ಕೊಪ್ಪಳದಲ್ಲೀಗ ಆಡಿಯೋ ಬಾಂಬ್‌: ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ..!

By Kannadaprabha NewsFirst Published Sep 7, 2020, 1:52 PM IST
Highlights

ಸುಪ್ರೀಂ ಕೋರ್ಟ್‌ ಬುಕ್ಕಾಗ್ತದೆ-ರಾಘವೇಂದ್ರ ಹಿಟ್ನಾಳ| ದಿನಸಿ ಕಿಟ್‌ ವಿತರಿಸಲು ಸಂಸದರ ಪುತ್ರ ಅಕ್ಕಿ ತರಿಸಿದ್ದೆಲ್ಲಿಂದ?| ಆಡಿಯೋ ಬಾಂಬ್‌ ಕುರಿತು ಪರ-ವಿರೋಧದ ಚರ್ಚೆ| 

ಕೊಪ್ಪಳ(ಸೆ.07): ಕೊಪ್ಪಳದಲ್ಲಿ ಈಗ ಸೋಷಿಯಲ್‌ ಮೀಡಿಯಾದಲ್ಲಿ ಆಡಿಯೋ ಬಾಂಬ್‌ ಭಾರಿ ಸದ್ದು ಮಾಡುತ್ತಿವೆ. ಇದರಲ್ಲಿ ಸಂಸದರ ಪುತ್ರ ಅಮರೇಶ ಕರಡಿ ಅವರ ಒಂದು ಆಡಿಯೋ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಅವರದ್ದು ಮತ್ತೊಂದು ಆಡಿಯೋ.

ಈ ಎರಡು ಆಡಿಯೋ ಈಗ ಭಾರಿ ಸದ್ದು ಮಾಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿವೆ. ಇದರ ಕುರಿತು ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಇದರ ಒಂದು ಆಡಿಯೋ ಜತೆ ಗಂಗಾವತಿಯ ಡಿವೈಎಸ್ಪಿಯಾಗಿದ್ದ ಚಂದ್ರಶೇಖರ್‌ ಅವರ ಹೆಸರು ತಳಕು ಹಾಕಿಕೊಂಡಿದೆ. ಅವರೇ ಈ ಆಡಿಯೋವನ್ನು ರಿಲೀಸ್‌ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

ಆಡಿಯೋ ನಂ. 1: 

ಸಂಸದ ಸಂಗಣ್ಣ ಕರಡಿ ಅವರ ಪುತ್ರ ಅಮರೇಶ ಕರಡಿ ಅವರು ಕೊರೋನಾ ಸಂಕಷ್ಟದ ಸಮಯದಲ್ಲಿ ಸುಮಾರು 15 ಸಾವಿರ ದಿನಸಿ ಕಿಟ್‌ಗಳನ್ನು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿಯೇ ಹಂಚಿಕೆ ಮಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ದಿನಸಿ ಕಿಟ್‌ ಆಡಿಯೋದಲ್ಲಿರುವ ಪ್ರಮುಖ ವಿಷಯ.

ಅಮರೇಶ ಕರಡಿ ಅವರು ಗಂಗಾವತಿಯ ಡಿವೈಎಸ್ಪಿ ಚಂದ್ರಶೇಖರ್‌ ಅವರಿಗೆ ಕರೆ ಮಾಡಿ, ದಿನಸಿ ಕಿಟ್‌ ವಿತರಣೆಗೆ ಸುಮಾರು 50 ಟನ್‌ ಸೋನಾ ಮಸೂರಿ ಅಕ್ಕಿಯನ್ನು ಕಳುಹಿಸಿ, ದಿನಸಿ ಕಿಟ್‌ ವಿತರಣೆಗೆ ಬೇಕಾಗಿದೆ ಎನ್ನುವುದನ್ನು ಹೇಳಿದ್ದಾರೆ. ಅಷ್ಟೇ ಅಲ್ಲ, ಮತ್ತೊಂದು ಆಡಿಯೋದಲ್ಲಿ ಅಕ್ಕಿ ಖರೀದಿ ಮಾಡಿದ ಹಣವನ್ನು ನೀಡುವಂತೆಯೂ ವಿನಂತಿಪೂರ್ವಕವಾಗಿಯೇ ಅಮರೇಶ ಕರಡಿ ಹೇಳಿದ್ದು, ಈಗ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿರುವ ಆಡಿಯೋದಲ್ಲಿ ಇದೆ.
ಆದರೆ, ಇದನ್ನು ಸಂಸದರ ಪುತ್ರ ಹಾಗೂ ಬಿಜೆಪಿ ಮುಖಂಡ ಅಮರೇಶ ಕರಡಿ ಅವರು ಅಲ್ಲಗಳೆದಿದ್ದಾರೆ. ಇದೊಂದು ದುರುದ್ದೇಶದಿಂದ ನೀಡಿರುವ ಆಡಿಯೋ ಆಗಿದೆ.

