ ಇದೀಗ ಹಾಕಿದ್ದ ಬಂಡವಾಳವೂ ಕೈಗೆ ಎಟುಕುತ್ತಿಲ್ಲ. ಪರಿಣಾಮ ಬೆಳೆಗಾರರು ಬೇಸತ್ತಿದ್ದಾರೆ. ಜುಲೈನಲ್ಲಿ ಟೊಮೇಟೊ ಕೆಜಿಗೆ 150ರಿಂದ 200 ರು.ವರೆಗೂ ಮಾರಾಟವಾಗುತ್ತಿತ್ತು. ರೈತರಿಗೂ ಒಳ್ಳೆಯ ಧಾರಣೆ ಸಿಕ್ಕಿತ್ತು. 

ಆದರೆ ಆಗಸ್ಟ್‌ನಲ್ಲಿ ಟೊಮೇಟೊ ಧಾರಣೆ 40-20 ರು. ಮೇಲೆ ಏರಿಕೆಯೇ ಆಗಿಲ್ಲ. ಸದ್ಯ ತರಕಾರಿ ಮಾರುಕಟ್ಟೆಯಲ್ಲಿ 8 ರಿಂದ 10 ರು. ಇದೆ. ಆದರೆ ರೈತರಿಗೆ ಸಿಗುವುದು ಬಿಡಿಗಾಸು ಮಾತ್ರ. ಸತತ ಬರ ,ಪ್ರವಾಹದಿಂದ ಬೆಳೆ ನಾಶವಾಗಿ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದ ಚಿಕ್ಕಬಳ್ಳಾಪುರ ರೈತರಿಗೆ ಜೂನ್‌ ತಿಂಗಳಿನಿಂದ ಆಗಸ್ಟ್ ಎರಡನೆ ವಾರದವರೆಗೂ ಟೊಮೆಟೋ ಬೆಳೆ ಕೈ ಹಿಡಿದಿದೆ. ಟೊಮೆಟೋಗೆ ಚಿನ್ನದಂತ ಬೆಲೆ ಸಿಕ್ಕಿದೆ. ಚಿಕ್ಕಬಳ್ಳಾಪುರ ನಗರದ ಮಾರುಕಟ್ಟೆಯಲ್ಲಿ ಟೊಮೆಟೋ ದರ ಗಗನಕ್ಕೇರಿ 15 ಕೆ.ಜಿ ತೂಕದ ಟೊಮೆಟೋ ಬಾಕ್ಸ್ 1000 ರು. ನಿಂದ 2500 ರು.ವರೆಗೆ ಮಾರಾಟವಾಗಿತ್ತು. ಇದು ಸಹಜವಾಗಿ ಟೊಮೆಟೋ ಬೆಳೆದ ರೈತರಿಗೆ ಇದು ಖುಷಿ ತಂದಿತ್ತು.

Tap to resize

Latest Videos

ವೃತ್ತಿಪರ ಕೋರ್ಸ್‌ಗಳಿಂದ 21 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲ: ಸಚಿವ ಎಂ.ಸಿ.ಸುಧಾಕರ್

