ರೋಗಿಯ ಸ್ಥಿತಿ ತೀವ್ರ ಗಂಭೀರವಾಗಿತ್ತು. ತೀವ್ರ ನಿಗಾ ಘಟದಲ್ಲೇ ಇದ್ದ. ಬಳಿಕ ಬೇರೆಡೆ ಶಿಫ್ಟ್ ಮಾಡಲಾಯಿತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆಯೇ ಹೊರತು, ವಿದ್ಯುತ್ ಕೊರತೆಯಿಂದಾದ ಸಾವಲ್ಲ ಎಂದು ಸ್ಪಷ್ಟಪಡಿಸಿದ ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ
ಬಳ್ಳಾರಿ(ಸೆ.16): ಆಕ್ಸಿಜನ್ ಕೊರತೆಯಿಂದ ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿ ಬುಧವಾರ ಇಬ್ಬರು ರೋಗಿಗಳು ಮೃತಪಟ್ಟಿರುವ ಘಟನೆ ತೀವ್ರ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ, ಇದೇ ವಾರ್ಡ್‌ನಲ್ಲಿದ್ದ ಮತ್ತೊಬ್ಬ ರೋಗಿ ಸಾವಿಗೀಡಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಳ್ಳಾರಿ ತಾಲೂಕಿನ ಜೋಳದರಾಶಿ ಗ್ರಾಮದ ಮನೋಜ್ (18) ಮೃತಪಟ್ಟ ಯುವಕ. ‘ವಾರ್ಡ್‌ನಲ್ಲಿ ಆಗಾಗ್ಗೆ ವಿದ್ಯುತ್ ಸ್ಥಗಿತವಾಗುತ್ತಿತ್ತು. ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ಕೆಲಗಂಟೆಗಳ ಕಾಲ ವಿದ್ಯುತ್ ಇರಲಿಲ್ಲ. ಜೊತೆಗೆ ಸಿಬ್ಬಂದಿ ಸಹ ನಿರ್ಲಕ್ಷ್ಯ ವಹಿಸಿದರು. ಹೀಗಾಗಿ ಮನೋಜ್ ಮೃತ ಪಟ್ಟಿದ್ದಾನೆ’ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಚೇಳು ಕಡಿತದಿಂದ ಸೆ.6ರಂದು ಮನೋಜ್ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮನೋಜ್‌ನ ಆರೋಗ್ಯ ಚೇತರಿಕೆ ಕಾಣದ್ದರಿಂದ ವೆಂಟಲೇಟರ್ ಅಳವಡಿಸಲಾಗಿತ್ತು. ಆದರೆ, ವಿಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ 6ರಿಂದ 10 ಗಂಟೆವರೆಗೆ ವಿದ್ಯುತ್ ಸ್ಥಗಿತದಿಂದ ವೆಂಟಲೇಟರ್ ಕೆಲಸ ಮಾಡದೆ ಮನೋಜ್ ಆರೋಗ್ಯ ಸ್ಥಿತಿ ಮತ್ತಷ್ಟು ಉಲ್ಬಣಗೊಂಡು ಬುಧವಾರ ರಾತ್ರಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
undefined
ಬಳ್ಳಾರಿ: ವಿಮ್ಸ್‌ನಲ್ಲಿ ಕರೆಂಟ್ ಪ್ರಾಬ್ಲಮ್‌ಗೆ ಎರಡು ಜೀವಗಳು ಬಲಿ, ಈ ಸಾವಿಗೆ ಹೊಣೆ ಯಾರು?
ಸಾವಿಗೆ ಬೇರೆ ಕಾರಣ:
ಆದರೆ ಕುಟುಂಬಸ್ಥರ ಆರೋಪವನ್ನು ಅಲ್ಲಗಳೆದಿರುವ ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ, ಮನೋಜ್ ಚೇಳು ಕಡಿತದಿಂದ ದಾಖಲಾಗಿಲ್ಲ. ಆತನ ಪೋಷಕರು ಹೇಳುತ್ತಿರುವುದು ಶುದ್ಧ ಸುಳ್ಳು. ವಿಷ ಸೇವನೆಯಿಂದ ದಾಖಲಾಗಿದ್ದರು. ರೋಗಿಯ ಸ್ಥಿತಿ ತೀವ್ರ ಗಂಭೀರವಾಗಿತ್ತು. ತೀವ್ರ ನಿಗಾ ಘಟದಲ್ಲೇ ಇದ್ದ. ಬಳಿಕ ಬೇರೆಡೆ ಶಿಫ್ಟ್ ಮಾಡಲಾಯಿತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆಯೇ ಹೊರತು, ವಿದ್ಯುತ್ ಕೊರತೆಯಿಂದಾದ ಸಾವಲ್ಲ ಎಂದು ಸ್ಪಷ್ಟಪಡಿಸಿದರು.
ವಿಮ್ಸ್‌ನಲ್ಲಿ ಬುಧವಾರ ಇಬ್ಬರು ರೋಗಿಗಳು ಸಾವಿಗೀಡಾಗಿರುವ ಕುರಿತು ಮಾಹಿತಿ ಪಡೆದಿರುವೆ. ವಿದ್ಯುತ್ ಸಮಸ್ಯೆಯಿಂದ ಆಗಿರುವ ಸಾವಲ್ಲ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ವಿದ್ಯುತ್ ಸ್ಥಗಿತದ ಬಳಿಕವೂ 2 ಗಂಟೆಗಳ ಕಾಲ ವೆಂಟಲೇಟರ್ ಕಾರ್ಯ ನಿರ್ವಹಿಸುತ್ತದೆ. ಯುವಕ ಮನೋಜ್ ಸಾವು ಕುರಿತು ಮಾಹಿತಿ ಪಡೆದಿದ್ದೇನೆ. ಬೇರೆ ಕಡೆ ಶಿಫ್ಟ್ ಮಾಡಿದಾಗ ಮೃತಪಟ್ಟಿದ್ದಾನೆ. ಡಿಎಚ್‌ಒ ನೇತೃತ್ವದಲ್ಲಿ ಸಮಿತಿ ರಚಿಸಿ ಸಮಗ್ರ ವರದಿ ನೀಡುವಂತೆ ಸೂಚಿಸಿದ್ದೇನೆ. ಸರ್ಕಾರಕ್ಕೆ ವರದಿ ಕಳಿಸಿಕೊಡುವೆ ಅಂತ ಬಳ್ಳಾರಿ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ತಿಳಿಸಿದ್ದಾರೆ.