ಕೊಪ್ಪಳ: ಎಡೆ ಹೊಡೆಯಲು ಹೆಗಲುಕೊಟ್ಟ ಅತಿಥಿ ಶಿಕ್ಷಕ, ಎತ್ತಿನಂತೆ ಹೊಲದಲ್ಲಿ ದುಡಿಯುತ್ತಿರುವ ಪದವೀಧರ..!

ಅಷ್ಟಕ್ಕೂ ಅವರು ಅಕ್ಕಿಯನ್ನು ಕಳುಹಿಸಿಯೇ ಇಲ್ಲ. ಬೇರೆ ಕಡೆಯಿಂದ ದುಡ್ಡುಕೊಟ್ಟು ಖರೀದಿ ಮಾಡಿ ಹಂಚಿಕೆ ಮಾಡಲಾಗಿದೆ. ಗುಣಮಟ್ಟದ ಅಕ್ಕಿ ಕೊಪ್ಪಳ ಮಾರುಕಟ್ಟೆಯಲ್ಲಿ ಲಭ್ಯವಾಗಲಿಲ್ಲ. ಕೊಡುವುದಾದರೆ ಸೋನಾಮಸೂರಿ ಅಕ್ಕಿಯನ್ನು ಕೊಡಬೇಕು ಎನ್ನುವ ಕಾರಣಕ್ಕೆ ಗಂಗಾವತಿಯಿಂದ ತರಿಸಲು ಮುಂದಾಗಿದ್ದೇವು. ಆಗ ಕರೆ ಮಾಡಿ ಮಾತನಾಡಿದ್ದನ್ನೇ ತಪ್ಪಾಗಿ ಆರ್ಥೈಸಲಾಗಿದೆ ಎಂದು ಅಮರೇಶ ಕರಡಿ ಅವರು ಆರೋಪವನ್ನು ನಿರಾಕರಣೆ ಮಾಡಿದ್ದಾರೆ.

ಆಡಿಯೋ 2

ಬೂದುಗುಂಪಾ ಗ್ರಾಮ ಪಂಚಾಯಿತಿ ಕಳಪೆ ಕಾಮಗಾರಿಯನ್ನು ಪ್ರಶ್ನಿಸಿದ ಪ್ರಭು ಎನ್ನುವ ಯುವಕನ ಮೇಲೆ ತಾಲೂಕು ಪಂಚಾಯಿತಿ ಸದಸ್ಯ ಬಸವರಾಜ ಬೆಂಬಲಿಗರು ಹಲ್ಲೆ ಮಾಡಿದ ಪ್ರಕರಣ. ಸುಮಾರು ಒಂದೂವರೆ ತಿಂಗಳ ಹಿಂದಿನ ಘಟನೆ ಇದಾಗಿದೆ ಎನ್ನಲಾಗುತ್ತದೆ.

