ಯಾದಗಿರಿಗೆ ಕೊರೋನಾಘಾತ: ಸೋಂಕಿತರ ಟ್ರಾವೆಲ್ ಹಿಸ್ಟರಿಯೇ ಮಿಸ್ಟರಿ..!

By Kannadaprabha NewsFirst Published May 18, 2020, 9:14 AM IST
Highlights

ಮೂವರು ಕೊರೋನಾ ಸೋಂಕಿತರು: ಕಾಲ್ನಡಿಗೆ, ಕಾರು, ಜೀಪ್ ಮೂಲಕ ಆಗಮನ| ಕೊರೋನಾ ಪೀಡಿತ ವ್ಯಕ್ತಿ (ಪಿ-1139) ಶಹಾಪುರ ತಾಲೂಕಿನ ಕನ್ಯೆ ಕೋಳೂರು ಗ್ರಾಮದವರು| ಮಹಾರಾಷ್ಟ್ರದ ತೇಲಗಾಂವ್ ಮೂಲಕ ಕಾಲ್ನಡಿಗೆ ಮೂಲಕ ಮೇ 10 ರಂದು ನೇರವಾಗಿ ಗ್ರಾಮಕ್ಕೇ ಬಂದಿದ್ದೇನೆ ಎಂದು ಹೇಳುತ್ತಿದ್ದು, ಮಾರ್ಗ ಮಧ್ಯೆದ ವಿವರಗಳನ್ನು ಬಿಟ್ಟುಕೊಡುತ್ತಿಲ್ಲ ಎನ್ನಲಾಗಿದೆ|

ಯಾದಗಿರಿ(ಮೇ.18): ಭಾನುವಾರ ಯಾದಗಿರಿ ಜಿಲ್ಲೆಯಲ್ಲಿ ಕಂಡು ಬಂದ ಮೂವರು ಸೋಂಕಿತರ ಟ್ರಾವೆಲ್ ಹಿಸ್ಟರಿಯೇ ಒಂದು ‘ಮಿಸ್ಟರಿ’ (ರಹಸ್ಯ)ಯಾಗಿದೆ. ಜಿಲ್ಲಾಡಳಿತಕ್ಕೆ ಅಸ್ಪಷ್ಟ ಮಾಹಿತಿ ನೀಡುವ ಮೂಲಕ ಸೋಂಕಿತರು ದಾರಿ ತಪ್ಪಿಸುತ್ತಿದ್ದಾರೆಯೇ ಅನ್ನುವ ಅನುಮಾನ ಮೂಡಿಸುತ್ತಿದೆ. ಇದು ಜಿಲ್ಲಾಡಳಿತಕ್ಕೂ ತಲೆನೋವಾಗಿ ಪರಿಣಮಿಸಿದೆ. ಇವರು ಶ್ರಮಿಕ್ ಎಕ್ಸಪ್ರೆಸ್ ಮೂಲಕ ಕಲಬುರಗಿಯಿಂದ ಜಿಲ್ಲೆಗೆ ಸಾರಿಗೆ ಬಸ್‌ನಲ್ಲಿ ಆಗಮಿಸಿದ್ದರು ಎಂಬುದಾಗಿ ಕೇಳಿ ಬಂದಿದ್ದ ಮಾತುಗಳ ಬಗ್ಗೆ ಶಂಕೆ ವ್ಯಕ್ತವಾಗಿದೆ.

‘ಕನ್ನಡಪ್ರಭ’ಕ್ಕೆ ಲಭ್ಯ ಮಾಹಿತಿ ಪ್ರಕಾರ, ಪೀಡಿತ ವ್ಯಕ್ತಿ (ಪಿ-1139) ಶಹಾಪುರ ತಾಲೂಕಿನ ಕನ್ಯೆ ಕೋಳೂರು ಗ್ರಾಮದವರು. ಮಹಾರಾಷ್ಟ್ರದ ತೇಲಗಾಂವ್ ಮೂಲಕ ಕಾಲ್ನಡಿಗೆ ಮೂಲಕ ಮೇ 10 ರಂದು ನೇರವಾಗಿ ಗ್ರಾಮಕ್ಕೇ ಬಂದಿದ್ದೇನೆ ಎಂದು ಹೇಳುತ್ತಿದ್ದು, ಮಾರ್ಗ ಮಧ್ಯೆದ ವಿವರಗಳನ್ನು ಬಿಟ್ಟುಕೊಡುತ್ತಿಲ್ಲ ಎನ್ನಲಾಗಿದೆ.

ಮಾರಕ ಕೊರೋನಾ ಭೀತಿ: ಕ್ವಾರಂಟೈನ್ ಕೇಂದ್ರಗಳು ಅದೆಷ್ಟು ಸುರಕ್ಷಿತ..?

