Ladle Mashak Dargah: ಶಿವರಾತ್ರಿ ದಿನ ಆಳಂದಕ್ಕೆ ಬಂದವರು ’ಶಿವಶಿವಾ’ ಅಂತಾ ಗೋಳಾಡಿದ್ರು!

By Kannadaprabha News  |  First Published Feb 19, 2023, 1:21 PM IST

ಶಿವರಾತ್ರಿ ದಿನವಾದ ಶನಿವಾರ ಜಿಲ್ಲೆಯ ಆಳಂದ ಪಟ್ಟಣ ಅಘೋಷಿತ ಬಂದ್‌ಗೆ ಸಾಕ್ಷಿಯಾಯ್ತು. ಕಳೆದ ಶಿವರಾತ್ರಿ ಸಂಭವಿಸಿದ್ದ ಗಲಭೆ, ಕಲು ತೂರಾಟ, ಲಾಠಿ ಪ್ರಹಾರದಿಂದಾಗಿ ಮೊದಲೇ ಬೆಚ್ಚಿದ್ದ ಪಟ್ಟಣದ ಜನತೆ ಈ ಶಿವರಾತ್ರಿಗೂ ಅದೆಲ್ಲಿ ಏನಾಗುವುದೋ ಎಂದು ತಮ್ಮ ದಿನದ ವಹಿವಾಟುಗಳಿಗೆ ಬೀಗ ಜಡಿದು ಮನೆ ಸೇರಿದ್ದರು.


ಶೇಷಮೂರ್ತಿ ಅವಧಾನಿ

ಆಳಂದ (ಫೆ.19) : ಶಿವರಾತ್ರಿ ದಿನವಾದ ಶನಿವಾರ ಜಿಲ್ಲೆಯ ಆಳಂದ ಪಟ್ಟಣ ಅಘೋಷಿತ ಬಂದ್‌ಗೆ ಸಾಕ್ಷಿಯಾಯ್ತು. ಕಳೆದ ಶಿವರಾತ್ರಿ ಸಂಭವಿಸಿದ್ದ ಗಲಭೆ, ಕಲು ತೂರಾಟ, ಲಾಠಿ ಪ್ರಹಾರದಿಂದಾಗಿ ಮೊದಲೇ ಬೆಚ್ಚಿದ್ದ ಪಟ್ಟಣದ ಜನತೆ ಈ ಶಿವರಾತ್ರಿಗೂ ಅದೆಲ್ಲಿ ಏನಾಗುವುದೋ ಎಂದು ತಮ್ಮ ದಿನದ ವಹಿವಾಟುಗಳಿಗೆ ಬೀಗ ಜಡಿದು ಮನೆ ಸೇರಿದ್ದರು.

Latest Videos

undefined

ಇದಲ್ಲದೆ ಕಳೆದ 1 ವಾರದಿಂದ ಆಳಂದ(Alanda) ಪಟ್ಟಣದ ಸುತ್ತಮುತ್ತ ನಾಕಾಬಂದಿ ಮಾಡುವ ಮೂಲಕ ಕಾವಲಿಟ್ಟಿದ್ದ ಪೊಲೀಸರು ಶನಿವಾರದ ಶಿವರಾತ್ರಿ(Shivaratri) ದಿನ ಬೆಳಗ್ಗೆಯಿಂದಲೇ ಸಾರಿಗೆ, ಖಾಸಗಿ ವಾಹನ ಯಾವುದಕ್ಕೂ ಆಳಂದ ಪ್ರವೇಶಕ್ಕೆ ಅನುಮತಿ ನೀಡದೆ ನಿರ್ಬಂಧಿಸಿದ್ದರು. ಇದರಿಂದಾಗಿ ಉರಿ ಬಿಸಿಲಲ್ಲೇ ಸಾರ್ವಜನಿಕರು, ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನ ಆಲಂದ ಬರಲಿಕ್ಕೂ ಪರದಾಡುವಂತಾಯ್ತು. ಶಿವರಾತ್ರಿ ರಜೆಯ ಕಾರಣ ಬೇರೆ ಊರಿಗೆ ತೆರಳಲು ಪ್ರಯಾಣಿಕರು ಪರದಾಡಿದರು. ಇವರ ಯಾವುದೇ ವಾಹನಗಳಿಗೆ ಆಳಂದ ಪ್ರವೇಶಕ್ಕೆ ಅನುಮತಿ ನೀಡಲಾಗಲಿಲ್ಲ. ಹೀಗಾಗಿ ಆಳಂದ ಪ್ರವೇಶದ ದಾರಿಯಲ್ಲಿರುವ ಆರ್‌ಟಿಓ ಚೆಕ್‌ಪೋಸ್ಟ್‌ ನಿಂದಲೇ ವಾಹನಗಳಲ್ಲು ತಿರುಗಿಸಲಾಗಿತ್ತಲ್ಲದೆ ಹೀಗೆ ತಿರುಗಿ ಹೊರಟವರು ಹತ್ತಾರು ಕಿಮೀ ದೂರ ಸಾಗಿ ಬಸವವಳಿದು ಬೆಂಡಾಗುವಂತಾಯ್ತು.

