ರಾಮ​ನ​ಗರ: ಈ ಬಾರಿಯೂ ಜಿಲ್ಲಾ ಕನ್ನಡ ರಾಜ್ಯೋ​ತ್ಸವ ಪ್ರಶ​ಸ್ತಿಗೆ ಬ್ರೇಕ್‌..!

By Kannadaprabha News  |  First Published Oct 29, 2022, 1:02 PM IST

ವಿವಿಧ ಕ್ಷೇತ್ರ​ಗಳ ಸಾಧ​ಕ​ರಿ​ಗಿಲ್ಲ ರಾಜ್ಯೋ​ತ್ಸವ ಗರಿ, ಸಾಹಿತ್ಯ-ಸಾಂಸ್ಕೃತಿಕ ವಲಯದಲ್ಲಿ ವ್ಯಾಪಕ ಅಸಮಾಧಾನ, ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಪುನರ್‌ ಪ್ರಾರಂಭಿಸಲು ಒತ್ತಾಯ


ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ(ಅ.29):  ಕನ್ನಡ ನಾಡು ನುಡಿ​ಗಾಗಿ ಸೇವೆ ಸಲ್ಲಿ​ಸಿದ ವಿವಿಧ ಕ್ಷೇತ್ರ​ಗಳ ಸಾಧ​ಕ​ರನ್ನು ಗುರು​ತಿಸಿ ಪ್ರದಾನ ಮಾಡ​ಲಾ​ಗು​ತ್ತಿದ್ದ ಜಿಲ್ಲಾ ಕನ್ನಡ ರಾಜ್ಯೋ​ತ್ಸವ ಪ್ರಶಸ್ತಿಗೆ ಈ ಬಾರಿಯೂ ಬ್ರೇಕ್‌ ಬಿದ್ದಿದೆ. ಕೊರೋನಾ ಸೋಂಕಿನ ಕಾರಣ ನಾಲ್ಕು ವರ್ಷ​ಗ​ಳಿಂದ ಜಿಲ್ಲಾ ಕನ್ನಡ ರಾಜ್ಯೋ​ತ್ಸವ ಪ್ರಶಸ್ತಿ ಪ್ರದಾನ ಮಾಡು​ವು​ದನ್ನು ಸ್ಥಗಿ​ತ​ಗೊ​ಳಿ​ಸ​ಲಾ​ಗಿತ್ತು. ಈಗ ಕೊರೋನಾ ನಿಯಂತ್ರ​ಣಕ್ಕೆ ಬಂದಿ​ದ್ದರೂ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾ​ಡ​ಳಿತ ಮನಸ್ಸು ಮಾಡು​ತ್ತಿ​ಲ್ಲ.

Tap to resize

Latest Videos

ಜಿಲ್ಲಾ​ಡ​ಳಿತ ಪ್ರತಿ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿ​ಕಾ​ರಿ​ಗ​ಳನ್ನು ಒಳ​ಗೊಂಡಂತೆ ಸಮಿ​ತಿ​ಯೊಂದನ್ನು ರಚಿಸಿ ವಿವಿಧ ಕ್ಷೇತ್ರ​ಗ​ಳಲ್ಲಿ ಸಾಧನೆ ಮಾಡಿ​ರುವ ಸಾಧ​ಕ​ರನ್ನು ಗುರು​ತಿಸಿ ಜಿಲ್ಲಾ ಕನ್ನಡ ರಾಜ್ಯೋ​ತ್ಸವ ಪ್ರಶ​ಸ್ತಿಗೆ ಆಯ್ಕೆ ಮಾಡು​ತ್ತಿತ್ತು. ಹೀಗೆ ಆಯ್ಕೆ​ಯಾ​ದ​ ಪ್ರಶಸ್ತಿ ಪುರ​ಸ್ಕೃತರ ಪಟ್ಟಿ​ಯನ್ನು ಅ.30 ಅಥವಾ 31ರಂದು ಬಿಡು​ಗಡೆ ಮಾಡು​ತ್ತಿತ್ತು.

