ಪದೇ ಪದೇ ಕುಸಿಯುತ್ತಿವೆ ಸೇತುವೆಯ ಗೋಡೆ| ರಾಜ್ಯದ ಮೊದಲ ಬಿಆರ್‌ಟಿಎಸ್‌ಗೆ ಕಪ್ಪುಮಸಿ ಬಳಿದ ಗುತ್ತಿಗೆದಾರರು| ದಕ್ಷಿಣ ಭಾರತದಲ್ಲೇ ಬಿಆರ್‌ಟಿಎಸ್ ಪ್ರಾರಂಭಿಸಿದ ಮೊದಲ ಸಿಟಿ ಹುಬ್ಬಳ್ಳಿ-ಧಾರವಾಡ| ಬಿಆರ್‌ಟಿಎಸ್ ಕಾಮಗಾರಿ ಸಂಪೂರ್ಣ ಕಳಪೆ ಹಾಗೂ ಅವೈಜ್ಞಾನಿಕ|
ಹುಬ್ಬಳ್ಳಿ(ಅ.03): ಈ ಬಸ್ ಓಡಾಡಾಕ ಶುರುವಾಗಿ ಎರಡು ವರ್ಸಾತು, ಕೆಲಸ ಮಾತ್ರ ಇನ್ನೂ ಮುಗಿದಿಲ್ಲ. ಅಷ್ಟರೊಳಗೆ ಪದೇ ಪದೇ ಸೇತುವೆಗೆ ಸೇತುವೆಯೇ ಕುಸಿಯುತ್ತಿದೆ. ಇದು ಹುಬ್ಬಳ್ಳಿ-ಧಾರವಾಡ ಮಹಾನಗರದ ಮಧ್ಯೆ ತ್ವರಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ಪ್ರಾರಂಭಿಸಲಾಗಿರುವ, ಬಹುನಿರೀಕ್ಷಿತ ಬಿಆರ್‌ಟಿಎಸ್ (ಚಿಗರಿ) ಬಸ್ ಸೇವೆ ಬಗ್ಗೆ ಸಾರ್ವಜನಿಕರು ವ್ಯಕ್ತಪಡಿಸುವ ಆಕ್ರೋಶದ ನುಡಿಗಳು.
ಇದಕ್ಕೆ ಕಾರಣವೂ ಇಲ್ಲದಿಲ್ಲ. ಬರೀ ಎಂಟ್ಹತ್ತು ದಿನಗಳಲ್ಲಿ ನವಲೂರು ಬ್ರಿಡ್ಜ್ ಎರಡು ಬಾರಿ ಕುಸಿದಿದೆ. ಈ ಮೂಲಕ ಬಿಆರ್‌ಟಿಎಸ್ ಕಾಮಗಾರಿ ತೀರಾ ಕಳಪೆಯಾಗಿದೆ ಎಂಬುದಕ್ಕೆ ಸಾಕ್ಷಿ ನೀಡಿದಂತಾಗಿದೆ ಎಂದು ಸಾರ್ವಜನಿಕರು, ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದನ್ನು ಅಧಿಕಾರಿ ವರ್ಗ ಮಾತ್ರ ತಳ್ಳಿ ಹಾಕುತ್ತಿದೆ. ಯಾವುದೇ ಬಗೆಯ ಕಳಪೆ ಕಾಮಗಾರಿಯಾಗಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ.
undefined
ಏನೇನಾಗಿದೆ?:
ಸೆ. 21ರಂದು ಸಂಜೆ ವೇಳೆ ನವಲೂರು ಬ್ರಿಡ್ಜ್ ಕುಸಿದಿದೆ. ಈ ಸೇತುವೆಯ ಒಂದು ಗೋಡೆಯ ಭಾಗದಲ್ಲಿ ಅಳವಡಿಸಿದ್ದ ಪ್ಯಾನೆಲ್‌ಗಳು ಕುಸಿದು ಮಣ್ಣು ಹೊರಗೆ ಬಿದ್ದಿರುವುದು ಆತಂಕವನ್ನುಂಟು ಮಾಡಿದೆ. ಶಾಸಕ ಅರವಿಂದ ಬೆಲ್ಲದ ಕೂಡ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದ್ದರು. ಜತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಬಿಆರ್‌ಟಿಎಸ್ ಅವೈಜ್ಞಾನಿಕ ಕಾಮಗಾರಿಯಾಗಿದೆ. ಸೇತುವೆ ಕುಸಿದಿರುವ ಹಿನ್ನೆಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದರು. ಅದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಸಕಾರಾತ್ಮಕ ಸ್ಪಂದಿಸಿ ಸೂಕ್ತ ಕ್ರಮಕ್ಕೆ ಸೂಚನೆಯನ್ನೂ ನೀಡಿದ್ದುಂಟು. ಇದಾಗಿ ನಾಲ್ಕು ದಿನಗಳಲ್ಲೇ ಮತ್ತೆ ನವಲೂರು ಬ್ರಿಡ್ಜ್ ಮತ್ತೆ ಕುಸಿದು ಬಿದ್ದಿದೆ. ಇದು ಸಾರ್ವಜನಿಕರಲ್ಲಿ ಮತ್ತಷ್ಟು ಆಕ್ರೋಶವನ್ನುಂಟು ಮಾಡಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂಬ ಆರೋಪ ಸಾಮಾನ್ಯವಾಗಿ ಕೇಳಿ ಬರುತ್ತಿದೆ.
