ಶಿವಮೊಗ್ಗ (ಅ.31) : ಜನಪದ ಕ್ರೀಡೆ, ಸಾಂಪ್ರದಾಯಿಕ ಹೋರಿ ಬೆದರಿಸುವ ಹೋರಿ ಬೆದರಿಸುವ ಸ್ಪರ್ಧೆ ಆರಂಭದಲ್ಲೇ ಜಿಲ್ಲೆಯಲ್ಲಿ ಮೂವರು ಬಲಿಯಾಗಿದ್ದಾರೆ. ಶಿಕಾರಿಪುರ ತಾಲೂಕಿನ ಗಾಮದ ಪ್ರಶಾಂತಕುಮಾರ್ (36), ಸಮೀಪದ ಕಲ್ಮನೆ ಗ್ರಾಮದ ರಂಗಪ್ಪ ಎಂಬವರ ಪುತ್ರ ವಸಂತ (30) ಮತ್ತು ಸೊರಬ ತಾಲೂಕಿನ ಜಡೆ ಗ್ರಾಮದ ಚಗಟೂರಿನ ಆದಿ ಸಾವು ಕಂಡ ದುರ್ದೈವಿಗಳು.
ಶಿವಮೊಗ್ಗ: ಹೋರಿ ಬೆದರಿಸುವ ಹಬ್ಬದಲ್ಲಿ ಓರ್ವ ವ್ಯಕ್ತಿ ಸಾವು, ಗೂಳಿ ಕಾಲ್ತುಳಿತ ವಿಡಿಯೋ ವೈರಲ್...!
ಶಿಕಾರಿಪುರ ತಾಲೂಕಿನ ಗಾಮ ಗ್ರಾಮದಲ್ಲಿ ಗುರುವಾರ ನಡೆದ ಹೋರಿ ಸ್ಪರ್ಧೆಯಲ್ಲಿ ಹೋರಿ ಗುದ್ದಿದ ಪರಿಣಾಮ ಪ್ರಶಾಂತಕುಮಾರ್ ಮೃತಪಟ್ಟರೆ, ಸೊರಬ ತಾಲೂಕಿನ ಜಡೆ ಗ್ರಾಮದಲ್ಲಿ ಶುಕ್ರವಾರ ನಡೆದ ಹೋರಿ ಸ್ಪರ್ಧೆಯಲ್ಲಿ ಹೋರಿ ತಿವಿದು ಪಕ್ಕದ ಚಗಟೂರಿನ ಯುವಕ ಸಾವನ್ನಪ್ಪಿರುವ ಘಟನೆ ನಡೆದಿವೆ. ಭಾನುವಾರ ಶಿಕಾರಿಪುರ ತಾಲೂಕಿನ ತರ್ಲಘಟ್ಟದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಸಂದರ್ಭದಲ್ಲಿ ಗೂಳಿ ತಿವಿತದಿಂದ ಸಮೀಪದ ಕಲ್ಮನೆಯ ವಸಂತ (30) ಮೃತಪಟ್ಟಿದ್ದಾರೆ.
ಗಾಮ ಗ್ರಾಮದಲ್ಲಿ ನಡೆದ ಹೋರಿ ಸ್ಪರ್ಧೆಯನ್ನು ನೋಡಲು ಪ್ರಶಾಂತಕುಮಾರ್ ಹೋಗಿದ್ದರು. ಈ ಸಂದರ್ಭ ಓಡುತ್ತಿದ್ದ ಹೋರಿ ದಿಢೀರನೆ ಜನರತ್ತ ನುಗ್ಗಿದೆ. ಈ ವೇಳೆ ಅಲ್ಲಿ ಸ್ಪರ್ಧೆ ನೋಡುತ್ತ ನಿಂತಿದ್ದ ಪ್ರಶಾಂತಕುಮಾರ್‌ಗೆ ಹೋರಿ ಗುದ್ದಿದೆ. ಆಗ ನೆಲಕ್ಕೆ ಬಿದ್ದ ಪ್ರಶಾಂತ್ ಅವರನ್ನು ಹೋರಿ ತುಳಿದುಕೊಂಡು ಮುಂದೆ ಸಾಗಿದೆ. ತೀವ್ರವಾಗಿ ಗಾಯಗೊಂಡ ಪ್ರಶಾಂತಕುಮಾರ ಅವರಿಗೆ ಶಿಕಾರಿಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದಾರೆ.
