ಕಲಬುರಗಿಯಲ್ಲಿ ವಿಮಾನ ನಿಲ್ದಾಣವಿದ್ದರು ಒಂದು ಸ್ಟಾರ್ ಹೋಟೆಲ್‌ಗಳಿಲ್ಲ, ಇದು ಪ್ರವಾಸೋದ್ಯಮಕ್ಕೆ ಮಾರಕ| ಸ್ಟಾರ್ ಹೋಟೆಲ್ ನಿರ್ಮಿಸಲು ಮುಂದೆ ಬಂದಲ್ಲಿ ಇಲಾಖೆಯಿಂದ ಶೇ.15ರಷ್ಟು ಸಬ್ಸಿಡಿ| ಹಿಂದುಳಿದ ಪ್ರದೇಶ ಇದಾಗಿರುವುದರಿಂದ ಇನ್ನು ಹೆಚ್ಚುವರಿ ಶೇ.10ರಷ್ಟು ಸಬ್ಸಿಡಿ ನೀಡಲು ಸಹ ಇಲಾಖೆ ಸಿದ್ಧವಿದೆ: ಯೋಗೇಶ್ವರ|
ಕಲಬುರಗಿ(ಏ.07): ದೇಶ-ವಿದೇಶದ ಪ್ರವಾಸಿಗರನ್ನು ರಾಜ್ಯದತ್ತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲು ಹೆಲಿಟೂರಿಸಮ್ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಜ್ಯದ 6 ಸ್ಥಳಗಳಲ್ಲಿ ಹೆಲಿಪೋರ್ಟ್ ಸ್ಥಾಪಿಸಲು ಸರ್ಕಾರ ಮುಂದಾಗಿದೆ.
ಕಲಬುರಗಿ ಪ್ರವಾಸದಲ್ಲಿರುವ ರಾಜ್ಯ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ ಅವರು ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಸಂಗತಿ ಪ್ರಕಟಿಸಿದ್ದಾರೆ. ಕಲಬುರಗಿ, ಹುಬ್ಬಳ್ಳಿ, ಹಂಪಿ, ಮೈಸೂರು, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ವಿಮಾನ ಸೇವೆ ಇರುವುದರಿಂದ ಪ್ರಾಥಮಿಕ ಹಂತವಾಗಿ ಈ ಸ್ಥಳಗಳಲ್ಲಿ ಪ್ರವಾಸೋದ್ಯಮ ಇಲಾಖೆಯಿಂದಲೇ ಹೆಲಿಪೋರ್ಟ್ ಅಭಿವೃದ್ಧಿಪಡಿಸಲಾಗುತ್ತಿದೆ. ಒಂದೊಂದು ಹೆಲಿಪೋರ್ಟ್‌ಗೆ ಕನಿಷ್ಠ 5 ಎಕರೆ, ಗರಿಷ್ಠ 10 ಎಕರೆ ಭೂಮಿ ಬೇಕು, ಪ್ರತಿಯೊಂದು ಹೆಲಿಪೋರ್ಟ್ 10 ಕೋ.ರು ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಉದ್ದೇಶವಿದೆ ಎಂದರು.
ಕಲಬುರಗಿಯಲ್ಲಿ ಹೆಲಿಪೋರ್ಟ್ ಸ್ಥಾಪನೆಗೆ ಸಂಬಂಧಿಸಿದಂತೆ ಶಾಸಕರೊಂದಿಗೆ ಚರ್ಚಿಸಿ ಹೆದ್ದಾರಿಗೆ ಹೊಂದಿಕೊಂಡಂತೆ ಭೂಮಿಯನ್ನು 15 ದಿನದಲ್ಲಿ ಒದಗಿಸುವಂತೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸಾನ ಅವರಿಗೆ ನಿರ್ದೇಶನ ನೀಡಿದ ಸಚಿವ ಸಿ.ಪಿ.ಯೋಗೇಶ್ವರ ಅವರು 6 ಕಡೆ ಎ.ಎ.ಐ. ವಿಮಾನ ನಿಲ್ದಾಣಗಳನ್ನು ಮತ್ತು ಇತರೆ ಖಾಸಗಿ ಹೆಲಿಪ್ಯಾಡಗಳನ್ನು ಬಳಸಿಕೊಂಡು ತಾತ್ಕಾಲಿಕವಾಗಿ ಮುಂದಿನ 2-3 ತಿಂಗಳಲ್ಲಿ ಹೆಲಿಕಾಪ್ಟರ್ ಹಾರಾಟ ಆರಂಭಿಸಲಾಗುವುದು. ಇದರ ಜೊತೆ-ಜೊತೆಯಲ್ಲಿಯೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಹೆಲಿಪ್ಯಾಡ್ ಸಹ ನಿರ್ಮಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸಿಎಂ ವಿರುದ್ಧ ಈಶ್ವರಪ್ಪ ಪತ್ರ: ನಮ್ಮಲ್ಲಿ ಹೊಗೆ ಶುರುವಾಗಿದೆ ಅಷ್ಟೇ, ಕಾಂಗ್ರೆಸ್‌ನಲ್ಲಿ ಬೆಂಕಿನೆ ಬಿದ್ದಿದೆ, ಕಟೀಲ್
ಜಿಲ್ಲೆಯ ಚಂದ್ರಂಪಳ್ಳಿ ಜಲಾಶಯ, ಅಮರ್ಜಾ ಜಲಾಶಯ, ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜ್, ಕಲಬುರಗಿ ತಾಲೂಕಿನ ಖಾಜಾ ಕೋಟನೂರ ಕೆರೆ, ಭೋಸಗಾ ಕೆರೆ, ಸೇಡಂ ತಾಲೂಕಿನ ಬೀರನಳ್ಳಿಯಲ್ಲಿಯೂ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಸ್ಥಾಪನೆ ಕುರಿತಂತೆ ಪ್ರಸ್ತಾವನೆ ಕಳುಹಿಸಿದಲ್ಲಿ ಶೀಘ್ರವೇ ಕಾರ್ಯಾನುಷ್ಟಾನಕ್ಕೆ ತರಲಾಗುವುದು ಎಂದರು.
