ಶುದ್ಧ ಕುಡಿಯುವ ನೀರು ಪೂರೈಸದ L&T ಕಂಪನಿಗೆ ₹25 ಲಕ್ಷ ರೂ ದಂಡ

By Kannadaprabha NewsFirst Published Oct 29, 2022, 12:38 PM IST
Highlights

ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಹೊಣೆ ಹೊತ್ತಿರುವ ಎಲ್‌ ಅಂಡ್‌ ಟಿ ಕಂಪನಿಯು ಕಳೆದ ನಾಲ್ಕು ತಿಂಗಳಿಂದ ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ₹ 25 ಲಕ್ಷ ದಂಡ ವಿಧಿಸಿದ ಮಹಾನಗರ ಪಾಲಿಕೆ ಮೇಯರ್‌ ಈರೇಶ ಅಂಚಟಗೇರಿ

ಧಾರವಾಡ (ಅ.29) : ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಹೊಣೆ ಹೊತ್ತಿರುವ ಎಲ್‌ ಅಂಡ್‌ ಟಿ ಕಂಪನಿಯು ಕಳೆದ ನಾಲ್ಕು ತಿಂಗಳಿಂದ ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ .25 ಲಕ್ಷ ದಂಡ ವಿಧಿಸಿದ್ದಲ್ಲದೇ ಈಗಾಗಲೇ ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಡಾವಣೆಗಳಲ್ಲಿ ಶುದ್ಧ ನೀರು ಪೂರೈಸದೇ ಇದ್ದಲ್ಲಿ ಪ್ರತಿ ತಿಂಗಳು .25 ಲಕ್ಷ ದಂಡ ವಿಧಿಸಲಾಗುವುದು ಎಂದು ಮಹಾನಗರ ಪಾಲಿಕೆ ಮೇಯರ್‌ ಈರೇಶ ಅಂಚಟಗೇರಿ ಘೋಷಿಸಿದರು. ಧಾರವಾಡದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಶೂನ್ಯ ವೇಳೆಯಲ್ಲಿ ಎಲ್‌ ಅಂಡ್‌ ಟಿ ಕಂಪನಿ ವಿರುದ್ಧ ಕೇಳಿ ಬಂದ ಪ್ರಶ್ನೆಗಳಿಗೆ ಮೇಯರ್‌ ಅವರು ಮಹಾನಗರ ಪಾಲಿಕೆಯ ಈ ನಿರ್ಣಯವನ್ನು ಘೋಷಿಸಿದರು.

ಚರಂಡಿ ನೀರನ್ನು ಶುದ್ಧೀಕರಣಕ್ಕೆ ಬಂತು ‘ಗಾಲ್‌ ಮೊಬೈಲ್‌’ ಯಂತ್ರ

ಇದಕ್ಕೂ ಮುಂಚೆ ಸಭಾ ನಾಯಕ ತಿಪ್ಪಣ್ಣ ಮಜ್ಜಗಿ, ಹಿರಿಯ ಸದಸ್ಯರಾದ ಶಿವು ಹಿರೇಮಠ, ವಿರೋಧ ಪಕ್ಷದ ನಾಯಕ ದೊರಾಜ್‌ ಮಣಿಕುಂಟ್ಲ ಸೇರಿದಂತೆ ಸರ್ವ ಪಕ್ಷದ ಸದಸ್ಯರು ಒಂದು ರೀತಿಯಲ್ಲಿ ಎಲ್‌ ಅಂಡ್‌ ಟಿ ವಿರುದ್ಧ ಹರಿಹಾಯ್ದರು. ಒಂದೆಡೆ ಕುಡಿಯುವ ನೀರಿನ ನಳದಲ್ಲಿ ಗಟಾರು ನೀರು ಬರುತ್ತಿದೆ. ಇನ್ನೊಂದೆಡೆ ಹುಳುಗಳು ಬಂದಿವೆ. ಮತ್ತೊಂದೆಡೆ ಒಂದು ಗಂಟೆ ಮಾತ್ರ ನೀರು ಬರುತ್ತಿದೆ. ಅವಳಿ ನಗರದಲ್ಲಿ 38 ಕಡೆಗಳಲ್ಲಿ ಕಾಮಗಾರಿ ನಡೆಸುತ್ತಿದ್ದು ವಿಳಂಭವಾದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದು, ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಎಲ್‌ ಅಂಡ್‌ ಟಿ ಕಂಪನಿ ಇಡೀ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೆಡಿಸಿದ್ದು ಕೂಡಲೇ ಕ್ರಮವಾಗಬೇಕು ಎಂದು ಆಗ್ರಹಿಸಿದರು.

