'ಬಿಎಸ್‌ವೈ ಸಿಎಂ ಸ್ಥಾನದಿಂದ ಕಿತ್ತೊಗೆಯಬೇಕಾದ ಹೈಕಮಾಂಡ್‌ ಬಾಯಿಮುಚ್ಚಿ ಕುಳಿತಿದೆ'

By Kannadaprabha News  |  First Published Apr 7, 2021, 1:29 PM IST

ಬಿಜೆಪಿ ಒಳಜಗಳಿಂದ ಆಡಳಿತ ಸಂಪೂರ್ಣ ಕುಸಿದಿದೆ ಎಂಬ ಆರೋಪ| ಸಿಎಂ ಸ್ಥಾನಕ್ಕೆ ಬಿಎಸ್‌ವೈ ರಾಜೀನಾಮೆ ನೀಡಲಿ| ಬಸನಗೌಡ ಪಾಟೀಲ ಯತ್ನಾಳ 6 ತಿಂಗಳಿಂದ ಸಿಎಂ ಹಾಗೂ ಅವರ ಪುತ್ರ ವಿಜಯೇಂದ್ರ ಅವರ ವಿರುದ್ಧ ಗದಾಪ್ರಹಾರ ಮಾಡುತ್ತಿದ್ದರೂ ಹೈಕಮಾಂಡ್‌ ಕ್ರಮ ಕೈಗೊಂಡಿಲ್ಲ: ನಂಜಯ್ಯನಮಠ| 


ಬಾದಾಮಿ(ಏ.07): ಕಳೆದ 6 ತಿಂಗಳಿನಿಂದ ರಾಜ್ಯ ಸರ್ಕಾರದ ಒಳಜಗಳದಿಂದ ಆಡಳಿತ ಸಂಪೂರ್ಣ ಕುಸಿತ ಕಂಡಿದ್ದು ರಾಜ್ಯದ ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಉಂಟಾಗಿದೆ. ಇದರ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ಬಿ.ಎಸ್‌. ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಸ್‌.ಜಿ ನಂಜಯ್ಯನಮಠ ಆಗ್ರಹಿಸಿದ್ದಾರೆ.

ಸೋಮವಾರ ನಗರದ ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ 6 ತಿಂಗಳಿಂದ ಸಿಎಂ ಹಾಗೂ ಅವರ ಪುತ್ರ ವಿಜಯೇಂದ್ರ ಅವರ ವಿರುದ್ಧ ಗದಾಪ್ರಹಾರ ಮಾಡುತ್ತಿದ್ದರೂ ಹೈಕಮಾಂಡ ಕ್ರಮ ಕೈಗೊಂಡಿಲ್ಲ, ಜೊತೆಗೆ ಸರ್ಕಾರದಲ್ಲಿ ಆಡಳಿತ ಸರಿಯಿಲ್ಲ ಎನ್ನುವುದಕ್ಕೆ ಕಳೆದ ವಾರ ಸಂಪುಟದ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ತಮ್ಮ ಖಾತೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡಿ ಬೇಕಾಬಿಟ್ಟಿ ಅನುದಾನ ಕೊಡುತ್ತಿದ್ದಾರೆಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದು ಮಾಧ್ಯಮದಲ್ಲಿಯೂ ಪ್ರಸಾರವಾಗಿದೆ, ಸಿಎಂ ಬಿಎಸ್‌ವೈ ಸರ್ಕಾರ ಸಂಪೂರ್ಣ ಭ್ರಷಾಚಾರದಿಂದ ತುಂಬಿದೆ, ಹಣ ಸಂಗ್ರಹ ಮಾಡುತ್ತಿದೆ, ಇನ್ನೂ 6ರಿಂದ 7 ಸಿಡಿಗಳು ಇವೆ ಇದೊಂದು ಸಿಡಿ ಸರ್ಕಾರವಾಗಿದೆ ಎಂದು ಸ್ವಪಕ್ಷದ ಶಾಸಕರೇ ಹೇಳುತ್ತಿದ್ದು ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

Tap to resize

Latest Videos

'ಯಡಿಯೂರಪ್ಪ ಸರ್ಕಾರ ಹುಟ್ಟಿದ್ದೆ ಅನೈತಿಕ ಶಿಶುವಿನಿಂದ'

ಶಾಸಕ ರೇಣುಕಾಚಾರ್ಯ ಅವರ ಬಳಿ 65 ಶಾಸಕರ ಸಹಿ ಸಂಗ್ರಹ ಮಾಡಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಇವರನ್ನು ಸುಮ್ಮನೆ ಏಕೆ ಬಿಟ್ಟಿದ್ದಾರೆ, ಕ್ರಮವೇಕೆ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು, ಸಿಎಂ ಬಿಎಸ್‌ ವೈ ಅವರನ್ನು ಸಿಎಂ ಸ್ಥಾನದಿಂದ ಕಿತ್ತೊಗೆಯಬೇಕಾದ ಹೈಕಮಾಂಡ ಬಾಯಿಮುಚ್ಚಿ ಕುಳಿತಿದೆ, ಭ್ರಷ್ಟಾಚಾರ, ದುರಾಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರ ಜನರ ಕಣ್ಣಿಗೆ ಮಣ್ಣೆರಚುತ್ತಿದೆ, ಪ್ರಜಾಪ್ರಭುತ್ವದ ಸರ್ಕಾರ ಬಿಜೆಪಿ ಪ್ರಭುತ್ವ ಸರ್ಕಾರವಾಗಿದೆ ಎಂದು ಲೇವಡಿ ಮಾಡಿದರು

ಬಾದಾಮಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಡಿ. ಯಲಿಗಾರ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿ ಪ್ರಗತಿ ಸಾಧಿಸಿದರೆ ಬಿಜೆಪಿ ಸರ್ಕಾರ ಅವೆಲ್ಲವುಗಳನ್ನು ಖಾಸಗಿಕರಣ ಮಾಡಿ ದೇಶದ ಪ್ರಗತಿಗೆ ಮಾರವಾಗಿದೆ, ಬಿಜೆಪಿ ಸರ್ಕಾರದವರಿಗೆ ಜಲ ಪ್ರವಾಹ ಬಂದಾಗ, ಕೊರೋನಾ ಸಂದರ್ಭದಲ್ಲಿ ಸಮಯವಿಲ್ಲದವರಿಗೆ ಚುನಾವಣೆಯಲ್ಲಿ ಭಾಗವಹಿಸಲು ಸಮಯವಿದೆ, ಜನರ ಸಂಕಷ್ಟಗಳಿಗೆ ಸ್ಪಂದಿಸದ ಭ್ರಷ್ಟಾಚಾರದ ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಪಿ.ಆರ್‌.ಗೌಡರ, ಮಹೇಶ ಹೊಸಗೌಡ್ರ, ಭೀಮಸೇನ ಚಿಮ್ಮನಕಟ್ಟಿ, ಮಧು ಯಡ್ರಾಮಿ, ಎಂ.ಎಚ್‌.ಚಲವಾದಿ ಇದ್ದರು.
 

click me!