RAMANAGAR: ಜೆಡಿಎಸ್‌ಗೆ ಒಲಿದ ಅಧ್ಯಕ್ಷ ಉಪಾ​ಧ್ಯ​ಕ್ಷ​ ಪಟ್ಟ

ಆನಂತರ ಜಿಲ್ಲಾ ಕ್ರೀಡಾಂಗ​ಣ​ದಲ್ಲಿ ನ.1ರಂದು ನಡೆ​ಯುವ ಕನ್ನಡ ರಾಜ್ಯೋ​ತ್ಸವ ಸಮಾ​ರಂಭ​ದಲ್ಲಿ ಪ್ರಶಸ್ತಿ ಪ್ರದಾನ ಮಾಡು​ವುದು ವಾಡಿ​ಕೆ​ಯಾ​ಗಿತ್ತು. ಕಳೆದ ನಾಲ್ಕು ವರ್ಷ​ಗ​ಳಿಂದ ಕೊರೋನಾ ಹಾಗೂ ಚುನಾ​ವಣಾ ನೀತಿ ಸಂಹಿತೆ ಕಾರ​ಣ​ದಿಂದಾಗಿ ಪ್ರಶಸ್ತಿ ವಿತ​ರಣೆ ತಡೆ ಹಿಡಿದು ಕನ್ನಡ ರಾಜ್ಯೋ​ತ್ಸವವನ್ನು ಸರ​ಳ​ವಾಗಿ ಆಚ​ರಿ​ಸ​ಲಾ​ಗಿತ್ತು. ಈ ವರ್ಷ ರಾಜ್ಯ ಸರ್ಕಾ​ರ ಪ್ರಶಸ್ತಿ ಪ್ರದಾನ ಸಂಬಂಧ ಯಾವುದೇ ಆದೇಶ ಹೊರ​ಡಿ​ಸದ ಕಾರಣ ಜಿಲ್ಲಾ​ಡ​ಳಿತ ಪ್ರಶಸ್ತಿ ಪ್ರದಾ​ನ ಕೈಬಿ​ಟ್ಟಿದೆ.

ಸಾಹಿತ್ಯ-ಸಾಂಸ್ಕೃ​ತಿಕ ವಲ​ಯ​ದಲ್ಲಿ ಅಸ​ಮಾ​ಧಾ​ನ:

ರಾಜ್ಯೋ​ತ್ಸವ ಅಂದರೆ ನಾಡು ಹಾಗೂ ನುಡಿಗಾಗಿ ದುಡಿದ ಮಹಾನೀಯರನ್ನು ನೆನೆಯುವ ಸುಸಂದರ್ಭ. ಇದರ ಜತೆಗೆ ಕಲೆ, ಸಾಹಿತ್ಯ, ಶಿಕ್ಷಣ, ವೈದ್ಯ​ಕೀಯ, ಕ್ರೀಡೆ, ಮಾಧ್ಯಮ, ಚಳ​ವಳಿ, ಸಂಘ​ಟನೆ ಸೇರಿ​ದಂತೆ ವಿವಿಧ ಕ್ಷೇತ್ರ​ಗ​ಳಲ್ಲಿನ ಸಾಧ​ಕ​ರನ್ನು ಗೌರ​ವಿಸಿ, ಪ್ರೋತ್ಸಾ​ಹಿ​ಸಲು ಕನ್ನಡ ರಾಜ್ಯೋ​ತ್ಸವ ಪ್ರಶಸ್ತಿ ನೀಡ​ಲಾ​ಗು​ತ್ತದೆ. ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಸಮಾ​ರಂಭ​ದ​ಲ್ಲಿ ಸಾಂಸ್ಕೃ​ತಿಕ ಕಾರ್ಯ​ಕ್ರಮ ಆಯೋ​ಜಿ​ಸ​ಲಾ​ಗು​ತ್ತಿತ್ತು. ಈ ಆಕರ್ಷಕ ಸಮಾರಂಭದಲ್ಲಿ ಗುರುತಿಸಲ್ಪಟ್ಟ ಸಾಧಕರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾ​ಗು​ತ್ತಿತ್ತು. ನಾಲ್ಕು ವರ್ಷ​ದಿಂದ ಕೋವಿಡ್‌ ಹಾಗೂ ಚುನಾ​ವಣಾ ನೀತಿ ಸಂಹಿ​ತೆ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸ್ಥಗಿತಗೊಂಡಿತು.