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯಥೇಚ್ಛವಾಗಿ ಟೊಮೆಟೋ ಬೆಳೆಯಲಾಗುತ್ತದೆ. ಚಿಕ್ಕಬಳ್ಳಾಪುರ-ಚಿಂತಾಮಣಿ, ಬಾಗೇಪಲ್ಲಿ ಕೋಲಾರದ ಟೊಮೆಟೋ ಮಾರುಕಟ್ಟೆಯಿಂದ ದೇಶದಲ್ಲಿ ಅಷ್ಟೇ ಅಲ್ಲದೆ ವಿದೇಶಗಳಿಗೂ ಟೊಮೆಟೋ ರಫ್ತು ಮಾಡಲಾಗುತ್ತದೆ. ಆದರೆ ಈ ಬಾರಿ ಮಳೆಯ ಕೊರತೆ, ಅತಿಯಾದ ಬಿಸಿಲಿನ ಪರಿಣಾಮ ಮತ್ತು ಬಿಳಿ ನೊಣದ ರೋಗದಿಂದ ಟೊಮೆಟೋ ಬೆಳೆಯಲ್ಲಿ ವ್ಯತ್ಯಾಸ ಆಗಿದ್ದು ಇಳುವರಿಯಲ್ಲಿಯೂ ಕುಂಠಿತವಾಗಿತ್ತು. ಹೀಗಾಗಿ ಟೊಮೆಟೋ ಸಿಗದೆ ರೇಟ್ ಸಹ ಹೆಚ್ಚಳವಾಗುತ್ತಿತ್ತು. ಟೊಮೆಟೋ ಬೆಲೆ ಏರಿಕೆ ಗ್ರಾಹಕರು ಷಾಕ್ ಆಗುವಂತೆ ಮಾಡಿ, ರೈತರು ಖುಷಿಯಾಗುವಂತೆ ಮಾಡಿದ್ದ, ಟೊಮೆಟೋ ಈಗ ಗ್ರಾಹಕರು ಖುಷಿಯಾಗುವಂತೆ ಮಾಡಿ, ರೈತರು ಶಾಕ್‌ ಆಗುವಂತೆ ಮಾಡಿದೆ.

ಹೆಚ್ಚಾದ ಉತ್ಪಾದನೆ, ನಿರಾಸೆಯಲ್ಲಿ ರೈತರು: ಜೂನ್‌ ತಿಂಗಳಿಗೆ ಹೋಲಿಸಿದರೆ ಸುಮಾರು 30 ರಿಂದ 40 ಪಟ್ಟು ಹೆಚ್ಚು ಟೊಮೆಟೋ ಮಾರುಕಟ್ಟೆಗೆ ಬರುತ್ತಿದೆ. ದಿನದಿಂದ ದಿನಕ್ಕೆ ಟೊಮೆಟೋ ಆವಕ ಹೆಚ್ಚುತ್ತಿರುವುದರಿಂದ ಸಗಟು ದರ ಇಳಿಕೆಯಾಗುತ್ತಿದ್ದು, ಚಿಲ್ಲರೆ ಮಾರಾಟ ದರ ಕೆಜಿಗೆ 5ಕ್ಕೆ ಬಂದು ನಿಂತಿದೆ. ಟೊಮೆಟೋ ಬೆಳೆ ಮೂರು ತಿಂಗಳ ಅವಧಿಗೆ ಬರಲಿದೆ. ನಮ್ಮ ರೈತರು ದರ ಹೆಚ್ಚಾಗಿ ಸಿಗ ತೊಡಗಿದ್ದರಿಂದ ಟೊಮೇಟೊ ಬೆಳೆ ನಾಟಿ ಮಾಡಿದರು. ಕೆಲವೊಮ್ಮೆ ರೈತರು ಹಾಕಿದ ಬಂಡವಾಳವೂ ಕೈ ಸೇರದೆ ಹೋದರೆ ಕಷ್ಟವಾಗುತ್ತದೆ ಎಂದು ರೈತ ಮುನಿಕೃಷ್ಣಪ್ಪ ಹೇಳಿದರು.

