Chikkamagaluru: ಸ್ಥಳೀಯರಿಗೆ ಹೆಬ್ಬಾಳೆ ಸೇತುವೆ ಮುಳುಗೋ ಭಯ, ಪ್ರವಾಸಿಗರಿಗೆ ಸೆಲ್ಫಿ ಕ್ರೇಜ್!

By Govindaraj S  |  First Published Jul 3, 2022, 2:50 PM IST

ಮಲೆನಾಡಿನಲ್ಲಿ ಮುಳುಗುವ ಸೇತುವೆ ಎಂದೇ ಪ್ರಖ್ಯಾತಿ ಪಡೆದಿರುವ ಭದ್ರಾ ನದಿಯ ಹೆಬ್ಬಾಳ ಸೇತುವೆಯೂ ಮುಳುಗಡೆ ಆಗಲು ಕೆಲವೇ ಅಡಿಗಳಷ್ಟು ಬಾಕಿ ಉಳಿದಿದೆ. ಹೆಬ್ಬಾಳ ಸೇತುವೆ ಮುಳುಗಡೆ ಭೀತಿ ಸ್ಥಳೀಯರಲ್ಲಿ ಆವರಿಸಿದ್ರೆ ಪ್ರವಾಸಿಗರಲ್ಲಿ ಸೆಲ್ಫಿ ಕ್ರೇಜ್ ಹೆಚ್ಚಾಗಿದೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಜು.03): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಉತ್ತಮವಾಗಿ ಮಳೆ ಸುರಿಯುತ್ತಿದೆ. ಮಳೆಯಿಂದ ಹಳ್ಳ, ನದಿಗಳಲ್ಲಿ ನೀರಿನ ಪ್ರಮಾಣವೂ ಏರಿಕೆಯಾಗಿದೆ. ಮಲೆನಾಡಿನಲ್ಲಿ ಮುಳುಗುವ ಸೇತುವೆ ಎಂದೇ ಪ್ರಖ್ಯಾತಿ ಪಡೆದಿರುವ ಭದ್ರಾ ನದಿಯ ಹೆಬ್ಬಾಳ ಸೇತುವೆಯೂ ಮುಳುಗಡೆ ಆಗಲು ಕೆಲವೇ ಅಡಿಗಳಷ್ಟು ಬಾಕಿ ಉಳಿದಿದೆ. ಹೆಬ್ಬಾಳ ಸೇತುವೆ ಮುಳುಗಡೆ ಭೀತಿ ಸ್ಥಳೀಯರಲ್ಲಿ ಆವರಿಸಿದ್ರೆ ಪ್ರವಾಸಿಗರಲ್ಲಿ ಸೆಲ್ಫಿ ಕ್ರೇಜ್ ಹೆಚ್ಚಾಗಿದೆ. ಅಪಾಯದ ಜಾಗದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದು, ಪ್ರವಾಸಿಗರ ನೆಡೆಗೆ ಸ್ಥಳೀಯರು ಕಿಡಿಕಾರಿದ್ದಾರೆ.

Latest Videos

undefined

ಕುದುರೆಮುಖದಲ್ಲಿ ಮುಂದುವರೆದ ಮಳೆ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗವಾದ ಕುದುರೆಮುಖದಲ್ಲಿ ಮಳೆ ಮುಂದುವರೆದಿದೆ. ಮಲೆನಾಡಿನ ಭಾಗವಾದ ಚಿಕ್ಕಮಗಳೂರಿನ ಶೃಂಗೇರಿ, ಕೊಪ್ಪ, ಎನ್ ಆರ್ ಪುರ, ಮೂಡಿಗೆರೆ ,ಕಳಸ ತಾಲೂಕಿನಲ್ಲಿ ಕಳೆದ ಮೂರು ನಾಲ್ಕು ‌ದಿನಗಳಿಂದ ಉತ್ತಮವಾಗಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಪ್ರಮುಖ ನದಿಗಳಾದ ಭದ್ರ ತುಂಗಾ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿದೆ. ಮಲೆನಾಡಲ್ಲಿ ಮಳೆ ಅಬ್ಬರದಿಂದ  ಮೈದುಂಬಿ ಹರಿಯುತ್ತಿರೋ ಭದ್ರೆ ನದಿಯ ನೀರಿನಿಂದ  ಮುಳುಗುವ ಭೀತಿಯನ್ನು ಹೆಬ್ಬಾಳೆ ಸೇತುವೆ ಎದುರಿಸುತ್ತಿದೆ. 

