ಮಕ್ಕಳ ಕಳ್ಳರೆಂದು ಶಂಕಿಸಿ ಬೆಂಗಳೂರಿನ ಭೂಗರ್ಭ ಇಲಾಖೆ ಅಧಿಕಾರಿಗಳನ್ನ ಥಳಿಸಿದ ಗ್ರಾಮಸ್ಥರು!

By Ravi JanekalFirst Published Sep 27, 2022, 1:54 PM IST
Highlights

 ರಾಜ್ಯಾದ್ಯಂತ ಮಕ್ಕಳ ಕಳ್ಳರ ವದಂತಿ ಹರಡಿದೆ. ಇದರಿಂದ ಯಾರೇ ಅಪರಿಚಿತರು ಹಳ್ಳಿಗಳಿಗೆ ಬಂದರೂ ಅವರನ್ನು ಮಕ್ಕಳ ಕಳ್ಳರೆಂದು ಶಂಕಿಸಿ ಹಲ್ಲೆ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ. ವಿಜಯಪುರದಲ್ಲಿ ಭೂಗರ್ಭ ಅಧಿಕಾರಿಗಳನ್ನೇ ಮಕ್ಕಳ ಕಳ್ಳರೆಂದು ಶಂಕಿಸಿ ಅಧಿಕಾರಗಳ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿರುವ ಘಟನೆ ನಡೆದಿದೆ.

ವಿಜಯಪುರ (ಸೆ.27):  ರಾಜ್ಯಾದ್ಯಂತ ಮಕ್ಕಳ ಕಳ್ಳರ ವದಂತಿ ಹರಡಿದೆ. ಇದರಿಂದ ಯಾರೇ ಅಪರಿಚಿತರು ಹಳ್ಳಿಗಳಿಗೆ ಬಂದರೂ ಅವರನ್ನು ಮಕ್ಕಳ ಕಳ್ಳರೆಂದು ಶಂಕಿಸಿ ಹಲ್ಲೆ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ. ಕೆಲವೆಡೆ ಪೊಲೀಸರನ್ನು ಕೂಡ ನಕಲಿ ಪೊಲೀಸರೆಂದು ಹಲ್ಲೆ ನಡೆದಿವೆ. ಇದರಿಂದ ಈ ವದಂತಿ ಪೊಲೀಸ್ ಇಲಾಖೆಗೆ ತಲೆನೋವಾಗಿದೆ.

ವಿಜಯಪುರದಲ್ಲಿ ಮಕ್ಕಳ ಕಳ್ಳರ ವದಂತಿ, ಅಮಾಯಕರ ಮೇಲೆ ಹಲ್ಲೆ!

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವಿಕೆ ಹೆಚ್ಚಾಗಿದೆ. ವಿಡಿಯೋದಲ್ಲಿನ ಸತ್ಯಾಸತ್ಯೆ ತಿಳಿಯದೇ ಗ್ರಾಮಸ್ಥರು ಅಪರಿಚತರಿಗೆ, ಭಿಕ್ಷುಕರು, ನಿರ್ಗತಿಕರಿಗೆ ಮಾರಣಾಂತಿಕವಾಗಿ ಹಲ್ಲೇ ನಡೆಸುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಸಾಮಾನ್ಯರು ಬಿಡಿ, ಅಧಿಕಾರಿಗಳನ್ನೂ ಕೂಡ ಗ್ರಾಮಸ್ಥರು ಅನುಮಾನದಿಂದ ನೋಡಲಾರಂಭಿಸಿದ್ದಾರೆ. 

ವಿಜಯಪುರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಇಂಥ ಘಟನೆಗಳು ವರದಿಯಾಗಿದ್ದು, ಇದೀಗ ಭೂಗರ್ಭ ಅಧಿಕಾರಿಗಳನ್ನೇ ಮಕ್ಕಳ ಕಳ್ಳರೆಂದು ಶಂಕಿಸಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಇದರಿಂದಾಗಿ ಗ್ರಾಮಗಳಿಗೆ ಅಧಿಕಾರಿಗಳು ಬರಲು ಹಿಂದೇಟು ಹಾಕುವಂತಾಗಿದೆ. 