ಸಭಾ ನಾಯಕ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಎಲ್‌ ಅಂಡ್‌ ಟಿ ಕಂಪನಿ ಅವರ ನಿರ್ಲಕ್ಷ್ಯದಿಂದ ಕಳೆದ ನಾಲ್ಕು ತಿಂಗಳಿಂದ ಅವಳಿ ನಗರದ ಜನತೆ ಅಶುದ್ಧ ನೀರು ಕುಡಿಯುವಂತಾಗಿದೆ. ನೀರು ಶುದ್ಧ ಆಗುವ ಅಮ್ಮಿನಬಾವಿ ಘಟಕಕ್ಕೆ ಹೋಗಿ ನೋಡಿದಾಗ ಅಲ್ಲಿನ ಅವಾಂತರಗಳು ಬಯಲಾಗಿವೆ. ಅಲ್ಲಿನ ರೋಟೆಟಿಂಗ್‌ ಫಿಲ್ಟರ್‌ ಕೆಟ್ಟು ಹೋಗಿದ್ದು ಅಶುದ್ಧ ನೀರು ಕುಡಿಸುತ್ತಿದ್ದಾರೆ. ಕಂಪನಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹಾಕುವುದಲ್ಲದೇ .1 ಕೋಟಿ ದಂಡ ವಿಧಿಸಬೇಕೆಂದು ಆಗ್ರಹಿಸಿದರು.

ಈ ಮಾತಿಗೆ ಪೂರಕವಾಗಿ ಸರ್ವ ಸದಸ್ಯರು ಧ್ವನಿಗೂಡಿಸಿ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕಂಪನಿ ಪರವಾದ ಅಧಿಕಾರಿಯೂ ಇಲ್ಲ. ನಾಲ್ಕನೇ ಹಂತದ ಅಧಿಕಾರಿಯನ್ನು ಸಾಮಾನ್ಯ ಸಭೆಗೆ ಕಳುಹಿಸಲಾಗಿದೆ. ಆ ವ್ಯಕ್ತಿಗೆ ಕನ್ನಡ ಸಹ ಮಾತನಾಡಲು ಬರುತ್ತಿಲ್ಲ. ಇದು ಸಭೆಗೆ ತೋರಿದ ಅಗೌರವ ಎಂದು ಸದಸ್ಯರು ಎಲ್‌ ಅಂಡ್‌ ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸದಸ್ಯರ ತರಾಟೆಗೆ ಸಮಜಾಯಿಸಿ ನೀಡಿದ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ, ನೀರು ಶುದ್ಧಗೊಳಿಸುವ ರೋಟೆಟಿಂಗ್‌ ಫಿಲ್ಟರ್‌ ದುರಸ್ತಿಗಿದೆ. ಆದರೆ, ಅಶುದ್ಧ ನೀರು ಪೂರೈಕೆ ಮಾಡಿಲ್ಲ. ನೀರನ್ನು ಪರೀಕ್ಷೆ ಮಾಡಿಯೇ ಜನರಿಗೆ ನೀಡಲಾಗುತ್ತಿದೆ. ಈ ಬಗ್ಗೆ ಜನರಲ್ಲಿ ಗೊಂದಲ ಬೇಡ. ಅವಳಿ ನಗರದಲ್ಲಿ 38 ಕಡೆಗಳಲ್ಲಿ ಪೈಪ್‌ಲೈನ್‌ ಸಂಪರ್ಕ ಕಾಮಗಾರಿ ನಡೆಯುತ್ತಿರುವ ಕಾರಣ ಕೆಲವು ಕಡೆಗಳಲ್ಲಿ ಅಶುದ್ಧ ನೀರು ಬಂದಿರಬಹುದು. ಈ ಕಾರಣಕ್ಕಾಗಿ ಕಂಪನಿಗೆ ಈಗಾಗಲೇ ನಾಲ್ಕೂವರೆ ಲಕ್ಷ ದಂಡ ವಿಧಿಸಲಾಗಿದೆ. ಆ ಕಾಮಗಾರಿಯನ್ನು ವಿಳಂಬ ಮಾಡದಂತೆ ಕ್ರಮ ವಹಿಸಲಾಗುವುದು ಎಂದರು.

