ಬಾಗಲಕೋಟೆ ಉಪಕದನ ಹಣಾಹಣಿಗೆ ವೇದಿಕೆ ಸಜ್ಜು: HY ಮೇಟಿ ನಂತರ ಯಾರಿಗೆ ಪಟ್ಟ? ಕ್ಷೇತ್ರದ ಹಿನ್ನೋಟ

Published : Mar 16, 2026, 09:44 AM IST
Bagalkot

ಸಾರಾಂಶ

ಶಾಸಕ ಎಚ್.ವೈ ಮೇಟಿ ಅವರ ಅಕಾಲಿಕ ನಿಧನದಿಂದಾಗಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಈ ಚುನಾವಣೆಯು ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ನೇರ ಹಣಾಹಣಿಗೆ ವೇದಿಕೆ ಕಲ್ಪಿಸಿದ್ದು, ಮೇಟಿ ಕುಟುಂಬ ಮತ್ತು ಮಾಜಿ ಶಾಸಕ ವೀರಣ್ಣ ಚರಂತಿಮಠ ನಡುವೆ ಸ್ಪರ್ಧೆ ಏರ್ಪಡುವ ನಿರೀಕ್ಷೆಯಿದೆ.

ಈಶ್ವರ್ ಶೆಟ್ಟರ್

ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಎಚ್.ವೈ ಮೇಟಿ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷವಾದ ಬಿಜೆಪಿ ಮಧ್ಯೆ ಮತ್ತೊಮ್ಮೆ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ.2023ರ ಮೇ ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ನಿಂದ ಸ್ಪರ್ಧಿಸಿ ಬಿಜೆಪಿಯ ಡಾ.ವೀರಣ್ಣ ಚರಂತಿಮಠ ಅವರನ್ನು ಮಣಿಸಿ ಆಯ್ಕೆಯಾಗಿದ್ದ ಎಚ್.ವೈ ಮೇಟಿ ಅವರು 2025ರ ನವೆಂಬರ್ 4ರಂದು ನಿಧನರಾದ ಹಿನ್ನೆಲೆ ಉಪಚುನಾವಣೆ ಎದುರಾಗಿದ್ದು,ಪ್ರಮುಖ ಪಕ್ಷಗಳ ನಡುವಿನ ರಾಜಕೀಯ ಕದನಕ್ಕೆ ಮತ್ತೊಮ್ಮೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ವೇದಿಕೆಯಾಗಲಿದೆ.

ಕ್ಷೇತ್ರದ ಹಿನ್ನೋಟ

ಸ್ವಾತಂತ್ರ್ಯಾ ನಂತರ ಬಹುತೇಕ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಹೊಂದಿತ್ತು. ಆದರೆ 1983ರಲ್ಲಿ ಜನತಾ ಪಕ್ಷದ ಪಾಲಾದ ಬಳಿಕ ಕ್ಷೇತ್ರದಲ್ಲಿ ಕೈ ಹಿಡಿತ ಸಡಿಲಗೊಂಡಿತು. ಬಳಿಕ ಜನತಾದಳ, ಬಿಜೆಪಿ ಪಕ್ಷಗಳು ಪ್ರಾಬಲ್ಯ ಸಾಧಿಸಿದವು.

1983ರಿಂದ 94ರವರೆಗೆ ಜನತಾ ಪರಿವಾರದ ಜಿ.ವಿ. ಮಂಟೂರ, ಅಜಯಕುಮಾರ ಸರನಾಯಕ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್‌ ಭದ್ರಕೋಟೆಯ ಹಣೆಪಟ್ಟ ಕಳಚಿದ್ದರು. ಆದರೆ 1997ರಲ್ಲಿ ಜನತಾ ದಳದಲ್ಲಿ ಉಂಟಾದ ಕಲಹದಿಂದ ರಾಮಕೃಷ್ಣ ಹೆಗಡೆ ಅವರನ್ನು ಪಕ್ಷದಿಂದ ಹೊರಹಾಕಿದ್ದರಿಂದ ಸಚಿವರಾಗಿದ್ದ ಜನತಾ ಪರಿವಾರದ ಅಜಯಕುಮಾರ ಸರನಾಯಕ ಅವರು ಹೆಗಡೆಯವರ ಜೊತೆಗೂಡಿ ಆರಂಭಿಸಿದ ರಾಷ್ಟ್ರೀಯ ನವನಿರ್ಮಾಣ ವೇದಿಕೆಯ ಮೂಲಕ ಲೋಕಸಭೆಗೆ ಸ್ಪರ್ಧಿಸಲು ಶಾಸಕ ಸ್ಥಾನ ತ್ಯಜಿಸಿದರು. ಆಗ ಎದುರಾದ ಉಪಚುನಾವಣೆಯಲ್ಲಿ ಬಿಜೆಪಿಯ ಪಿ.ಎಚ್. ಪೂಜಾರ ಅವರು ಸರನಾಯಕರ ಬೆಂಬಲದೊಂದಿಗೆ ಶಾಸಕರಾಗುವ ಮೂಲಕ ಬಿಜೆಪಿಯ ಖಾತೆ ತೆರೆದರು. 1999ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಯಿಂದ ಪೂಜಾರ ಮರು ಆಯ್ಕೆಯಾದರು.

2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅವರು ಆಯ್ಕೆಯಾಗುವ ಮೂಲಕ ಬಾಗಲಕೋಟೆ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿ ಬದಲಾಯಿತು.

