ಮಹಾನಾಯಕ ಧಾರಾವಾಹಿ ಸ್ಥಗಿತಕ್ಕೆ ಬೆದರಿಕೆ : ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ

By Kannadaprabha NewsFirst Published Sep 7, 2020, 2:11 PM IST
Highlights

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಧಾರಾವಾಹಿ ಪ್ರಸಾರ ಸ್ಥಗಿತ ಮಾಡುವಂತೆ ಒತ್ತಾಯಿಸಲಾಗಿದೆ.

ಹಾಸನ (ಸೆ.07):  ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜೀವನಾಧರಿತ ಮಹಾನಾಯಕ ಧಾರಾವಾಹಿಯನ್ನು ನಿಲ್ಲಿಸುವಂತೆ ಖಾಸಗಿ ವಾಹಿನಿ ಮುಖ್ಯಸ್ಥರಿಗೆ ಬೆದರಿಕೆ ಕರೆ ಮಾಡಿರುವ ಕಿಡಿಗೇಡಿಗಳನ್ನು ಶೀಘ್ರ ಬಂಧಿ​ಸುವಂತೆ ದ್ರಾವಿಡ ಭೀಮ್‌ ಆರ್ಮಿ ರಾಜ್ಯಾಧ್ಯಕ್ಷ ಸಂಪತ್‌ ಸುಬ್ಬಯ್ಯ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯವನ್ನು ಖಾಸಗಿ ವಾಹಿನಿ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರೇ ಬಹಿರಂಗಪಡಿಸಿದ್ದು, ನಾವೆಲ್ಲರೂ ಅವರ ಬೆಂಬಲಕ್ಕೆ ಇರುತ್ತೇವೆ ಎಂದರು.

ಸಂವಿಧಾನ ಶಿಲ್ಪಿಯ ಜೀವನಾಧಾರಿತ ಮಹಾನಾಯಕ ಧಾರಾವಾಹಿಗೆ ನಾಡಿನೆಲ್ಲೆಡೆ ಅಭೂತಪೂರ್ವ ಜನಬೆಂಬಲ ಸಿಗುತ್ತಿದೆ. ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಮಹಾನಾಯಕ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ. ಇದನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಿಡಿಗೇಡಿ ಕೃತ್ಯ ಮಾಡುತ್ತಿರುವುದು ಖಂಡನೀಯ ಎಂದರು.

ಜೀ ಕನ್ನಡದಲ್ಲಿ 'ಮಹಾನಾಯಕ' ನಿಲ್ಲಿಸುವಂತೆ ರಾಘವೇಂದ್ರ ಹುಣಸೂರುಗೆ ಬೆದರಿಕೆ ಕರೆ! ...

ಹೀಗಾಗಿ ಯಾರ ಒತ್ತಡಕ್ಕೂ ಮಣಿಯದೆ ಧಾರಾವಾಹಿ ಪ್ರಸಾರವನ್ನು ಮುಂದುವರಿಸಬೇಕು. ಹಾಗೆಯೇ ರಾಜ್ಯ ಸರ್ಕಾರ ಖಾಸಗಿ ವಾಹಿನಿ ಕಚೇರಿ ಮತ್ತು ಅದರ ಮುಖ್ಯಸ್ಥರಿಗೆ ಸೂಕ್ತ ಭದ್ರತೆ ನೀಡುವಂತೆ ಸಂಪತ್‌ ಸುಬ್ಬಯ್ಯ ಮನವಿ ಮಾಡಿದರು.

ಖಾಸಗಿ ವಾಹಿನಿ ಮುಖ್ಯಸ್ಥರು ಧಾರಾವಾಹಿ ನಿಲ್ಲಿಸುವಂತೆ ತಮಗೆ ಬೆದರಿಕೆ ಕರೆ ಬಂದಿರುವುದರ ಬಗ್ಗೆ ಸಂಬಂಧಪಟ್ಟಪೊಲೀಸ್‌ ಅ​ಧಿಕಾರಿಗಳ ಗಮನಕ್ಕೂ ತಂದಿದ್ದು, ಸಮಾಜದಲ್ಲಿ ಸಾಮರಸ್ಯ ಕದಡುವ ಕೃತ್ಯಕ್ಕೆ ಕೈ ಹಾಕಿರುವ ಕಿಡಿಗೇಡಿಗಳನ್ನು ಶೀಘ್ರ ಬಂ​ಸುವಂತೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ದ್ರಾವಿಡ ಭೀಮ್‌ ಆರ್ಮಿ ಜಿಲ್ಲಾಧ್ಯಕ್ಷ ಪ್ರಸಾದ್‌ ಹೆಚ್‌.ಆರ್‌., ಸದಸ್ಯರಾದ ಮಂಜು, ಶರತ್‌, ಅರಸೀಕೆರೆ ಟಿಪ್ಪು ಸುಲ್ತಾನ್‌ ವೇದಿಕೆ ತಾಲೂಕು ಅಧ್ಯಕ್ಷ ಮೊಹಮದ್‌ ಫಯಾಜ್‌, ಶಶಿಕುಮಾರ್‌ ಇದ್ದರು.

click me!