ಯಾವುದೇ ಸರ್ಕಾರ, ಆಡಳಿತ ಬಂದರೂ ಜನರಿಗೆ ಅನುಕೂಲವಾಗಬೇಕು ಸರ್ಕಾರಕ್ಕೆ ಆದಾಯ ಬರಬೇಕು ಎನ್ನುವುದೇ ಆಶಯವಾಗಿರುತ್ತದೆ ಅಲ್ವಾ. ಆದರೆ ಮಡಿಕೇರಿ ನಗರಸಭೆಯಲ್ಲಿ ಅದೇನಾಗಿದೆಯೋ ಗೊತ್ತಿಲ್ಲ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜ.10): ಯಾವುದೇ ಸರ್ಕಾರ, ಆಡಳಿತ ಬಂದರೂ ಜನರಿಗೆ ಅನುಕೂಲವಾಗಬೇಕು ಸರ್ಕಾರಕ್ಕೆ ಆದಾಯ ಬರಬೇಕು ಎನ್ನುವುದೇ ಆಶಯವಾಗಿರುತ್ತದೆ ಅಲ್ವಾ. ಆದರೆ ಮಡಿಕೇರಿ ನಗರಸಭೆಯಲ್ಲಿ ಅದೇನಾಗಿದೆಯೋ ಗೊತ್ತಿಲ್ಲ. ಜನರ ಮೇಲೆ ಪ್ರತೀ ವಿಷಯಕ್ಕೆ ಅನಾವಶ್ಯಕ ನಿಯಮಗಳನ್ನು ಮಾಡಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಜನರಷ್ಟೇ ಅಲ್ಲ, ಸ್ವತಃ ನಗರಸಭೆಯ ಸರ್ವ ಸದಸ್ಯರು ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೀಗೆ ತಿರುಗಿ ಬೀಳುವುದಕ್ಕೆ ಕಾರಣ ಅಧಿಕಾರಿಗಳು ಮಾಡಿರುವ ಅನಾವಶ್ಯಕ ನಿಯಮಗಳಿಂದಾಗಿ ನಗರಸಭೆಗೆ ಬರಬೇಕಾಗಿದ್ದ ತೆರಿಗೆ ರೂಪದ ಕೋಟ್ಯಂತರ ರೂಪಾಯಿ ಆದಾಯ ತಪ್ಪಿ ಹೋಗುತ್ತಿದೆ ಎನ್ನುವುದು.
ಹೌದು ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ ಸಾವಿರಾರು ಅಂಗಡಿ ಮುಂಗಟ್ಟುಗಳು, ಜೊತೆಗೆ ಸಾವಿರಾರು ಕುಟುಂಬಗಳು ಇವೆ. ಇವರೆಲ್ಲಾ ತಮ್ಮ ಆಸ್ತಿ. ವ್ಯಾಪಾರ ಪರವಾನಗಿ ತೆರಿಗೆ ಸೇರಿದಂತೆ ಎಲ್ಲಾ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ. ಈ ತೆರಿಗೆ ಪಾವತಿಗೆ ನಗರಸಭೆ ಆಯುಕ್ತರು ಮತ್ತು ಅಧಿಕಾರಿಗಳು ಅನಗತ್ಯವಾದ ನಿಯಮಗಳನ್ನು ಮಾಡಿ ನಗರಸಭೆಗೆ ಬರಬೇಕಾಗಿರುವ ಕೋಟ್ಯಂತರ ರೂಪಾಯಿ ಆದಾಯ ತಪ್ಪಿಸುತ್ತಿದ್ದಾರೆ. ಇದರಿಂದ ನಗರಸಭೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗದೆ ಅಭಿವೃದ್ಧಿ ಕುಂಠಿತವಾಗುತ್ತಿದೆ ಎನ್ನುವುದು ಎಲ್ಲರ ಆಕ್ರೋಶಕ್ಕೆ ಕಾರಣ.
