ಟ್ರ್ಯಾಕ್ಟರ್ ಮಗುಚಿ ಬಿದ್ದು ಒಂದೇ ಕುಟುಂಬದ ನಾಲ್ವರ ಸಾವು, ಏಳು ಜನರಿಗೆ ಗಾಯ| ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಕತ್ತೆಬೆನ್ನೂರು ಬಳಿ ನಡೆದ ಘಟನೆ| ಗಾಯಾಳುಗಳನ್ನ ಹರಪನಹಳ್ಳಿ ಮತ್ತು ಹೂವಿನಹಡಗಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು|
ಹೂವಿನಹಡಗಲಿ(ಮಾ.20): ಮದುವೆ ದಿಬ್ಬಣದ ಟ್ರ್ಯಾಕ್ಟರ್ ಮಗುಚಿ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಏಳು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ತಾಲೂಕಿನ ಕತ್ತೆಬೆನ್ನೂರು ಬಳಿ ಗುರುವಾರ ಸಂಜೆ ಜರುಗಿದೆ.
ದಾಸನಹಳ್ಳಿಯ ಅಂಗಡಿ ಗೀತಾ (40), ಸೊಪ್ಪಿನ ಸುನೀತಾ (30), ವೀರಣ್ಣ ಜಕ್ಕಣ್ಣನವರ (35), ಹೆಗ್ಗಜ್ಜಿ ಕಾಳಮ್ಮ (50) ಮೃತರು. ಗಾಯಗೊಂಡವರನ್ನು ಹರಪನಹಳ್ಳಿ ಮತ್ತು ಹೂವಿನಹಡಗಲಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಬೀರಬ್ಬಿಯಲ್ಲಿ ತಮ್ಮ ಸಂಬಂಧಿಕರ ಮದುವೆ ಮುಗಿಸಿಕೊಂಡು ವಾಪಸ್ ದಾಸನಹಳ್ಳಿಗೆ ಹೋಗುವಾಗ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಮಗುಚಿ ಬಿದ್ದಿದೆ ಎನ್ನಲಾಗಿದೆ. ಈ ಕುರಿತು ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಿಪಿಐ ಮಾಲತೇಶ ಕೂನಬೇವು ಭೇಟಿ ನೀಡಿ, ತನಿಖೆ ನಡೆಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಟ್ರ್ಯಾಕ್ಟರ್‌ನಲ್ಲಿ 15-20 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಇವರೆಲ್ಲ ಹೆಣ್ಣಿನ ಮನೆಯ ಸಂಬಂಧಿಕರು. ಈಗ ಆಸ್ಪತ್ರೆಗೆ ದಾಖಲಾದವರ ಪೈಕಿ 2-3 ಜನರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.