ಹೋರಿ ಗುದ್ದಿ ಚಗಟೂರಿನ ಆದಿ ಬಲಿ:
ಸೊರಬ ತಾಲೂಕಿನ ಜಡೆ ಗ್ರಾಮದಲ್ಲಿ ಶುಕ್ರವಾರ ಹೋರಿ ತಿವಿದು ಪಕ್ಕದ ಚಗಟೂರಿನ ಯುವಕ ಆದಿ ಮೃತಪಟ್ಟಿದ್ದಾನೆ. ಹೋರಿ ಹಬ್ಬ ಮುಗಿಸಿ ಎಲ್ಲರೂ ಮನೆಗೆ ಹೊರಟಾಗ ದಿಢೀರನೆ ಹೋರಿ ಓಡಿಹೋಗಿದೆ. ಆಗ ಮನೆಯತ್ತ ಹೊರಟಿದ್ದ ಆದಿ ಹೋರಿಯ ದಾಳಿಗೆ ಸಿಲುಕಿದ್ದಾನೆ. ಇದೊಂದು ಆಕಸ್ಮಿಕ ಘಟನೆ. ಹೋರಿ ಚಗಟೂರಿನದ್ದು. ಆದರೆ, ಮಾಲೀಕರು ಯಾರು ಎಂಬುದು ಗೊತ್ತಿಲ್ಲ’ ಎಂದು ಆನವಟ್ಟಿಪೊಲೀಸರು ತಿಳಿಸಿದ್ದಾರೆ.
ತರ್ಲಘಟ್ಟದಲ್ಲೂ ಘಟನೆ:
ಶಿಕಾರಿಪುರ ತಾಲೂಕಿನ ತರ್ಲಘಟ್ಟದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತಿತ್ತು. ಈ ವೇಳೆ ಕಲ್ಮನೆ ಗ್ರಾಮದ ರಂಗಪ್ಪ ಎಂಬುವವರ ಪುತ್ರ ವಸಂತ ಗೂಳಿ ತಿವಿತದಿಂದ ಸಾವು ಕಂಡ ಘಟನೆ ಭಾನುವಾರ ನಡೆದಿದೆ. ಹೋರಿ ಸ್ಪರ್ಧೆ ನೋಡಲು ಬಂದು ಅವರು ಜೀವ ತೆತ್ತಿದ್ದಾರೆ.
ನಿಷೇಧವಿದ್ದರೂ ನಡೆಯುವ ಸ್ಪರ್ಧೆ:
ಹೋರಿ ಸ್ಪರ್ಧೆಗೆ ನಿಷೇಧವಿದ್ದರೂ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತಲೇ ಇವೆ. ಹೋರಿ ಓಟದ ವೇಳೆ ಅವಘಡಗಳು ನಡೆದಾಗ ಸ್ಪರ್ಧೆ ಆಯೋಜಕರು ಜನಪ್ರತಿನಿಧಿಗಳ ಮೊರೆ ಹೋಗುತ್ತಿದ್ದಾರೆ. ಚುನಾವಣೆ ಹತ್ತಿರ ಇರುವುದರಿಂದ ಅವರು ಪೊಲೀಸರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಪೊಲೀಸರು ಮೌನ ವಹಿಸಿದ್ದಾರೆ ಎಂಬ ಸಂಗತಿ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.
ಯಪ್ಪಾ ಹೋರಿ ತೂಫಾನ್ ಹೋದಂಗ ಹೋತಲೇ.. ಇದು ಹಾವೇರಿಯ ಮೈ ನವಿರೇಳಿಸೋ ಹೋರಿ ಹಬ್ಬ!
ಸೊರಬ ಹಾಗೂ ಶಿಕಾರಿಪುರದಲ್ಲಿ ನಡೆದ ಹೋರಿ ಸ್ಪರ್ಧೆಯಲ್ಲಿ ಹೋರಿ ತಿವಿದು ಇಬ್ಬರು ಸಾವನ್ನಪ್ಪಿದ್ದಾರೆ. ಸೊರಬದಲ್ಲಿ ಓರ್ವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಪ್ರಕರಣಗಳ ಬಗ್ಗೆ ತನಿಖೆ ಕೈಗೊಂಡು ಮುಂದಿನ ಕ್ರಮ ಜರುಗಿಸಲಾಗುವುದು
- ಜಿ.ಕೆ. ಮಿಥುನ್ ಕುಮಾರ್, ಜಿಲ್ಲಾ ಎಸ್‌ಪಿ