ಚಳಿಗಾಲದ ಅಧಿವೇಶನದಲ್ಲಿಯೇ ಸದಾಶಿವ ಆಯೋಗದ ವರದಿ ಮಂಡಿಸಿ; ದಸಂಸ ಆಗ್ರಹ

By Kannadaprabha News  |  First Published Dec 15, 2022, 8:00 PM IST

ಮುಂಬರುವ ಚಳಿಗಾಲದ ಅಧಿವೇಶನದಲ್ಲಿಯೇ ಸದಾಶಿವ ಆಯೋಗದ ವರದಿ ಮಂಡಿಸಿ ಪ್ರತ್ಯೇಕ ಮೀಸಲಾತಿಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ದಸಂಸ ಆಗ್ರಹಿಸಿದೆ. ಒಳ ಮೀಸಲಿಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ನಡೆಸಿ ನಂತರ ಮನವಿ ಸಲ್ಲಿಸಿದ


ಚಿತ್ರದುರ್ಗ (ಡಿ.15) : ಮುಂಬರುವ ಚಳಿಗಾಲದ ಅಧಿವೇಶನದಲ್ಲಿಯೇ ಸದಾಶಿವ ಆಯೋಗದ ವರದಿ ಮಂಡಿಸಿ ಪ್ರತ್ಯೇಕ ಮೀಸಲಾತಿಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ದಸಂಸ ಆಗ್ರಹಿಸಿದೆ. ಒಳ ಮೀಸಲಿಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ನಡೆಸಿ ನಂತರ ಮನವಿ ಸಲ್ಲಿಸಿದರು. ದಸಂಸ ರಾಜ್ಯಾಧ್ಯಕ್ಷ ವೈ ರಾಜಣ್ಣ ಮಾತನಾಡಿ, ಪರಿಶಿಷ್ಟರಿಗೆ ಒಳ ಮೀಸಲಾತಿ ಕಲ್ಪಿಸಲು ಕರ್ನಾಟಕ ಸರ್ಕಾರ 2005ರಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗವನ್ನು ರಚಿಸಿತ್ತು. ಈ ಆಯೋಗ ಸುಧೀರ್ಘ ಅಧ್ಯಯನ ಮಾಡಿ 2012ರಲ್ಲಿ ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ವರದಿಯನ್ನು ಸಲ್ಲಿಸಿದ್ದು, ಇಲ್ಲಿಯವರೆಗೂ ಜಾರಿ ಮಾಡಿಲ್ಲ. ಎಲ್ಲ ಸರ್ಕಾರಗಳು ಮಾದಿಗ ಸಮುದಾಯಕ್ಕೆ ಮೀಸಲಾತಿ ನೀಡುತ್ತೇನೆ ಎಂದು ಭರವಸೆಗಳನ್ನು ಮಾತ್ರ ನೀಡಿ ವಂಚಿಸಿವೆ ಎಂದು ದೂರಿದರು.

ಸದಾಶಿವ ಆಯೋಗ ವರದಿ ಸಾಕಷ್ಟು ವಿಭಿನ್ನ ವಿಚಾರಗಳನ್ನು ಒಳಗೊಂಡಿದೆ. ಒಳ ಮೀಸಲಾತಿ ಸಾಮಾಜಿಕ ನ್ಯಾಯದ ಒಂದು ಭಾಗವಾಗಬೇಕಾದರೆ ಸಂವಿಧಾನದ ಅನುಚ್ಛೇದ 341/4 ತಿದ್ದುಪಡಿ ತಂದು ಜಾರಿಗೊಳಿಸಬೇಕು. ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ಪಂಚಪೀಠ ತೀರ್ಪಿನಲ್ಲಿ ಒಳ ಮೀಸಲಾತಿ ನೀಡಬೇಕೆಂದು ತೀರ್ಪು ನೀಡಿ 7ನೇ ಪೀಠಕ್ಕೆ ವರ್ಗಾಯಿಸಿದೆ. ತಮಿಳುನಾಡು ಸರ್ಕಾರ 2008ರಲ್ಲಿ ನಿವೃತ್ತ ನ್ಯಾಯಮೂರ್ತಿ ಎಂ.ಎಸ್‌ ಜನಾರ್ಧನ್‌ ಅವರ ವರದಿ ಆಧಾರದ ಮೇಲೆ ಮಾದಿಗ ಸಂಬಂಧಿತ ಜಾತಿಯಾದ ಅರುಂಧತಿಯಾರ್‌, ಚಕ್ಕಲಿಯಾರ್‌ ಜಾತಿಗೆ ಒಳ ಮೀಸಲಾತಿಯನ್ನು ನೀಡಿ ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರಿಸಲಾಗಿದೆ. ಈಗಾಗಲೇ ತಮಿಳುನಾಡು ಸರ್ಕಾರ 5.5 ಒಳ ಮೀಸಲಾತಿಯನ್ನು ಜಾರಿಗೆ ನೀಡಿದೆ ಎಂದು ತಿಳಿಸಿದರು.