ಆಯುಕ್ತರ ಸ್ಪಷ್ಟನೆಗೆ ಒಪ್ಪದೇ ಸದಸ್ಯರು ಎಲ್‌ ಅಂಡ್‌ ಟಿ ಕಂಪನಿಗೆ ಭಾರೀ ಮೊತ್ತದ ದಂಡ ವಿಧಿಸಲು ಆಗ್ರಹಿಸಿ ಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು.

ಆಗ, ಮಧ್ಯಪ್ರವೇಶಿಸಿದ ಮೇಯರ್‌ ಅಂಚಟಗೇರಿ, ಸದಸ್ಯರ ದೂರಿನ ಅನ್ವಯ ಹುಬ್ಬಳ್ಳಿ-ಧಾರವಾಡ ನಗರಕ್ಕೆ ಪ್ರತ್ಯೇಕವಾಗಿ ಸದನ ಸಮಿತಿ ರಚನೆ ಮಾಡಿ ನೋಡಲ್‌ ಅಧಿಕಾರಿ ನೇಮಕ ಮಾಡುವುದು, ನಾಲ್ಕು ತಿಂಗಳು ಕಾಲ ನೀರು ಪೂರೈಕೆಯಲ್ಲಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ .25 ಲಕ್ಷ ದಂಡ ಹಾಗೂ ಶುದ್ಧ ನೀರು ಪೂರೈಸುವ ವರಗೂ ಪ್ರತಿ ತಿಂಗಳು .25 ಲಕ್ಷ ದಂಡ ವಿಧಿಸುವುದಾಗಿ ಸ್ಪಷ್ಟಪಡಿಸಿದರು.

ಇದಕ್ಕೂ ಮುಂಚೆ ಮಹಾನಗರ ಪಾಲಿಕೆ ಆರ್ಥಿಕ ಸ್ಥಿತಿಗತಿ ಬಗ್ಗೆ ಆಡಳಿತ ಹಾಗೂ ವಿಪಕ್ಷ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮೇಯರ್‌ ಅವರು ಮೊದಲ ಭಾಷಣದಲ್ಲಿ ಪ್ರತಿ ವಾರ್ಡಗೆ .50 ಲಕ್ಷ ಅನುದಾನ ನೀಡುತ್ತೇವೆಂದು ಹೇಳಿದ್ದು ಇದೀಗ 4ನೇ ಸಾಮಾನ್ಯ ಸಭೆಯಲ್ಲಿ ಅನುದಾನ ಕೊರತೆ ಇದೆ ಎಂದು ಆಯುಕ್ತರು ಹೇಳುತ್ತಿದ್ದಾರೆ. ಇದು ಸಭೆಗೆ ತೋರಿದ ಅಗೌರವ ಎಂದು ವಾಗ್ದಾಳಿ ನಡೆಸಿದ ವಿಪಕ್ಷ ನಾಯಕರು, ಮಹಾನಗರ ಪಾಲಿಕೆ ದಿವಾಳಿ ಎದ್ದಿದೆ ಎನ್ನುವ ಮಾತುಗಳನ್ನು ಹೇಳಿದರು. ಆಗ ಸಭೆಯಲ್ಲಿ ಗದ್ದಲ-ಗೊಂದಲ ಸೃಷ್ಟಿಯಾಯಿತು.

BIG 3: ರಾಯಚೂರು ನಗರ ಪಾಲಿಕೆ ಅಧಿಕಾರಿಗಳೇ, ಶುದ್ಧ ಕುಡಿಯುವ ನೀರು ಕೊಡಿ ಸ್ವಾಮಿ...!

