ಕೊಡಗು: ತೆರಿಗೆ ಕಟ್ಟದವರ ವ್ಯಾಪಾರಕ್ಕೆ ಅನುಕೂಲ ಮಾಡುತ್ತಿದೆಯಾ ಗ್ರಾಮ ಪಂಚಾಯಿತಿ?

By Girish GoudarFirst Published Feb 9, 2024, 11:28 PM IST
Highlights

ಇದರ ಹಿಂದೆ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ ಎಂದು ಪಂಚಾಯಿತಿ ಸದಸ್ಯರು ಹಾಗೂ ವ್ಯಾಪಾರಿಗಳು ಆರೋಪಿಸಿದ್ದಾರೆ.ಹೀಗಾಗಿಯೇ ಪ್ರತೀ ವರ್ಷ ಲಕ್ಷಾಂತರ ರೂಪಾಯಿ ಹಣ ಕಟ್ಟಿ ಟೆಂಡರ್ ಪಡೆದುಕೊಳ್ಳುತ್ತಿದ್ದ ವ್ಯಾಪಾರಸ್ಥರು ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೀದರ್

ಕೊಡಗು(ಫೆ.09):  ಯಾವುದೇ ಪಂಚಾಯಿತಿಗಳ ಆದಾಯದ ಮೂಲ ತೆರಿಗೆ ಮತ್ತು ಟೆಂಡರ್ ಗಳಾಗಿರುತ್ತವೆ. ಆದರೆ ವ್ಯಾಪಾರ ಲೈಸೆನ್ಸ್ ಪಡೆದುಕೊಳ್ಳಲು ಕಟ್ಟಬೇಕಾಗಿರುವ ಹಣವನ್ನು ಕಟ್ಟದೆ ಪಂಚಾಯಿತಿ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲೇರಿರುವ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಪಂಚಾಯಿತಿ ನಡೆದುಕೊಳ್ಳುತ್ತಿದೆ ಎಂಬ ಆರೋಪ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವಿರುದ್ಧ ಕೇಳಿ ಬಂದಿದೆ. 

ಇದರ ಹಿಂದೆ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ ಎಂದು ಪಂಚಾಯಿತಿ ಸದಸ್ಯರು ಹಾಗೂ ವ್ಯಾಪಾರಿಗಳು ಆರೋಪಿಸಿದ್ದಾರೆ.ಹೀಗಾಗಿಯೇ ಪ್ರತೀ ವರ್ಷ ಲಕ್ಷಾಂತರ ರೂಪಾಯಿ ಹಣ ಕಟ್ಟಿ ಟೆಂಡರ್ ಪಡೆದುಕೊಳ್ಳುತ್ತಿದ್ದ ವ್ಯಾಪಾರಸ್ಥರು ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮೈಸೂರು ಸಿಂಹನ ವಿರುದ್ಧ ಗುಟುರು ಹಾಕುತ್ತಿದೆ ಹಳ್ಳಿಹಕ್ಕಿ: ಲೋಕಸಭೆಗೆ ಕೈನಿಂದ ಸ್ಪರ್ಧಿಸಲು ವಿಶ್ವನಾಥ್ ಸಜ್ಜು!