ಕಾರಣವೇನು?:
ಎಂಟ್ಹತ್ತು ದಿನಗಳಲ್ಲಿ ಎರಡು ಬಾರಿ ಸೇತುವೆ ಕುಸಿದಿರುವುದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಜನಪ್ರತಿನಿಧಿಗಳು, ಸಾರ್ವಜನಿಕರು ಕಳಪೆ ಕಾಮಗಾರಿಯೇ ಕಾರಣ ಎಂದು ಆರೋಪಿಸುತ್ತಾರೆ. ಕಾಮಗಾರಿಯೇ ಪೂರ್ಣವಾಗಿಲ್ಲ. ಅಷ್ಟರೊಳಗೆ ಸೇತುವೆ ಕುಸಿಯುತ್ತದೆ ಎಂದರೆ ಹೇಗೆ? ಎಂಜಿನಿಯರ್‌ಗಳು, ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದಾರೆ. ಈ ಕಾರಣದಿಂದ ಸೇತುವೆ ಕುಸಿಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
ನಿರ್ಮಾಣ ಹಂತದಲ್ಲೇ ಕುಸಿದ ಸೇತುವೆ - ಕ್ರಿಮಿನಲ್ ಕೇಸ್?
ಆದರೆ ಈ ಸೇತುವೆ ಕಾಮಗಾರಿ ನಿರ್ವಹಿಸಿದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿ ವರ್ಗ, ಕಾಮಗಾರಿ ಕಳಪೆಯಾಗಿಲ್ಲ. ಆದರೆ ಬಿಆರ್‌ಟಿಎಸ್ ಸಂಸ್ಥೆಯೇ ನವಲೂರು ಬ್ರಿಡ್ಜ್ ಬಳಿ ವಿನ್ಯಾಸ ಬದಲಿಸಲು ನಿರ್ಧರಿಸಿತು. ಈ ಕಾರಣದಿಂದಾಗಿ ಎರಡು ವರ್ಷಗಳಿಂದ ಇಲ್ಲಿ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ. ಅರ್ಧಮರ್ಧಗೊಂಡಿರುವ ಸೇತುವೆಯಲ್ಲಿ ಮಳೆಯಿಂದಾಗಿ ನೀರುಂಡು ಸೇತುವೆಯಲ್ಲಿನ ಮಣ್ಣು ಹಾಗೂ ಪ್ಯಾನಲ್‌ಗಳು ಕುಸಿಯುತ್ತಿವೆ. ಸೇತುವೆ ಕಾಮಗಾರಿ ಪೂರ್ಣವಾಗಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಸೇತುವೆಯೂ ಕುಸಿಯುತ್ತಿರಲಿಲ್ಲ. ಇದೀಗ ಕಾಮಗಾರಿ ಸ್ಥಗಿತವಾಗಿದ್ದರಿಂದ ಈ ಸಮಸ್ಯೆ ಶುರುವಾಗಿದೆ ಎಂದು ಹೇಳುತ್ತದೆ.
ಗ್ರಾಮಸ್ಥರ ಬೇಡಿಕೆಯಂತೆ ವಿನ್ಯಾಸ ಬದಲಿಸಲಾಗುತ್ತಿದೆ. ಈಗಾಗಲೇ ಹೊಸ ವಿನ್ಯಾಸ ಸಿದ್ಧಪಡಿಸಲಾಗಿದೆ. ಆದಷ್ಟುಶೀಘ್ರವೇ ಕಾಮಗಾರಿ ಪುನಾರಂಭಿಸಲಾಗುವುದು. ಕಾಮಗಾರಿ ಶೀಘ್ರವೇ ಪ್ರಾರಂಭಿಸಿ ಮುಗಿಸಲಾಗುವುದು. ಆಗ ಈ ಸಮಸ್ಯೆ ಬರಲಾರಂದು ಬಿಆರ್‌ಟಿಎಸ್ ತಿಳಿಸುತ್ತದೆ.
