ತೆಲಂಗಾಣ ಗಡಿಯಂಚಿನ, ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಎನ್ನಲಾದ ವಾಂತಿಬೇಧಿ ಅವಘಡದಲ್ಲಿ ಮೂವರು ಮಹಿಳೆಯರು ಮೃತಪಟ್ಟು, 65ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಆದೇಶಿಸಿದೆ.
ಗುರುಮಠಕಲ್ (ಫೆ.19) : ತೆಲಂಗಾಣ ಗಡಿಯಂಚಿನ, ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಎನ್ನಲಾದ ವಾಂತಿಬೇಧಿ ಅವಘಡದಲ್ಲಿ ಮೂವರು ಮಹಿಳೆಯರು ಮೃತಪಟ್ಟು, 65ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದ ಪ್ರಕರಣವನ್ನು ಲೋಕಾಯುಕ್ತ ನ್ಯಾ. ಬಿ. ಎಸ್. ಪಾಟೀಲ್, ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆಗೆ ಆದೇಶಿಸಿದ್ದು, ಮಾಚ್‌ರ್ 1 ರೊಳಗೆ ವರದಿ ನೀಡುವಂತೆ ಜಿಲ್ಲಾಡಳಿತ ಹಾಗೂ ಪಂಚಾಯ್ತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್(Karnataka grama swaraj) ಮತ್ತು ಪಂಚಾಯತ ರಾಜ್ ಕಾಯ್ದೆ(Panchayatraj act)ಯ ಸೆಕ್ಷನ್ 58ರ ಅಡಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮತ್ತು ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದು ಗ್ರಾಮ ಪಂಚಾಯಿತಿಗಳ ಮೂಲಭೂತ ಕರ್ತವ್ಯವಾಗಿದೆ. ಶುದ್ಧ ಕುಡಿಯುವ ನೀರು ನೀಡುವಲ್ಲಿ ಸಂಬಂಧಪಟ್ಟಅಧಿಕಾರಿಗಳು ವಿಫಲವಾದರೆ, ಅದು ಕಾಯ್ದೆಯ 21ನೇ ಪರಿಚ್ಛೇದದ ಅಡಿಯಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಅಲ್ಲದೇ ಕರ್ನಾಟಕ ಲೋಕಾಯುಕ್ತ ಕಾಯ್ದೆ ಸೆಕ್ಷನ್ 2 (1) ರ ಪ್ರಕಾರ ದುರಾಡಳಿತಕ್ಕೆ ಸಮನಾಗಿರುತ್ತದೆ.
undefined
ಯಾದಗಿರಿ: ಕಲುಷಿತ ನೀರು ಸೇವನೆ, ಮೃತರ ಸಂಖ್ಯೆ 3ಕ್ಕೇರಿಕೆ
ಈ ಅವಘಡದ ಬಗ್ಗೆ ಪರಿಶೀಲನೆ ನಡೆಸಿ, ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಂಡ ಬಗ್ಗೆ ಮಾಚ್‌ರ್ 1 ಅಥವಾ ಅದರೊಳಗೆ ಸಮಗ್ರ ವರದಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸುವಂತೆ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ನಿರ್ದೇಶಕರು, ಜಿಲ್ಲಾಧಿಕಾರಿ ಮತ್ತು ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗುರುಮಠಕಲ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಹಾಗೂ ಯಾದಗಿರಿ ಜಿಲ್ಲೆಯ ಅನುಪರ ಗ್ರಾ.ಪಂ.ಅಧ್ಯಕ್ಷರಿಗೆ ಸೂಚಿಸಿದ್ದಾರೆನ್ನಲಾಗಿದೆ.
ಅಲ್ಲದೆ, ಈ ಘಟನೆಗೆ ಕಾರಣರಾದ ಅಧಿಕಾರಿಗಳ ವಿವರ, ಮೃತರ ವಾರಸುದಾರರಿಗೆ ನೀಡಿದ ಪರಿಹಾರ ಮತ್ತು ಚಿಕಿತ್ಸೆ ನೀಡಲು ತೆಗೆದುಕೊಂಡ ಕ್ರಮಗಳ ಬಗ್ಗೆಯೂ ವಿವರಗಳನ್ನು ತಿಳಿಸುವಂತೆ ಲೋಕಾಯುಕ್ತರು ನಿರ್ದೇಶಿಸಿದ್ದಾರೆ. ಫೆ.16 ರಂದು ಲೋಕಾಯುಕ್ತ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ವರದಿ ನೀಡಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.