ಅಲ್ಲಿನ ಅಲ್ಪಸಂಖ್ಯಾತರ ಬಾಲಕರ ವಸತಿ ನಿಲಯದಲ್ಲಿನ ಕ್ವಾರಂಟೈನ್ ಕೇಂದ್ರಕ್ಕೆ ತೆರಳಿದಾಗ, ಮೇ 12 ರಂದು ಸ್ಯಾಂಪಲ್ ಪಡೆದಾಗ, ಮೇ 16 ರಂದು ಪಾಸಿಟಿವ್ ವರದಿ ಬಂದಿದೆ. ಅಲ್ಲಿ 40ಕ್ಕೂ ಹೆಚ್ಚು ಬೇರೆ ಬೇರೆ ಜನ ಇದ್ದರು. ಆ ಪ್ರದೇಶವನ್ನು ಕಂಟೇನ್ಮೆಂಟ್ ಮಾಡುವ ಬಗ್ಗೆ ಆಡಳಿತ ಚಿಂತನೆ ನಡೆಸಿದೆ. ಪಿ-1139 ಪೀಡಿತ ವ್ಯಕ್ತಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಎನ್ನಲಾದ 38 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರು ಎನ್ನಲಾದ 42 ಜನರನ್ನು ಗುರುತಿಸಲಾಗಿದೆ.
ಇನ್ನು, ಎರಡನೇ ಪೀಡಿತ ವ್ಯಕ್ತಿ (ಪಿ-1140) ಶಹಾಪುರ ತಾಲೂಕಿನ ಚಂದಾಪೂರ ತಾಂಡಾ ಗ್ರಾಮದವರು. ವೃತ್ತಿಯಲ್ಲಿ ಚಾಲಕ. ಗ್ರಾಮದಲ್ಲಿಯೇ ಇದ್ದ ಆತ ಲಾಕ್ ಡೌನ್‌ನಲ್ಲಿ ಸಿಲುಕಿದ ತಮ್ಮ ಸಂಬಂಧಿಕರನ್ನು ಕರೆದುಕೊಂಡು ಬರಲು ತನ್ನ ಬೊಲೆರೋ ಮೂಲಕ ಮಹಾರಾಷ್ಟ್ರದ ಥಾನೆಗೆ ಹೋಗಿದ್ದನಂತೆ. ಆಗ ಅಲ್ಲಿನ ಮೊಹಾಲಿ ಬಳಿ 15 ದಿನಗಳ ಕ್ವಾರಂಟೈನ್ ಮಾಡಲಾಗಿತ್ತು. ನಂತರ, ಮೇ 8 ಅಥವಾ 9 ರಂದು ಗ್ರಾಮಕ್ಕೆ ಆಗಮಿಸಿ, ಹೊರವಲಯದ ಜಮೀನಿನಲ್ಲಿ ವಾಸ್ತವ್ಯ ಹೂಡಿದ್ದಾನೆ.

ಜನರ ಮಾಹಿತಿ ಮೇರೆಗೆ ಮೇ 10 ರಂದು ಆತನನ್ನು ಬೇವಿನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಮೇ 12 ರಂದು ಸ್ಯಾಂಪಲ್ ಕಳುಹಿಸಿದಾಗ ಮೇ 16 ರಂದು ಸಂಜೆ ಪಾಸಿಟಿವ್ ಬಂದಿದೆ. ಪಿ-1140 ಪೀಡಿತ ವ್ಯಕ್ತಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಎನ್ನಲಾದ 14 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರು ಎನ್ನಲಾದ 87 ಜನರನ್ನು ಗುರುತಿಸಲಾಗಿದೆ. ಹಾಗೆಯೇ, ಸೋಂಕು ಪೀಡಿತ ಪಿ-1141 ವ್ಯಕ್ತಿ ಮಹಾರಾಷ್ಟ್ರದ ಥಾನೆ ಸಮೀಪದ ಮುನ್ನಾನ್ ಎಂಬಲ್ಲಿಂದ ಮೇ 11 ರಂದು ಕಾರು ಮೂಲಕ ಕನ್ಯೆ ಕೋಳೂರು ಗ್ರಾಮಕ್ಕೆ ಆಗಮಿಸಿದ್ದಾರೆ. ಈತನದ್ದು ಬೆಂಡೆಬೆಂಬಳಿ ಗ್ರಾಮ. ಕನ್ಯೆಕೋಳೂರು ಪತ್ನಿಯ ತವರೂರು. ಈತನ ಜೊತೆ ಕಾರಿನಲ್ಲಿದ್ದ ನಾಲ್ವರು ಗುಂಡ್ಲೂರು ಗ್ರಾಮದವರು. ಕನ್ಯೆ ಕೋಳೂರು ಬಳಿ ಪಿ-1141 ನನ್ನು ಇಳಿಸಿ, ಈ ನಾಲ್ವರು ತೆರಳಿದ್ದಾರೆ.

ಗ್ರಾಮದಲ್ಲಿ ಈತನ ಬಗ್ಗೆ ಮಾಹಿತಿ ನೀಡಿದ್ದರಿಂದ ಅಲ್ಲಿನ ಅಲ್ಪಸಂಖ್ಯಾತರ ಬಾಲಕರ ವಸತಿ ನಿಲಯದಲ್ಲಿರಿಸಲಾಗಿತ್ತು. ಪಿ-1139 ಹಾಗೂ ಈತ ಪಿ- 1141 ಒಂದೇ ರೂಮಿನಲ್ಲಿದ್ದವರು. ಮೇ 12 ರಂದು ಸ್ಯಾಂಪಲ್ ಪಡೆಯಲಾಗಿತ್ತು.  ಮೇ 16 ರಂದು ಪಾಸಿಟಿವ್ ಬಂದಿದೆ. ಪಿ-1141 ಪೀಡಿತ ವ್ಯಕ್ತಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಎನ್ನಲಾದ 18 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರು ಎನ್ನಲಾದ 42 ಜನರನ್ನು ಗುರುತಿಸಲಾಗಿದೆ.
 

click me!