ಹಾಲಿ ಶಾಸಕರಿಗೆಲ್ಲಾ ಟಿಕೆಟ್‌, ಗುಬ್ಬಿ ಇನ್ನೂ ಸಸ್ಪೆನ್ಸ್‌

By Kannadaprabha News  |  First Published Apr 12, 2023, 7:12 AM IST

ಕಗ್ಗಂಟಾಗಿದ್ದ ಬಿಜೆಪಿಯ ಟಿಕೆಟ್‌ ಹಂಚಿಕೆ ಬಗೆಹರಿದಿದ್ದು, ತುಮಕೂರು ಜಿಲ್ಲೆಯ ಎಲ್ಲ 5 ಮಂದಿ ಹಾಲಿ ಶಾಸಕರಿಗೆ ಮಣೆ ಹಾಕಲಾಗಿದೆ. ಕುತೂಹಲಕ್ಕೆ ಕಾರಣವಾಗಿರುವ ಗುಬ್ಬಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿಲ್ಲ. ಉಳಿದಂತೆ 3 ಮಂದಿ ಹೊಸಬರಿಗೆ ಟಿಕೆಟ್‌ ನೀಡುವ ಮೂಲಕ ಹೊಸ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ.


ತುಮಕೂರು: ಕಗ್ಗಂಟಾಗಿದ್ದ ಬಿಜೆಪಿಯ ಟಿಕೆಟ್‌ ಹಂಚಿಕೆ ಬಗೆಹರಿದಿದ್ದು, ತುಮಕೂರು ಜಿಲ್ಲೆಯ ಎಲ್ಲ 5 ಮಂದಿ ಹಾಲಿ ಶಾಸಕರಿಗೆ ಮಣೆ ಹಾಕಲಾಗಿದೆ. ಕುತೂಹಲಕ್ಕೆ ಕಾರಣವಾಗಿರುವ ಗುಬ್ಬಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿಲ್ಲ. ಉಳಿದಂತೆ 3 ಮಂದಿ ಹೊಸಬರಿಗೆ ಟಿಕೆಟ್‌ ನೀಡುವ ಮೂಲಕ ಹೊಸ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ.

ತುಮಕೂರಿನಿಂದ ಹಾಲಿ ಶಾಸಕ ಜ್ಯೋತಿಗಣೇಶ್‌, ಶಿರಾದಿಂದ ರಾಜೇಶ್‌ಗೌಡ, ತಿಪಟೂರಿನಿಂದ ಬಿ.ಸಿ. ನಾಗೇಶ್‌, ಕುಣಿಗಲ್‌ನಿಂದ ಕೃಷ್ಣಕುಮಾರ್‌, ತುಮಕೂರು ಗ್ರಾಮಾಂತರಿಂದ ಸುರೇಶ್‌ಗೌಡ, ಮಧುಗಿರಿಯಿಂದ ಎಲ್‌.ಸಿ . ನಾಗರಾಜ್‌, ಕೊರಟಗೆರೆಯಿಂದ ನಿವೃತ್ತ ಐಎಎಸ್‌ ಅಧಿಕಾರಿ ಅನಿಲ್‌ಕುಮಾರ್‌, ಪಾವಗಡದಿಂದ ಕೃಷ್ಣಾ ನಾಯಕ್‌, ಚಿಕ್ಕನಾಯಕನ ಹಳ್ಳಿಯಿಂದ ಮಾಧುಸ್ವಾಮಿ ಹಾಗೂ ತುರುವೇಕೆರೆಯಿಂದ ಮಸಾಲ ಜಯರಾಂಗೆ ಟಿಕೆಟ್‌ ನೀಡಲಾಗಿದೆ.

