ಕೊಪ್ಪಳದಲ್ಲಿ ನಾಲ್ಕು ಕಡೆ ಸ್ಕ್ರೀನಿಂಗ್ ಸೆಂಟರ್ ಪ್ರಾರಂಭ| ವ್ಯಾಪಾರ ವಹಿವಾಟು ಬಂದ್| ಚಿಕನ್ ಸೇರಿದಂತೆ ತರಕಾರಿಯೂ ಅಗ್ಗ| ಸಂಕಷ್ಟಕ್ಕೆ ಸಿಲುಕಿದ ಕೋಳಿ ಫಾರ್ಮ್ ಮಾಲೀಕರು|
ಕೊಪ್ಪಳ(ಮಾ.20): ಕೊರೋನಾ ಕಂಬಂಧಬಾಹು ಜಿಲ್ಲೆಯಲ್ಲಿ ಚಾಚಿಲ್ಲವಾದರೂ ಜಿಲ್ಲಾದ್ಯಂತ ಹೈಅಲರ್ಟ್ ಇದ್ದು, ಓರ್ವ ಶಂಕಿತನ ಪತ್ತೆಯಿಂದಲೇ ಕೊಪ್ಪಳ ಜಿಲ್ಲೆ ತಬ್ಬಿಬ್ಬಾಗಿದೆ. ಅದರಲ್ಲೂ ನಾನಾ ದೇಶದಲ್ಲಿ ಇದ್ದ ಜಿಲ್ಲೆಯವರು ಸದ್ದಿಲ್ಲದೇ ಆಗಮಿಸುತ್ತಿರುವುದರಿಂದ ಜಿಲ್ಲಾಡಳಿತಕ್ಕೂ ತಲೆಬಿಸಿಯಾಗಿದೆ.
ಕಾಸರಗೋಡು ಪ್ರಯಾಣಿಕರ ಗಡಿ ದಾಟಿಸಲು ವಿಶೇಷ ಬಸ್
ಈಗಾಗಲೇ ಜಿಲ್ಲೆಯಲ್ಲಿ ಹೀಗೆ ಬಂದ 35 ಜನರ ಮೇಲೆ ವಿಶೇಷ ನಿಗಾ ಇಡಲಾಗಿದ್ದು, ಬುಧವಾರ 33 ಇದ್ದ ಈ ಸಂಖ್ಯೆ ಗುರುವಾರ 35 ಆಗಿದೆ. ಹೀಗೆ, ನಿಗಾ ಇಡುತ್ತಿರುವುದೇ ಜನರನ್ನು ಕಂಗಾಲು ಆಗುವಂತೆ ಮಾಡಿದೆ. ದುಬೈನಿಂದ ಬಂದಿದ್ದ ಓರ್ವ ನಗರ ಬನ್ನಿಕಟ್ಟಿಯ ನಿವಾಸದಲ್ಲಿ ಇದ್ದ. ಈ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಅವರನ್ನು ನಿಗಾದಲ್ಲಿ ಇಡಲಾಗಿದೆ.
ಶಂಕಾಸ್ಪದ ವ್ಯಕ್ತಿ ಫಲಿತಾಂಶ ನಿರೀಕ್ಷೆ:
ಸೌದಿ ಅರೇಬಿಯಾದಿಂದ ಬಂದು ಜಿಲ್ಲೆ ಸೇರಿದಂತೆ ನಾನಾ ಜಿಲ್ಲೆಗೆ ಸುತ್ತಿ, ಈಗ ಶಂಕಾಸ್ಪದ ಆಗಿರುವ ವ್ಯಕ್ತಿಯ ರಕ್ತವನ್ನು ಪರೀಕ್ಷೆಗೆ ಕಳಿಸಿಕೊಡಲಾಗಿದೆ. ಈತನ ಫಲಿತಾಂಶಕ್ಕಾಗಿ ಜನರು ಹಾಗೂ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಕಾಯುತ್ತಿದೆ. ಫೆ. 29ರಂದು ಆಗಮಿಸಿರುವ ಈ ವ್ಯಕ್ತಿ ನಾನಾ ಜಿಲ್ಲೆ ಹಾಗೂ ಸ್ಥಳೀಯವಾಗಿಯೂ ಸುತ್ತಾಡಿರುವುದರಿಂದ ಜನರು ಹೆದರಿದ್ದಾರೆ. ನೆಗೆಟಿವ್ ಬಂದರೆ ಯಾವುದೇ ಸಮಸ್ಯೆ ಇಲ್ಲ. ಹಾಗೊಂದು ವೇಳೆ ಆತನಿಗೆ ಕೊರೋನಾ ಇದೆ ಎಂದರೇ ಆತ ಸುತ್ತಾಡಿದ ಜಾಗ ಮತ್ತು ಜನರನ್ನು ತಪಾಸಣೆಗೆ ಒಳಪಡಿಸಬೇಕಾಗುತ್ತದೆ ಎನ್ನುವುದು ಸಹ ಜಿಲ್ಲಾಡಳಿತಕ್ಕೆ ಬಹುದೊಡ್ಡ ತಲೆನೋವಾಗಿದೆ.