Tap to resize

Latest Videos

ಒಳ ಮೀಸಲಾತಿ: ಬೊಮ್ಮಾಯಿ ಸರ್ಕಾರಕ್ಕೆ ಸಿಗುತ್ತಾ ಬೂಸ್ಟರ್ ಡೋಸ್?

30 ವರ್ಷಗಳಿಂದ ಹೋರಾಟ:

30 ವರ್ಷಗಳ ನಿರಂತರ ಹೋರಾಟದ ಫಲವಾಗಿ ಒಳ ಮೀಸಲಾತಿ ಲಭ್ಯವಾಗಬೇಕಿತ್ತು. ಮಾದಿಗ ಸಮುದಾಯಕ್ಕೆ ಸದಾಶಿವ ಆಯೋಗದ ವರದಿ ಜಾರಿ ಮಾಡಲು ಸರ್ಕಾರ ಮೀನ ಮೇಷ ಎಣಿಸುತ್ತಿರುವುದು ಅರ್ಥವಾಗುತ್ತಿಲ್ಲ. ಪ್ರೊ.ಬಿ ಕೃಷ್ಣಪ್ಪ ಅವರ ಸಮಾಧಿ ಬಳಿಯಿಂದ ಹೋರಾಟಗಾರರು ಕಾಲ್ನಡಿಗೆಯಲ್ಲಿ ಹೊರಟು ಡಿಸೆಂಬರ್‌ 11ರಂದು ಬೆಂಗಳೂರು ತಲುಪಿದ್ದರು. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ವಿನಾಕಾರಣ ಪೊಲೀಸರು ಹೋರಾಟಗಾರರ ಮೇಲೆ ಲಾಠಿ ಪ್ರಹಾರವನ್ನು ನಡೆಸಿ ಅನೇಕ ಹೋರಾಟಗಾರರನ್ನು ಬಂಧಿಸಿದ್ದು ತರವಲ್ಲದ ನಡವಳಿಕೆ ಎಂದರು.

ಪರಿಶಿಷ್ಟ ಜಾತಿ ಸಮುದಾಯದ ಒಳಮೀಸಲಾತಿ ಹೋರಾಟ, ಬಾದಾಮಿಯಲ್ಲಿ ಪ್ರತಿಭಟನಾ ಯಾತ್ರೆ

ರಾಜ್ಯ ಹಾಗೂ ಕೇಂದ್ರ ಸರ್ಕಾರ ಮೀಸಲಾತಿ ವಿಚಾರದಲ್ಲಿ ಉದಾಸೀನ ಮಾಡುವುದು ಸಲ್ಲದು. ಚಳಿಗಾಲದ ಅಧಿವೇಶನದಲ್ಲಿ ಅನುಮೋದಿಸಿ ಅಂಗೀಕರಿಸದಿದ್ದರೆ ರಾಜ್ಯಾದ್ಯಂತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ದಸಂಸ ಯ ಟಿ ರವಿ, ಎಚ್‌ ಕೃಷ್ಣಮೂರ್ತಿ, ಏಕಾಂತಪ್ಪ, ಜಯಣ್ಣ, ಅವಿನಾಶ್‌, ಜಗದೀಶ್‌, ತಿಪ್ಪೇಸ್ವಾಮಿ, ಮಹಾಂತೇಶ್‌, ರುದ್ರಮುನಿ, ವಿಶ್ವಾನಂದ, ಅಣ್ಣಪ್ಪ, ಮಂಜುನಾಥ್‌, ಕಾಂತರಾಜ್‌, ಹರೀಶ್‌ ಕುಮಾರ್‌, ತಿಪ್ಪೇಸ್ವಾಮಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

click me!