Latest Videos

undefined

ತುಮಕೂರು ನಗರದಿಂದ ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಸೊಗಡು ಶಿವಣ್ಣ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಆದರೆ ಈಗ ಟಿಕೆಟ್‌ ನೀಡಲಾಗಿಲ್ಲ. ಈ ಬಾರಿ ತಮಗೆ ಟಿಕೆಟ್‌ ಶೇ. 100 ರಷ್ಟುಗ್ಯಾರಂಟಿ ಎಂಬ ವಿಶ್ವಾಸ ಹೊಂದಿದ್ದರು. ಒಂದು ಓಟು, ಒಂದು ನೋಟು ಎಂಬ ಹೇಳಿಕೆಯಂತೆ ಎರಡು ಜೋಳಿಗೆ ಹಿಡಿದು, ವಿನೂತನ ರೀತಿಯಲ್ಲಿ ಪ್ರಚಾರ ನಡೆಸಿದ್ದರು. ಒಂದು ವೇಳೆ ಟಿಕೆಟ್‌ ಸಿಗದಿದ್ದರೆ, ನನ್ನನ್ನು ಯಾರೂ ಸಮಾಧಾನಪಡಿಸಲು ಸಾಧ್ಯವಿಲ್ಲ ಎಂದು ಬಹಿರಂಗವಾಗಿಯೇ ಸೋಮವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ್ದರು. ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಬೇರೆ 10 ಕ್ಷೇತ್ರಗಳಲ್ಲಿ ಯಾವುದೇ ಬಂಡಾಯ ಇರಲಿಲ್ಲ. ಆದರೆ ತುಮಕೂರು ನಗರ ಮಾತ್ರ ಕಳೆದ ಒಂದು ತಿಂಗಳಿಗಿಂತ ಹೆಚ್ಚು ಕಾಲದಿಂದ ಟಿಕೆಟ್‌ ವಿಷಯದಲ್ಲಿ ಹಗ್ಗ ಜಗ್ಗಾಟ ನಡೆದಿತ್ತು.

ತಾವು ಸ್ಪರ್ಧಿಸುವುದು ಶತಸಿದ್ಧ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದ ಸೊಗಡು ಶಿವಣ್ಣನವರು, ಚುನಾವಣೆಗೆ ಸ್ಪರ್ಧಿಸುತ್ತಾರಾ, ಅಥವಾ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ. ಹಾಗೆಯೇ ಗುಬ್ಬಿ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಯಾಗಬಹುದು ಎಂಬುದನ್ನು ಕಾದು ನೋಡಬೇಕಾಗಿದೆ.

ಚರ್ಚೆಯಲ್ಲಿ ಗುಬ್ಬಿ

ಸಚಿವ ಸೋಮಣ್ಣ ಅವರು ತಮ್ಮ ಮಗ ಅರುಣ್‌ ಸೋಮಣ್ಣನವರಿಗೆ ಗುಬ್ಬಿ ಕ್ಷೇತ್ರಕ್ಕೆ ಟಿಕೆಟ್‌ ನೀಡುವ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ಪರ, ವಿರೋಧಗಳ ಚರ್ಚೆ ತೀವ್ರವಾಗಿದೆ. ಹಿಂದುಳಿದ ವರ್ಗಕ್ಕೆ ಸೇರಿದ್ದ ಬೆಟ್ಟಸ್ವಾಮಿಯವರು ಹಾಗೂ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿದ್ದ ದಿಲೀಪ್‌ ಅವರು ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಬಿಜೆಪಿ ಹೈಕಮಾಂಡ್‌ ಯಾರಿಗೆ ಮಣೆ ಹಾಕುತ್ತದೆ ಎಂಬುದನ್ನು ಕಾದು ನೋಡಬೇಕಾಗುತ್ತದೆ. ಪಾವಗಡಕ್ಕೂ ಹಲವಾರು ಮಂದಿ ಸ್ಪರ್ಧಿಗಳಿದ್ದರೂ, ಕೃಷ್ಣಾ ನಾಯಕ್‌ಗೆ ಟಿಕೆಟ್‌ ನೀಡಲಾಗಿದ್ದು, ಇಲ್ಲೂ ಕೂಡ ಬಂಡಾಯದ ಬಿಸಿ ಅಷ್ಟಾಗಿ ಕಾಣುತ್ತಿಲ್ಲ. ಸದ್ಯಕ್ಕೆ 11 ರಲ್ಲಿ 10 ಘೋಷಣೆಯಾಗಿದ್ದು, ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ವಿರುದ್ದ ಮಾಜಿ ಶಾಸಕರು ಸ್ಪರ್ಧೆಗೆ ಧುಮುಕುತ್ತಾರಾ ಅಥವಾ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುತ್ತಾರಾ ಎಂಬುದು ಬುಧವಾರ ಗೊತ್ತಾಗಲಿದೆ.

ಕಳೆದ ಕೆಲ ತಿಂಗಳ ಹಿಂದೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಮುದ್ದಹನುಮೇಗೌಡ ಅವರೂ ಕೂಡ ಕುಣಿಗಲ್‌ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಲೋಕಸಭೆಗೆ ಟಿಕೆಟ್‌ ನೀಡಲಾಗುವುದು ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಅಲ್ಲಿ ಬಂಡಾಯದ ಬಿಸಿ ಸದ್ಯಕ್ಕಿಲ್ಲ.

click me!