ಕಾಯಿ ಬಿಡುವ ಹಂತದಲ್ಲಿ ತೊಗರೆ ಬೆಳೆಯನ್ನು ಬಾಧಿಸುತ್ತಿದೆ ನೆಟೆರೋಗ
ಕೈಕೊಟ್ಟ ತೊಗರಿ ಬೆಳೆ ತಲೆಮೇಲೆ ಕೈಹೊತ್ತು ಕುಳಿತ ರೈತರು
ಸರ್ಕಾರದಿಂದ 500 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡುವಂತೆ ಆಗ್ರಹ
ಕಲಬುರಗಿ (ಡಿ.29): ನೆಟೆರೋಗದಿಂದ ಹಾನಿಗೊಳಗಾದ ತೊಗರಿ ಬೆಳೆಗಾರರಿಗೆ 500 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪ್ರತಿ ಎಕರೆ ಪ್ರದೇಶಕ್ಕೆ 25,000 ನಷ್ಟ ಪರಿಹಾರ ಬಿಡುಗಡೆ ಮಾಡಬೇಕು. ಜೊತೆಗೆ ಇದಕ್ಕಾಗಿ 500 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಿಯಾಂಕ ಖರ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಇಡೀ ಏಷ್ಯಾ ಖಂಡದಲ್ಲೇ ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಈ ಜಿಲ್ಲೆಗೆ ತೊಗರಿಯ ಕಣಜ ಎಂದೇ ಕರೆಯಲಾಗುತ್ತಿದೆ. ಈ ಭಾಗದ ರೈತರ ಪ್ರಮುಖ ಬೆಳೆಯಾದ ತೊಗರಿ ಇಲ್ಲಿನ ಜಮೀನಿಗಳಲ್ಲಿ ಹೆಚ್ಚಾಗಿ ಬಿತ್ತನೆ ಮಾಡಲಾಗುತ್ತಿದ್ದು, ಕಲಬುರಗಿ ಜಿಲ್ಲೆಯ ತೊಗರಿ ದೇಶದ ನಾನಾ ಭಾಗಗಳಿಗೆ ರವಾನೆ ಮಾಡಲಾಗುತ್ತಿದೆ. ಆದರೆ ಇತ್ತೀಚೆಗೆ ಎರಡು ವರ್ಷಗಳಿಂದ ಮಳೆ ಹೆಚ್ಚಿನ ಪ್ರಮಾಣದಲ್ಲಿ ಬೀಳುತ್ತಿರುವುದರಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ತೊಗರಿ ಫಸಲು ಬರುತ್ತಿಲ್ಲ ಎನ್ನುವುದು ಈ ಭಾಗದ ರೈತರ ಅಳಲಾಗಿದೆ.
undefined
ಅತಿವೃಷ್ಟಿಯಿಂದ 1.30 ಲಕ್ಷ ಹೆಕ್ಟೇರ್ ಬೆಳೆ ಹಾನಿ: ಈ ನಡುವೆ 2022-23 ರ ಸಾಲಿನಲ್ಲಿ 5.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ, ತೊಗರಿ ಬಿತ್ತನೆ ಗುರಿ ಹೊಂದಲಾಗಿತ್ತು. ಅದರಲ್ಲಿ 4.78 ಲಕ್ಷ ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಆದರೆ, ಜಿಲ್ಲೆಯಲ್ಲಿ ಸುರಿದ ಅನಿಯಮಿತ ಮಳೆಯಿಂದಾಗಿ ಸುಮಾರು 1.30 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶ ಸಂಪೂರ್ಣ ಹಾಳಾಗಿದೆ. ಎಡೆಬಿಡದೆ ಸುರಿದ ಮಳೆಯ ಪರಿಣಾಮ ಅತಿವೃಷ್ಟಿ ಸೃಷ್ಟಿಯಾಗಿ ತೊಗರಿ ಗಿಡಗಳು ಒಣಗ ತೊಡಗಿದ್ದು, ಆದರೂ ಕೂಡಾ ಅಷ್ಟೋ ಇಷ್ಟೋ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಇದೀಗ ತೊಗರಿ ಬೆಳೆಗೆ ನೆಟೆ ರೋಗ ಕಾಣಿಸಿಕೊಂಡ ನಂತರ ತೀವ್ರ ಕಂಗಾಲಾಗಿದ್ದಾರೆ ಎಂದು ಪ್ರೀಯಾಂಕ್ ಖರ್ಗೆ ಸಿಎಂಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಕಲಬುರಗಿ: ಒಣಗಿದ ತೊಗರಿ ಬೆಳೆ; ಅನ್ನದಾತರು ಕಂಗಾಲು
ನೆಟೆ ರೋಗದಿಂದ ರೈತರಿಗೆ ಭಾರಿ ಸಂಕಷ್ಟ: ತೊಗರಿ ಬೆಳೆಯ ಅದ್ಭುತ ಫಸಲಿನ ಕನಸು ಕಂಡಿದ್ದ ರೈತರಿಗೆ ಮೊದಲು ಅತಿವೃಷ್ಟಿ ಹೊಡೆತ ಕೊಟ್ಟರೆ, ಈಗ ನೆಟೆರೋಗ ಭಾರೀ ಹೊಡೆತ ಕೊಟ್ಟಿದ್ದು ರೈತಾಪಿವರ್ಗ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ. ಒಂದು ಅಂದಾಜಿನ ಪ್ರಕಾರ ಬಿತ್ತನೆಯಾದ 4,78 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 1.30 ಲಕ್ಷ ಹೆಕ್ಟೇರ್, ಅತಿವೃಷ್ಟಿಯಿಂದ ಹಾಳಾದರೆ, ಉಳಿದುದರಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶ ನೆಟೆರೋಗದಿಂದ ಸಂಪೂರ್ಣ ಹಾಳಾಗಿದೆ. ಅಲ್ಲಿಗೆ ಅತಿವೃಷ್ಟಿ ಹಾಗೂ ನೆಟೆ ರೋಗದಿಂದ ಹಾಳಾದ ಬೆಳೆಯ ಪ್ರಮಾಣ ಶೇ 80% ರಿಂದ 90% ಅಂದಾಜಿಸಲಾಗಿದೆ. ಈ ನಷ್ಟವನ್ನು ಅಳಿದುಳಿದ ಬೆಳೆಯಿಂದ ತುಂಬಿಸಿಕೊಳ್ಳುವುದು ಹೇಗೆ ಎನ್ನುವ ಚಿಂತೆ ರೈತರನ್ನು ಮತ್ತಷ್ಟು ಹೈರಾಣಾಗಿಸಿದೆ.
