ಮಾರಕ ಕೊರೋನಾ ಭೀತಿ: ಕ್ವಾರಂಟೈನ್ ಕೇಂದ್ರಗಳು ಅದೆಷ್ಟು ಸುರಕ್ಷಿತ..?

By Kannadaprabha News  |  First Published May 18, 2020, 8:54 AM IST

ವಲಸಿಗರು/ಕಾರ್ಮಿಕರ ವಾಸ್ತವ್ಯ ವಿಚಾರದಲ್ಲಿ ಎಡವಿತೇ ಜಿಲ್ಲಾಡಳಿತ?| ಕ್ವಾರಂಟೈನ್ ಕೇಂದ್ರಗಳಲ್ಲೇ ಸೋಂಕು ಹಬ್ಬುವ ಆತಂಕ: ಎಚ್ಚರಿಸಿದ್ದ ‘ಕನ್ನಡಪ್ರಭ’ ಹಾಗೂ ಸುವರ್ಣ ನ್ಯೂಸ್‌ ಡಾಟ್‌.ಕಾಂನ ವರದಿಗಳು| ಶಹಾಪುರ ತಾಲೂಕಿನ ಎರಡು ಕಡೆಗಳಲ್ಲಿನ ಇನ್ಸಟಿಟ್ಯೂಷನಲ್ ಕ್ವಾರಂಟೈನ್ ಕೇಂದ್ರದಲ್ಲಿದ್ದ ಈ ಮೂವರಿಗೆ ಕೋವಿಡ್-19 ದೃಢ|


ಯಾದಗಿರಿ(ಮೇ.18):  ಕೊರೋನಾ ಪಾಸಿಟಿವ್ ಪ್ರಕರಣಗಳಿಲ್ಲದಿದ್ದರಿಂದ ಆತಂಕವಿಲ್ಲದೆ ನೆಮ್ಮದಿಯಾಗಿದ್ದ ಯಾದಗಿರಿ ಜಿಲ್ಲೆಯ ಜನರಲ್ಲೀಗ ರೋಗದ ಭೀತಿ ಶುರುವಾಗಿದೆ. ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದರೂ, ಜಿಲ್ಲಾಡಳಿತದ ಆರಂಭಿಕ ಮುತುವರ್ಜಿಯಿಂದಾಗಿ ಯಾವುದೇ ಪ್ರಕರಣಗಳಿಲ್ಲದ ಯಾದಗಿರಿಯಲ್ಲಿ ಕಳೆದ ಒಂದೂವರೆ ತಿಂಗಳಿಂದ ನಿರುಮ್ಮಳ ಮನೆ ಮಾಡಿತ್ತು.

ಆದರೆ, ಲಾಕ್‌ಡೌನ್ ಸಡಿಲಿಕೆ ನಂತರ ನಿರೀಕ್ಷೆಗೂ ಮೀರಿ ಪ್ರವಾಹೋಪಾದಿಯಲ್ಲಿ ವಿವಿಧೆಡೆಯಿಂದ (ರಾಜ್ಯದ ಇತರ ಜಿಲ್ಲೆಗಳು ಹಾಗೂ ಅನ್ಯ ರಾಜ್ಯಗಳಿಂದ) ಯಾದಗಿರಿ ಜಿಲ್ಲೆಗೆ ಮರಳಿದ ಜನರ ಲೆಕ್ಕಾಚಾರದ ಹಿಡಿತ ತಪ್ಪಿದಂತಾದ ಜಿಲ್ಲಾಡಳಿತಕ್ಕೆ ದಿಕ್ಕು ತೋಚದಂತಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದವರನ್ನು ಹೋಂ ಕ್ವಾರಂಟೈನ್ ಮಾಡುವಲ್ಲಿಯೇ ಹೈರಾಣಾದ ಆಡಳಿತ, ಅನ್ಯ ರಾಜ್ಯಗಳ ಜನರು ಬಂದಾಗ 'ಇನ್ಸಟಿಟ್ಯೂಷನಲ್ ಕ್ವಾರಂಟೈನ್’ (ಸ್ವಾಸ್ಥಿಕ ಸಂಪರ್ಕ ತಡೆ) ಮಾಡುವಲ್ಲಿ ಹೆಣಗಾಡುತ್ತಿದೆ.

Latest Videos

undefined

ಕೊರೋನಾ ಕಾಟ: ಯಹೂದಿ ಕ್ಯಾಂಪ್‌ನಂತಾದ ಕ್ವಾರಂಟೈನ್‌ ಕೇಂದ್ರಗಳು..!

