ಹವಾಮಾನ ಆಧಾರಿತ ಬೆಳೆಗಳನ್ನು ಬೆಳೆಯುವ ಕುರಿತು ರೈತರಿಗೆ ಅಗತ್ಯ ಮಾಹಿತಿ ನೀಡುವ ಮೂಲಕ ಬೆಳೆ ಪದ್ಧತಿಯಲ್ಲಿ ಬದಲಾವಣೆ ತರುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಮಂಡ್ಯ (ಜು.29): ಹವಾಮಾನ ಆಧಾರಿತ ಬೆಳೆಗಳನ್ನು ಬೆಳೆಯುವ ಕುರಿತು ರೈತರಿಗೆ ಅಗತ್ಯ ಮಾಹಿತಿ ನೀಡುವ ಮೂಲಕ ಬೆಳೆ ಪದ್ಧತಿಯಲ್ಲಿ ಬದಲಾವಣೆ ತರುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರೈತರ ಕುಂದುಕೊರತೆ ಸಭೆ ನೇತೃತ್ವ ವಹಿಸಿ ಮಾತನಾಡಿ, ಅತಿವೃಷ್ಟಿಹಾಗೂ ಅನಾವೃಷ್ಟಿಗೆ ತುತ್ತಾಗಿ ರೈತರ ಬೆಳೆ ಹಾಳಾಗುತ್ತಿದೆ.
ಹಾಗಾಗಿ ಹವಾಮಾನ ಬದಲಾವಣೆಗೆ ತಕ್ಕಂತೆ ರೈತರು ಬೆಳೆ ಬೆಳೆಯಬೇಕು. ಇದಕ್ಕೆ ಸಂಬಂಧಪಟ್ಟಂತೆ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಕಾಲಕಾಲಕ್ಕೆ ಮಾಹಿತಿ ಒದಗಿಸಬೇಕು ಎಂದರು. ಕಬ್ಬು ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಶಾಸಕಾಂಗ ಸಭೆಯಲ್ಲಿ ಚರ್ಚಿಸಲಾಗುವುದು. ಬಹುವಾರ್ಷಿಕ ಬೆಳೆಗಳಾದ ತೆಂಗು, ಅಡಕೆ ಹಾಗೂ ರಸಗೊಬ್ಬರಗಳ ವಿತರಣೆಯಲ್ಲಿ ಎಲ್ಲೂ ಲೋಪ ಉಂಟಾಗದಂತೆ ಎಚ್ಚರ ವಹಿಸುವಂತೆ ತಿಳಿಸಿದರು. ಇಂದಿನ ರೈತರ ಕುಂದು ಕೊರತೆ ಸಭೆಯಲ್ಲಿ ಚರ್ಚಿಸಲಾಗಿರುವ ಎಲ್ಲ ವಿಷಯವನ್ನು ಮುಂದಿನ ಶಾಸಕಾಂಗ ಸಭೆಯಲ್ಲಿ ರೈತ ಹಾಗೂ ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ಬಗ್ಗೆ ಚರ್ಚಿಸುವುದಾಗಿ ಹೇಳಿದರು.
ಕೇರಳ ಮಾದರಿಯಲ್ಲಿ ಗ್ರಾಪಂಗಳ ಅಭಿವೃದ್ಧಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ
ರೈತರ ಸಾಲ ಕಟಾವು ಮಾಡುವಂತಿಲ್ಲ: ರೈತರ ಖಾತೆಗೆ ವಿವಿಧ ಯೋಜನೆಯಡಿ ಜಮೆಯಾಗುವ ಸಹಾಯಧನ ಹಾಗೂ ಸಾಮಾಜಿಕ ಪಿಂಚಣಿ ಹಣದಲ್ಲಿ ರೈತರ ಸಾಲದ ಹಣವನ್ನು ಬ್ಯಾಂಕ್‌ನವರು ಕಟಾವು ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು. ಸಭೆಯಲ್ಲಿದ್ದ ರೈತರು ತಮ್ಮ ಮಕ್ಕಳ ವಿದ್ಯಭ್ಯಾಸದ ಸಾಲಕ್ಕೆ ಸಂಬಂಧಿಸಿದಂತೆ ಸಿವಿಲ್ ಸ್ಕೋರ್‌ಗಳನ್ನು ಲೆಕ್ಕ ಮಾಡುವಾಗ ಬೆಳೆ ಸಾಲವನ್ನು ಲೆಕ್ಕಚಾರ ಮಾಡುತ್ತಾರೆ. ಸಾಲ ದೊರಕುವುದು ಕಷ್ಟಕರವಾಗುತ್ತಿದೆ ಎಂದಾಗ, ಈ ಕುರಿತು ಡಿಎಲ್‌ಬಿಸಿ ಸಭೆಯಲ್ಲಿ ಚರ್ಚಿಸಿ ಪ್ರಸ್ತಾವನೆಯನ್ನು ರಾಜ್ಯಮಟ್ಟಕ್ಕೆ ಕಳುಹಿಸಿಕೊಡಲಾಗುವುದು ಎಂದರು. ರೈತರ ಮಾರುಕಟ್ಟೆಯನ್ನು ದಲ್ಲಾಳಿ ಮುಕ್ತ ಮಾರುಕಟ್ಟೆಮಾಡಿ ರೈತರಿಂದ ಸರ್ಕಾರವೇ ಖರೀದಿ ಮಾಡುವಂತೆ ರೈತ ಮುಖಂಡರು ಮನವಿ ಮಾಡಿದರು.
