ಮದ್ದೂರು ಕಾಲೋನಿಯ ಡಿ ಲೈನ್ ಬಳಿಯ ದೊಡ್ಡ ಕರಿಯಯ್ಯಗೆ ಸೇರಿದ ಜಮೀನಿನಲ್ಲಿ ಜೀವಂತ ಹುಲಿಯನ್ನು ಶುಕ್ರವಾರ ಮುಂಜಾನೆಯೇ ಕಂಡು ಮದ್ದೂರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದ ರೈತರು
ಗುಂಡ್ಲುಪೇಟೆ(ನ.25): ಗಂಡು ಹುಲಿಯೊಂದು ನಿತ್ರಾಣಗೊಂಡ ಸ್ಥಿತಿಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಂಚಿನ ಜಮೀನಿನಲ್ಲಿ ಶುಕ್ರವಾರ ಬೆಳಿಗ್ಗೆ ಕಂಡು ಬಂದಿತಾದರೂ ಸಂಜೆಯ ವೇಳೆ ಸಾವನ್ನಪ್ಪಿದೆ.
ಮದ್ದೂರು ಕಾಲೋನಿಯ ಡಿ ಲೈನ್ ಬಳಿಯ ದೊಡ್ಡ ಕರಿಯಯ್ಯಗೆ ಸೇರಿದ ಜಮೀನಿನಲ್ಲಿ ಜೀವಂತ ಹುಲಿಯನ್ನು ಶುಕ್ರವಾರ ಮುಂಜಾನೆಯೇ ಕಂಡ ರೈತರು ಮದ್ದೂರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಸಿಕ್ಕಿದ ನಂತರ ಗುಂಡ್ಲುಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ, ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್ ಸ್ಥಳಕ್ಕೆ ಧಾವಿಸಿ ನಿತ್ರಾಣಗೊಂಡು ಬಿದ್ದಿದ್ದ ಹುಲಿಯನ್ನು ವೀಕ್ಷಿಸಿದ ಬಳಿಕ ಬಂಡೀಪುರ ಅರಣ್ಯ ಇಲಾಖೆ ಪಶು ವೈದ್ಯ ಡಾ.ಮಿರ್ಜಾ ವಾಸೀಂ ಕರೆಸಿದರು.
undefined
ಪ್ರಧಾನಿ ಮೋದಿ ಸಫಾರಿ ಬಳಿಕ ಬಂಡೀಪುರದ ಚಿತ್ರಣವೇ ಬದಲು: ಪ್ರವಾಸಿಗರಿಗೆ ಸಿಗ್ತಿದೆ 1 ಕೋಟಿ ರೂ. ಇನ್ಶೂರೆನ್ಸ್..!
ಶುಕ್ರವಾರ ಬೆಳಿಗ್ಗೆ ನಿತ್ರಾಣಗೊಂಡು ನಿಲ್ಲಲಾರದ ಸ್ಥಿತಿಯಲ್ಲಿದ್ದ ೩ರ ಪ್ರಾಯದ ಗಂಡು ಹುಲಿ ಕಾಡಿನೊಳಗೆ ವನ್ಯಜೀವಿಗಳ ಕಾದಾಟದಿಂದ ತಲೆ ಮತ್ತು ಮೈ ಮೇಲೆ ಗಾಯಗೊಂಡಿತ್ತು ಎಂದು ಎಸಿಎಫ್ ಜಿ.ರವೀಂದ್ರ ತಿಳಿಸಿದ್ದಾರೆ.
ಸತ್ತ ಹುಲಿ ಶವ ಪರೀಕ್ಷೆಯ ಬಳಿಕ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಮಾರ್ಗದರ್ಶನದಂತೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ತಡವಾಗಿ ಬಂದ ಅಧಿಕಾರಿಗಳು
ಮದ್ದೂರು ವಲಯದಂಚಿನ ಮದ್ದೂರು ಕಾಲೋನಿಯ ದೊಡ್ಡ ಕರಿಯಯ್ಯಗೆ ಸೇರಿದ ಜಮೀನಿನಲ್ಲಿ ಶುಕ್ರವಾರ ಬೆಳ್ಳಂ ಬೆಳಗ್ಗೆಯೇ ಹುಲಿ ಮಲಗಿದ್ದ ದೃಶ್ಯ ಕಂಡು ಅರಣ್ಯ ಇಲಾಖೆಗೆ ರೈತರು ಮಾಹಿತಿ ನೀಡಿದ್ದಾರೆ. ಆದರೆ ಬೆಳಿಗ್ಗೆ ನಿತ್ರಾಣಗೊಂಡ ಹುಲಿ ಇದ್ದ ಸ್ಥಳಕ್ಕೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಶುಕ್ರವಾರ ಮಧ್ಯಾಹ್ನ ೩.೩೩ಕ್ಕೆ ಬಂದಿದ್ದಾರೆ.