ಚಿಕ್ಕಮಗಳೂರಲ್ಲಿ ಭಾರೀ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ

ಕಳಸ ತಾಲೂಕಿನ ಕುದುರೆಮುಖ ಭಾಗದಲ್ಲಿ ಕಳೆದ ರಾತ್ರಿಯೂ ಸುರಿದ ಧಾರಾಕಾರ ಮಳೆಯಿಂದ ಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು ಹೆಬ್ಬಾಳೆ ಸೇತುವೆಗೆ ಮುಳುಗುಡೆ ಭೀತಿ ಆವರಿಸಿದೆ. ಕಳಸ ಹಾಗೂ ಕುದುರೆಮುಖ ಸುತ್ತಮುತ್ತ ನಿನ್ನೆ ರಾತ್ರಿಯೂ 11ಗಂಟೆ ಸುಮಾರಿಗೆ ಆರಂಭವಾದ ಮಳೆ ಬೆಳಗ್ಗಿನ ಜಾವದವರೆಗೂ ಒಂದೇ ಸುಮನೆ ಸುರಿದಿದೆ. ಭಾರೀ ಮಳೆಯಿಂದ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಕೂಡ ಮುಳುಗುವ ಹಂತ ತಲುಪಿದೆ. ಈ ಸೇತುವೆ ಮುಳುಗಿದರೆ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲ ಹಾಗೂ ಕಳಸ ಸಂಪರ್ಕ ಕಡಿತಗೊಳ್ಳಲಿದೆ.

ದೇವಸ್ಥಾನಕ್ಕೆ ಹೋಗಲು ಅನ್ಯ ಮಾರ್ಗವಿದ್ದರೂ ಸುಮಾರು 8-10 ಕಿ.ಮೀ. ಸುತ್ತಿಬಳಸಿ ಹೋಗಬೇಕು. ಆ ಮಾರ್ಗವೂ ಕಿರಿದಾದ ರಸ್ತೆಯಾಗಿದ್ದು, ದೊಡ್ಡ ವಾಹನಗಳ ಸಂಚಾರ ಕಷ್ಟದಾಯಕವಾಗಿದೆ. ಈ ಸೇತುವೆಯನ್ನ ಎತ್ತರಿಸಿ ಕೊಡಿ ಎಂದು ಸ್ಥಳಿಯರು ಹತ್ತಾರು ವರ್ಷಗಳಿಂದ ಮನವಿ ಮಾಡಿದರೂ ಸರ್ಕಾರ, ಅಧಿಕಾರಿಗಳು ಯಾರೂ ಸೂಕ್ತವಾಗಿ ಸ್ಪಂದಿಸಿಲ್ಲ. ಪ್ರತಿ ಮಳೆಗಾಲದಲ್ಲೂ ಈ ಸೇತುವೆ ಮುಳುಗಿ ಜನಸಾಮಾನ್ಯರು ತೀವ್ರ ಸಂಕರ್ಷ ಅನುಭವಿಸುತ್ತಿದ್ದಾರೆ. ಒಂದು ಮಳೆಗಾಲಕ್ಕೆ ಕನಿಷ್ಟ 10ಕ್ಕೂ ಹೆಚ್ಚು ಬಾರಿ  ಈ ಸೇತುವೆ ಮುಳುಗಲಿದೆ. 2019ರಲ್ಲಿ ನಾಲ್ಕು ದಿನಗಳ ನಿರಂತರವಾಗಿ ಮುಳುಗಿತ್ತು. ಈ ಬಾರಿಯೂ  ಮಳೆಗೆ ಸೇತುವೆ ಮುಳುಗುವ ಹಂತ ತಲುಪಿದ್ದು ಸ್ಥಳಿಯರು ಆತಂಕದಿಂದ ಇದ್ದಾರೆ.