ಈ ಬಾರಿಯೂ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ನಡೆ​ಯು​ವು​ದಿಲ್ಲ. ಜಿಲ್ಲಾ​ಡ​ಳಿತ ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಾಹಿತ್ಯ ಮತ್ತು ಸಾಂಸ್ಕೃ​ತಿಕ ವಲಯದಲ್ಲಿ ಸಾಕಷ್ಟುಅಸಮಾಧಾನ ವ್ಯಕ್ತವಾಗಿದ್ದು, ಚರ್ಚೆಗೂ ಗ್ರಾಸ​ವಾ​ಗಿ​ದೆ. ರಾಜ್ಯ ಮಟ್ಟದಲ್ಲಿ ಈ ಪ್ರಶಸ್ತಿಗೆ ತನ್ನದೆ ಆದ ಸ್ಥಾನವಿದೆ. ಗೌರವವೂ ಇದೆ. ನಗದು ಕಾಣಿಕೆ ನೀಡಿ ಪುರಸ್ಕರಿಸಲಾಗುತ್ತದೆ. ಆದ​ರೆ, ಜಿಲ್ಲಾ ಮಟ್ಟದಲ್ಲಿ ಇಂತಹ ನಗದು ಕಾಣಿಕೆಗಳು ಇರುವುದಿಲ್ಲ. ಆದರೆ, ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಹೀಗೆ ನಡೆದುಕೊಂಡು ಬಂದ ಪರಂಪರೆಯನ್ನೇ ಕೈಬಿಡುವುದು ಎಷ್ಟುಸರಿ ಎಂದು ಪ್ರಶ್ನಿಸಿರುವ ಪ್ರಜ್ಞಾವಂತರು ಇದು ಇಡೀ ಜಿಲ್ಲೆಯ ಸಾಂಸ್ಕೃತಿಕ ವಲಯಕ್ಕೆ ಮಾಡಿರುವ ಅಪಮಾನ ಎಂದಿದ್ದಾರೆ.

ರಚ​ನೆ​ಯಾ​ಗದ ಆಯ್ಕೆ ಸಮಿ​ತಿ:

ಪ್ರತಿ ವರ್ಷ ಜಿಲ್ಲಾ ಕನ್ನಡ ರಾಜ್ಯೋ​ತ್ಸವ ಪ್ರಶಸ್ತಿಗೆ ಅರ್ಹ​ರನ್ನು ಗುರು​ತಿ​ಸುವ ಸಲು​ವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿ​ಕಾ​ರಿ​ಗ​ಳನ್ನು ಒಳ​ಗೊಂಡಂತೆ ಜಿಲ್ಲಾ​ಡ​ಳಿತ ಆಯ್ಕೆ ಸಮಿ​ತಿ​ಯನ್ನು ರಚನೆ ಮಾಡು​ತ್ತದೆ. ಈ ಪ್ರಶಸ್ತಿಗಾಗಿ ಸಾಕಷ್ಟುಅರ್ಜಿಗಳು ಸಲ್ಲಿಕೆಯಾಗುತ್ತ​ವೆ. ಈ ಸಮಿತಿ ಜಿಲ್ಲಾ ಕನ್ನಡ ರಾಜ್ಯೋ​ತ್ಸವ ಪ್ರಶ​ಸ್ತಿ​ಗಾಗಿ ವಿವಿಧ ಕ್ಷೇತ್ರ​ಗ​ಳಲ್ಲಿ ಸಾಧನೆ ಮಾಡಿ​ದ​ ಹಾಗೂ ಸಮಾ​ಜಕ್ಕೆ ಕೊಡುಗೆ ನೀಡಿ​ದವ​ರಿಂದ ಅರ್ಜಿ ಆಹ್ವಾ​ನಿ​ಸುತ್ತದೆ. ಇಲ್ಲವೇ, ಅಂತ​ಹ​ವ​ರನ್ನು ಗುರು​ತಿಸಿ ಆಯ್ಕೆ ಮಾಡು​ತ್ತದೆ. ಜಿಲ್ಲಾ​ಡ​ಳಿತ 5 ವರ್ಷ​ಗ​ಳಿಂದ ಆಯ್ಕೆ ಸಮಿ​ತಿ​ಯನ್ನೇ ರಚನೆ ಮಾಡಿ​ಲ್ಲ.

