ತುಮಕೂರು ಜಿಲ್ಲೆಗೆ ಮೆಟ್ರೋ ರೈಲು ತರುವ ಯೋಜನೆ ನಮ್ಮ ಸರ್ಕಾರದ ಮುಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ತುಮಕೂರು (ಜು.30): ಮಹಾನಗರಪಾಲಿಕೆ ತುಮಕೂರು ಒಳಗೊಂಡಂತೆ, ಜಿಲ್ಲೆಯ ವಿವಿಧ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 276 ಸಂಖ್ಯೆಯ ಪೌರ ಕಾರ್ಮಿಕರನ್ನು ವಿಶೇಷ ನೇರ ನೇಮಕಾತಿಯಡಿ ಕಾಯಂಗೊಳಿಸಲಾಗುತ್ತಿದ್ದು, ಈ ಪೈಕಿ ಇಂದು ಜಿಲ್ಲೆಯ 208 ಕಾರ್ಮಿಕರಿಗೆ ನೇಮಕಾತಿ ಆದೇಶಪತ್ರ ವಿತರಿಸುತ್ತಿರುವುದು ಸಂತಸ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರಪಾಲಿಕೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ, ಮಹಾನಗರಪಾಲಿಕೆಯ ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಆದೇಶ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ದಾಖಲಾತಿಗಳನ್ನು ಸಲ್ಲಿಸದಿರುವ 68 ಪೌರ ಕಾರ್ಮಿಕರಿಗೆ ನೇಮಕಾತಿ ಪತ್ರ ನೀಡುವುದು ಬಾಕಿ ಇದ್ದು, ಸಿಂಧುತ್ವ ಹಾಗೂ ಇತರೆ ಪ್ರಮಾಣ ಪತ್ರಗಳನ್ನು ಸಲ್ಲಿಸುವ ಪೌರ ಕಾರ್ಮಿಕರಿಗೆ ಮುಂದಿನ ದಿನಗಳಲ್ಲಿ ಕಾಯಂ ಮಾಡಲಾಗುವುದು ಎಂದರು. ಸಮಾಜದ ಕೆಳಹಂತದಲ್ಲಿದ್ದುಕೊಂಡು ಸಮಾಜಕ್ಕಾಗಿ ದುಡಿಯುವ ಜನರೇ ಪೌರಕಾರ್ಮಿಕರು. ನಗರ ಮತ್ತು ಪಟ್ಟಣ ಸ್ವಚ್ಛತಾ ಕಾರ್ಯದಲ್ಲಿ ಯಾವುದೇ ಕೀಳರಿಮೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ, ನಾವುಗಳು ಈ ಕೆಲಸವನ್ನು ಮಾಡಬೇಕೆ ಅಥವಾ ಮಾಡಬಾರದೆ ಎನ್ನುವಂತಹ ಯಾವುದೇ ಭಾವನೆಗಳಿಲ್ಲದೆ, ನಗರವನ್ನು ಸ್ವಚ್ಛವಾಗಿಡುವುದಕ್ಕೆ ತಮ್ಮನ್ನು ತಾವು ಮುಡಿಪಾಗಿಟ್ಟಿರುವ ಪೌರಕಾರ್ಮಿಕರನ್ನು ವಿಶೇಷವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ಹವಾಮಾನ ಆಧಾರಿತ ಬೆಳೆ ಬಗ್ಗೆ ಜಾಗೃತಿ ಮೂಡಿಸಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ
ಜಿಲ್ಲೆಯ ತುಮಕೂರು ಪಾಲಿಕೆಯ ಸುಮಾರು 121 ಪೌರ ಕಾರ್ಮಿಕರಿಗೆ ಒಂದು ಹೊಸ ಜೀವನ ಆರಂಭವಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. ಅದರಲ್ಲೂ ವಿಶೇಷವಾಗಿ ಪಾಲಿಕೆಯ 79 ಜನ ಇಂದು ಸಿಂಧುತ್ವ ಪ್ರಮಾಣ ಹಾಗೂ ಎಲ್ಲಾ ಬೇಕಾದಂತಹ ಕಾಗದ ಪತ್ರಗಳನ್ನು ಕೊಟ್ಟು ಅವರ ನೌಕರಿಯನ್ನು ಕಾಯಂ ಮಾಡುವಂತಹ ಆದೇಶವನ್ನು ನಾವಿಂದು ನೀಡುತ್ತಿದ್ದೇವೆ. ಬಹುಶಃ ಇಂದು ಈ ಪೌರ ಕಾರ್ಮಿಕರ ಜೀವನದಲ್ಲಿ ಹೊಸ ಬದಲಾವಣೆಯಾಗಿದೆ. ಬೆಂಗಳೂರು ನಗರ ಇಂದು ಇಡೀ ಏಷ್ಯಾಖಂಡದಲ್ಲಿಯೇ ಅತಿವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಇಡೀ ವಿಶ್ವಕ್ಕೆ ಪರಿಚಯ ಇರುವಂತಹ ನಗರ ಬೆಂಗಳೂರು. ಪ್ರಪಂಚದ ಮೂಲೆ ಮೂಲೆಗಳಿಂದ ಜನರು ಬೆಂಗಳೂರಿನಲ್ಲಿ ಹೂಡಿಕೆ ಮಾಡಿದ್ದಾರೆ. ಇಂತಹ ನಗರ ಬಹಳ ಸುಂದರವಾಗಿರಬೇಕು.