ಪ್ರವಾಸಿಗರಿಗೆ ಸೆಲ್ಫಿ ಕ್ರೇಜ್: ಉತ್ತಮ ಮಳೆಯಿಂದ ಹೆಬ್ಬಾಳ ಸೇತುವೆ ಮುಳುಗಡೆಯಾಗಲು ಕೆಲವೇ ಅಡಿಗಳಷ್ಟೇ ಬಾಕಿ ಉಳಿದಿದ್ದು ಇದರಿಂದ ಸ್ಥಳೀಯರಲ್ಲಿ ಆತಂಕ ಎದುರಾಗಿದ್ರೆ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಕಳಸ ಹೊರನಾಡಿನ ಹೆಬ್ಬಾಳ ಸೇತುವೆಯ ಮೇಲೆ ಭಾಗದ ಮಧ್ಯೆದಲ್ಲಿ  ಕಾರ್ ನಿಲ್ಲಿಸಿಕೊಂಡು ಕೆಲ ಪ್ರವಾಸಿಗರು  ಸೆಲ್ಫಿ ಸೆಷನ್  ನಡೆಸುತ್ತಿದ್ದಾರೆ. ರಸ್ತೆ ಮಧ್ಯೆ ಕಾರ್ ನಿಲ್ಲಿಸಿರೋದ್ರಿಂದ ವಾಹನಗಳು  ನಿಂತು, ನಿಂತು ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಧಾರಾಕಾರವಾಗಿ ಸುರಿದಲ್ಲಿ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ‌. ನೀರಿನ ಪ್ರಮಾಣ ಹೆಚ್ಚಾದರೆ ಸೇತುವೆ ಮೇಲ್ಭಾಗದಲ್ಲಿ ನೀರು ಹರಿಯುವ ಸಾಧ್ಯತೆಗಳು ಇರುತ್ತದೆ. 

ಇದರ ಆತಂಕದ ನಡುವೆಯೂ ಪ್ರವಾಸಿಗರು ಸೇತುವೆ ಮೇಲ್ಭಾಗದಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಹೊರನಾಡಿನ ಅನ್ನಪೂರ್ಣೇಶ್ವರಿ ಸನ್ನಿಧಿಗೆ ಹಾಗೇನೆ ಮಲೆನಾಡಿನ ಸೌಂದರ್ಯವನ್ನು ಸವಿಯಲು ಆಗಮಿಸುವ ಪ್ರವಾಸಿಗರಿಂದ ಫೋಟೋ ಸೇಷನ್ ನಡೆಯುತ್ತಿರುವುದು ಕಂಡುಬಂದಿದೆ. ಮುಳುಗೋ ಹಂತದ ಸೇತುವೆ ಮೇಲೆ ಪ್ರವಾಸಿಗರ ಸೆಲ್ಫಿ ಹುಚ್ಚು ನೋಡಿದ ಸ್ಥಳೀಯರು ಪ್ರವಾಸಿಗರಿಗೆ ಎಷ್ಟೇ ಎಚ್ಚರಿಕೆ ನೀಡಿದ್ರೂ ಪ್ರವಾಸಿಗರು ಯಾವುದಕ್ಕೂ ಸೊಪ್ಪು ಹಾಕದೆ ತಮ್ಮ ಪಾಡಿಗೆ ತಾವು ಎನ್ನುವಂತೆ ಫೋಟೋ ತೆಗೆದುಕೊಳ್ಳುವುದರಲ್ಲಿ ಬಿಜಿಯಾಗಿದ್ದಾರೆ. 

ಅಕ್ರಮ ವಲಸಿಗರ ವಿರುದ್ಧ Chikkamagaluru ನಗರಸಭೆ ಸಮರ, ಮನೆ ನೆಲಸಮ

ಒಟ್ಟಾರೆ ಮಳೆಯಿಂದ ಮೈದುಂಬಿ ಹರಿಯುತ್ತಿರೋ ಭದ್ರಾ ನದಿಯ ಸೌಂದರ್ಯವನ್ನು ಸವಿಯೋ ಬದಲು ಪ್ರವಾಸಿಗರು ಅಪಾಯದ ಸ್ಥಳದಲ್ಲಿ ನಿಂತು ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ನಿಟ್ಟಿನಲ್ಲಿ ಪ್ರವಾಸಿಗರು ಸೆಲ್ಫಿ ಕ್ರೇಜಿನಲ್ಲಿ ಮುಳುಗಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

click me!