ಬೆಳಿಗ್ಗೆ ಕಂಡ ಹುಲಿಗೆ ಸೆರೆ ಹಿಡಿಯಬೇಕೋ, ಚಿಕಿತ್ಸೆ ನೀಡಬೇಕೋ ಎಂಬ ನಿರ್ಧಾರ ಮಾಡುವ ಅಧಿಕಾರ ಗುಂಡ್ಲುಪೇಟೆ ಎಸಿಎಫ್, ಆರ್‌ಎಫ್‌ಓ ಹಾಗೂ ಪಶು ವೈದ್ಯರಿಗೆ ಇಲ್ಲ ಎನ್ನಲಾಗಿದೆ. ಬಂಡೀಪುರದಲ್ಲೇ ಇದ್ದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಬೆಳಿಗ್ಗೆಯಿಂದ ೮ ಗಂಟೆಯಿಂದ ಮಧ್ಯಾಹ್ನ ೩.೩೩ರ ತನಕ ಎಸಿಎಫ್, ಆರ್‌ಎಫ್‌ಒ, ಪಶು ವೈದ್ಯರು ಹುಲಿ ಉಳಿಸುವ ಸಲುವಾಗಿ ನಿರ್ಧಾರ ಹೇಳಲಿದ್ದಾರೆ ಎಂದು ಕಾದು ಕಾದು ಸುಸ್ತಾದರು. ಆದರೆ ನಿತ್ರಾಣಗೊಂಡು ಸಾವು, ನೋವಿನ ನಡುವೆ ಬಳಲುತ್ತಿದ್ದ ಹುಲಿಯನ್ನು ಸೆರೆ ಹಿಡಿದು ಚಿಕಿತ್ಸೆ ನೀಡಬೇಕಾ, ಸೆರೆ ಹಿಡಿಯುವುದಕ್ಕಿಂತ ಮೊದಲೇ ಇದ್ದ ಸ್ಥಳದಲ್ಲೇ ಚಿಕಿತ್ಸೆ ನೀಡಬೇಕಾ, ಹುಲಿ ನಿತ್ರಾಣ ಗೊಂಡಿದೆ ಚಿಕಿತ್ಸೆ ನೀಡಿದರೂ ಬದುಕಲ್ಲ ಎಂಬ ನಿರ್ಧಾರ ಹೇಳಲು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕರು ಬೇಕು ಎಂದು ನಿವೃತ್ತ ಐಎಫ್‌ಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಾಮರಾಜನಗರ: ಬಂಡೀಪುರದಲ್ಲಿ ಆನೆ ಹಾವಳಿ ತಡೆಯುವಲ್ಲಿ ರೈಲ್ವೆ ಬ್ಯಾರಿಕೇಡ್ ಸಕ್ಸಸ್..!
ಸಭೆ ಇತ್ತಂತೆ
ಬಂಡೀಪುರದಲ್ಲಿ ಸಭೆಯಿದ್ದ ಕಾರಣ ತಡವಾಗಿ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಬಂದರು ಎನ್ನಲಾಗುತ್ತಿದೆ. ಆದರೆ ಸಭೆ ಇದ್ದರೂ ಬೆಳಿಗ್ಗೆಯೇ ಹುಲಿ ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸ್ಥಳಕ್ಕೆ ಬಂದು ಕೆಳ ಮಟ್ಟದ ಅಧಿಕಾರಿಗಳಿಗೆ ಇಂಥ ನಿರ್ಧಾರ ಮಾಡಿ ಎಂದು ಹೇಳಿ ಹೋಗಬೇಕಿತ್ತು. ಆದರೆ ತಡವಾಗಿ ಬಂದು ಮತ್ತೆ ಬಂಡೀಪುರಕ್ಕೆ ಹೋಗಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಹುಲಿಗೆ ಆದ್ಯತೆ ನೀಡಬೇಕಿತ್ತು
ಬಂಡೀಪುರದಲ್ಲಿ ಕ್ಷೇತ್ರ ನಿರ್ದೇಶಕರಿಗೆ ಸಭೆ ಇದ್ದರೂ ಸಭೆಗಿಂತ ಹುಲಿಗೆ ಮೊದಲ ಆದ್ಯತೆ ನೀಡಬೇಕಿತ್ತು, ಸಿಎಫ್ ನಿರ್ಲಕ್ಷ್ಯಕ್ಕೆ ಹುಲಿ ಸಾವನ್ನಪ್ಪಿದೆ ಎಂದು ಪರಿಸರವಾದಿ ಜೋಸೆಫ್ ಹೂವರ್ ಆರೋಪಿಸಿದರು.
ಕನ್ನಡಪ್ರಭದೊಂದಿಗೆ ಮಾತನಾಡಿ ಬಂಡೀಪುರ ಸಿಎಫ್ ಡಾ.ರಮೇಶ್ ಕುಮಾರ್ ನಿರ್ಲಕ್ಷ್ಯಕ್ಕೆ ಹುಲಿ ಸಾವನ್ನಪ್ಪಿದೆ ಇದರ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.