ಆಗ, ಸಭಾ ನಾಯಕ ತಿಪ್ಪಣ್ಣ ಮಜ್ಜಗಿ, ಹಣಕಾಸಿನ ವಿಷಯವನ್ನು ಸಾಮಾನ್ಯ ಸಭೆಗೆ ತಂದು ಚರ್ಚೆ ಮಾಡಿದ್ದು ಸರಿಯಲ್ಲ ಎಂದು ಆಯುಕ್ತರ ವಿರುದ್ಧ ಬೊಟ್ಟು ಮಾಡಿದರು. ಸಾಮಾನ್ಯ ಸಭೆಯಲ್ಲಿಯೇ ಈ ವಿಷಯ ಚರ್ಚೆ ಮಾಡುವುದು ಒಳಿತು ಎಂದು ಆಯುಕ್ತರು ಸ್ಪಷ್ಟಪಡಿಸಿದರು. ಆಡಳಿತ ನಡೆಸುತ್ತಿರುವ ನಾವು ಮಹಾನಗರ ಪಾಲಿಕೆಗೆ ಅನುದಾನ ತರುತ್ತೇವೆ. ದಿವಾಳಿ ಏಳುವ ಮಟ್ಟಿಗೆ ಹೋಗಿಲ್ಲ ಎಂದರು. ಇದಕ್ಕೆ ಪೂರಕವಾಗಿ ಮೇಯರ್‌ ಅವರು ಸದಸ್ಯರ ವಿನಂತಿ ಮೇರೆಗೆ .50 ಲಕ್ಷ ಅನುದಾನ ಘೋಷಿಸಿದ್ದೇನೆ. ತೆರಿಗೆ ವಸೂಲಿಯಲ್ಲಿ ನಾವು ಹಿಂದಿದ್ದು, ತೆರಿಗೆಯಿಂದಲೇ ಪಾಲಿಕೆಗೆ .400 ಕೋಟಿ ಬರಬೇಕಿದೆ. ಆದ್ದರಿಂದ ಅಧಿಕಾರಿಗಳು ಜರೂರು ಕಾರ‍್ಯ ಮಾಡಬೇಕಿದೆ. ಯಾವುದೇ ಕಾರಣಕ್ಕೂ ಸದಸ್ಯರ ಕಾಮಗಾರಿಗೆ ಹಣಕಾಸಿನ ತೊಂದರೆ ಆಗುವಂತಿಲ್ಲ. .10 ಲಕ್ಷದ ಕಾಮಗಾರಿ ವರೆಗೆ ವಲಯ ಹಂತದಲ್ಲಿಯೇ ಅನುಮತಿ ನೀಡುವುದು, .10 ಲಕ್ಷದಿಂದ .1 ಕೋಟಿ ವರೆಗೆ ಕಾರ್ಯನಿರ್ವಾಹಕ ಎಂಜಿನಿಯರ್‌ ಹಂತದಲ್ಲಿ ಹಾಗೂ .1 ಕೋಟಿಗಿಂತ ಹೆಚ್ಚಿನ ಕಾಮಗಾರಿಗಳಿದ್ದರೆ ಸೂಪರಿಟೆಂಡೆಂಟ್‌ ಎಂಜಿನಿಯರ್‌ ಹಂತದಲ್ಲಿ ತೀರ್ಮಾನಗಳನ್ನು ಆಯುಕ್ತರ ಒಪ್ಪಿಗೆ ಮೇರೆಗೆ ತೆಗೆದುಕೊಳ್ಳಬೇಕು. ಬರುವ ಡಿಸೆಂಬರ್‌ 30ರೊಳಗೆ ಕಾಮಗಾರಿಗಳಿಗೆ ಕಾರಾರ‍ಯದೇಶ ನೀಡುವಂತೆಯೂ ಮೇಯರ್‌ ಆಯುಕ್ತರಿಗೆ ಸೂಚನೆ ನೀಡಿದರು.