ಈ ಪ್ರಶಸ್ತಿ ಪ್ರದಾನಕ್ಕೆ ಹೆಚ್ಚು ಹಣವೂ ಖರ್ಚಾಗುತ್ತಿರಲಿಲ್ಲ. ಶಾಲು, ಹಾರ ಮತ್ತು ಪ್ರಶಸ್ತಿ ನೀಡುವುದರಿಂದ ಬಹುದೊಡ್ಡ ಹೊರೆಯೂ ಆಗುತ್ತಿರಲಿಲ್ಲ. ಸಾವಿರಾರು ರುಪಾ​ಯಿಗಳನ್ನು ಖರ್ಚು ಮಾಡಿ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವಾಗ ಇಂತಹ ಕಾರ್ಯಕ್ರಮಗಳನ್ನು ಬದಿಗೊತ್ತಿದ್ದೇಕೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಾಜ್ಯೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈಗಲೂ ಜಿಲ್ಲಾ​ಡ​ಳಿತ ಮನಸ್ಸು ಮಾಡಿದ್ದರೆ ರಾಜ್ಯೋತ್ಸವ ದಿನದಂದು ಪ್ರಶಸ್ತಿ ಪ್ರದಾನ ಮಾಡಿ ಕೆಲವರನ್ನು ಗೌರವಿಸಬಹುದು. ಸಾಹಿತಿ, ಕಲಾವಿದರು, ಸಾಮಾಜಿಕ ಕ್ಷೇತ್ರಗಳಲ್ಲಿ ಹಾಗೂ ಇತರೆ ಕ್ಷೇತ್ರಗಳಲ್ಲಿ ಸಾಧನೆ ಗೈದಿರುವ ಹಲವು ಮಹನೀಯರು ಇದ್ದಾರೆ. ಅಂತಹವರನ್ನು ಈ ಸಮಾರಂಭಗಳಲ್ಲಿ ಗೌರವಿಸಿದರೆ ಅವರ ಸಾಮಾಜಿಕ ಸೇವೆಗೆ ಸಂದ ಮನ್ನಣೆ ಇದಾಗಿರುತ್ತದೆ. ಆದರೆ, ಇಂತಹ ನಿರ್ಲಕ್ಷ್ಯ ಏಕೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

ಎಚ್‌.ಡಿ.ಕುಮಾರಸ್ವಾಮಿಗೆ ಸೋಲಿನ ಭಯ ಕಾಡ್ತಿದೆ: ಸಿ.ಪಿ.ಯೋಗೇಶ್ವರ್‌

ಕಲಾವಿದರನ್ನು ಗೌರವಿಸಲು ಇರುವ ಒಂದು ವೇದಿಕೆ ರಾಜ್ಯೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭ. ಪರಂಪರಾನುಗತವಾಗಿ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ಮುರಿಯುವುದು ಸರಿಯಲ್ಲ. ಸಮಾಜಕ್ಕಾಗಿ ಕೊಡುಗೆ ನೀಡುತ್ತಾ ಬಂದಿರುವ ಕಲಾವಿದರು ಹಾಗೂ ಇತರೆ ಕ್ಷೇತ್ರಗಳ ಸಾಧಕರನ್ನು ಸ್ಮರಿಸಲು ಇದೊಂದು ಸದವಕಾಶ. ಇಂತಹ ಅವಕಾಶವನ್ನೂ ಕಿತ್ತುಕೊಂಡರೆ ಸಾಮಾಜಿಕ ಕಳಕಳಿ, ಗೌರವ ಎನ್ನುವುದಕ್ಕೆ ಅರ್ಥವೇ ಇಲ್ಲದಂತಾಗುತ್ತಿತ್ತು. ಆದ್ದ​ರಿಂದ ಪ್ರಶಸ್ತಿ ಪ್ರದಾನ ಪುನರ್‌ ಪ್ರಾರಂಭಿ​ಸ​ಬೇ​ಕು ಅಂತ ಕಸಾಪ ಜಿಲ್ಲಾ ಘಟಕ ಅಧ್ಯ​ಕ್ಷ ಬಿ.ಟಿ.​ನಾ​ಗೇಶ್‌ ತಿಳಿಸಿದ್ದಾರೆ. 

ಜಿಲ್ಲಾ​ಡ​ಳಿತ ಕಳೆದ 2018ರಿಂದಲೂ ಜಿಲ್ಲಾ ಕನ್ನಡ ರಾಜ್ಯೋ​ತ್ಸವ ಪ್ರಶಸ್ತಿ ಪ್ರದಾನ ಮಾಡು​ತ್ತಿಲ್ಲ. ಈ ಬಾರಿಯೂ ರಾಜ್ಯ ಸರ್ಕಾ​ರ​ದಿಂದ ಪ್ರಶಸ್ತಿ ಪ್ರದಾನ ಸಂಬಂಧ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಪ್ರಶಸ್ತಿ ಪ್ರದಾನ ಹೊರತುಪಡಿಸಿ ಉಳಿದಂತೆ ರಾಜ್ಯೋ​ತ್ಸವ ಕಾರ್ಯ​ಕ್ರಮ ನಡೆ​ಯ​ಲಿದೆ ಅಂತ ಅಪರ ಜಿಲ್ಲಾ​ಧಿ​ಕಾರಿ ಜವ​ರೇ​ಗೌಡ ತಿಳಿಸಿದ್ದಾರೆ.  
 

click me!