ಉಳಿದೆಡೆ ಕಥೆಯೇನು?
ನವಲೂರು ಬ್ರಿಡ್ಜ್ ಕಥೆ ಇದಾದರೆ, ಉಳಿದೆಡೆ ಮಳೆಗಾಲ ಬಂದರೆ ಬಸ್ ನಿಲ್ದಾಣಗಳಲ್ಲಿ ಮೊಳಕಾಲ ವರೆಗೂ ನೀರು ನಿಲ್ಲುತ್ತದೆ. ಉಣಕಲ್, ಶ್ರೀನಗರ, ಅತ್ತ ಟೋಲನಾಕಾ ಸೇರಿದಂತೆ ವಿವಿಧೆಡೆ ಅಕ್ಷರಶಃ ಕೆರೆಯಂತಾಗುತ್ತದೆ. ಅದಕ್ಕೆ ಯಾರು ಜವಾಬ್ದಾರರು? ಎಂಬ ಪ್ರಶ್ನೆ ಸಾರ್ವಜನಿಕರದ್ದು.
ತನಿಖೆ ನಡೆಯಲಿ:
ಬಿಆರ್‌ಟಿಎಸ್ ಕಾಮಗಾರಿಯೇ ಸಂಪೂರ್ಣ ಕಳಪೆ ಹಾಗೂ ಅವೈಜ್ಞಾನಿಕವಾಗಿದೆ. ಎಲ್ಲಿಯೂ ಸರಿಯಾಗಿ ಕಾಮಗಾರಿಯೇ ನಡೆದಿಲ್ಲ. ಈಗ ಅಧಿಕಾರಿಗಳು ಇಲ್ಲದ ನೆಪ ಹೇಳುತ್ತಾರೆ. 1000 ಕೋಟಿ ವೆಚ್ಚದ ಯೋಜನೆಯಿದು. ದಕ್ಷಿಣ ಭಾರತದಲ್ಲೇ ಬಿಆರ್‌ಟಿಎಸ್ ಪ್ರಾರಂಭಿಸಿದ ಮೊದಲ ಸಿಟಿ ಹುಬ್ಬಳ್ಳಿ-ಧಾರವಾಡ. ಇಷ್ಟೊಂದು ದುಡ್ಡು ಖರ್ಚು ಮಾಡಿ ಮಾಡಿರುವ ಯೋಜನೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಇದಕ್ಕಾಗಿ ಯೋಜನೆಯ ಬಗ್ಗೆ ಮೊದಲು ವಿಶೇಷ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಜತೆಗೆ ಆಗಿರುವ ಲೋಪಗಳನ್ನು ಸರಿಪಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ನವಲೂರು ಬ್ರಿಡ್ಜ್ ಕಾಮಗಾರಿ ಕಳಪೆಯಾಗಿಲ್ಲ. ಆದರೆ ಕಾಮಗಾರಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದೆ. ಇದರಿಂದಾಗಿ ಕಾಮಗಾರಿ ಅರ್ಧ ಆಗಿರುವುದರಿಂದ ಮಳೆ ನೀರುಂಡು ಮಣ್ಣು ಕುಸಿಯುತ್ತಿದೆ. ಪ್ಯಾನಲ್‌ಗಳು ಕಳಚುತ್ತಿವೆ ಅಷ್ಟೇ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಕಾರ್ಯನಿರ್ವಾಹಕ ಅಭಿಯಂತರ ಕುರ್ಡೇಕರ್ ಅವರು ತಿಳಿಸಿದ್ದಾರೆ.
ಬಿಆರ್‌ಟಿಎಸ್ ಕಾಮಗಾರಿ ಬಗ್ಗೆ ಮೊದಲಿನಿಂದಲೂ ನಾವು ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದೇವು. ಇದೀಗ ಅದು ಸಾಬೀತಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ. ಕಾಮಗಾರಿಯ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಲಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಕಾಂಗ್ರೆಸ್ ಮುಖಂಡ ಎಫ್.ಎಚ್. ಜಕ್ಕಪ್ಪನವರ ತಿಳಿಸಿದ್ದಾರೆ.