ತಾಂತ್ರಿಕ ಸಿಬ್ಬಂದಿ ಕೊರತೆ ಇಲ್ಲ: ಮೈಷುಗರ್ ಕಾರ್ಖಾನೆಯಲ್ಲಿ ತಾಂತ್ರಿಕ ಸಿಬ್ಬಂದಿ ಕೊರತೆ ಇಲ್ಲ. ಮೆಕ್ಯಾನಿಕಲ್ ಇಂಜಿನಿಯರ್, ಚೀಫ್ ಕೆಮಿಸ್ಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೊಂದಿಗೆ ಆರ್.ಬಿ.ಟೆಕ್ ಸಂಸ್ಥೆಯವರು ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಸಕ್ಕರೆ ಕಾರ್ಖಾನೆಗೆ ಟರ್ಬೈನ್ ಜುಲೈ 26 ರಂದು ಸರಬರಾಜು ಆಗಬೇಕಿದ್ದು, ಅವರಿಗೆ ಅಂತಿಮ ಗಡುವು ನೀಡಲಾಗಿದೆ. ಜುಲೈ 31 ರಂದು ಸರಬರಾಜು ಆಗಲಿದೆ. ಸಕ್ಕರೆ ಕಾರ್ಖಾನೆಗಳು ರೈತರಿಂದ ಖರೀದಿಸುವ ಕಬ್ಬಿಗೆ ನಿಗದಿತ ಅವಧಿಯಲ್ಲಿ ಹಣ ನೀಡಬೇಕು. ಕಬ್ಬಿಗೆ ಹೊಸ ದರ ನಿಗದಿಯಾದಲ್ಲಿ ವ್ಯತ್ಯಾಸವನ್ನು ನಂತರ ಪಾವತಿಸಬಹುದು ಎಂದರು. ರೈತರು ಬೆಳೆದ ಬೆಳೆ ಕಾಡು ಪ್ರಾಣಿಗಳಿಂದ ಹಾನಿಯಾಗಿರುವುದು ವರದಿಯಾಗುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ಕಾಡು ಪ್ರಾಣಿಗಳು ರೈತರು ಬೆಳೆದ ಬೆಳೆಗೆ ಲಗ್ಗೆ ಹಾಕದಂತೆ ಎಚ್ಚರ ವಹಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.
Mandya: ಹೆದ್ದಾರಿಗೆ ಉರುಳುತ್ತಿರುವ ವಿದ್ಯುತ್ ಟವರ್‌ಗಳು: ಪ್ರಾಧಿಕಾರದವರ ಭಂಡತನ
ಪೌತಿ ಖಾತೆ ಆಂದೋಲನ: ತಾಲೂಕು ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ವಿಳಂಬವಾಗುತ್ತಿದೆ ಎಂದು ಸಾರ್ವಜನಿಕರಿಂದ ಸಾಕಷ್ಟುದೂರು ಕೇಳಿಬಂದಿದ್ದು, ವಿಶೇಷವಾಗಿ ಹೋಬಳಿ ಮಟ್ಟದಲ್ಲಿ ಬೃಹತ್ ಪೌತಿಖಾತೆ ಆಂದೋಲನವನ್ನು ಆಯೋಜಿಸಲು ಯೋಜಿಸಲಾಗುವುದು. ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಅಧಿಕಾರಿ, ಪಿಡಿಒಗಳು ಕಡ್ಡಾಯವಾಗಿ ಗ್ರಾಮದಲ್ಲೇ ಇದ್ದು, ಸಾರ್ವಜನಿಕರನ್ನು ಅಲೆದಾಡಿಸದೆ ಅವರ ಸಮಸ್ಯೆ ಪರಿಹರಿಸಬೇಕು ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಎಂ.ಪಿ.ಕೃಷ್ಣಕುಮಾರ್ ಹಾಗೂ ವಿವಿಧ ಸಂಘಟನೆಯ ರೈತ ಮುಖಂಡರು ಹಾಜರಿದ್ದರು.