ಮಕ್ಕಳ ಕಳ್ಳರೆಂದು ಭಾವಿಸಿ ಬೆಂಗಳೂರಿನ ಭೂಗರ್ಭ ಇಲಾಖೆ ಅಧಿಕಾರಿಗಳ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹಿರೇಬೇವನೂರ ತೋಟದಲ್ಲಿ ಸೋಮವಾರ ನಡೆದಿದೆ. ಗ್ರಾಮದ ಸುತ್ತಮುತ್ತ ಖನಿಜದ ನಿಕ್ಷೇಪವಿದೆ ಎಂಬ ಮಾಹಿತಿ ಆಧರಿಸಿ ಬೆಂಗಳೂರಿನಿಂದ ಸಹಾಯಕ ಭೂ ಇಲಾಖೆ ಅಧಿಕಾರಿ ದಿನೋಮನ್‌ ತಮ್ಮ ಸಹಾಯಕರೊಂದಿಗೆ ಇಂಡಿಗೆ ಆಗಮಿಸಿದ್ದರು. ಪಟ್ಟಣದ ಇಬ್ಬರು ಪರಿಚಿತ ಹುಡುಗರೊಂದಿಗೆ ಖಾಸಗಿ ವಾಹನದಲ್ಲಿ ಗ್ರಾಮಕ್ಕೆ ತೆರಳಿ ಮಣ್ಣು ಮಾದರಿ ಸಂಗ್ರಹಿಸುತ್ತಿದ್ದರು.

ಆಗ ಗ್ರಾಮಸ್ಥರು ಪ್ರಶ್ನಿಸಿದಾಗ, ಅಧಿಕಾರಿಗಳು ಸಮರ್ಪಕ ಉತ್ತರ ನೀಡಿಲ್ಲ. ಇದರಿಂದ ಸಂಶಯಗೊಂಡ ಗ್ರಾಮಸ್ಥರು ಐಡಿ ಕಾರ್ಡ್‌, ಇಲಾಖೆಯ ಪತ್ರ ತೋರಿಸುವಂತೆ ಕೇಳಿದ್ದು, ಅಧಿಕಾರಿಗಳು ಸ್ಪಂದಿಸದಿದ್ದಾಗ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಪೊಲೀಸರು ಅಧಿಕಾರಿಗಳನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ ಗೌಪ್ಯತೆ ಕಾಯ್ದುಕೊಳ್ಳಲು ರೈತರಿಗೆ ತಪ್ಪು ಮಾಹಿತಿ ನೀಡಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ. ಗ್ರಾಮಕ್ಕೆ ಬಂದವರು ಭೂಗರ್ಭ ಇಲಾಖೆ ಅಧಿಕಾರಿಗಳು ಎಂದು ತಿಳಿದ ಕೂಡಲೇ ಗ್ರಾಮಸ್ಥರು ಅವರಲ್ಲಿ ಕ್ಷಮೆಯಾಚಿಸಿದ್ದಾರೆ.

ಮಕ್ಕಳ ಕಳ್ಳತನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿ ಸುಳ್ಳು: ಎಸ್ಪಿ ಲೋಕೇಶ ಜಗಲಾಸರ್

ಗಿಡಕ್ಕೆ ಕಟ್ಟಿಯುವಕನಿಗೆ ಥಳಿತ: ಮಕ್ಕಳಕಳ್ಳನೆಂದು ಭಾವಿಸಿ ಅಪರಿಚಿತ ಯುವಕನೊಬ್ಬನನ್ನು ಗ್ರಾಮಸ್ಥರು ಗಿಡಕ್ಕೆ ಕಟ್ಟಿಥಳಿಸಿದ ಘಟನೆ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಬಳಿ ಸಂಭವಿಸಿದೆ. ಅಪರಿಚಿತ ಯುವಕನನ್ನು ಹಿಡಿದು ಗ್ರಾಮಸ್ಥರು ಎಲ್ಲಿಂದ ಬಂದಿರುವಿರಿ? ಎಷ್ಟುಜನ ಬಂದಿರುವಿರಿ ಎಂದು ಪ್ರಶ್ನೆ ಕೇಳಿದ್ದಾರೆ. ಆಗ ಆತ ಸರಿಯಾಗಿ ಉತ್ತರಿಸದಿದ್ದಾಗ ಗಿಡಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ.

click me!