ನನಗೆ ಬೆಳಗ್ಗೆ ಬೆದರಿಕೆ ಬಂದಿದೆ ಈ ಬಗ್ಗೆ ನಾನು ದೂರು ಕೊಡುವುದಿಲ್ಲ, ಮೂಲಭೂತ ಸೌಲಭ್ಯ ಒದಗಿಸುವುದು ಸರ್ಕಾರ ಹಾಗೂ ನಮ್ಮ ಕರ್ತವ್ಯ ಅದನ್ನು ನಾವು ಪಾಲಿಸಿಲ್ಲ: ಶಾಸಕ ಟಿ.ಡಿ. ರಾಜೇಗೌಡ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಸೆ.28): ಅರಣ್ಯ ಹಕ್ಕು 4(1) ಆಕ್ಷೇಪಣೆ ಅರ್ಜಿಗಳ ವಿಚಾರಣೆ ಮತ್ತು ಇತ್ಯರ್ಥ ಪಡಿಸಲು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇನ್ನೊಂದು ಎಫ್ಎಸ್ಓ ಕಚೇರಿಯನ್ನು ತೆರೆಯಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಇಂದು(ಬುಧವಾರ) ಜಿ.ಪಂ.ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಶಾಸಕರ ಸಲಹೆಯನ್ನು ಆಲಿಸಿ ಮಾತನಾಡಿದರು. ಕಂದಾಯ ಮತ್ತು ಅರಣ್ಯಭೂಮಿ ಗುರುತಿಸಲು ಭೂಮಾಪನಾ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕಿದೆ. ಅರಣ್ಯ ಹಕ್ಕು 4(1) ಆಕ್ಷೇಪಣೆ ಅರ್ಜಿಗಳ ವಿಚಾರಣೆ ಮತ್ತು ಇತ್ಯರ್ಥಪಡಿಸಲು ಎಫ್ಎಸ್ಓ ಕಚೇರಿಯನ್ನು ಕಡೂರಿನಲ್ಲಿ ತೆರೆದಿದ್ದು, ಅಧಿಕಾರಿಗಳು ರೈತರ ಹಿತ ಕಾಪಾಡಲು ಗಮನಹರಿಸಬೇಕಿದೆ ಎಂದು ತಿಳಿಸಿದರು.
ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡರಿಗೆ ಬೆದರಿಕೆ
ಕೆಡಿಪಿ ಸಭೆಯಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿಡಿ ರಾಜೇಗೌಡ ಮಾತಾಡಿ ಬೆದರಿಕೆ ಕರೆ ಬಂದಿರುವ ವಿಚಾರವನ್ನು ಪ್ರಸ್ತಾಪ ಮಾಡಿ ಸಭೆ ಗಮನಕ್ಕೆ ತಂದರು. ಇತ್ತೀಚೆಗೆ ಶೃಂಗೇರಿ ತಾಲೂಕಿನ ಕಿಗ್ಗ ಸಮೀಪ ಕಂದಾಯ ಇಲಾಖೆಗೆ ಸೇರಿದ ಜಾಗವನ್ನು ಅರಣ್ಯ ಇಲಾಖೆಯವರು ನೋಟಿಫಿಕೇಶನ್ ಮಾಡಲು ಹೊರಟಿದ್ದಾರೆ ಇದರಿಂದ ಜನರ ಬದುಕು ದುಸ್ತರವಾಗಿದೆ. ಈ ಹಿನ್ನಲೆಯಲ್ಲಿ ನನಗೆ ಬೆದರಿಕೆ ಕರೆ ಬಂದಿದೆ ಎಂದು ಹೇಳಿದರು. ಇದಕ್ಕೆ ಸಚಿವರು ಯಾರು ಬೆದರಿಕೆ ಹಾಕಿದ್ದರೆ ಎಂದು ಪ್ರಶ್ನೆ ಮಾಡಿದ್ರೆ ಬಹಿರಂಗಪಡಿಸುವುದಿಲ್ಲ ಎಂದರು.
ಶೃಂಗೇರಿ, ಹೊರನಾಡಿನಲ್ಲಿ ನವರಾತ್ರಿ ಸಂಭ್ರಮ
ಸಭೆ ಮುಗಿದ ಬಳಿಕ ಸುದ್ದಿಗಾರೊಂದಿಗೆ ಮಾತಾಡಿದ ಶಾಸಕ ಟಿ.ಡಿ. ರಾಜೇಗೌಡ ನನಗೆ ಬೆಳಗ್ಗೆ ಬೆದರಿಕೆ ಬಂದಿದೆ ಈ ಬಗ್ಗೆ ನಾನು ದೂರು ಕೊಡುವುದಿಲ್ಲ, ಮೂಲಭೂತ ಸೌಲಭ್ಯ ಒದಗಿಸುವುದು ಸರ್ಕಾರ ಹಾಗೂ ನಮ್ಮ ಕರ್ತವ್ಯ ಅದನ್ನು ನಾವು ಪಾಲಿಸಿಲ್ಲ. ಈ ಭಾಗದ ಜನರ ಬದುಕಿಗೆ ಕಂಟಕ ಬಂದಾಗ ಈ ರೀತಿ ಬೆದರಿಕೆ ಹಾಕಿದ್ದಾರೆ. ನಾನು ಶಕ್ತಿಮೀರಿ ಕೆಲಸ ಮಾಡಿದ್ದೇನೆ. ಮೌಖಿಕವಾಗಿ ಬೆದರಿಕೆ ಬಂದಿದ್ದು. ನಾನು ಯಾರ ಮೇಲೂ ದೂರು ಕೊಡುವುದಿಲ್ಲ ಅವರ ಬೇಡಿಕೆ ಸರಿ ಇದೆ. ಇತ್ತೀಚೆಗೆ ಶೃಂಗೇರಿ ತಾಲೂಕಿನ ಕಿಗ್ಗ ಸಮೀಪ ಕಂದಾಯ ಇಲಾಖೆಗೆ ಸೇರಿದ ಜಾಗವನ್ನು ಅರಣ್ಯ ಇಲಾಖೆಯವರು ನೋಟಿಫಿಕೇಶನ್ ಮಾಡಲು ಹೊರಟಿದ್ದಾರೆ ಇದರಿಂದ ಜನರ ಬದುಕು ದುಸ್ತರವಾಗುತ್ತದೆ ಎಂದರು.
ನಕ್ಸಲರು ಅಥವಾ ಇನ್ಯಾವುದೋ ಬೆದರಿಕೆ ಕರೆ ಎನ್ನುವ ಪ್ರಶ್ನೆಗೆ ಅದನ್ನು ಬಹಿರಂಗಪಡಿಸುವುದಿಲ್ಲ. ಹಿಂದೆಲ್ಲ ಏನಾಗಿದೆ ಎಂದು ಮಾಧ್ಯಮದವರಿಗೆ ಗೊತ್ತಿದೆ ಎಂದು ಹೇಳಿದರು. ನಮಗೆ ರಕ್ಷಣೆ ಕೊಡುವವರು ಯಾರು?.ಸಭೆಯಲ್ಲಿ ಉಸ್ತುವಾರಿ ಮಂತ್ರಿಗಳು ದೂರು ಕೊಡಿ ಕ್ರಮ ಕೈಗೊಳ್ಳೋಣ ಎಂದರು. ಸಭೆಯಲ್ಲಿದ್ದ ಎಸ್ ಪಿ ಈ ಬಗ್ಗೆ ಶಾಸಕರಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.