ಇದರ ರಾಜಿ ಪಂಚಾಯಿತಿ ಮಾಡಿರುವ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಹಲ್ಲೆಗೊಳಗಾದ ಯುವಕ ಪ್ರಭು ಅವರಿಗೆ ಕರೆ ಮಾಡಿ, ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದಾರೆ. ಕೊಟ್ಟಿದ್ದ ಕಂಪ್ಲೇಟ್‌ ವಾಪಸ್ಸು ಪಡೆಯಲು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಕೇಸ್‌ ಕೊಡುವುದರಿಂದ ಏನು ಆಗುವುದಿಲ್ಲ. ನಾನು ರಾಜಿ ಮಾಡುತ್ತೇನೆ. ಅಲ್ಲದೆ ನಿನ್ನ ತಂಟೆಗೆ ಯಾರಾದರೂ ಬಂದರೆ ನಾನು ನಿನ್ನ ಜತೆಗೆ ಬರುತ್ತೇನೆ. ನಿನ್ನ ಒಂದು ಕೂದಲು ಕೊಂಕದಂತೆ ನೋಡಿಕೊಳ್ಳುತ್ತೇನೆ. ಅಷ್ಟೇ ಅಲ್ಲ, ಗ್ರಾಮದ ಹಿರಿಯರ ಸಮ್ಮುಖದಲ್ಲಿ ನಿನ್ನ ಮೇಲೆ ಹಲ್ಲೆ ಮಾಡಿದವರಿಂದ ಪತ್ರವನ್ನು ಬರೆಯಿಸೋಣ ಎಂದು ರಾಜಿ ಮಾಡುವ ಯತ್ನವನ್ನು ಶಾಸಕ ರಾಘವೇಂದ್ರ ಹಿಟ್ನಾಳ ಅವರು ನಡೆಸಿದ ಮಾತುಗಳು ಇವೆ.

ಹೀಗೆ ಮಾತನಾಡುವ ಭರದಲ್ಲಿ ಎಫ್‌ಐಆರ್‌ ಆದ ತಕ್ಷಣ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ಇನ್ನೊಂದು ಸಾರಿ ಅವರು ನಿನ್ನ ತಂಟೆಗೆ ಬಂದರೆ ಜೈಲಿಗೆ ಅಟ್ಟೋಣ. ಅವರೆಲ್ಲರೂ ಜೈಲು ಸೇರುತ್ತಾರೆ. ಈ ಬಾರಿ ರಾಜಿ ಮಾಡೋಣ ಎಂದು ಹೀಗೆ ಕಂಪ್ಲೆಂಟ್‌ ವಾಪಸು ತೆಗೆಯಿಸಲು ಒಪ್ಪಿಸುವ ಪ್ರಯತ್ನ ಮಾಡಿದ್ದಾರೆ.

ಆತ ಕಂಪ್ಲೆಂಟ್‌ ಹಿಂದೆ ಪಡೆಯುವುದಿಲ್ಲ ಎಂದು ಬಿಗಿಪಟ್ಟು ಹಿಡಿದಾಗ ಎಫ್‌ಐಆರ್‌ ಆದರೆ ಮುಗಿದು ಹೋಗುವುದಿಲ್ಲ. ದೆಹಲಿ ಘಟನೆಯನ್ನು ಕೇಳಿಯಲ್ಲ, ಏನಾಯಿತು ಸುಪ್ರೀಂ ಕೋರ್ಟ್‌ನಲ್ಲಿ ಎಂದು ಶಾಸಕರು ಪ್ರಶ್ನೆ ಮಾಡುತ್ತಾರೆ. ಆಗ ಪ್ರಭು ಹೌದು, ಸಾರ್‌ ನಾಲ್ಕಾರು ಸಾರಿ ಮುಂದೆ ಹೋಯಿತು ಎನ್ನುತ್ತಾನೆ.

