ಸೋಸಲೆ ಮಠದ ನಿರ್ಗಮಿತ ಶ್ರೀಗಳ ಮೇಲೆ ಕಳವು ಆರೋಪ

By Kannadaprabha NewsFirst Published Oct 7, 2020, 11:35 AM IST
Highlights

ಮಠಕ್ಕೆ ಸೇರಿದ ದೇವರ ಮೂರ್ತಿ ವಿದೇಶಕ್ಕೆ ಮಾರಾಟ, ದೂರು| ಮಠದ ಹಿಂದಿನ ಗುರುಗಳಾದ ವಿದ್ಯಾ ಮನೋಹರ ತೀರ್ಥರು ಹಾಗೂ ಸೋಸಲೆ ಪ್ರಕಾಶ್‌ ಎಂಬುವರ ಮೇಲೆ ಆರೋಪ| ಮಠದ ಸಾರ್ವಜನಿಕ ಸಂರ್ಪಕಾಧಿಕಾರಿ ಜಿ.ವಿ.ರಾಘವೇಂದ್ರ ನೀಡಿದ ದೂರಿನ್ವಯ ಬಸನಗುಡಿ ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲು|

ಬೆಂಗಳೂರು(ಅ.07): ಬಸನವಗುಡಿ ಸಮೀಪ ಶ್ರೀ ವ್ಯಾಸರಾಜ ಮಠಕ್ಕೆ (ಸೋಸಲೆ) ಸೇರಿದ ಕೆಲವು ಪ್ರಾಚೀನ ದೇವರ ಮೂರ್ತಿಗಳು ಹಾಗೂ ಆಭರಣಗಳನ್ನು ನಿರ್ಗಮಿತ ಸ್ವಾಮೀಜಿಗಳು ಕಾನೂನು ಬಾಹಿರವಾಗಿ ವಿದೇಶಕ್ಕೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿದೆ.

ಮಠದ ಹಿಂದಿನ ಗುರುಗಳಾದ ವಿದ್ಯಾ ಮನೋಹರ ತೀರ್ಥರು ಹಾಗೂ ಸೋಸಲೆ ಪ್ರಕಾಶ್‌ ಎಂಬುವರ ಮೇಲೆ ಆರೋಪ ಬಂದಿದ್ದು, ಮಠದ ಸಾರ್ವಜನಿಕ ಸಂರ್ಪಕಾಧಿಕಾರಿ ಜಿ.ವಿ.ರಾಘವೇಂದ್ರ ನೀಡಿದ ದೂರಿನ್ವಯ ಬಸನಗುಡಿ ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೋಸಲೆ ಮಠದ ಸ್ವಾಮೀಜಿ ವಿಗ್ರಹ ಬದಲು ಮಾಡಿದರೆ? ಎಫ್ ಐಆರ್ ದಾಖಲು

ಏನಿದು ಆರೋಪ?

2017ರ ಜು.2ರಂದು 41ನೇ ಪೀಠಾಧಿಪತಿ ವಿದ್ಯಾ ಶ್ರೀಶ ತೀರ್ಥರಿಗೆ ಮಠದ ಆಡಳಿತವನ್ನು ಹಿಂದಿನ ಸ್ವಾಮೀಜಿಗಳಾದ ವಿದ್ಯಾಮನೋಹರ ತೀರ್ಥರು ಹಸ್ತಾಂತರಿಸಿದ್ದರು. ಬಳಿಕ 2017 ಜುಲೈ 3ರಿಂದ 5ರವರೆಗೆ ಮಠಕ್ಕೆ ಸಂಬಂಧಿಸಿದ ಕೆಲವು ದಾಖಲಾತಿಗಳು ಹಾಗೂ ಕೆಲ ಬೆಲೆಬಾಳುವ ಆಭರಣಗಳನ್ನು ವಿದ್ಯಾ ಶ್ರೀಶ ತೀರ್ಥರ ಸುಪರ್ದಿಗೆ ನಿಗರ್ಮಿತ ಶ್ರೀಗಳು ನೀಡಿದ್ದರು. ಆದರೆ ಮಠದ ದಾಖಲೆಗಳಲ್ಲೇ ಉಲ್ಲೇಖವಾಗಿದ್ದ ದೇವರ ವಿಗ್ರಹ ಹಾಗೂ ಒಡವೆಗಳಲ್ಲಿ ವ್ಯತ್ಯಯ ಕಂಡು ಬಂದಿದೆ. ವಿದ್ಯಾ ಮನೋಹರ ತೀರ್ಥರು ಕೆಲವು ಬೆಲೆಬಾಳುವ ಆಭರಣಗಳನ್ನು ಹಸ್ತಾಂತರಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ರಾಘವೇಂದ್ರ ಆರೋಪಿಸಿದ್ದಾರೆ.

ದೇವರ ವಿಗ್ರಹಗಳ ಹಸ್ತಾಂತರ ಸಂದರ್ಭದಲ್ಲಿ ವಿಶ್ವಾಸದಿಂದ ಹೊಸ ಪೀಠಾಧಿಪತಿಗಳು ಪರಿಶೀಲಿಸದೆ ಸ್ವೀಕರಿಸಿದ್ದರು. ಹಳೆಯ ಪೀಠಾಧಿಪತಿಗಳು ಸದರಿ ವಸ್ತುಗಳನ್ನು ಹಸ್ತಾಂತರ ಮಾಡುವಾಗ ನಂಬಿಕೆದ್ರೋಹ ಎಸಗಿದ್ದಾರೆ. ವ್ಯಾಸರಾಜಮಠಕ್ಕೆ ಪುರಾತನ ವಿಗ್ರಹಗಳನ್ನು ವಿದೇಶಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದಾರೆ. ಆರೋಪಿತರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ರಾಘವೇಂದ್ರ ಒತ್ತಾಯಿಸಿದ್ದಾರೆ.
ವ್ಯಾಸರಾಜ ಮಠದ ಆಭರಣ ನಾಪತ್ತೆ ಪ್ರಕರಣ ಸಂಬಂಧ ಕೆಲವು ದಾಖಲೆಗಳ ಸಲ್ಲಿಕೆ ಸೂಚಿಸಲಾಗಿದೆ. ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್‌ ಪಾಂಡೆ ಅವರು ತಿಳಿಸಿದ್ದಾರೆ. 
 

click me!