ರಾಷ್ಟ್ರೀಯ ಹೆದ್ದಾರಿ 275 ಹಾದು ಹೋಗಿರುವ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಪ್ರತೀ ವರ್ಷ ಮೀನು, ಮಾಂಸ ಮಾರಾಟದ ಹಕ್ಕುಗಳನ್ನು ಟೆಂಡರ್ ಕೂಗುತ್ತದೆ. ಪ್ರತೀ ವ್ಯಾಪಾರದ ಹಕ್ಕು 4 ರಿಂದ 5 ಲಕ್ಷಕ್ಕೆ ಟೆಂಡರ್ ನಡೆಯುತ್ತದೆ. ಟೆಂಡರ್ ಪಡೆದುಕೊಳ್ಳುತ್ತಿದ್ದ ವ್ಯಾಪಾರಿಗಳು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲೇ ಇರುವ ಖಾಸಗಿ ಮಳಿಗೆಗಳಲ್ಲಿ ವ್ಯಾಪಾರ ಮಾಡುತ್ತಿದ್ದರು. ಅವುಗಳಲ್ಲಿ ಮೂರು ವ್ಯಾಪಾರಿಗಳು ಮಾತ್ರ ವ್ಯಾಪಾರದ ಪರವಾನಗಿ ನೀಡುವುದಕ್ಕೆ ಪಂಚಾಯಿತಿಯಿಂದ 500 ರೂಪಾಯಿಗಿಂತ ಹೆಚ್ಚು ಶುಲ್ಕ ಸಂಗ್ರಹಿಸಲಾಗುತ್ತಿದೆ ಎಂದು 2018 ರಲ್ಲಿಯೇ ನ್ಯಾಯಾಲಯದ ಮೆಟ್ಟಿಲೇರಿದ್ದರು. ಉಳಿದ ಎಂಟು ವ್ಯಾಪಾರಿಗಳು ಮಾತ್ರ ಇಂದಿಗೂ ಲಕ್ಷಾಂತರ ರೂಪಾಯಿ ವ್ಯಯಿಸಿ ವ್ಯಾಪಾರದ ಹಕ್ಕು ಪಡೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಪಂಚಾಯಿತಿ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಪಾವತಿಸಿ ಟೆಂಡರ್ ಪಡೆದಿರುವ ವ್ಯಾಪಾರಿಗಳನ್ನು ಹೆದ್ದಾರಿ ಬದಿಯ ಮಳಿಗೆಗಳಿಂದ ಗ್ರಾಮದ ಒಳಭಾಗದಲ್ಲಿರುವ, ಯಾರೂ ಬಂದು ಹೋಗಲಾಗದಂತಹ ಸ್ಥಿತಿ ಇರುವ ಪಂಚಾಯಿತಿ ಮಳಿಗೆಗಳಿಗೆ ಸ್ಥಳಾಂತರ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಅದಕ್ಕಾಗಿ ಟೆಂಡರ್ ದಿನಾಂಕವನ್ನು ಘೋಷಿಸಲಾಗಿದೆ. ಇದರಿಂದ ಪಂಚಾಯಿತಿಗೆ ಕಟ್ಟಬೇಕಾಗಿರುವ ಲಕ್ಷಾಂತರ ರೂಪಾಯಿ ವ್ಯಾಪಾರ ಹಕ್ಕಿನ ಹಣವನ್ನು ಕಟ್ಟದ ವ್ಯಾಪಾರಿಗಳಿಗೆ ಅನುಕೂಲ ಮಾಡುವುದಕ್ಕೆ ಪಂಚಾಯಿತಿ ಮಾಡಿರುವ ಹುನ್ನಾರ ಎಂದು ಪಂಚಾಯಿತಿ ಪಿಡಿಓ ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಲಕ್ಷಾಂತರ ರೂಪಾಯಿ ಕಟ್ಟಿ ವ್ಯಾಪಾರ ಹಕ್ಕನ್ನು ಟೆಂಡರ್ ಪಡೆಯುವುದು ನಾವು. ಆದರೆ ಪಂಚಾಯಿತಿಯವರು ನಮ್ಮನ್ನು ಮಾತ್ರ ದೂರದಲ್ಲಿರುವ ಗ್ರಾಮ ಪಂಚಾಯಿತಿಯ ಮಳಿಗೆಗಳಿಗೆ ಸ್ಥಳಾಂತರ ಮಾಡಲು ಸಿದ್ಧತೆ ನಡೆಸಿದ್ದಾರೆ. ಆ ಮಳಿಗೆಗಳಲ್ಲಿ ಕನಿಷ್ಠ ಮೂಲಸೌಲಭ್ಯಗಳಿಲ್ಲ. ಆಳವಾದ ಗುಂಡಿಯಲ್ಲಿ ಮಳಿಗೆಗಳಿದ್ದು, ಅಲ್ಲಿಗೆ ಗರ್ಭಿಣಿಯರು, ವೃದ್ಧರು ಬರಲು ಸಾಧ್ಯವೇ ಇಲ್ಲ. ಜೊತೆಗೆ ಪಂಚಾಯಿತಿ ಮಳಿಗೆಗಳಿರುವ ಸಮೀಪದಲ್ಲಿ ಹತ್ತಾರು ಮನೆಗಳಿದ್ದು ಅಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದಾರೆ. ಅವರಿಗೆ ರೋಗ ರುಜಿನಗಳು ಬರುವ ಸಾಧ್ಯತೆ ಇದೆ. ಇದರಿಂದ ಅಲ್ಲಿಗೆ ನಮ್ಮನ್ನು ಸ್ಥಳಾಂತರ ಮಾಡುವುದು ಬೇಡ, ಒಂದು ವೇಳೆ ಸ್ಥಳಾಂತರ ಮಾಡುವುದಾದರೆ ಟೆಂಡರ್ ಪಡೆಯದೆ ವ್ಯಾಪಾರ ಮಾಡುತ್ತಾ ನ್ಯಾಯಾಲಯದ ಮೆಟ್ಟಿಲೇರಿ ಹೆದ್ದಾರಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವವರು ಎಷ್ಟುದಿನ ಅಲ್ಲಿ ವ್ಯಾಪಾರ ಮಾಡುತ್ತಾರೋ, ನಮಗೂ ಅಲ್ಲಿಯತನಕ ಹೆದ್ದಾರಿ ಬದಿಯಲ್ಲೇ ವ್ಯಾಪಾರಕ್ಕೆ ಅವಕಾಶ ಕೊಡಿ ಎಂದು ಒತ್ತಾಯಿಸಿದ್ದಾರೆ. 