ನಾನು ಇರ್ತಿನಿ, ಅಪ್ಪಾನೂ ಇರ್ತಾನ, ಅವರ ಬೇಕೆಂದರೆ ಒದಸ್ತಿನಿ, ನೀನೇನೂ ಹಂಗ ತಿಳ್ಕೋಬೇಡ. ನಾನು ಅವರನ್ನು ಹಂಗೆ ಬಿಡಲ್ಲ ಎಂದರೂ ಯುವಕ ಪ್ರಭು ಪಟ್ಟುಬಿಡುವುದಿಲ್ಲ. ಅವರಿಗೆ ಶಿಕ್ಷೆಯಾಗಬೇಕು, ಅಲ್ಲಿಯವರೆಗೂ ನಾನು ಬಿಡುವುದಿಲ್ಲ ಎನ್ನುತ್ತಾರೆ.

ನಿನ್ನ ತಲೆಯಲ್ಲಿ ಏನಿದೆ? 

ಎಫ್‌ಐಆರ್‌ ಆದ ತಕ್ಷಣ ಮುಗಿದು ಹೋಯ್ತಾ? ನಿನಗೆ ಆಗಿರುವ ಗಾಯ ವಾಸಿಯಾಗುತ್ತಾ? ಹೀಗೆ ಬೆಳೆಸಿಕೊಂಡು ಹೋದರೆ ದ್ವೇಷಕ್ಕೆ ಕಾರಣವಾಗುತ್ತದೆ. ಎಂತೆಂಥವರ ಹೋಗ್ಯಾರ್‌, ನಾನು ಸಹಿಸಲ್ಲ ಹಲ್ಲೆ ಮಾಡುವುದನ್ನು. ಎಫ್‌ಐಆರ್‌ ಆದ ತಕ್ಷಣ ಮುಗಿದು ಹೋಗುವುದಿಲ್ಲ. ಸುಪ್ರೀಂ ಕೋರ್ಟ್‌ ಬುಕ್‌ ಆಗ್ಯಾವು. ಇದಕ್ಕಿಂತ ನಾನು ಏನು ಹೇಳಬೇಕು ನಿನಗೆ ಎಂದಿದ್ದಾರೆ. ಶಾಸಕರ ಈ ಮಾತು ಈಗ ಭಾರಿ ಟೀಕೆಗೆ ಗುರಿಯಾಗಿದೆ.

ಇದೆಲ್ಲವೂ ಸುಳ್ಳು, ನಾನು ಇಲ್ಲಿ ಗುಣಮಟ್ಟದ ಅಕ್ಕಿ ದೊರೆಯುತ್ತಿಲ್ಲ ಎನ್ನುವ ಕಾರಣಕ್ಕಾಗಿ ಗಂಗಾವತಿಯಿಂದ ಸೋನಾ ಮಸೂರಿ ಅಕ್ಕಿಯನ್ನು ತರಿಸುವ ಪ್ರಯತ್ನದ ವೇಳೆಯಲ್ಲಿ ಮಾಡಿದ ಕರೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಬಿಜೆಪಿ ಮುಖಂಡ ಅಮರೇಶ ಕರಡಿ ಅವರು ತಿಳಿಸಿದ್ದಾರೆ. 

ಆಡಿಯೋದಲ್ಲಿ ಏನಿದೆ ಎಂದು ಗೊತ್ತಿಲ್ಲ. ಅದನ್ನು ಕೇಳಿದ ಮೇಲೆ ಪ್ರತಿಕ್ರಿಯಿಸುತ್ತೇನೆ. ಘಟನೆಯ ಮಾಹಿತಿಯನ್ನು ತಿಳಿದುಕೊಳ್ಳುತ್ತೇನೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಅವರು ಹೇಳಿದ್ದಾರೆ.
ನಾನು ಅಕ್ರಮವನ್ನು ಬಯಲಿಗೆ ಎಳೆಯಲು ಮುಂದಾಗಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಇದರ ವಿರುದ್ಧ ನಾನು ದೂರು ನೀಡಿದಾಗ ಕೇಸ್‌ ವಾಪಸ್‌ ಪಡೆಯುವಂತೆ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಕರೆ ಮಾಡಿ ಮಾತನಾಡಿದ್ದರು ಎಂದು ದೂರುದಾರ ಪ್ರಭು ದಾಸರ ಅವರು ಹೇಳಿದ್ದಾರೆ. 
 

click me!