 

Ladle Mashak Dargah: ಆಳಂದ ಲಾಡ್ಲೆ ಮಾಶಾಕ್ ದರ್ಗಾ ಸುತ್ತ ಪೊಲೀಸ್ ಸರ್ಪಗಾವಲು

ನಾಲ್ಕಾರು ಕಿಮೀ ಕಾಲ್ನಡಿಗೆ:

ಇನ್ನು ಆಳಂದ ಪಟ್ಟಣಕ್ಕೆ ಬರುವವರ ಪರಿಸ್ಥಿತಿಂಯಂತೂ ದೇವರೇ ಬಲ್ಲ. ಇವರೆಲ್ಲ ತಾವು ಬಂದ ವಾಹನದಿಂದ ಇಳಿದವರೇ ಕಾಲ್ನಡಿಗೆಯಲ್ಲಿಯೇ ತಮ್ಮ ಮನೆಗಳಿಗೆ ತೆರಳುವಂತಾಯ್ತು. ಬಸ್‌, ಖಾಸಗಿ ವಾಹನಗಳನ್ನೂ ದೂರದಲ್ಲೇ ತಡೆದಿದ್ದರಿಂದ ಲಗ್ಗೇಜು, ಚೀಲಗಳೊಂದಿಗೆ ಜನ ಬಿಸಿಲಲ್ಲಿ ಮನೆ ಸೇರಲಿಕ್ಕೂ ಪರದಾಡಿದರು.

’ಶಿವರಾತ್ರಿಗೆ ಶಿವಶಿವಾ ಅನ್ನೋವ್ಹಂಗ ಬಿಸಿಲ ಇರ್ತದ ಅಂತ ಹೇಳ್ತಾರ. ಹಂಗೇ ಇಂದ ಬಿಸಲ ಜೋರಾದ. ನಾವು ಕಲಬುರಗಿಯಿಂದ ಆಳಂದಕ್ಕ ಬಂದೀವಿ. ಇಲ್ಲಿ ನೋಡಿದ್ರ ನಮಗ ಆಟೋ ಬಳಸಲಿಕ್ಕೂ ನಿರ್ಬಂಧ ಹಾಕ್ಯಾರ. ನಾವು ಮನಿಗೆ ಹೋಗೋದೇ ಹೈರಾಣ. ನಾಲ್ಕಾರು ಕಿಮೀ ನಡದು ಹೇಂಗ ಹೋಗೋದು ಅಂತ ಚಿಂತೆಯಲ್ಲಿದ್ದೀವಿ. ಆದರೇನು ಮಾಡೋದು ಸಂಜಿಮಟ ಹೀಂಗ ಕುಳಿತುಕೊಳ್ಳೋದು ಆಗೋದಿಲ್ಲ. ತಲಿಮ್ಯಾಗ ಗಂಟ ಹೊತ್ಕೊಡು ಹಂಗೇ ಹೊಂಟೀವಿ’ ಎಂದು ಕಲಾವತಿ ಎಂಬುವವರು ತಮ್ಮ ಗೋಳು ತೋಡಿಕೊಂಡರು.