ಮತ್ತೊಂದೆಡೆ ಕಳೆದ ನಾಲ್ಕು ವರ್ಷಗಳಿಂದ ಲಕ್ಷ, ಲಕ್ಷ ಕಟ್ಟಿ ಟೆಂಡರ್ ಪಡೆದಿದ್ದೇವೆ. ಆದರೆ ಪಿಡಿಓ ಅವರು ಇದುವರೆಗೆ ವ್ಯಾಪಾರ ಪರವಾನಗಿ ನೀಡಿಲ್ಲ. ಕೇಳಿದಾಗಲೆಲ್ಲಾ ನಾನಿದ್ದೇನೆ ನೀವು ವ್ಯಾಪಾರ ಮಾಡಿ ಎಂದು ಹೇಳುತ್ತಿದ್ದರು ಎಂದು ವ್ಯಾಪಾರಿ ಇಸ್ಮಾಯಿಲ್ ಆರೋಪಿಸಿದ್ದಾರೆ. 

ರಾಜ್ಯಗಳ ಶಕ್ತಿ ಕುಂದಿಸುವ ಯತ್ನ ಕೇಂದ್ರ ಸರ್ಕಾರದಿಂದ ಆಗುತ್ತಿದೆ: ಸಚಿವ ಕೃಷ್ಣ ಭೈರೇಗೌಡ ಕಿಡಿ

ಈ ಕುರಿತು ಪ್ರತಿಕ್ರಿಯಿಸಿರುವ ಪಂಚಾಯಿತಿಯ ನೂತನ ಪಿಡಿಓ ನಟರಾಜ್ ಅವರು ಹಿಂದಿನ ಪಿಡಿಓ ಏನೆಲ್ಲಾ ಮಾಡಿದ್ದಾರೆ ಗೊತ್ತಿಲ್ಲ. ಆದರೆ ಪಂಚಾಯಿತಿಯ ವ್ಯಾಪಾರ ಮಳಿಗೆಗಳಿಗೆ ವ್ಯಾಪಾರಿಗಳನ್ನು ಶಿಫ್ಟ್ ಮಾಡಿದರೆ, ಅಲ್ಲಿಯೇ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ಅನುಕೂಲವಾಗುತ್ತದೆ. ಟೆಂಡರ್ ಆಗುವಷ್ಟರಲ್ಲಿ ನ್ಯಾಯಾಲಯದ ಆದೇಶ ಪಡೆದು ಎಲ್ಲವನ್ನು ಸರಿಮಾಡುತ್ತೇವೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೋ, ಇಲ್ಲ ಆತುರದ ನಿರ್ಧಾರಕ್ಕೋ ಅಧಿಕೃತವಾಗಿ ಲಕ್ಷಾಂತರ ರೂಪಾಯಿ ಪಾವತಿಸಿ ಟೆಂಡರ್ ಪಡೆದು ವ್ಯಾಪಾರ ಮಾಡುತ್ತಿರುವವರಿಗೆ ನಷ್ಟ ಆಗುವಂತೆ ಮಾಡುತ್ತಿರುವುದು ಎಲ್ಲರನ್ನು ಸಿಟ್ಟಿಗೇಳುವಂತೆ ಮಾಡಿದೆ.

click me!