ಬೆಂಗಳೂರನ್ನು ಗಾರ್ಡನ್ ಸಿಟಿ ಆಫ್ ಇಂಡಿಯಾ ಎಂದು ಕರೆಯಲಾಗುತ್ತದೆ. ಇಂತಹ ಉದ್ಯಾನವನದ ನಗರಿಯ ಚರಂಡಿ, ರಸ್ತೆಗಳು ಸ್ವಚ್ಛ ಸುಂದರವಾಗಿರಬೇಕು. ವಿದೇಶದಿಂದ ಬರುವವರಿಗೆ ರಾಜಧಾನಿ ಬೆಂಗಳೂರು ಸುಂದರವಾಗಿ ಕಾಣಬೇಕಾದರೆ ಇದಕ್ಕೆ ಪೌರಕಾರ್ಮಿರ ಕೊಡುಗೆ ಅಪಾರವಾಗಿದೆ. ಅಂದಾಜು 40,000 ಪೌರಕಾರ್ಮಿಕರು ಬೆಂಗಳೂರು ನಗರವನ್ನು ಸ್ವಚ್ಛವಾಗಿಡಲು ಹಗಲಿರುಳು ಶ್ರಮಿಸುತ್ತಾರೆ ಎಂದು ಅವರು ತಿಳಿಸಿದರು. ತುಮಕೂರು ಇಂದು ಒಂದು ಪ್ರತಿಷ್ಠಿತ ಮಹಾನಗರಪಾಲಿಕೆಯಾಗಿ ಪರಿವರ್ತನೆಗೊಂಡಿದೆ. ವಸಂತನರಸಾಪುರ ಕೈಗಾರಿಕಾ ಎಸ್ಟೇಟ್ ಬಹಳ ದೊಡ್ಡದಾಗಿ ಬೆಳೆಯುತ್ತಿದ್ದು, ಇಲ್ಲಿ 4 ಲಕ್ಷ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ನಿಟ್ಟೂರು ಎಚ್.ಎ.ಎಲ್. ಫ್ಯಾಕ್ಟರಿಯಲ್ಲಿ ಈಗಾಗಲೇ ಆರೂವರೆ ಸಾವಿರ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಈ ಮಂದಿ ತುಮಕೂರಿನಲ್ಲಿ ನೆಲೆಸುವ ಸಾಧ್ಯತೆ ಬಹಳಷ್ಟಿರುತ್ತದೆ. ಆದುದರಿಂದ ತುಮಕೂರು ನಗರವನ್ನು ವ್ಯವಸ್ಥಿತವಾಗಿ ಬೆಳೆಸುವ ಯೋಜನೆ ರೂಪಿಸಬೇಕಾಗುತ್ತದೆ. ಇನ್ನೆರಡು ಮೂರು ತಿಂಗಳಲ್ಲಿ 2 ರಿಂದ 3 ಸಾವಿರ ನಿವೇಶನಗಳನ್ನು ಹೆಚ್ಚಿಸಿ ಸಾರ್ವಜನಿಕರಿಗೆ ಹಂಚಬೇಕಾಗಿದೆ. ಹಿಂದೆ ಕುಡಿಯುವ ನೀರಿನ ಸಮಸ್ಯೆ ಇತ್ತು. ಆದರೆ ಇಂದು ಹೇಮಾವತಿ ನೀರಿನ ಹರಿಯುವಿಕೆಯಿಂದ ನೀರಿನ ಸಮಸ್ಯೆ ಬಗೆಹರಿದಿದೆ. ತುಮಕೂರು ಜಿಲ್ಲೆಗೆ ಮೆಟ್ರೋ ರೈಲು ತರುವ ಯೋಜನೆ ನಮ್ಮ ಸರ್ಕಾರದ ಮುಂದಿದೆ ಎಂದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಪೌರಕಾರ್ಮಿಕರನ್ನು ನಾವು ಗೌರವಯುತವಾಗಿ ನಡೆಸಿಕೊಳ್ಳುವ ಕುರಿತು ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಮಾಜಿ ಸಚಿವ ಸುಧಾಕರ್
ಪೌರ ಕಾರ್ಮಿಕರು ಕೈಗವಸು, ಶೂ, ಕೋಟು, ಮಾಸ್‌್ಕ, ಏಪ್ರಾನ್, ಮುಂತಾದ ಸುರಕ್ಷತಾ ಪರಿಕರ ಧರಿಸಿ ಕೆಲಸ ಮಾಡಬೇಕು. ಪೌರ ಕಾರ್ಮಿಕರಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಯಾವುದೇ ಸರ್ಕಾರ ಬರಲಿ ನೀಡಬೇಕಾಗುತ್ತದೆ. ಸ್ಲಂ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಾಗುವ ಮನೆಗಳನ್ನು ಬಹುತೇಕ ಪಾಲನ್ನು ಪೌರ ಕಾರ್ಮಿಕರಿಗೆ ಮೀಸಲಿಡಬೇಕೆಂದು ಅವರು ಈ ಸಂದರ್ಭ ಮನವಿ ಮಾಡಿದರು. ಪಾಲಿಕೆ ಆಯುಕ್ತೆ ಅಶ್ವಿಜ ಬಿ.ವಿ ಮಾತನಾಡಿದರು. ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿ.ಪಂ. ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್‌ವಾಡ್, ಮತ್ತಿತರರು ಉಪಸ್ಥಿತರಿದ್ದರು.