ವಿಪಕ್ಷ ಉಪನಾಯಕ ಯು.ಟಿ.ಖಾದರ್ ಸ್ವಕ್ಷೇತ್ರ ಉಳ್ಳಾಲವನ್ನು 'ಪಾಕಿಸ್ತಾನ' ಎಂದ ಆರ್ ಎಸ್ ಎಸ್ ಮುಖಂಡರೊಬ್ಬರಿಗೆ 20 ತಿಂಗಳ ಬಳಿಕ ಖಾದರ್ ಪ್ರತ್ಯುತ್ತರ ನೀಡಿದ್ದು, ಉಳ್ಳಾಲದ ಪ್ರವೇಶ ದ್ವಾರದಲ್ಲೇ ಅತೀ ಎತ್ತರದ ರಾಷ್ಟ್ರಧ್ವಜ ಹಾರಿಸಿ ಕೌಂಟರ್ ಕೊಟ್ಟಿದ್ದಾರೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಆ.6) : ವಿಪಕ್ಷ ಉಪನಾಯಕ ಯು.ಟಿ.ಖಾದರ್ ಸ್ವಕ್ಷೇತ್ರ ಉಳ್ಳಾಲವನ್ನು 'ಪಾಕಿಸ್ತಾನ' ಎಂದ ಆರ್ ಎಸ್ ಎಸ್ ಮುಖಂಡರೊಬ್ಬರಿಗೆ 20 ತಿಂಗಳ ಬಳಿಕ ಖಾದರ್ ಪ್ರತ್ಯುತ್ತರ ನೀಡಿದ್ದು, ಉಳ್ಳಾಲದ ಪ್ರವೇಶ ದ್ವಾರದಲ್ಲೇ ಅತೀ ಎತ್ತರದ ರಾಷ್ಟ್ರಧ್ವಜ ಹಾರಿಸಿ ಕೌಂಟರ್ ಕೊಟ್ಟಿದ್ದಾರೆ. ಉಳ್ಳಾಲ(Ullala) 'ಪಾಕಿಸ್ತಾನ'(Pakistana) ಅಂದ ದಿನವೇ ಈ ಯೋಜನೆ ಮೂಲಕ ಉತ್ತರ ಕೊಡಲು ಖಾದರ್(U.T.Khadar) ಪ್ರತಿಜ್ಞೆ ಮಾಡಿದ್ದರಂತೆ. ಹೀಗಾಗಿ ಮಂಗಳೂರಿ(Mangaluru)ನ ಉಳ್ಳಾಲ ಪ್ರವೇಶಿಸೋ ಹೆಬ್ಬಾಗಿಲಲ್ಲೇ ರಾಷ್ಟಧ್ವಜ(National Flag) ಹಾರಿಸಿ ಖಾದರ್ ತಿರುಗೇಟು ಕೊಟ್ಟಿದ್ದಾರೆ.