ಅನ್ಯ ರಾಜ್ಯಗಳ ಹಾಟ್‌ಸ್ಪಾಟ್ (ಹೆಚ್ಚು ಸೋಂಕಿತ ಪ್ರದೇಶ)ದಿಂದ ಬಂದವರನ್ನು, ಕಡಮೆ ಸೋಂಕಿನ ಪ್ರದೇಶದಿಂದ ಬಂದವರನ್ನು ಆರಂಭದಲ್ಲೇ ಗುರುತಿಸಿ ಪ್ರತ್ಯೇಕವಾಗಿಸದೆ, ಎಲ್ಲರನ್ನೂ ಹಿಂಡು ಹಿಂಡಾಗಿ ಕೇಂದ್ರಗಳಲ್ಲಿರಿಸುವ ಮೂಲಕ, ರೋಗದ ಸುಳಿವೂ ಇರದಿದ್ದ ಜಿಲ್ಲೆಯಲ್ಲಿ ಕೊರೋನಾಗೆ ಕೆಂಪು ಹಾಸಿಗೆ ಹಾಸಿದಂತಾಗಿತ್ತು.

ಕೆಲವು ಕ್ವಾರಂಟೈನ್ ಕೇಂದ್ರಗಳ ಅವ್ಯವಸ್ಥೆಯಿಂದಾಗಿ ವಲಸಿಗರ ಆಕ್ರೋಶ, ಭುಗಿಲೆದ್ದ ಅಸಮಾಧಾನ, ಊಟ, ಶೌಚ, ವಸತಿಗಾಗಿನ ಪರದಾಟ, ಜೈಲಿನಂತೆ ಕಂಡುಬಂದ ಅಲ್ಲಿನ ಹದಗೆಟ್ಟ ಸ್ಥಿತಿಗತಿ ಬಗ್ಗೆ ದೂರುಗಳು ಬಂದಾಗ, ಈವರೆಗೂ ಎಲ್ಲವನ್ನೂ ನಿಯಂತ್ರಿಸಿದ್ದ ಜಿಲ್ಲಾಡಳಿತಕ್ಕೆ ಸಹಜವಾಗಿಯೇ ಮಜುಗರ ತಂದಂತಾಗಿತ್ತು.

ವ್ಯವಸ್ಥೆ ಸರಿಪಡಿಸಬೇಕೆನ್ನುವಷ್ಟರಲ್ಲಿ ಮತ್ತೇ ಸಾವಿರಾರು ಸಂಖ್ಯೆಯಲ್ಲಿ ವಲಸಿಗರ ಆಗಮನ, ಅವರ ಆರೋಗ್ಯ ತಪಾಸಣೆ, ಊಟ, ವಸತಿ, ಕ್ವಾರಂಟೈನ್‌ಗಾಗಿ ಪ್ರದೇಶಗಳ ಹುಟುಕಾಟ, ಜನವಸತಿ ಪ್ರದೇಶಗಳಲ್ಲದೆ ಗ್ರಾಮಗಳಲ್ಲೂ ಕ್ವಾರಂಟೈನ್‌ಗೆ ವಿರೋಧ.. ಎಲ್ಲವನ್ನೂ ಒಮ್ಮೆಲೆ ಎದುರಿಸುವಲ್ಲಿ ಆಗುವ ಸಹಜವಾದ ಅಡೆತಡೆಗಳು ಜಿಲ್ಲಾಧಿಕಾರಿ ಕೂರ್ಮಾರಾವ್ ಹಾಗೂ ತಂಡವನ್ನು ಅರರನ್ನಾಗಿಸಿದಂತಿತ್ತು. 

ಲಾಕ್‌ಡೌನ್ ಸಡಿಲಿಕೆಯನ್ನು ನಿರ್ಲಕ್ಷಿಸಿದ ಜನರೂ ಸಹ ಮನಸೋಇಚ್ಛೆ ತಿರುಗಾಟಕ್ಕಿಳಿದು, ಮುಂಜಾಗ್ರತೆಯನ್ನೇ ಮೈಮರೆತರು. ಲಾಕ್‌ಡೌನ್ ಸಡಿಲಿಕೆಯಾದ ನಂತರ ಕೊರೋನಾ ನಮ್ಮಲ್ಲಿ ಬರುವುದೇ ಇಲ್ಲ ಎಂದು ತಿಳಿದಿದ್ದ ಯಾದಗಿರಿಗರಿಗೆ ಗುಜರಾತಿನ ಅಹ್ಮದಾಬಾದಿನಿಂದ ಬಂದ ದಂಪತಿಗೆ ಕೋವಿಡ್-19 ಸೋಂಕು ತಗುಲಿರುವ ಸುದ್ದಿ ಬೆಚ್ಚಿ ಬೀಳಿಸಿ, ಮೇ 12 ರ ಅದೊಂದ ದಿನ ಮನೆಯಲ್ಲಿ ತಣ್ಣಗಿದ್ದಂತಿತ್ತು.