ಮೇಟಿ ಅವರಿಂದ ಕಾಂಗ್ರೆಸ್ ಗೆದ್ದ ಕ್ಷೇತ್ರ

ಜನತಾ ಪರಿವಾರದಿಂದ ಸಿದ್ದರಾಮಯ್ಯ ಮೂಲಕ ಕಾಂಗ್ರೆಸ್ಸಿಗೆ ಪರಿಚಯಿಸಿಕೊಂಡ ಎಚ್.ವೈ.ಮೇಟಿ ಅವರು ಕ್ಷೇತ್ರ ಪುನರ್ವಿಂಗಡಣೆ ಕಾರಣದಿಂದ ಗುಳೇದಗುಡ್ಡ ಬಿಟ್ಟು 2008ರ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರಕ್ಕೆ ವಲಸೆ ಬಂದು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲುಕಂಡರು. ಆದರೆ, 2013ರ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಕ್ಷೇತ್ರವನ್ನು ಮರಳಿ ಕಾಂಗ್ರೆಸ್‌ ತೆಕ್ಕೆಗೆ ತೆಗೆದುಕೊಂಡರು.

2018ರಲ್ಲಿ ಮತ್ತೆ ಸೋಲು ಕಂಡ ಎಚ್.ವೈ.ಮೇಟಿಯವರು 2023ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.

ಮತ್ತೆ ಚರಂತಿಮಠ, ಮೇಟಿ ಕುಟುಂಬದ ನಡುವೆ ಹಣಾಹಣಿ?

ಈಗ ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆಗಿದ್ದು, ಕಳೆದಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡ ಮಾಜಿ ಶಾಸಕ ವೀರಣ್ಣ ಚರಂತಿಮಠ ಬಿಜೆಪಿ ಅಭ್ಯರ್ಥಿ ಆಗಲಿದ್ದು, ಕಾಂಗ್ರೆಸ್ ನಿಂದ ಎಚ್.ವೈ ಮೇಟಿ ಅವರ ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ಟಿಕೆಟ್ ಖಚಿತ ಎನ್ನಲಾಗುತ್ತಿದೆ. ಹೀಗಾಗಿ ಸಾಂಪ್ರದಾಯಿಕ ಎದುರಾಳಿಗಳ ಮಧ್ಯೆ ತುರುಸಿನ ಸ್ಪರ್ಧೆ ನಡೆಯಲಿದೆ.

ಕಳೆದ ಬಾರಿಯ ಫಲಿತಾಂಶ:

ಬಾಗಲಕೋಟೆ ಮತಕ್ಷೇತ್ರ: (ಕಾಂಗ್ರೆಸ್ ಗೆಲುವು)

ಎಚ್.ವೈ ಮೇಟಿ ಪಡೆದ ಮತ -78494

ವೀರಣ್ಣ ಚರಂತಿಮಠ (ಬಿಜೆಪಿ) ಪಡೆದ ಮತ-72157

ಗೆಲುವಿನ ಅಂತರ-6337

ಇದನ್ನೂ ಓದಿ: ಚುನಾವಣೆ ಘೋಷಣೆಗೂ ಕೆಲ ನಿಮಿಷಕ್ಕೂ ಮುನ್ನ ಮಮತಾ ಬಂಪರ್‌ ಘೋಷಣೆ; ದೀದಿ ಕೊನೇ ಕ್ಷಣದ ಆಟ?

ಬಾಗಲಕೋಟೆ ಉಪಚುನಾವಣೆಗೆ ಮುಹೂರ್ತ ಫಿಕ್ಸ್‌

ಬಾಗಲಕೋಟೆ: ಎಚ್.ವೈ ಮೇಟಿ ಅವರ ಅಕಾಲಿಕ ನಿಧನದಿಂದ ತೆರವಾದ ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದ್ದು, ಏ.9ರಂದು ಮತದಾನ ನಡೆಯಲಿದೆ. ಮಾ.16ರಂದು ಅಧಿಸೂಚನೆ ಜಾರಿಯಾಗಲಿದ್ದು, ನಾಮಪತ್ರಕ್ಕೆ ಮಾ.23ರಂದು ಕೊನೆಯ ದಿನವಾಗಿದೆ. ಮಾ.24ರಂದು ನಾಮಪತ್ರ ಪರಿಶೀಲನೆ, ಮಾ.26ರಂದು ನಾಮಪತ್ರ ವಾಪಸ್ ಪಡೆಯಬಹುದಾಗಿದ್ದು, ಏಪ್ರಿಲ್‌ 9ರಂದು ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶ ಮೇ 4ರಂದು ಹೊರಬೀಳಲಿದೆ.

ಇದನ್ನೂ ಓದಿ: ಬಾಗಲಕೋಟೆ, ದಾವಣಗೆರೆ ಕ್ಷೇತ್ರಕ್ಕೆ ಏ.9ಕ್ಕೆ ಉಪಸಮರ

PREV
Read more Articles on
click me!

Recommended Stories

ತುಮಕೂರು: ಸಹಕಾರಿ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಅಕ್ರಮ: ಕಾಂಗ್ರೆಸ್ ಅಭ್ಯರ್ಥಿಗೆ ಮತ ಸೇರಿಸಿದ ಆರೋಪ
ಆಸ್ತಿಗಾಗಿ ಅಣ್ಣನನ್ನೇ ಕೊಂದ ತಮ್ಮ: ರಸ್ತೆ ಅಪಘಾತವೆಂದು ಬಿಂಬಿಸಲೆತ್ನಿಸಿದ್ದ ಆರೋಪಿಗಳು