ಇವರು ನಾಲ್ಕು ದೊಡ್ಡ ಬ್ಯಾಗ್‌, ಜೊತೆಗೇ ಮಕ್ಕಳು, ವೃದ್ಧರೊಂದಿಗೆ ಆಳಂದಕ್ಕೆ ಬಂದಿಳಿದವರು. ಇವರು ಬರುತ್ತಿದ್ದಂತೆಯೇ ಪೊಲೀಸ್‌ ಬಂದೋಬಸ್‌್ತ ಕಂಡು ಭೀತಿಗೊಳಗಾದರೂ ಪರಿಸ್ತಿತಿ ಗೊತ್ತಾಗಿ ಕಾಲ್ನಡಿಗೆಯಲ್ಲೇ ತಾವು ಹೋಗುತ್ತಿರೋದಾಗಿ ಗೋಳಾಡಿದರು. ಆಳಂದ ಮಾರ್ಗವಾಗಿ ದೂರದ ಮಹಾರಾಷ್ಟ್ರದ ಅಕ್ಕಲಕೋಟೆ, ಸೊಲ್ಲಾಪುರ, ಉಮ್ಮರಗಾ, ಲಾತೂರ್‌ ತೆರಳುವ ವಾಹನಗಳಿಗೂ ಆಳಂದ ಪ್ರವೇಶ ಅಗತ್ಯ. ಆದಾಗ್ಯೂ ಅವೆಲ್ಲ ವಾಹನಗಳಿಗೂ ಪೊಲೀಸರು ಭದ್ರತೆ ಕಾರಣದಿಂದಾಗಿ ಊರ ಹೊರಗಿನಿಂದಲೇ ಗುಡ್ಡ ಸುತಿ ಮಲ್ಲಯ್ಯಗೆ ಹೋಗೋವಂತೆ ಸಾಗ ಹಾಕಿದ್ದರು.

ಇಷ್ಟೆಲ್ಲಾ ಪೊಲೀಸ್‌ ಇದ್ದಾಗ ಜನ ಆಟೋಗಳನ್ನು ಬಳಸಲು ವ್ಯವಸ್ಥೆ ಮಾಡಬಹುದಾಗಿತ್ತು. ಯಾವುದೇ ವಾಹನ ಸವಲತ್ತಿಲ್ಲದ ದೂರದ ಜಾಗದಲ್ಲೇ ಇಳಿಸಿ ಮನೆಗೆ ಹೋಗಿ ಎಂದು ಹೇಳುವ ಪೊಲೀಸರ ಕ್ರಮಕ್ಕೆ ಸಾರ್ವಜನಿಕವಾಗಿ ವ್ಯಾಪಕ ಖಂಡನೆ ವ್ಯಕ್ತವಾಯ್ತು.

ಎಲ್ಲಿ ನೋಡಿದರಲ್ಲಿ ಬ್ಯಾರಿಕೇಡ್‌- ಬಿಗಿ ಬಂದೋಬಸ್ತ್!