ಆರೋಗ್ಯ ವಿಮೆ ಭರವಸೆ

ಹುಬ್ಬಳ್ಳಿಯ ರಾಜಕಾಲುವೆ ಸ್ವಚ್ಛಗೊಳಿಸುವುದು, ಕಸದ ವಾಹನಗಳಿಗೆ ತಾಡಪತ್ರಿ ಹಾಕದ ಕಾರಣ ರಸ್ತೆಗುಂಟ ಕಸ ಚೆಲ್ಲುತ್ತಿರುವುದು, ಎಸ್ಸಿ-ಎಸ್ಟಿಜನಾಂಗದ ಬಡ ಜನರು ಮೃತರಾದ ಶೀಘ್ರವಾಗಿ ಅವರ ಶವ ಸಂಸ್ಕಾರಕ್ಕೆ ಹಣ ನೀಡುವುದು, ಕೊಳಚೆ ಪ್ರದೇಶಗಳಲ್ಲೂ ಗ್ಯಾಸ್‌ ಸಂಪರ್ಕ ಕಲ್ಪಿಸುವುದು, ಈ ಹಿಂದಿನ ನೀರಿನ ಬಾಕಿ ಬಿಲ್‌ ಮನ್ನಾ ಮಾಡುವ ಕುರಿತು ಸದಸ್ಯರು ಮೇಯರ್‌ ಗಮನಕ್ಕೆ ತಂದರು. ಈ ಸಮಸ್ಯೆಗಳಿಗೂ ಪರಿಹಾರ ಒದಗಿಸುವ ಕುರಿತು ಮೇಯರ್‌ ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಕೆ ಸದಸ್ಯರಿಗೆ ಆರೋಗ್ಯ ವಿಮೆ ಕುರಿತು ಪಾಲಿಕೆ ಸದಸ್ಯ ಡಾ. ಮಯೂರ ಮೋರೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೇಯರ್‌, ಪಾಲಿಕೆ ಸದಸ್ಯರು ಸೇರಿದಂತೆ ಪತ್ರಕರ್ತರು ಹಾಗೂ ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಮತ್ತೊಮ್ಮೆ ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.

ಸಭೆಯಲ್ಲಿ ಮತ್ತೆ ಮಾರ್ದನಿಸಿದ ಗೌನ್ ಗದ್ದಲ!

ಗೌನ ಧರಿಸುವುದು ಅಥವಾ ಬಿಡುವ ಬಗ್ಗೆ ಸರ್ಕಾರದಿಂದ ಆದೇಶ ಬಂದರೂ ಶುಕ್ರವಾರ ನಡೆದ ಪಾಲಿಕೆಯ ಮುಂದುವರಿದ ಸಭೆಯಲ್ಲಿ ಮತ್ತೆ ಮೇಯರ್‌ ಗೌನ್‌ ಧರಿಸುವ ಬಗ್ಗೆ ಆಡಳಿತ ಹಾಗೂ ವಿಪಕ್ಷಗಳ ಮಧ್ಯೆ ಅನವಶ್ಯಕ ವಾದ-ವಿವಾದಗಳು ನಡೆದವು.

ದುಃಖ ಸೂಚಕ ಗೊತ್ತುವಳಿ ಮಂಡನೆಯಿಂದಲೇ ಶುರುವಾದ ಗದ್ದಲಕ್ಕೆ ಸಭೆಯ ಅರ್ಧ ಸಮಯವೇ ವ್ಯರ್ಥವಾಯಿತು. ವಿರೋಧ ಪಕ್ಷದ ನಾಯಕ ದೊರಾಜ ಮಣಕುಂಟ್ಲಾ, ಮೇಯರ್‌ ಈರೇಶ ಅಂಚಟಗೇರಿ ಅವರಿಗೆ ಗೌನ್‌ ಏಕೆ? ಧರಿಸಿಲ್ಲ ಎಂಬ ಪ್ರಶ್ನೆಗೆ ಕೆಲಸ ಸದಸ್ಯರು ಧ್ವನಿಗೂಡಿಸಿದರು. ಗೌನ್‌ ಧಾರಣೆ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಗೌನ್‌ ಧಾರಣೆ ಮೇಯರ್‌ ವಿವೇಚನೆಗೆ ಬಿಟ್ಟಿರುವ ಆದೇಶ ಪತ್ರ ಆಯುಕ್ತರು ಓದಿದರು. ಈ ಕಾರಣಕ್ಕೆ ಗೌನ್‌ ಧರಿಸಿಲ್ಲ ಎಂದು ಈರೇಶ ಅಂಚಟಗೇರಿ ಉತ್ತರಕ್ಕೆ ಕಾಂಗ್ರೆಸ್‌ ಸದಸ್ಯರು ಸದನದ ಭಾವಿಗೆ ಇಳಿದು ವಿರೋಧಿಸಿದರು.

