ಮೈಸೂರು : ಶಿಕ್ಷಕರ ಗೃಹ ನಿರ್ಮಾಣ ಸಂಘದಲ್ಲೂ ಅವ್ಯವಹಾರ- ಆರೋಪ

By Kannadaprabha NewsFirst Published Dec 13, 2023, 10:13 AM IST
Highlights

ಲೋಕಾಯುಕ್ತ ದಾಳಿಗೆ ಒಳಗಾದ ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಎಂ.ಎಸ್. ಮಹದೇವಸ್ವಾಮಿ ಅವರು ಅಧ್ಯಕ್ಷರಾಗಿರುವ ಕರ್ನಾಟಕ ರಾಜ್ಯ ಕಾಲೇಜು ಅಧ್ಯಾಪಕರು ಮತ್ತು ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದಲ್ಲೂ ಅವ್ಯವಹಾರ ನಡೆಸಿದ್ದಾರೆ ಎಂದು ಗುರುಕುಲ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಆಯುಕ್ತ ಎ.ಜಿ. ನಂಜಪ್ಪಸ್ವಾಮಿ ದೂರಿದರು.

  ಮೈಸೂರು:  ಲೋಕಾಯುಕ್ತ ದಾಳಿಗೆ ಒಳಗಾದ ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಎಂ.ಎಸ್. ಮಹದೇವಸ್ವಾಮಿ ಅವರು ಅಧ್ಯಕ್ಷರಾಗಿರುವ ಕರ್ನಾಟಕ ರಾಜ್ಯ ಕಾಲೇಜು ಅಧ್ಯಾಪಕರು ಮತ್ತು ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದಲ್ಲೂ ಅವ್ಯವಹಾರ ನಡೆಸಿದ್ದಾರೆ ಎಂದು ಗುರುಕುಲ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಆಯುಕ್ತ ಎ.ಜಿ. ನಂಜಪ್ಪಸ್ವಾಮಿ ದೂರಿದರು.

ಹೀಗೆ ಪತ್ತೆಯಾದ ಅಕ್ರಮ ಸಂಪತ್ತು ಕೂಡ ಸಂಘದಲ್ಲಿನ ಅವ್ಯವಹಾರದಿಂದ ಇವರು ಗಳಿಸಿದ್ದು. ಇವರು, ಪ್ರಾಧ್ಯಾಪಕರಿಗೆ ನಿವೇಶನ ಕೊಡಿಸುವುದಾಗಿ ತಿಳಿಸಿ ವಂಚನೆ ಎಸಗಿದ್ದು, ಸಹಕಾರ ಸಚಿವರು, ಸಹಕಾರ ಇಲಾಖೆ ಹಿರಿಯ ಅಧಿಕಾರಿಗಳು ಮಧ್ಯ ಪ್ರವೇಶಿಸಿ ನಿವೇಶನ ವಂಚಿತರಿಗೆ ದೊರಕಿಸಿಕೊಡಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಎಂ.ಎಸ್. ಮಹದೇವಸ್ವಾಮಿ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದಾಗ ಸುಮಾರು 8 ಕೋಟಿ ರೂ. ಅಕ್ರಮ ಸಂಪತ್ತು ಪತ್ತೆಯಾಗಿದೆ. ಸಂಘದ ಸುಮಾರು 226 ಸದಸ್ಯರಲ್ಲಿ 70 ಮಂದಿಗೆ ನಿವೇಶನ ನೀಡದೇ ವಂಚಿಸಲಾಗಿದೆ. ನಿವೇಶನಗಳನ್ನು ತಮ್ಮ ರಕ್ತ ಸಂಬಂಧಿಗಳು, ಒಬ್ಬರೇ ವ್ಯಕ್ತಿಗೆ ಎರಡು ನಿವೇಶನ ನೀಡುವ ಮೂಲಕ ನಿಜವಾದ ಸದಸ್ಯರನ್ನು ಮೋಸ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಜ್ಯೇಷ್ಠತಾ ಪಟ್ಟಿ ಉಲ್ಲಂಘಿಸಲಾಗಿದೆ. ಅಭಿವೃದ್ಧಿದಾರರು ಅವ್ಯವಹಾರ ನಡೆಸಿದ್ದಾರೆ. ಹೀಗಾಗಿ ಸಂಘದಲ್ಲಿ ಅಕ್ರಮ ನಡೆದಿದೆ. ಈ ಕುರಿತು ತನಿಖೆ ನಡೆಸಬೇಕು ಎಂದೂ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ನಿವೇಶನ ವಂಚಿತರಾದ ಡಾ.ಜಿ.ವಿ. ಭಾರತಿ, ಎಂ. ಬಸವಣ್ಣ, ಪ್ರವೀಣ್ ಕುಮಾರ್ ಮತ್ತು ಡಾ. ಶ್ವೇತಾ ಮಡಪ್ಪಾಡಿ ಮೊದಲಾದವರು ಇದ್ದರು.

click me!