ಮಾಧವಮಂತ್ರಿ ಅಣೆಕಟ್ಟೆ ಹಿನ್ನೀರು ನದಿ ದಡದಲ್ಲಿ ಸ್ಥಾಪನೆಗೊಂಡು, ತಲಕಾಡಿಗೆ ಕುಡಿಯುವ ನೀರು ಪೂರೈಸುವ ಸ್ವಜಲಧಾರ ಹಾಗೂ ಜೆಜೆಎಂ ಘಟಕಗಳಿಂದ ನೀರು ಸರಬರಾಜು ವ್ಯವಸ್ಥೆಯ ಪರಿಶೀಲನೆಗೆ, ಟಿ. ನರಸೀಪುರ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಮಂಗಳವಾರ ಸಂಜೆ ತಲಕಾಡಿಗೆ ದಿಢೀರ್ ಭೇಟಿ ನೀಡಿದ್ದರು.
ತಲಕಾಡು : ಮಾಧವಮಂತ್ರಿ ಅಣೆಕಟ್ಟೆ ಹಿನ್ನೀರು ನದಿ ದಡದಲ್ಲಿ ಸ್ಥಾಪನೆಗೊಂಡು, ತಲಕಾಡಿಗೆ ಕುಡಿಯುವ ನೀರು ಪೂರೈಸುವ ಸ್ವಜಲಧಾರ ಹಾಗೂ ಜೆಜೆಎಂ ಘಟಕಗಳಿಂದ ನೀರು ಸರಬರಾಜು ವ್ಯವಸ್ಥೆಯ ಪರಿಶೀಲನೆಗೆ, ಟಿ. ನರಸೀಪುರ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಮಂಗಳವಾರ ಸಂಜೆ ತಲಕಾಡಿಗೆ ದಿಢೀರ್ ಭೇಟಿ ನೀಡಿದ್ದರು.
ಮೊದಲು ಇಲ್ಲಿನ ಗ್ರಾಪಂಗೆ ಭೇಟಿ ನೀಡಿದ್ದ ಅಧಿಕಾರಿಗಳು ಪಂಚಾಯಿತಿ ಹಾಗು ಅಧಕ್ಷರು ಸದಸ್ಯರಿಂದ ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು.
undefined
ನಂತರ ಪಂಚಾಯಿತಿಯವರ ಜತೆ ಇಲ್ಲಿನ ಅರುಂಧತಿನಗರದ ಬಳಿಗೆ ಧಾವಿಸಿದ ಅಧಿಕಾರಿಗಳು, ಇಲ್ಲಿ ನೂತನವಾಗಿ ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕ್ ಪರಿಶೀಲಿಸಿದರು. ಆಶ್ರಯ ಬಡಾವಣೆಯ ಓವರ್ ಹೆಡ್ ಟ್ಯಾಂಕ್ ಗೆ ನದಿಮೂಲದಿಂದ ನೀರು ತುಂಬಿಸಲು ನೂತನ ಪೈಪ್ ಲೈನ್ ಅಳವಡಿಕೆಗೆ ಸ್ಥಳ ಪರಿಶೀಲಿಸಿದರು
ಬಳಿಕ ಸುಂದರ್ ಪಾರ್ಕ್ ಬಳಿ ಶಿಥಿಲ ಸ್ಥಿತಿಯಲ್ಲಿರುವ 2.5 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯ ದ ಓವರ್ ಹೆಡ್ ಟ್ಯಾಂಕ್ ದುರಸ್ತಿ ಹಾಗೂ ಟ್ಯಾಂಕ್ ಸುತ್ತ ರಕ್ಷಣಾ ಗೋಡೆ ನಿರ್ಮಾಣ, ಸೆಸ್ಕ್ ಸರ್ಕಲ್ ಬಳಿ ನದಿಮೂಲದಿಂದ ನೀರು ಸಂಗ್ರಹಿಸುವ ನೆಲದ ತೊಟ್ಟಿಯ ಸುತ್ತ ರಕ್ಷಣಾ ಗೋಡೆ ಹಾಗು ಇಲ್ಲೊಂದು ಉದ್ಯಾನ ನಿರ್ಮಾಣಕ್ಕೆ ಸ್ಥಳದಲ್ಲಿದ್ದ ಪಂಚಾಯಿತಿ ಯವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಂಡರು.