ಗೌನ್‌ ಧರಿಸದ ನಿಮಗೆ ಈರೇಶ ಅಂಚಟಗೇರಿ ಅನ್ನಬೇಕೋ? ಪೂಜ್ಯರೇ ಅನ್ನಬೇಕೋ?, ಸದಸ್ಯರೇ ಅನ್ನಬೇಕೋ? ನಿಮ್ಮನ್ನು ಏನಂತ ಸಂಬೋಧಿಸಬೇಕೆಂದು ಕಾಂಗ್ರೆಸ್‌ ಸದಸ್ಯ ಪ್ರಕಾಶ ಕುರಹಟ್ಟಿಪ್ರಶ್ನೆಗೆ, ನಿಮ್ಮ ವಿವೇಚನೆಗೆ ಬಿಟ್ಟಿದ್ದೇನೆ ಎಂದು ಮೇಯರ್‌ ಉತ್ತರಿಸಿದರು. ಗೌನ್‌ ವಿಷಯ ಚರ್ಚೆಗೆ ಅವಕಾಶ ನೀಡಲು ಪ್ರತಿಪಕ್ಷ ಸದಸ್ಯರು ಪಟ್ಟು ಹಿಡಿದಾಗ ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶ ಕೊಡುವುದಾಗಿ ಮೇಯರ್‌ ಹೇಳಿದರು. ಇದಕ್ಕೆ ಪ್ರತಿಪಕ್ಷ ಸದಸ್ಯರ ಆಕ್ಷೇಪಕ್ಕೆ, ಆಡಳಿತ ಪಕ್ಷದ ಸದಸ್ಯರ ವಿರೋಧದ ಏರುಧ್ವನಿ ಮಾರ್ದನಿಸಿತು.

ಗೌನ್‌ ತಿರಸ್ಕರಿಸಿದ ಧಾರವಾಡ ಪಾಲಿಕೆ ಮೇಯರ್‌

ನಾವು ವಿಪಕ್ಷದವರು ಮೊದಲು ನಮಗೆ ಮಾತನಾಡಲು ಆದ್ಯತೆ ನೀಡಬೇಕೆಂಬ ಅಮಿತ ಬದ್ರಾಪೂರ ಹೇಳಿಕೆಗೆ ಸಭಾನಾಯಕ ತಿಪ್ಪಣ್ಣ ಮಜ್ಜಗಿ ಹಾಗೂ ಸದಸ್ಯ ಶಿವು ಹಿರೇಮಠ ಸ್ಪಷ್ಟೀಕರಣ ನೀಡಲು ಮುಂದಾದಾಗ ಸಭೆಯಲ್ಲಿ ಗದ್ದಲು ಉಂಟಾಯಿತು. ಸಭೆಯಲ್ಲಿ ಯಾರು? ಏನು? ಹೇಳುತ್ತಿದ್ದಾರೆಂದು ಕೇಳಿಸದ ಕಾರಣ ಮೇಯರ್‌ 10 ನಿಮಿಷ ಸಭೆಯನ್ನು ಮುಂದೂಡಿದರು. ನಂತರ ಸಭೆ ಆರಂಭಿಸಿದರೂ, ಗೌನ್‌ ಗದ್ದಲು ಮುಂದುವರೆಯಿತು. ಇದೇ ವಿಷಯಕ್ಕೆ ಪುನಃ ಪಾಲಿಕೆಯ ಕಲಾಪ ಬಲಿ ಆಯಿತು. ಸರ್ಕಾರಕ್ಕೆ ಪತ್ರ ಬರೆಯುವಾಗ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಪ್ರತಿ ವಿಷಯದ ಕುರಿತು ಸರ್ಕಾರಕ್ಕೆ ಪತ್ರ ಬರೆಯುವುದು ಸರಿಯಲ್ಲ. ಮೇಯರ್‌ ಸ್ಥಾನಕ್ಕೆ ಗೌರವ ಇದೆ. ಘನತೆ ಉಳಿಸಬೇಕೆಂದು ಇಮ್ರಾನ್‌ ಯಲಿಗಾರ ಕೋರಿದರು.

click me!