ಘಟನೆಯ ಹಿನ್ನೆಲೆ :
ಫೆ.16 ರಂದು ಅನಪುರ ಗ್ರಾಮದಲ್ಲಿ ವಾಂತಿಬೇಧಿ ಉಲ್ಬಣಗೊಂಡು, 25 ವರ್ಷದ ಸಾವಿತ್ರಮ್ಮ, 72 ವರ್ಷದ ಸಾಯಮ್ಮ ಹಾಗೂ 71 ವರ್ಷದ ನರಸಮ್ಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಅಸ್ವಸ್ಥಗೊಂಡ 65ಕ್ಕೂ ಹೆಚ್ಚು ಗ್ರಾಮಸ್ಥರನ್ನು ನೆರೆಯ ತೆಲಂಗಾಣದ ನಾರಾಯಣಪೇಟ್ ಸೇರಿದಂತೆ, ಯಾದಗಿರಿ ಹಾಗೂ ರಾಯಚೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ವೈದ್ಯರು ಹಾಗೂ ಪಂಚಾಯತ್ ಅಧಿಕಾರಿಗಳ ತಂಡ ಅಲ್ಲಿ ಬೀಡುಬಿಟ್ಟಿದ್ದು, ಅಸ್ವಸ್ಥಗೊಂಡವರ ಚಿಕಿತ್ಸೆ ನೀಡುತ್ತಿದ್ದಾರೆ. ಶನಿವಾರದವರೆಗೂ (ಫೆ.18) ಸುಮಾರು 60 ಜನರು ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು:
ವಾಂತಿ -ಭೇದಿ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಪಂಚಾಯತ್ ವತಿಯಿಂದ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಗಾಮ ಪಂಚಾಯತ್ ಅಧ್ಯಕ್ಷ ಗೋಪಾಲ ರೆಡ್ಡಿ ತಿಳಿಸಿದ್ದಾರೆ.
ನೀರಿನಲ್ಲಿ ಮತ್ತಿನ ಔಷಧಿ ಸೇರ್ಪಡೆ?
ಫೆ.8ರಂದು ನಡೆದ ದರ್ಗಾದ ಜಾತ್ರೆಯಲ್ಲಿ ಯಾರೋ ಕಿಡಿಗೇಡಿಗಳು ನೀರಿನಲ್ಲಿ ಮತ್ತಿನ ಔಷಧಿ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆರೋಗ್ಯ ಇಲಾಖೆ ಕಲುಷಿತ ನೀರಿನಿಂದ ಆಗಿದೆ ಎಂದು ಪ್ರಯೋಗಲಯದಲ್ಲಿ ಸಾಬೀತು ಆಗಿದೆ. ಅದಕ್ಕೆ ಕಾರಣವಾದ ವಾಸ್ತವ ತನಿಖೆ ನಡೆಸಬೇಕು ಎಂಬುದು ಅಲ್ಲಿನ ಸಾರ್ವಜನಿಕರ ಒತ್ತಾಯವಾಗಿದೆ.
ದೇವಸ್ಥಾನ ಸ್ಥಳಾಂತರಗೊಂಡಿದ್ದಕ್ಕೆ ವಾಂತಿಬೇಧಿ?
- ಅನಪುರ ಗ್ರಾಮದಲ್ಲಿ ಕೆಲವರ ಮೌಢ್ಯ!
ಅನಪುರ ಗ್ರಾಮದಲ್ಲಿನ ಕರಿಯಮ್ಮ ದೇವಿ ದೇವಸ್ಥಾನ ತೆರವು ಮಾಡಿದ್ದಕ್ಕಾಗಿ ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರಲ್ಲಿ ಮೂಢನಂಬಿಕೆ ಮನೆ ಮಾಡಿದೆ. ಗ್ರಾಮದ ಕರೆಯಮ್ಮ ದೇವಿಯ ದೇವಸ್ಥಾನ ಹಳೆ ಕಟ್ಟಡವಾಗಿದ್ದರಿಂದ ಗ್ರಾಮಸ್ಥರು ತೆರವುಗೊಳಿಸಿ ಹೊಸ ದೇವಸ್ಥಾನ ಕಟ್ಟಲು ಮುಂದಾಗಿದ್ದರು.
ಮುಂದಿನ ಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಅಧಿಕಾರ ಯೋಗವಿಲ್ಲ; ಕೊಡೇಕಲ್ ಕಾಲಜ್ಞಾನಿಯ ಭವಿಷ್ಯನುಡಿ ನಿಜವಾಗುತ್ತಾ?
ಇದೇ ಕಾರಣಕ್ಕೆ ದೇವಸ್ಥಾನ ತೆರವು ಮಾಡಿ ಮೂರ್ತಿ ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ಮೂರ್ತಿ ಸ್ಥಳಾಂತರ ಮಾಡಿದ್ದಕ್ಕೆ ಗ್ರಾಮದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಇದರಿಂದ ಗ್ರಾಮದಲ್ಲಿ ವಾಂತಿ ಭೇದಿ ಆರಂಭವಾಗಿದೆ ಎಂದು ಜನರು ನಂಬಿದ್ದಾರೆ. ಕರಿಯಮ್ಮ ದೇವಿ ಮೂರ್ತಿ ಯನ್ನು ಅಲ್ಲೇ ಊರಲ್ಲಿದ್ದ ನರಸಪ್ಪ ದೇವಸ್ಥಾನ ದಲ್ಲಿ ಪ್ರತಿಷ್ಠಾಪನೆ ಮಾಡಿರುವ ಕಾರಣ ದೇವತೆಯ ಸಿಟ್ಟಿನ ಪರಿಣಾಮ ಈ ಅವಘಡಕ್ಕೆ ಕಾರಣ ಆಗಿದೆ ಎಂದು ಕೆಲವರ ನಂಬಿಕೆ.