ನಾಲ್ಕು ಸ್ಕ್ರೀನಿಂಗ್ ಸೆಂಟರ್:
ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ನಾಲ್ಕು ಕಡೆ ಸ್ಕ್ರೀನಿಂಗ್ ಸೆಂಟರ್ ಪ್ರಾರಂಭಿಸಲಾಗಿದೆ. ನ್ಯಾಯಾಲಯ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಗವಿಮಠದ ಬಳಿ ಸ್ಕ್ರೀನಿಂಗ್ ಸೆಂಟರ್ ಪ್ರಾರಂಭಿಸಲಾಗಿದೆ. ಸ್ಕ್ರೀನಿಂಗ್ ವೇಳೆಯಲ್ಲಿ ದೇಹದ ಉಷ್ಣಾಂಶ 100 ಡಿಗ್ರಿ ಸೆಲ್ಸಿಯಸ್ ಇದ್ದರೆ ಅಂಥವರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ
ಶುಕ್ರವಾರದ ಪ್ರಾರ್ಥನೆ ಅವಧಿ ಕಡಿ
ಕೊರೋನಾ ಭೀತಿ ಹಿನ್ನೆಲೆ ಜಿಲ್ಲೆಯ ಮುಸ್ಲಿಮರು ಶುಕ್ರವಾರದ ವಿಶೇಷ ಪ್ರಾರ್ಥನೆ ಸಂಬಂಧ ಅವಧಿ ಕಡಿತಗೊಳಿಸಿ 15 ನಿಮಿಷದ ಒಳಗೆ ಎಲ್ಲ ನಮಾಜಿನ ಪ್ರಕ್ರಿಯೆ ಪೂರ್ಣಗೊಳಿಸಿ ತಮ್ಮ- ತಮ್ಮ ಮನೆಗೆ ಹಿಂದಿರುಗಬೇಕೆಂದು ಕೊಪ್ಪಳ ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಸೈಯದ್ ನೂರುದ್ದೀನ್ ಖಾದ್ರಿ ಮತ್ತು ಅಧಿಕಾರಿ ಮಕಬೂಲ್ ಷಾಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಮೆರಿಕದ ಸಮುದ್ರ ಮಧ್ಯೆ ಹಡಗಲ್ಲಿ 131 ಭಾರತೀಯರ ದಿಗ್ಬಂಧನ
ಕರ್ನಾಟಕ ರಾಜ್ಯ ವಕ್ಫ್ ಇಲಾಖೆಯ ಮನವಿ ಮತ್ತು ನಿರ್ದೇಶನ ಜಾರಿಗೊಳಿಸಿದ್ದು, ಮುಸ್ಲಿಂ ಶರಿಯತ್ ಕಮೀಟಿ ಸಹ ಸಭೆ ನಡೆಸಿ ಇದರ ಕುರಿತು ಸಮಸ್ತ ಮುಸ್ಲಿಮರಲ್ಲಿ ಮನವಿ ಮಾಡಿಕೊಂಡಿದೆ. ಕೊರೋನಾ ವೈರಸ್ ರೋಗ ತಡೆಗಟ್ಟಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಮುಸ್ಲಿಂ ಸಮುದಾಯದವರು ಶುಕ್ರವಾರದ ವಿಶೇಷ ಪ್ರಾರ್ಥನೆ ನಮಾಜ್ ಕಾರ್ಯ ಪೂರ್ಣಗೊಳಿಸಲು ಹೆಚ್ಚು ಸಮಯ ಕಡಿತಗೊಳಿಸಿ ಅಲ್ಪ ಸಮಯದಲ್ಲಿಯೇ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಸ್ವಚ್ಛತೆಗೆ ಆದ್ಯತೆ ಕೊಡಬೇಕು. ನಮಾಜಿಗಾಗಿ ಮಸೀದಿಗೆ ಬರುವವರು ತಮ್ಮ ಮನೆಯಲ್ಲಿಯೇ ನೀರಿನಿಂದ ವಜು ಮಾಡಿಕೊಂಡು ಸಾಂಪ್ರದಾಯಕ ವಸ್ತುಗಳನ್ನು ಧರಿಸಿ ಬರುವುದು ಸೂಕ್ತ. ಮಸೀದಿ ಇಮಾಮಗಳು ಮತ್ತು ಆಡಳಿತ ಮಂಡಳಿಯವರು ಧ್ವನಿವರ್ಧಕ ಹೊರಗಡೆ ಬಿಡಬಾರದು. ಫರಜ್ ನಮಾಜ್ ಬಳಿಕದ ಇತರ ಸುನ್ನತ್ ಮತ್ತು ನಫೀಲ್ ನಮಾಜಗಳನ್ನು ತಮ್ಮ- ತಮ್ಮ ಮನೆಯಲ್ಲಿಯೇ ಮಾಡಿಕೊಳ್ಳುವುದು ಸೂಕ್ತ. ಮುಸ್ಲಿಮರು ಕೊರೋನಾ ವೈರಸ್ ತಡೆಗಟ್ಟಲು ಸಹಕರಿಸಬೇಕೆಂದು ಕೋರಿದ್ದಾರೆ.