ಶೋಚನೀಯ ಸ್ಥಿತಿಯಲ್ಲಿ ಕ್ವಾರಂಟೈನ್‌ ಕೇಂದ್ರಗಳು: ಇಲ್ಲಿ ಇರೋದಾದ್ರೂ ಹೇಗೆ? ಬಡ ಕಾರ್ಮಿಕರು ಅಳಲು..!

ಪಾಸಿಟಿವ್ ಬಂದಾಗ ಮಾತ್ರ ಜನ ಆರೋಗ್ಯ ಹಾಗೂ ಸಾಮಾಜಿಕ ಅಂತರದ ಬಗ್ಗೆ ಗಮನ ಹರಿಸುತ್ತಾರೆ ಎಂಬ ಮಾತುಗಳು ಜನ ಹಾಗೂ ವಾಹನ ದಟ್ಟಣೆ ದೃಶ್ಯಗಳಿಗೆ ಸಾಕ್ಷಿಯಾದಂತಿತ್ತು. ಈಗ ಭಾನುವಾರ (ಮೇ 17) ಮೂವರಿಗೆ (ಪಿ-1139, ಪಿ-1140 ಹಾಗೂ ಪಿ-1141) ಪಾಸಿಟಿವ್ ಬಂದಿರುವ ಸುದ್ದಿ ಮತ್ತೇ ಆತಂಕ ಮೂಡಿಸಿದೆ. ಶಹಾಪುರ ತಾಲೂಕಿನ ಎರಡು ಕಡೆಗಳಲ್ಲಿನ ಇನ್ಸಟಿಟ್ಯೂಷನಲ್ ಕ್ವಾರಂಟೈನ್ ಕೇಂದ್ರದಲ್ಲಿದ್ದ ಈ ಮೂವರಿಗೆ ಕೋವಿಡ್-19 ದೃಢಪಟ್ಟಿದೆ.

ಈ ಕ್ವಾರಂಟೈನ್ ಕೇಂದ್ರಗಳಲ್ಲಿನ ಪ್ರಾಥಮಿಕ ಸಂಪರ್ಕ ವ್ಯಕ್ತಿಗಳನ್ನು ಆಡಳಿತ ಪರೀಕ್ಷೆಗೊಳಪಡಿಸಿದೆ. ನೂರಕ್ಕೂ ಹೆಚ್ಚು ಜನರನ್ನು ಇದೀಗ ತಪಾಸಣೆಗೊಳಪಡಿಸಲಾಗುತ್ತದೆ. ಭೇಟಿಯಾಗಲು ಬಂದ ಸಂಬಂಧಿಗಳು, ಊಟ ನೀಡಲು ಬಂದ ಪೋಷಕರು, ಸೋಂಕಿತರ ಜೊತೆ ಸಂಪರ್ಕ ಬೆಳೆಸಿದ ಜನರ ಮುಂತಾದವರ ಬಗ್ಗೆ ಮುತುವರ್ಜಿ ವಹಿಸಲಾಗಿದೆ. ಇದೇ ಕೇಂದ್ರದಲ್ಲಿ ಅವ್ಯವಸ್ಥೆ ಭುಗಿಲೆದ್ದು, ವಲಸಿಗರು ಕಂಗಾಲಾಗಿದ್ದರು.

ಇದೇ ತೆರನಾದ ವಾತಾವರಣ ಮುಂದುವರೆದರೆ ಕ್ವಾರಂಟೈನ್ ಕೇಂದ್ರಗಳಲ್ಲೇ ಸೋಂಕು ಹಬ್ಬುವ ಸಾಧ್ಯತೆಯ ಆತಂಕವಿದ್ದು, ಕೂಡಲೇ ಸರಿಪಡಿಸಲಿ ಎಂದು ವಿಶೇಷ ವರದಿಗಳ ಮೂಲಕ ‘ಕನ್ನಡಪ್ರಭ’ ಜಿಲ್ಲಾಡಳಿತಕ್ಕೆ ಎಚ್ಚರಿಸಿತ್ತು. ಶನಿವಾರವಷ್ಟೇ ನಗರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರ ಗಮನಕ್ಕೂ ಇದನ್ನು ತರಲಾಗಿತ್ತು.
 

click me!