ಲಾಡ್ಲೇ ಮಶಾಕ್‌ ದರ್ಗಾ(Ladley Mashak Dargah) ಹಾಗೂ ರಾಘವ ಚೈತನ್ಯ ಶಿವಲಿಂಗ ಪೂಜೆ(Raghava Chaitanya Shivlinga Puja), ಉರುಸ್‌ ವಿವಾದದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಸರ್ಪಗಾವಲನ್ನೇ ಹಾಕಿತ್ತು. ಆಳಂದ ಪ್ರವೇಶದ ಆರ್‌ಟಿಓ ಚೆಕ್‌ ಪೋಸ್ಟ್‌ನಿಂದ ಹಿಡಿದು ಪಟ್ಟಣದ ಪ್ರಮುಖ ಪ್ರವೇಶ ರಸ್ತೆಗಳು, ಗಲ್ಲಿಗಳಲ್ಲಿ ಎಲ್ಲಾಕಡೆ ಬ್ಯಾರಿಕೇಡ್‌ ಹಾಕಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಪೊಲೀಸ್‌ ಠಾಣೆ ರಸ್ತೆ, ಬಸ್‌ ನಿಲ್ದಾಣ, ಶ್ರೀರಾಮ ಮಾರುಕಟ್ಟೆ ರಸ್ತೆ, ಮಹಾವೀರ ಚೌಕ್‌, ಅನ್ಸಾರಿ ಮಹಲ್ಲಾ, ದರ್ಗಾ ಚೌಕ್‌ ಇಲ್ಲೆಲ್ಲಾ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು.ಎಸ್ಪಿ ಇಶಾ ಪಂತ್‌ ಖುದ್ದು ಬಂದೋಬಸ್‌್ತ ಉಸ್ತುವಾರಿ ಹೊತ್ತಿದ್ದರಲ್ಲದೆ , ಡ್ರೋಣ್‌ ಕೆಮೆರಾಗಳನ್ನು ಬಳಸಿ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು.

ಆಳಂದ ದರ್ಗಾದಲ್ಲಿ ಒಂದೇ ದಿನ ಶಿವರಾತ್ರಿ, ಉರುಸ್‌ಗೆ ಅನುಮತಿ!

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌, ಹೆಚ್ಚುವರಿ ಎಸ್‌ಪಿ ಶ್ರೀನಿಧಿ, ಪಿಟಿಸಿ ಎಸ್‌ಪಿ ಅರುಣ ಕೆ, ಕೆಎಸ್‌ಆರ್‌ಪಿ ಡಿಐಜಿ ಬಸವರಾಜ ಜಿಳ್ಳೆ, ಡಿವೈಎಸ್ಪಿ ಗೋಪಿ ಆರ್‌, ಸಿಪಿಐ ಬಾಸು ಚವಾಣ, ಪೊಲೀಸ್‌ ಇನ್ಸ್‌ಪೆಕ್ಟರ್‌ ಮಹಾದೇವ ಪಂಚಮುಖಿ, ಪಿಎಸ್‌ಐ ತಿರುಮಲ್ಲೇಶ್‌, ಇನ್ನಿತರ ಠಾಣೆಯ ಪಿಎಸ್‌ಐ ದಿನೇಶ್‌, ವಾತ್ಸಲ್ಯ, ನಿಂಬರ್ಗಾ ಪಿಎಸ್‌ಐ ಭೀಮರಾವ ಬಂಕಲಿ, ಅಫಜಲಪುರ ಪಿಎಸ್‌ಐ ರಾಜಕುಮಾರ, ವಿಜಯಪುರ, ಯಾದಗಿರಿ, ಬೀದರ್‌ ಪೊಲೀಸ್‌ ಸಿಬ್ಬಂದಿ, ಬೆಳಗಾವಿ ಜಿಲ್ಲಾ ಪೊಲೀಸ್‌, ಕೆಎಸ್‌ಆರ್‌ಪಿ ತುಕಡಿ, ಜಿಲ್ಲೆಯ ಹಿರಿಯ ಪೋಲಿಸ್‌ ಅಧಿಕಾರಿಗಳು ಮತ್ತು ವಿವಿಧ ಪೊಲೀಸ್‌ ಪಡೆ ಸಿಬ್ಬಂದಿಗಳು ಆಳಂದದಲ್ಲಿ ಬೀಡು ಬಿಟ್ಟು ಶಿವರಾತ್ರಿ - ಉರುಸ್‌ ಪಹರೆಯಲ್ಲಿ ಪಾಲ್ಗೊಂಡಿದ್ದರು.

click me!