26 ರವರೆಗೆ ಸಲೂನ್ ಶಾಪ್ ಬಂದ್
ಕೊರೋನಾ ವೈರಸ್ ಭೀತಿಯಿಂದ ನಗರದ ಎಲ್ಲ ಕಟಿಂಗ್ ಸಲೂನ್ ಶಾಪ್‌ಗಳನ್ನು ಬಂದ್ ಮಾಡಲಾಗುವುದು ಎಂದು ಜಿಲ್ಲಾ ಹಡಪದ ಸಮಾಜದ ಅಧ್ಯಕ್ಷ ಮಂಜುನಾಥ ಹಂದ್ರಾಳ ತಿಳಿಸಿದ್ದಾರೆ.
ಗುರುವಾರ ಜಿಲ್ಲೆಯ ಕ್ಷೌರಿಕ ಮತ್ತು ಸವಿತಾ ಸಮಾಜದ ಪದಾಧಿಕಾರಿಗಳ ಸಭೆ ನಡೆಸಿ ಬಂದ್ ಮಾಡಲು ನಿರ್ಧರಿಸಲಾಯಿತು. ಸಾರ್ವಜನಿಕರ ಆರೋಗ್ಯ ಮತ್ತು ಕ್ಷೌರಿಕ ವೃತ್ತಿ ನಿರತರ ಸುರಕ್ಷತೆ ದೃಷ್ಟಿತೆಯಿಂದ ಮಾ. 26 ರವರೆಗೆ ಬಂದ್ ಮಾಡಲಾಗುವುದು ಎಂದು ಹೇಳಿದ್ದಾರೆ.
ನ್ಯಾಯಾಲವೂ ಬಂದ್:
ಜಿಲ್ಲಾ ಮತ್ತು ಸತ್ರ ನ್ಯಾಯಾಲಯವೂ ಬಂದ್ ಮಾಡಲಾಗಿದೆ. ಕೋರ್ಟ್ ಗೇಟ್ ಹಾಕಿ, ನೋಟಿಸ್ ಹಾಕಲಾಗಿದೆ. ಕೇವಲ ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲಾಗುತ್ತದೆ. ಮಾರುಕಟ್ಟೆ ಸಂಪೂರ್ಣ ಸ್ತಬ್ಧ: ಜಿಲ್ಲಾದ್ಯಂತ ಮಾರುಕಟ್ಟೆ ಸಂಪೂರ್ಣ ಸ್ತಬ್ಧವಾಗಿದ್ದು, ವಹಿವಾಟು ಶೇ. 90ರಷ್ಟು ಇಲ್ಲದಾಗಿದೆ.
ಕೊರೋನಾ ಭೀತಿ: ಭಕ್ತರಿಲ್ಲದೆ ಪ್ರಸಿದ್ಧ ಗಾಣಗಾಪೂರ ದತ್ತಾತ್ರೆಯ ದೇವಸ್ಥಾನ ಖಾಲಿ ಖಾಲಿ
ಕೇವಲ ಮೆಡಿಕಲ್ ಶಾಪ್ ಮತ್ತು ಕಿರಾಣಿ ವರ್ತಕರ ಅಂಗಡಿಗಳು ಮಾತ್ರ ತೆರೆದಿವೆ. ಉಳಿದಂತೆ ಹೋಟೆಲ್, ಬಾರ್ ಸಂಪೂರ್ಣ ಬಂದ್ ಮಾಡಲಾಗಿದೆ. ಜಿಲ್ಲಾ ಕೇಂದ್ರ ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ ಸೇರಿದಂತೆ ಬಹುತೇಕ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಆದರೆ, ಸಂಚಾರ ಮಾತ್ರ ಎಂದಿನಂತೆಯೇ ಕಂಡುಬಂದಿತು. ನಿತ್ಯ ಇರುವುದಕ್ಕಿಂತ ಕಡಿಮೆ ಇತ್ತು.
ಅಗ್ಗವಾದ ತರಕಾರಿ, ಚಿಕನ್:
ಚಿಕನ್ ಸೇರಿದಂತೆ ತರಕಾರಿಯೂ ಅಗ್ಗವಾಗುತ್ತಿವೆ. ಮಾರುಕಟ್ಟೆಯಲ್ಲಿ ಕೊಳ್ಳುವವರು ಇಲ್ಲದೆ ಇರುವುದರಿಂದ ಸಮಸ್ಯೆಯಾಗುತ್ತಿದೆ. ಅದರಲ್ಲೂ ಜನರು ಚಿಕನ್ ಖರೀದಿಯಿಂದ ದೂರವೇ ಉಳಿದಿರುವುದರಿಂದ ಕೋಳಿ ಫಾರ್ಮ್‌ನವರು ಸಂಕಷ್ಟಕ್ಕೆ ಸಿಲುಕಿದ್ದಾರೆ.