ಆದರೆ ಈಗ ಬೆಲೆ ಕುಸಿದಿರುವುದರಿಂದ ಕೊಯ್ಯಲು ಮತ್ತು ಸಾಗಣೆಗೆ ಮಾಡಿದ ವೆಚ್ಚ ಕೂಡ ರೈತರಿಗೆ ಸಿಗುತ್ತಿಲ್ಲ. ಹೀಗಾಗಿ ಹಲವು ರೈತರು ಟೊಮೇಟೊ ಕೊಯ್ಯದೆ ಗಿಡದಲ್ಲೇ ಬಿಟ್ಟಿದ್ದಾರೆ. ಮತ್ತೆ ಕೆಲವರು ಟೊಮೇಟೊ ನಾಶಪಡಿಸುತ್ತಿದ್ದಾರೆ. ಇಂದು ಟೊಮೆಟೋ ಬೆಳೆಯಲು ರೈತರು ನಾನಾ ಬಗೆಯ ಸರ್ಕಸ್‌ ಮಾಡಬೇಕು. ಹೀಗಾಗಿ ಖರ್ಚು ಹೆಚ್ಚು. ಟೊಮೇಟೊ ಕೀಳುವ ಕಾರ್ಮಿಕರಿಗೆ ದಿನದ ಕೂಲಿಯೂ ಹೆಚ್ಚು. ಇದೀಗ ಟೊಮೇಟೊ ಧಾರಣೆ ಹಾಕಿದ್ದ ಬಂಡವಾಳಕ್ಕೂ ಸಾಕಾಗುತ್ತಿಲ್ಲ. ಈ ರೀತಿಯಾದರೆ ನಾವು ಬದುಕುವುದಾದರೂ ಹೇಗೆ ಎನ್ನುತ್ತಾರೆ ಟೊಮೆಟೋ ಬೆಳೆಯುವ ರೈತರು.

ಒಂದೇ ತಿಂಗಳ ಅಂತರದಲ್ಲಿ ಟೊಮೆಟೋ ಬೆಲೆ ಪಾತಾಳಕ್ಕೆ ಕುಸಿದಿದೆ. ಇದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದ್ದು, 15 ಕೆಜಿಯ ಒಂದು ಬಾಕ್ಸ್​ ಟೊಮ್ಯಾಟೊ 60ರಿಂದ 100 ರೂಪಾಯಿಗೆ ಕುಸಿದು ಬಿದ್ದಿದೆ. ಅಂದರೆ ಒಂದು ಕೆಜಿ ಟೊಮ್ಯಾಟೊ ಬೆಲೆ ಕೇವಲ ಮೂರು ರೂಪಾಯಿಯಿಂದ ಆರಂಭವಾಗುತ್ತಿದೆ. ಇದರಿಂದ ರೈತರ ಬದುಕು ತೂಗುಗತ್ತಿಯ ಮೇಲಿರುವ ಹಾಗಾಗಿದೆ.

ಬಿಜೆಪಿಗೂ ಜೆಡಿಎಸ್‌ ಮೈತ್ರಿ ಕಹಿ ಅನುಭವ ಆಗಲಿದೆ: ಸಚಿವ ದಿನೇಶ್‌ ಗುಂಡೂರಾವ್‌ ಲೇವಡಿ

ಬೇಡಿಕೆ ಕುಸಿತ: ಜೂನ್‌ ಮಧ್ಯ ಭಾಗದಿಂದ ಜುಲೈ ಅಂತ್ಯದವರೆಗೆ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎಪಿಎಂಸಿ) ಬರುತ್ತಿದ್ದ ಟೊಮೇಟೊ ಪ್ರಮಾಣ ತುಂಬಾ ಕಡಿಮೆ ಇತ್ತು. ಮತ್ತೊಂದೆಡೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ,ನಾಗಪುರ್‌, ತಮಿಳುನಾಡು, ಕೇರಳ ಸೇರಿ ಹೊರ ರಾಜ್ಯಗಳಲ್ಲಿ ಟೊಮೇಟೊಗೆ ಬೇಡಿಕೆ ಹೆಚ್ಚಿತ್ತು. ಹೊರ ರಾಜ್ಯಗಳ ವರ್ತಕರು ಹೆಚ್ಚಿನ ಪ್ರಮಾಣದಲ್ಲಿ ಟೊಮೇಟೊ ಖರೀದಿಸಿ ಹೋಗುತ್ತಿದ್ದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೇಟೊ ಸಿಗುವುದು ಕಷ್ಟವಾಗಿತ್ತು. ಇದರಿಂದ ಟೊಮೆಟೊ ಬೆಲೆ ಗಗನಕ್ಕೇರಿತ್ತು ಎನ್ನುತ್ತಾರೆ ಎಪಿಎಂಸಿಯ ಟೊಮೆಟೋ ಮಂಡಿ ವರ್ತಕ ಮೋಹನ್.

click me!