ಪ್ರತಿ ಎಕರೆಗೆ 25 ಸಾವಿರ ನಷ್ಟ: ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಬೆಳೆಗಳು ಹಾನಿಯಾದಾಗ ವಿಶೇಷ ಪ್ಯಾಕೇಜ್ ನೀಡುವಂತೆ, ಈಗ ನೆಟೆ ರೋಗದಿಂದ ಹಾನಿಗೊಳಗಾದ ರಾಜ್ಯದ ತೊಗರಿ ಬೆಳೆಗಾರರಿಗೆ 500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ರೈತರ ನೋವಿಗೆ ಸ್ಪಂದಿಸಿ ಜೊತೆಗೆ ಪ್ರತಿ ಎಕರೆ ಪ್ರದೇಶಕ್ಕೆ 25,000 ನಷ್ಟ ಪರಿಹಾರ ಬಿಡುಗಡೆ ಮಾಡಬೇಕು ಎಂದು ಅವರು ಪತ್ರ ಬರೆದು ಸಿಎಂಗೆ ಆಗ್ರಹಿಸಿದ್ದಾರೆ.
ತೊಗರಿ ಬೆಳೆಗೆ ನೆಟೆ ರೋಗ, ಟೈಕೋಡರ್ಮಾ ಸಿಂಪಡಿಸಲು ಸಲಹೆ
ಅಧಿಕಾರಿಗಳ ಕಾಟಾಚಾರದ ಭೇಟಿ: ಕಲಬುರಗಿ ಜಿಲ್ಲಾದ್ಯಂತ ತೊಗರಿಬೆಳೆ ನೆಟೆರೋಗದಿಂದ ಸಂಪೂರ್ಣವಾಗಿ ನಾಶವಾಗಿದೆ. ಇದರಿಂದ ರೈತರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಆದರೆ ಆಡಳಿತ ಪಕ್ಷ ಬಿಜೆಪಿ ಸರ್ಕಾರ ಸಮೀಕ್ಷೆಯನ್ನು ನಡೆಸದೆ, ನೊಂದ ರೈತರಿಗೆ ಪರಿಹಾರವನ್ನು ನೀಡದೆ ಕಾಲಹರಣ ಮಾಡುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕಾಂಗ್ರೆಸ್ ಪಕ್ಷದಿಂದ ಕಲಬುರಗಿಯಲ್ಲಿ ಪ್ರತಿಭಟನೆ ಮಾಡಿದ ನಂತರ ಕಾಟಾಚಾರಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಎನ್‌ಡಿಆರ್‌ಎಫ್ ಯೋಜನೆ ಇಲ್ಲ: ಆದರೆ ನಮ್ಮ ಮಾಹಿತಿಯ ಪ್ರಕಾರ ಸುಮಾರು 1.30 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶ ಸಂಪೂರ್ಣ ಹಾಳಾಗಿದೆ, ಆದರೆ ಬಿಜೆಪಿ ಕಾಟಾಚಾರದ ಸಮೀಕ್ಷೆಯ ಪ್ರಕಾರ 69 ಸಾವಿರ ಹೆಕ್ಟೇರ್ ಎಂದು ಹೇಳುತ್ತಾರೆ. ಆದರೆ ಇಲ್ಲಿಯವರೆಗೂ ಯಾವುದೇ ಪರಿಹಾರವನ್ನು ನೀಡಿಲ್ಲ ಕಾರಣ ಇದು NDRF ನಲ್ಲಿ ಯೋಜನೆಯಲ್ಲಿ ಅನ್ವಯವಾಗುವುದಿಲ್ಲ ಎಂದೇ ಹೇಳಲಾಗುತ್ತಿದೆ. ಈ ಬಿಜೆಪಿ ಸರ್ಕಾರದ ಅಧಿಕಾರಿಗಳು ತೊಗರಿ ಬೀಜ ನೀಡುವಾಗ ಇದಕ್ಕೆ ಯಾವುದೇ ರೋಗ ಬೀಳುವುದಿಲ್ಲ ಎಂದು ಹೇಳಿದ್ದರು ಆದರೆ ಇಂದು ಬೆಳೆ ಸಂಪೂರ್ಣವಾಗಿ ನಾಶವಾಗಿದೆ ಎಂದು ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬಿಜೆಪಿಗರೇ ಪ್ರಚಾರದ ದಾಹಕ್ಕೆ ಕೋಟಿ ಕೋಟಿ ಖರ್ಚು ಮಾಡುವ ಮೊದಲು ನೊಂದ ರೈತರಿಗೆ ಪರಿಹಾರ ಒದಗಿಸಿ ಎಂದು ಅವರು ಆಗ್ರಹಿಸಿದ್ದಾರೆ.