110 ಅಡಿ ಎತ್ತರದಲ್ಲಿ ದಿನದ 24 ಗಂಟೆ ಹಾರುವ ರಾಷ್ಟ್ರಧ್ವಜ ನಿರ್ಮಿಸಿದ್ದು, ಕರ್ನಾಟಕ(Karnataka)ದಲ್ಲೇ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಹಾರಾಡುವ ಅತೀ ಎತ್ತರದ ರಾಷ್ಟ್ರಧ್ವಜ ಇದು ಅಂತ ಹೇಳಲಾಗಿದೆ. ಮಂಗಳೂರಿನ ತೊಕ್ಕೊಟ್ಟು-ಉಳ್ಳಾಲ(Tokkattu-ullala) ರಸ್ತೆಯಲ್ಲಿ ಧ್ವಜ ಸ್ತಂಭ ನಿರ್ಮಿಸಿ ಖಾದರ್ ಪ್ರತ್ಯುತ್ತರ ನೀಡಿದ್ದಾರೆ. 2020ರ ನ.01ರಂದು ಮಂಗಳೂರಿನ ಕಿನ್ಯಾದಲ್ಲಿ ಉಳ್ಳಾಲ ಪಾಕಿಸ್ತಾನ ಎಂದು ಆರ್ ಎಸ್ ಎಸ್ ಮುಖಂಡ(RSS Leader) ಕಲ್ಲಡ್ಕ ಪ್ರಭಾಕರ್ ಭಟ್(Kalladka Prabhakar Bhat) ಹೇಳಿದ್ದರು. ಆದರೆ ಆವತ್ತು ಕಲ್ಲಡ್ಕ ಭಟ್ ಹೇಳಿಕೆಗೆ ಯಾವುದೇ ತೀಕ್ಷ್ಣ ಪ್ರತಿಕ್ರಿಯೆ ನೀಡದೇ ಖಾದರ್ ರಾಷ್ಟ್ರಧ್ವಜದ ಯೋಜನೆ ಹಾಕಿದ್ದರಂತೆ. ಸದ್ಯ 110 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ 20 ಫೀಟ್ ಎತ್ತರ ಮತ್ತು 30 ಫೀಟ್ ಅಗಲದ ರಾಷ್ಟ್ರಧ್ವಜ ಹಾರಾಡಲಿದೆ. ಅಗಸ್ಟ್ 14ರ ಮಧ್ಯರಾತ್ರಿ ಅಧಿಕೃತ ಉದ್ಘಾಟನೆಗೆ ದಿನ ನಿಗದಿಯಾಗಿದೆ.
ಉಳ್ಳಾಲವನ್ನು ಪಾಕಿಸ್ತಾನ ಎಂದ ಕಲ್ಲಡ್ಕ ಪ್ರಭಾಕರ್ ಭಟ್
'ದೇಶದ್ರೋಹದ ಹೇಳಿಕೆಗೆ ದೇಶ ಪ್ರೇಮದ ಮೂಲಕ ಉತ್ತರ ಕೊಟ್ಟಿದ್ದೇವೆ': ಯು.ಟಿ.ಖಾದರ್
ಉಳ್ಳಾಲ 'ಪಾಕಿಸ್ತಾನ' ಎಂದ ಕಲ್ಲಡ್ಕ ಪ್ರಭಾಕರ ಭಟ್ ಗೆ ರಾಷ್ಟ್ರಧ್ವಜ ಹಾಕಿ ಖಾದರ್ ತಿರುಗೇಟು ನೀಡಿದ್ದು, ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ. "ಉಳ್ಳಾಲ ಕ್ಷೇತ್ರದ ರಾಷ್ಟ್ರಧ್ವಜ 110 ಅಡಿ ಎತ್ತರದಲ್ಲಿ ಹಾರುವುದು ಹೆಮ್ಮೆ. ಇದು ನಮ್ಮ ಉಳ್ಳಾಲ ಕ್ಷೇತ್ರದ ದೇಶಪ್ರೇಮ, ಸಹೋದರತೆಯ ಸಂಕೇತ. ದ.ಕ ಜಿಲ್ಲೆಯಲ್ಲೇ ಅತೀ ಹೆಚ್ಚು ಎತ್ತರದಲ್ಲಿ ಹಾರಾಡುವ ಧ್ವಜ ಇದು. ದೇಶದ್ರೋಹದ ಹೇಳಿಕೆಗೆ ದೇಶ ಪ್ರೇಮದ ಮೂಲಕ ಉತ್ತರ ಕೊಟ್ಟಿದ್ದೇವೆ. ಆವತ್ತು ಅವರು ಉಳ್ಳಾಲದ ಬಗ್ಗೆ ಹೇಳಿದಾಗ ಎಲ್ಲಾ ಜಾತಿಯರಿಗೂ ನೋವಾಗಿದೆ. ಆಗಲೇ ನಾನು ಎಲ್ಲರಿಗೂ ಸಮಾಧಾನದಿಂದ ಇರಿ ಎಂದು ಹೇಳಿದ್ದ.
