ಕಸ್ತೂರಿ ರಂಗನ್ ವರದಿ ಜಾರಿಯಾದರೆ ರೈತರ ಬದುಕು ಸಂಕಷ್ಟಕ್ಕೀಡಾಗುತ್ತದೆ. ಯಾವುದೇ ಕಾಯಿದೆಗಳು ರೈತರಿಗೆ ಅನ್ಯಾಯವಾಗುವ ಹಾಗಿದ್ದರೆ, ಜಾರಿಯಾಗಲು ಬಿಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮೂಡಿಗೆರೆ (ನ.30): ಕಸ್ತೂರಿ ರಂಗನ್ ವರದಿ ಜಾರಿಯಾದರೆ ರೈತರ ಬದುಕು ಸಂಕಷ್ಟಕ್ಕೀಡಾಗುತ್ತದೆ. ಯಾವುದೇ ಕಾಯಿದೆಗಳು ರೈತರಿಗೆ ಅನ್ಯಾಯವಾಗುವ ಹಾಗಿದ್ದರೆ, ಜಾರಿಯಾಗಲು ಬಿಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಅವರು ಕಾಫಿ ಬೆಳಗಾರರ ಸಂಘದ ವತಿಯಿಂದ ಬೆಳೆಗಾರರ ವಿವಿಧ ಸಮಸ್ಯೆ ಬಗ್ಗೆ ಪಟ್ಟಣದ ಪ್ಲಾಂಟರ್ಸ್ ಕ್ಲಬ್‌ನಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಸಂವಾದ ಸಭೆಯಲ್ಲಿ ಮಾತನಾಡಿದರು. ಬಯಲುಸೀಮೆ, ಮಲೆನಾಡಿನ ರೈತರಿಗೆ ವ್ಯತ್ಯಾಸವಿದೆ. ಶ್ರಮ ಒಂದೇ ಆಗಿದ್ದರೂ ಮಲೆನಾಡು ಭಾಗದ ಬೆಳೆಗಾರರನ್ನು ನೋಡುವ ದೃಷ್ಟಿಕೋನ ಬೇರೆಯಿದೆ. ಈ ದೃಷ್ಟಿಕೋನ ಬದಲಾಗಬೇಕು.
ಸರ್ಫೇಸಿ ಕಾಯಿದೆ ಬಗ್ಗೆ ಎಲ್ಲಿ ಯಾಮಾರಿದ್ದೇವೋ ಗೊತ್ತಿಲ್ಲ. ಯಾವ ಕಾಯಿದೆಗಳು ರೈತರಿಗೆ ಅನ್ಯಾಯವಾಗುತ್ತವೆಯೋ, ಅವನ್ನು ಜಾರಿಯಾಗಲು ಬಿಡುವುದಿಲ್ಲ. ಅದಕ್ಕೆ ನಮ್ಮ ಪಕ್ಷ ಆಡಳಿತಕ್ಕೆ ಬರುವಂತೆ ಅವಕಾಶ ನೀಡಬೇಕೆಂದು ಎಂದು ಕೇಳಿಕೊಂಡರು. ಈ ಸಂದರ್ಭದಲ್ಲಿ ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ ಮಾತನಾಡಿ, ಸರಕಾರ 2018ರಲ್ಲಿ 10 ಎಕರೆ ಕೃಷಿ ಭೂಮಿಯನ್ನು ಗುತ್ತಿಗೆ ನೀಡಲು ಹೊರಟಿತ್ತು. ಆದರೆ ಇದೂವರೆಗೂ ಕಾರ್ಯರೂಪಕ್ಕೆ ಬರಲಿಲ್ಲ. ಭೂ ಕಬಳಿಕೆ ಕಾಯಿದೆಯಿಂದ ಕೃಷಿ ಭೂಮಿ ಹೊರಗಿಡಬೇಕು.
ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವಿಲ್ಲ: ಡಿ.ಕೆ.ಶಿವಕುಮಾರ್
ಬಗರ್ ಹುಕುಂ ಸಾಗುವಳಿ ಚೀಟಿ ನೀಡಬೇಕು. ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ 5 ನೋಟಿಫಿಕೇಷನ್ ಆಗಿದ್ದು, ಅದನ್ನು ಅನುಷ್ಟಾನಗೊಳಿಸಬಾರದು. ಸರ್ಫೇಸಿ ಕಾಯಿದೆ ಕೈ ಬಿಡಬೇಕು. ಪಹಣಿಯಲ್ಲಿ ಬೆಳೆ ಕಾಲಂನಲ್ಲಿ ಇಲ್ಲಿ ಬೆಳೆಯುವ ಬೆಳೆ ನಮೂದು ಆಗಬೇಕು. ರಸಗೊಬ್ಬರ 10 ಪಟ್ಟು ಬೆಲೆ ಏರಿಕೆಯಾಗಿದೆ. ಹಾಸನ, ಚಿಕ್ಕಮಗಳೂರು, ಕೊಡಗು ಈ ಮೂರು ಜಿಲ್ಲೆಯಲ್ಲಿ ಸುಮಾರು 150ಕ್ಕೂ ಅಧಿಕ ಕಾಡಾನೆಗಳಿದ್ದು, ಬೆಳೆನಷ್ಟ, ಸಾವು ಸಂಭವಿಸುತ್ತಲೇ ಇದೆ. ಇದಕ್ಕೆ ಶಾಶ್ಚತ ಪರಿಹಾರ ಹಾಗೂ ಇತರೆ ಅನೇಕ ಸಮಸ್ಯೆ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚಿಸಿ ಪರಿಹಾರ ಕಲ್ಪಿಸಬೇಕೆಂದು ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದರು.
ಸಭೆಯಲ್ಲಿ ಬೆಳೆಗಾರರ ಅನೇಕ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳೆಗಾರ ಸಂಘದ ಅಧ್ಯಕ್ಷ ಬಾಲಕೃಷ್ಣ ವಹಿಸಿದ್ದರು. ಕೆಜಿಎಫ್ ಅಧ್ಯಕ್ಷ ಮೋಹನ್ ಕುಮಾರ್, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್, ಕಾರ್ಯಾಧ್ಯಕ್ಷ ದೃವನಾರಾಯಣ್, ಶಾಸಕ ಟಿ.ಡಿ. ರಾಜೇಗೌಡ, ಮಾಜಿ ಸಚಿವೆ ಮೋಟಮ್ಮ, ಹಳಸೆ ಶಿವಣ್ಣ, ಸಚಿನ್ ಮಿಘಾ, ಡಿ.ಎಸ್. ರಘು, ಜಿ.ಎಚ್. ಹಾಲಪ್ಪಗೌಡ ಸೇರಿದಂತೆ ಬೆಳೆಗಾರರು ಉಪಸ್ಥಿತರಿದ್ದರು.
ಅವಕಾಶ ಈಗ ಬಂದಿದೆ, ಕಳೆದುಕೊಳ್ಳಬೇಡಿ: ಡಿ.ಕೆ.ಶಿವಕುಮಾರ್
ಕಾಡಾನೆ ಹಾವಳಿ ಮಿತಿ ಮೀರಿದೆ. ಸರಕಾರ ಮಾಡಿರುವ ಟಾಸ್ಕ್‌ಫೋರ್ಸ್‌ಗೆ ಕಾಡಾನೆ ಹಿಡಿಯಲು ಸ್ವತಂತ್ರ ಅಧಿಕಾರ ಕೊಡಬೇಕು. ಅಲ್ಲದೇ ಕೊಡಗಿನಂತೆ ತಾಲೂಕಿನಲ್ಲಿಯೇ ಆನೆ ಶಿಬಿರ ಮಾಡಬೇಕು. ಕಸ್ತೂರಿ ರಂಗನ್ ವರದಿ ತಡೆ ಹಿಡಿಯಲು ಶಿಫಾರಸ್ಸು ಮಾಡಬೇಕು. ಹಾಗೂ ಅತಿವೃಷ್ಟಿಪ್ರದೇಶದಿಂದ ಹಾನಿಗೊಳಗಾದ ನಿರಾಶ್ರಿತರಿಗೆ ಆಗಿರುವ ಅನ್ಯಾಯದ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಬೇಕು
-ಮೋಟಮ್ಮ, ಮಾಜಿ ಸಚಿವೆ