ಕಲಬುರಗಿಯಲ್ಲಿ ವಿಮಾನ ನಿಲ್ದಾಣವಿದ್ದರು ಒಂದು ಸ್ಟಾರ್ ಹೋಟೆಲ್‌ಗಳಿಲ್ಲ, ಇದು ಪ್ರವಾಸೋದ್ಯಮಕ್ಕೆ ಮಾರಕವಾಗಿದೆ. ಸ್ಟಾರ್ ಹೋಟೆಲ್ ನಿರ್ಮಿಸಲು ಮುಂದೆ ಬಂದಲ್ಲಿ ಇಲಾಖೆಯಿಂದ ಶೇ.15ರಷ್ಟು ಸಬ್ಸಿಡಿ ನೀಡಲಾಗುವದು. ಹಿಂದುಳಿದ ಪ್ರದೇಶ ಇದಾಗಿರುವುದರಿಂದ ಇನ್ನು ಹೆಚ್ಚುವರಿ ಶೇ.10ರಷ್ಟುಸಬ್ಸಿಡಿ ನೀಡಲು ಸಹ ಇಲಾಖೆ ಸಿದ್ಧವಿದೆ. ಸ್ಟಾರ್ ಹೋಟೆಲ್‌ಗಳಿಗೆ ಕೈಗಾರಿಕಾ ಮಾನ್ಯತೆ ನೀಡಿದ್ದರಿಂದ ತೆರಿಗೆಯಲ್ಲಿ ವಿನಾಯಿತಿ ಜೊತೆಗೆ ವಿದ್ಯುತ್ ಬಿಲ್ಲು ಸಹ ಕಡಿಮೆ ಬರುತ್ತದೆ ಎಂದರು.
ಕಿಯೋಸ್ಕ್ ಸ್ಥಾಪಿಸಿ:
ಕಲಬುರಗಿ ನಗರದ ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಪ್ರವಾಸಿಗರಿಗೆ ಅಗತ್ಯ ಮಾಹಿತಿ ನೀಡಲು ಕಿಯೋಸ್ಕ್ ಸ್ಥಾಪಿಸಬೇಕು ಮತ್ತು ನಗರದ ಎಲ್ಲಾ ಹೋಟೆಲ್‌ಗಳಲ್ಲಿ ಪ್ರವಾಸಿಗರಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಸಮಗ್ರ ಮಾಹಿತಿ ದೊರೆಯುವಂತೆ ಬ್ರೋಚರ್ ಸಿದ್ಪಡಿಸಿ ವಿತರಿಸಬೇಕು ಎಂದು ಸಚಿವ ಸಿ.ಪಿ.ಯೋಗೇಶ್ವರ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರವಾಸೋದ್ಯಮ ಇಲಾಕೆಯ ಕಾರ್ಯದರ್ಶಿ ಪಂಕಜ ಕುಮಾರ ಪಾಂಡೆ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ಎಸ್. ತಳಕೇರಿ ಮಾತನಾಡಿ ಜಿಲ್ಲೆಯಲ್ಲಿ ಪ್ರಸ್ತುತ 10 ಪ್ರವಾಸಿ ತಾಣಗಳಿವೆ. ಇದರ ಜೊತೆಗೆ ಪ್ರವಾಸೋದ್ಯಮ ಇಲಾಖೆ ಹೊಸದಾಗಿ ರಾಜ್ಯದಾದ್ಯಂತ ಗುರುತಿಸಿರುವ 319 ಪ್ರವಾಸಿ ತಾಣಗಳಲ್ಲಿ ಜಿಲ್ಲೆಯ 29 ಪ್ರವಾಸಿ ತಾಣಗಳಿವೆ. 2019-20ನೇ ಸಾಲಿನಲ್ಲಿ ವಿವಿಧ ಏಜೆನ್ಸಿಗಳ ಮೂಲಕ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಕಲ್ಪಿಸುವ 73 ಕಾಮಗಾರಿ ಕೈಗೆತ್ತಿಕೊಂಡಿದ್ದು, ಇದಕ್ಕಾಗಿ 8638.24 ಲಕ್ಷ ರೂ. ಅನುದಾನ ಕಾಯ್ದಿರಿಸಿದೆ. ಇದರಲ್ಲಿ 4486.85 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, 13 ಕಾಮಗಾರಿಗಳು ಪೂರ್ಣಗೊಂಡಿವೆ. 30 ಕಾಮಗಾರಿಗಳು ಪ್ರಗತಿಯಲ್ಲಿದ್ದರೆ 30 ಕಾಮಗಾರಿಗಳು ಆರಂಭಿಸಬೇಕಿದೆ ಎಂದರು.
ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ: ಜನತಾ ಮಹಾ ಅಧಿವೇಶನಕ್ಕೆ ಸಿದ್ಧತೆ
ಆಳಂದ ತಾಲೂಕಿನ ಅಮರ್ಜಾ ಜಲಾಶಯ ಬಳಿ 10 ಕೋಟಿ ರೂ., ಅಫಜಲಪೂರ ತಾಲೂಕಿನ ಮಣ್ಣೂರ ದೇವಸ್ಥಾನ ಬಳಿ 2 ಕೋಟಿ ರೂ., ಕಮಲಾಪೂರ ತಾಲೂಕಿನ ಹೊಳಕುಂದಾ ಗ್ರಾಮದಲ್ಲಿ ಐತಿಹಾಸಿಕ ಸ್ಮಾರಕ ರಕ್ಷಣೆಗೆ 6 ಕೋಟಿ ರೂ., ಚಿತ್ತಾಪೂರ ತಾಲೂಕಿನ ಸನ್ನತ್ತಿ ದೇವಸ್ಥಾನ ಬಳಿ 2 ಕೋಟಿ ರೂ., ಚಿಂಚೋಳಿ ತಾಲೂಕಿನ ಚಂದ್ರಂಪಲ್ಲಿಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಕಲಬುರಗಿ ನಗರದ ಕೆಸರಟಗಿ ಬಳಿ 3.5 ಎಕರೆ ಪ್ರದೇಶದಲ್ಲಿ ಸ್ಟಾರ್ ಹೋಟೆಲ್ ನಿರ್ಮಿಸಬೇಕಿದೆ ಎಂದು ಸಚಿವರ ಗಮನಕ್ಕೆ ತಂದರು.
ಸಭೆಯಲ್ಲಿ ಕಲಬುರಗಿ ಕೋಟೆ ಅತಿಕ್ರಮಣ ತೆರವು ವಿಚಾರ ಮತ್ತು ಅಭಿವೃದ್ಧಿ ಕುರಿತು ಚರ್ಚೆಗೆ ಬಂದಾಗ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸಾನ ಮಾತನಾಡಿ ಹೈಕೋರ್ಟ್ ನಿರ್ದೇಶನದಂತೆ ಅತಿಕ್ರಮಣ ತೆರವಿಗೆ ಕ್ರಿಯಾ ಯೋಜನೆ ರೂಪಿಸಿದೆ. ಅಲ್ಲಿನ ನಿವಾಸಿಗಳಿಗೆ ಸ್ಲಂ ಬೋರ್ಡ್‌ನಿಂದ ಪ್ರತ್ಯೇಕ ಪುನರ್ವಸತಿಗೆ ಕ್ರಮ ವಹಿಸಲಾಗಿದೆ ಎಂದು ಸಚಿವರಿಗೆ ತಿಳಿಸಿದರು.
ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಎನ್‌ಇಕೆಆರ್ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಸಂಸದ ಡಾ.ಉಮೇಶ ಜಾಧವ, ಶಾಸಕರಾದ ಎಂ.ವೈ.ಪಾಟೀಲ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ವಿಧಾನ ಪರಿಷತ್ತಿನ ಶಾಸಕ ಬಿ.ಜಿ.ಪಾಟೀಲ, ಜಿಪಂ ಸದಸ್ಯ ಶಿವರಾಜ ಪಾಟೀಲ ರದ್ದೆವಾಡಗಿ, ಹರ್ಷಾನಂದ ಗುತ್ತೇದಾರ, ಸಿ.ಇ.ಓ. ಡಾ.ದಿಲೀಶ್ ಸಾಸಿ, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಲೋಖಂಡೆ ಇದ್ದರು.