ಇದಲ್ಲದೆ ವಿನಾಯಕನಗರದ ರಸ್ತೆಯಲ್ಲಿರುವ ಓವರ್ ಹೆಡ್ ಟ್ಯಾಂಕ್ ಪರಿಶೀಲಿಸಿದ ಅಧಿಕಾರಿಗಳು ಸ್ಥಳೀಯ ಮುಖಂಡ ಗ್ರಾಪಂ ಮಾಜಿ ಸದಸ್ಯ ಗಣೇಶ್ ಹಾಗೂ ನಾಗರಾಜು ಅವರೊಂದಿಗೆ ಚರ್ಚಿಸಿ, ಇಲ್ಲಿನ ಟ್ಯಾಂಕ್ ದುರಸ್ತಿ ಹಾಗು ಡಾಂಬರು ರಸ್ತೆ ಅಂಚಿನಲ್ಲಿರುವ ನೀರಿನ ಗೇಟ್ ವಾಲ್ ಅನ್ನು, ಟ್ಯಾಂಕ್ ರಕ್ಷಣಾ ಗೋಡೆಯ ಒಳ ಭಾಗಕ್ಕೆ ಸ್ಥಳಾಂತರಿಸುವಂತೆ ಗುತ್ತಿಗೆ ದಾರರಿಗೆ ಸೂಚಿಸಿದರು.
ನದಿ ಬಳಿ ಅಳವಡಿಸಿರುವ ಘಟಕದ ಸುತ್ತ ನೂತನ ರಕ್ಷಣಾ ಗೋಡೆ ನಿರ್ಮಾಣ ಹಾಗೂ ಇಲ್ಲಿ ಮತ್ತೊಂದು ನೂತನ ನೀರು ಶುದ್ದೀಕರಣ ಘಟಕ (ಯೂನಿಟ್) ಅಳವಡಿಸಲು, ಜಮೀನಿನಮಾಲೀಕರಿಗೆ ಪರಿಹಾರದ ಬಾಕಿ ಮೊತ್ತ ಪಾವತಿಯ ಬಗ್ಗೆ ಪಂಚಾಯಿತಿಯವರ ಸಮ್ಮುಖದಲ್ಲಿ ಜಮೀನಿನ ಮಾಲೀಕರೊಂದಿಗೆ ಅಧಿಕಾರಿಗಳು ಚರ್ಚಿಸಿದರು.
ಘಟಕ ಸ್ಥಾಪನೆಗೆ ಭೂಮಿ ಬಿಟ್ಟು ಕೊಟ್ಟಿರುವ ಜಮೀನಿನ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸಲು, ಸಧ್ಯದಲ್ಲೇ ತಲಕಾಡಿನಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸುತ್ತಿರುವ, ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಲ್ಲಿ ಮನವಿ ಸಲ್ಲಿಸಲಾಗುತ್ತದೆ ಎಂದು ಗ್ರಾಪಂ ಅಧ್ಯಕ್ಷ ಶೋಭ ಮಲ್ಲಾಣಿ, ತಾಪಂ ಮಾಜಿ ಸದಸ್ಯ ನರಸಿಂಹ ಮಾದನಾಯಕ ತಿಳಿಸಿದರು.
ಟಿ. ನರಸೀಪುರ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ, ಕೈಲಾಸಮೂರ್ತಿ, ಜೆಇ, ಮಂಜುನಾಥ್, ಗ್ರಾಪಂ ಉಪಾಧ್ಯಕ್ಷ ನಾಗರಾಜು, ಪಿಡಿಒ ಮಹೇಶ್, ಗ್ರಾಮದ ಪ್ರಮುಖರು ಇದ್ದರು.