ಗಂಗಾವತಿ: ‘ಅಂಜನಾದ್ರಿಯಲ್ಲಿ ಅನ್ಯ ಧರ್ಮದವರಿಗೆ ವ್ಯಾಪಾರ ನಿಷೇಧ’ ನಾಮಫಲಕ ತೆರವು

By Kannadaprabha News  |  First Published Nov 30, 2022, 9:45 AM IST

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಕೆಳಗೆ ಮತ್ತು ರಸ್ತೆಯ ಅಕ್ಕಪಕ್ಕ ಹಿಂದೂ ಜಾಗರಣ ವೇದಿಕೆಯವರು ಅಳವಡಿಸಿದ್ದ ‘ಅನ್ಯಮತೀಯರಿಗೆ ವ್ಯಾಪಾರ ನಿಷೇಧ’ ಎನ್ನುವ ನಾಮಫಲಕ ತೆರವು 


ಗಂಗಾವತಿ(ನ.30):  ತಾಲೂಕಿನ ಅಂಜನಾದ್ರಿ ಬೆಟ್ಟದ ಕೆಳಗೆ ಮತ್ತು ರಸ್ತೆಯ ಅಕ್ಕಪಕ್ಕ ಹಿಂದೂ ಜಾಗರಣ ವೇದಿಕೆಯವರು ಅಳವಡಿಸಿದ್ದ ‘ಅನ್ಯಮತೀಯರಿಗೆ ವ್ಯಾಪಾರ ನಿಷೇಧ’ ಎನ್ನುವ ನಾಮಫಲಕವನ್ನು ತಾಲೂಕು ಆಡಳಿತ ಮಂಗಳವಾರ ತೆರವುಗೊಳಿಸಿದೆ. ಡಿ. 3ರಿರಂದ 5ರ ವರೆಗೆ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ಅಂಗವಾಗಿ ಕಳೆದ ಎರಡು ದಿನಗಳ ಹಿಂದೆ ಹಿಂದೂ ಜಾಗರಣ ವೇದಿಕೆಯವರು ನಾಮಫಲಕ ಹಾಕಿದ್ದರು. ಅಲ್ಲದೆ ಅನ್ಯಮತೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದೆಂದು ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರರ ಮೂಲಕ ಮನವಿ ಪತ್ರ ಸಲ್ಲಿಸಿದ್ದರು.

ಇದರಿಂದ ಎಚ್ಚೆತ್ತ ತಾಲೂಕು ಆಡಳಿತವು ಮಂಗಳವಾರ ಪೊಲೀಸ್‌ ಇಲಾಖೆ, ಆನೆಗೊಂದಿ ಗ್ರಾಮ ಪಂಚಾಯಿತಿಯವರ ನೇತೃತ್ವದಲ್ಲಿ ನಾಮಫಲಕವನ್ನು ತೆರವುಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್‌ ನಾಗರಾಜ ಅವರು, ಪಟ್ಟಾಭೂಮಿಯಲ್ಲಿ ವ್ಯಾಪಾರಿಗಳು ಇದ್ದಾರೆ. ಅವರು ನಮಗೆ ಸಂಬಂಧ ಇಲ್ಲ. ದೇವಸ್ಥಾನದ ವ್ಯಾಪ್ತಿಯಲ್ಲಿ ಅಂಗಡಿಗಳು ಇಲ್ಲ. ಅನ್ಯ ಮತೀಯರ ಅಂಗಡಿಗಳು ಹಾಕುವುದು, ಬಿಡುವುದು ಹೊಲದ ಮಾಲೀಕರಿಗೆ ಬಿಟ್ಟ ವಿಷಯವಾಗಿದೆ. ದೇವಸ್ಥಾನ ಮತ್ತು ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಯಾರೂ ಅಂಗಡಿಗಳನ್ನು ಹಾಕಿಲ್ಲ. ಅಲ್ಲದೇ ಮತೀಯ ಗಲಭೆಯಾಗಬಾರದೆಂಬ ಕಾರಣಕ್ಕೆ ನಾಮಫಲಕಗಳನ್ನು ತೆರವುಗೊಳಿಸಲಾಗಿದೆ ಎಂದರು.
ಶಾಂತಿ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ನಿಗಾ ವಹಿಸುತ್ತದೆ ಎಂದರು.

Latest Videos

undefined

ಧರ್ಮದಂಗಲ್‌ ವೇದಿಕೆಯಾಗುವುದೇ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ?

ತೆರವು ಸಂದರ್ಭದಲ್ಲಿ ತಹಸೀಲ್ದಾರ್‌ ನಾಗರಾಜ್‌, ತಾಲೂಕು ಪಂಚಾಯಿತಿ ಇಒ ಮಹಾಂತಗೌಡ, ಆನೆಗೊಂದಿ ಗ್ರಾಮ ಪಂಚಾಯಿತಿ ಪಿಡಿಒ ಕೃಷ್ಣಪ್ಪ, ಸಿಪಿಐ ಮಂಜುನಾಥ ಇದ್ದರು.
 

click me!