ದೇವಸ್ಥಾನಗಳು, ಧಾರ್ಮಿಕ ಕ್ಷೇತ್ರಗಳು ಪಾಲಿಥೀನ್ ಮುಕ್ತವಾಗಬೇಕು: ಮಹರ್ಷಿ ಆನಂದ ಗುರೂಜಿ
ಹೌದು ವ್ಯಾಪಾರ ಪರವಾನಗಿ ಮಾಡಿಸಿಕೊಳ್ಳಲು ನಗರಸಭೆಗೆ ಹೋದರೆ ಅಲ್ಲಿ ಸರ್ಕಾರ ಮಾಡಿರುವ ನಿಯಮಗಳಿಗಿಂತ ನಗರಸಭೆ ಅಧಿಕಾರಿಗಳು ಮಾಡಿರುವ ನಿಯಮಗಳೇ ಮಿತಿಮೀರಿವೆ. ಯಾವುದೇ ವ್ಯಕ್ತಿ ಫಾರಂ ನಂಬರ್ ಮೂರನ್ನು ಪಡೆಯಬೇಕಾದರೆ ಇಸಿ ಕೇಳಲಾಗುತ್ತದೆ. ಫಾರಂ ನಂಬರ್ ಮೂರು ಕೊಡುವುದಕ್ಕೆ ಇಸಿ ಬೇಕಾಗಿಯೇ ಇಲ್ಲ. ಇದೊಂದೇ ಅಲ್ಲ, ಎಲ್ಲಾ ಕೆಲಸಗಳಿಗೂ ಇಲ್ಲ, ಸಲ್ಲದ ದಾಖಲೆಗಳನ್ನು ಕೇಳಲಾಗುತ್ತಿದೆ. ಇದರಿಂದ ಜನರು ಪಾವತಿಸಬೇಕಾಗಿರುವ ತೆರಿಗೆಗಳು ತಪ್ಪಿಹೋಗುತ್ತಿದೆ ಎನ್ನುವುದು ನಗರಸಭೆಯ ಆಡಳಿತ ಪಕ್ಷ ಅಷ್ಟೇ ಅಲ್ಲ, ವಿರೋಧ ಪಕ್ಷಗಳ ಆರೋಪವೂ ಆಗಿದೆ.
ನಗರಸಭೆ ಇರುವ ಕಟ್ಟಡದಲ್ಲಿಯೇ ಕೆಲವು ಅಂಗಡಿಗಳಿಗೆ ವ್ಯಾಪಾರ ಪರವಾನಗಿಯೇ ಇಲ್ಲ. ಆದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿರುವ ಅಧಿಕಾರಿಗಳು ಕಿವಿ ಕೇಳದವರಂತೆ ಇದ್ದಾರೆ. ನಗರಸಭೆಯ ವ್ಯಾಪ್ತಿಯಲ್ಲಿ ಎಷ್ಟೋ ಮಳಿಗೆಗಳನ್ನು ಅಕ್ರಮವಾಗಿ ನಿರ್ಮಿಸಲಾಗುತ್ತಿದೆ. ಈ ಬಗ್ಗೆ ಆಡಳಿತ ಮಂಡಳಿ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕೈಗೊಳ್ಳುತ್ತಿಲ್ಲ. ವ್ಯಾಪಾರಸ್ಥರೇ ತೆರಿಗೆ, ಪರವಾನಗಿ ತೆರಿಗೆ ಕಟ್ಟಲು ಬಂದರೂ ಅಧಿಕಾರಿಗಳು ಇಲ್ಲದ ನಿಯಮಗಳನ್ನು ಮಾಡಿ ತೆರಿಗೆ ಕಟ್ಟಿಸಿಕೊಳ್ಳುತ್ತಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಒಂದೆಡೆಯಾದರೆ ಮತ್ತೊಂದೆಡೆ ಸಾಕಷ್ಟು ವ್ಯಾಪಾರಸ್ಥರು ತೆರಿಗೆ ಕಟ್ಟಲು ಮುಂದೆ ಬರುತ್ತಿಲ್ಲ.
ರೆಸಾರ್ಟ್‌ನಲ್ಲಿ ಮಾಜಿ ಸಿಎಂ ಎಚ್‌ಡಿಕೆ ತಂತ್ರಗಾರಿಕೆ: ರಾಜಕೀಯ ಲೆಕ್ಕಚಾರದಲ್ಲಿ ಕುಮಾರಸ್ವಾಮಿ!
ಇವರಿಂದಲೂ ಅಧಿಕಾರಿಗಳು ತೆರಿಗೆ ಸಂಗ್ರಹಿಸಲು ಕ್ರಮಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ನಗರಸಭೆ ವಿರೋಧ ಪಕ್ಷದ ಸದಸ್ಯ ಅಮೀನ್ ಮೊಹಿನ್ಸಿನ್. ಅಧಿಕಾರಿಗಳ ಈ ನಡವಳಿಕೆಗೆ ಬೇಸತ್ತಿರುವ ನಗರಸಭೆಯ ಸರ್ವ ಸದಸ್ಯರು ತುರ್ತು ಸಭೆ ನಡೆಸಿ ನಗರಸಭೆ ಆಯುಕ್ತರನ್ನು ಇಲ್ಲಿಂದ ವರ್ಗಾವಣೆ ಮಾಡುವಂತೆ ಶಿಫಾರಸು ಮಾಡಿ ನಿರ್ಣಯ ಮಾಡಿದ್ದಾರೆ. ಈ ನಿರ್ಣಯಕ್ಕೆ ಎಲ್ಲರೂ ಸಹಿ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸರ್ಕಾರ ಅದ್ಯಾವ ನಿರ್ಣಯ ಕೈಗೊಳ್ಳುತ್ತೋ ಕಾದು ನೋಡಬೇಕು. ಒಟ್ಟಿನಲ್ಲಿ ನಗರಸಭೆಗೆ ಬರಬೇಕಾಗಿರುವ ಕೋಟ್ಯಂತರ ಆದಾಯ ಬಾರದೇ ನಗರದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿರುವುದಂತು ಸತ್ಯ.