ಎರಡು ಬೈಕ್‌ಗಳ ಮಧ್ಯೆ ಅಪಘಾತ| ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ಬಳಿ ನಡೆದ ಘಟನೆ| ಕಲಬುರಗಿ ಜಿಲ್ಲೆ ಅಫ್ಜಲಪುರ ಪಟ್ಟಣ ಮೂಲದ ಏಳು ಬೈಕ್ ಸವಾರರು ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ನಡೆದ ದುರ್ಘಟನೆ|
ವಿಜಯಪುರ(ಅ.03): ಎರಡು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಸವಾರರು ಸಾವನ್ನಪ್ಪಿರುವ ಭೀಕರ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ಬಳಿ ಇಂದು(ಶನಿವಾರ) ಬೆಳಗಿನ ಜಾವ ನಡೆದಿದೆ. ದುರ್ಘಟನೆಯಲ್ಲಿ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತೋರ್ವ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ.
ಕಲಬುರಗಿ ಜಿಲ್ಲೆ ಅಫ್ಜಲಪುರ ಪಟ್ಟಣ ಮೂಲದ ಏಳು ಬೈಕ್ ಸವಾರರು ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತದ ಬಳಿಕ ಬೈಕ್‌ಗಳು ಹೊತ್ತು ಉರಿದಿವೆ. ಮೃತರನ್ನು ಕಲಬುರಗಿ ಜಿಲ್ಲೆಯ ಅಫ್ಜಲಪುರದ ಕುಮಾರ ಬಲಕುಂದಿ (22) ಹಾಗೂ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಜಾಯವಾಡಗಿ ಗ್ರಾಮದ ಬಸವರಾಜ ಹಂದ್ರಾಳ (26) ಹಾಗೂ ಸಾಬಣ್ಣ ಸಿದ್ದಾಪುರ (24) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಗಂಭೀರವಾಗಿ ಗಾಯವಾಗಿದ್ದು ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶನಿವಾರ ಹಿನ್ನೆಲೆಯಲ್ಲಿ 7 ಜನ ಸ್ನೇಹಿತರು ನಾಲ್ಕು ಬೈಕ್‌ನಲ್ಲಿ ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಆಂಜನೇಯನ ದರ್ಶನ ಪಡೆಯಲು ಹೋಗುತ್ತಿದ್ದರು. ಕಲಬುರಗಿಯಿಂದ ದೇವರಹಿಪ್ಪರಗಿ ಮೂಲಕ ಹೋಗುವಾಗ ಹೂವಿನ ಹಿಪ್ಪರಗಿ ಬಳಿ ಎದುರಿಗೆ ಬಂದ್ ಇನ್ನೊಂದು ಬೈಕ್‌ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಇನ್ನೊಂದು ಬೈಕ್‌ನಲ್ಲಿದ್ದ ಬಸವನ ಬಾಗೇವಾಡಿಯ ಜಾಯವಾಡಗಿಯ ಮೃತರು ಸ್ಥಳೀಯ ಆಸ್ಪತ್ರೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಎದುರಿಗೆ ಬಂದ ಇನ್ನೊಂದು ಬೈಕ್‌ಗೆ ಮುಖಾಮುಖಿ ಡಿಕ್ಕಿಯಾಗಿ ಏಕಾಏಕಿ ಪೆಟ್ರೋಲ್ ಚೆಲ್ಲಿ ಎರಡು ಬೈಕ್‌ಗಳು ಕ್ಷಣಾರ್ಧದಲ್ಲಿ ಸುಟ್ಟು ಭಸ್ಮವಾಗಿದ್ದು ಮೂವರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಬಸವನಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.