ಉಳ್ಳಾಲಕ್ಕೆ ಖಾದರ್ ನೂತನ ಪ್ರಧಾನಿ, ಹಣವೂ ಬಿಡುಗಡೆ : ಹಿಂಗೆಲ್ಲಾ ಆಯ್ತು..!
ಆದರೆ ಆವತ್ತೇ ನಾನು ಇದಕ್ಕೆ ಸಕಾರಾತ್ಮಕ ಉತ್ತರ ಕೊಡುವ ಯೋಚನೆ ಮಾಡಿದ್ದೆ. ಒಂದೂವರೆ ವರ್ಷದ ಹಿಂದೆಯೇ ಚರ್ಚೆ ಮಾಡಿ, ಅನುದಾನ, ಜಾಗ ನಿಗದಿ ಮಾಡಿದ್ದೆ. ಅದರಂತೆ ಇನ್ಮುಂದೆ ಯಾರೇ ಉಳ್ಳಾಲಕ್ಕೆ ಹೋದರೂ ಅಲ್ಲಿನ ಜನ ಮತ್ತು ಜಾಗದ ಬಗ್ಗೆ ಗೌರವ ಬರಬೇಕು. ಉಳ್ಳಾಲ ಭಾರತದ ಅತ್ಯಂತ ದೇಶಪ್ರೇಮ ಮತ್ತು ಸೌಹಾರ್ದತೆ ಪ್ರದೇಶ ಅಂತ ಎಲ್ಲರಿಗೂ ಮನದಟ್ಟಾಗಲಿ. ಅವರ ಮಾತಿನ ಕಾರಣಕ್ಕಾಗಿಯೇ ನಾನು ಕೂತು ನಿರ್ಧರಿಸಿದೆ. ಯಾರಾದರೂ ಹೇಳಿಕೆ ಕೊಟ್ಟಾಗ ಪ್ರತಿ ಹೇಳಿಕೆ ಬದಲು ಇದನ್ನು ಮಾಡಿದೆ.
ನಮ್ಮ ಜಿಲ್ಲೆಯವರಿಗೆ ಈ ತಪ್ಪು ಅಭಿಪ್ರಾಯ ಇರುವಾಗ ಇದು ಅಗತ್ಯ ಇತ್ತು. ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆ ಕಾರಣಕ್ಕೂ ಇದು ಕಣ್ಣು ತೆರೆಸುವ ಕೆಲಸ. ಇದನ್ನ ಗೌಪ್ಯವಾಗಿಟ್ಟುಕೊಂಡೇ ನಾನು ಈ ಕೆಲಸ ಮಾಡಿದೆ. ಈ ಧ್ವಜ 110 ಫೀಟ್ ನಲ್ಲಿ ಹಾರಾಡಿದಾಗ ದೇಶ ಪ್ರೇಮ ಬರುತ್ತೆ. ಗ್ರಾಮೀಣ ಭಾಗದಲ್ಲಿ ಇಷ್ಟು ಎತ್ತರದ ರಾಷ್ಟ್ರ ಧ್ವಜ ಇದೇ ಮೊದಲು ಅಂದುಕೊಳ್ತೇನೆ. ಎರಡು ವರ್ಷಗಳ ಕಾಲ ನಿರ್ಮಾಣ ಸಂಸ್ಥೆಯೇ ಅದರ ನಿರ್ವಹಣೆ ಮಾಡುತ್ತೆ. ಪಾಕಿಸ್ತಾನ ಹೇಳಿಕೆ ಕೊಟ್ಟ ಹಿರಿಯರು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಹೀಗೆ ಧ್ವಜ ಹಾರಿಸಿ ದೇಶ ಪ್ರೇಮ ತೋರಿಸಲಿ ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಗೂ ಖಾದರ್ ಸವಾಲೆಸೆದಿದ್ದಾರೆ.