10 ಕೆ.ಜಿ ಅಕ್ಕಿ ನೀಡುವ ಯೋಜನೆಗೆ ಕೇಂದ್ರ ಸರ್ಕಾರದವರು ಕೊಕ್ಕೆ ಹಾಕಿದ್ದಾರೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ, ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಕಿಡಿಕಾರಿದರು.
ಮೈಸೂರು : 10 ಕೆ.ಜಿ ಅಕ್ಕಿ ನೀಡುವ ಯೋಜನೆಗೆ ಕೇಂದ್ರ ಸರ್ಕಾರದವರು ಕೊಕ್ಕೆ ಹಾಕಿದ್ದಾರೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ, ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಕಿಡಿಕಾರಿದರು.
ಗ್ಯಾರಂಟಿ ಯೋಜನೆ ಜಾರಿಯಾಗದಿದ್ದರೆ ಹೋರಾಟ ನಡೆಸುವುದಾಗಿ ಯಡಿಯೂರಪ್ಪ ಹೇಳಿಕೆಗೆ ಮೈಸೂರಿನಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರು ಹಿರಿಯರು, ಗೌರವಸ್ಥರು, ದೊಡ್ಡ ನಾಯಕರಿದ್ದಾರೆ, ಅವರ ಬಗ್ಗೆ ಅಪಾರ ಗೌರವವಿದೆ. ಅವರು ಈ ರೀತಿ ಮಾತನಾಡಬಾರದು. ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ ಕೊಡಿ ಅಂತ ಯಡಿಯೂರಪ್ಪ ಕೇಳಬೇಕು ಎಂದು ಮನವಿ ಮಾಡಿದರು.
ಈ ಹಿಂದೆಯೂ ಇದೇ ಸಿದ್ದರಾಮಯ್ಯ ಸರ್ಕಾರ ಇದ್ದಾಗೆ 7 ಕೆ.ಜಿ ಅಕ್ಕಿ ಕೊಡುತ್ತಿದ್ದೆವು. ಅದನ್ನು ಇವರು 5 ಕೆ.ಜಿಗೆ ತಂದರು. ಈಗ ನಾವು 10 ಕೆ.ಜಿ ಅಕ್ಕಿ ಕೊಡ್ತೀವೆಂದು ಹೇಳಿದ್ದೀವಿ. ಅದಕ್ಕೆ ಇವರು ಸಹಕಾರ ಕೊಡಬೇಕಲ್ವ? ಅಕ್ಕಿಯನ್ನು ಮೋದಿಯವರ ಮನೆಯಿಂದ ಅಥವಾ ಇನ್ಯಾರದೋ ಮನೆಯಿಂದ ಕೊಡ್ತಿಲ್ವಲ್ಲಾ. ಈಗಾಗಲೇ ಕೇಂದ್ರದ ಬಳಿ ಸಾಕಷ್ಟುಅಕ್ಕಿ ದಾಸ್ತಾನು ಇದೆ. ಅದರಲ್ಲಿ ಹೆಚ್ಚುವರಿ ಅಕ್ಕಿಯನ್ನು ರಾಜ್ಯಕ್ಕೆ ಕೊಡಿ ಎಂದು ಕೇಳಿದ್ದೇವೆ. ಆದರೆ, ರಾಜಕೀಯ ಕಾರಣಗಳಿಂದ ಅಕ್ಕಿ ಕೊಡುತ್ತಿಲ್ಲ. ಕರ್ನಾಟಕದ ಬಡ ಜನರ ಬಗ್ಗೆ ಇವರಿಗಿರುವ ವಿರೋಧ ಕಣ್ಣಿಗೆ ಕಾಣುತ್ತಿದೆ. ನಾವು ಹೇಗಾದರೂ ಮಾಡಿ ಅಕ್ಕಿಯನ್ನು ನೀಡಿ ಜನರಿಗೆ ನೀಡಿರುವ ಭರವಸೆ ಈಡೇರಿಸುತ್ತೇವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಬಿಜೆಪಿಯನ್ನು ಜನ ತಿರಸ್ಕಾರ ಮಾಡಿದ್ದಾರೆ. ಬದಲಾವಣೆ ಬಯಸಿ ಕಾಂಗ್ರೆಸ್‌ಗೆ 135 ಸ್ಥಾನ ಕೊಟ್ಟಿದ್ದಾರೆ. ಇತ್ತೀಚಿನ ಕಾಲದಲ್ಲಿ ಯಾವುದೇ ಪಕ್ಷಕ್ಕೂ ಇಷ್ಟೊಂದು ಬಹುಮತ ಕೊಟ್ಟಿಲ್ಲ. ನಾವು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹಲವು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದ್ದೆವು. ಅದರಲ್ಲಿ ತಕ್ಷಣ 5 ಗ್ಯಾರಂಟಿಯನ್ನು ಅನುಷ್ಠಾನಕ್ಕೆ ತರಲು ಮುಂದಾಗಿದ್ದೇವೆ ಎಂದರು.
ಈಗಾಗಲೇ ಶಕ್ತಿ ಯೋಜನೆ ಆರಂಭವಾಗಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ. ಗೃಹಲಕ್ಷ್ಮಿ ಯೋಜನೆ ಜಾರಿಗೂ ಸಿದ್ಧತೆ ನಡೆದಿದ್ದು, ಆಪ್ ಕೂಡ ರೆಡಿ ಆಗಿದೆ. ನಾಳೆಯಿಂದ ಅರ್ಜಿ ಸಲ್ಲಿಕೆಗೆ ಚಾಲನೆ ಸಿಗಲಿದೆ. ಆ.15ರ ನಂತರ ಫಲಾನುಭವಿಗಳ ಖಾತೆಗೆ 2 ಸಾವಿರ ಹಣ ಹಾಕಲಾಗುತ್ತದೆ. ಒಟ್ಟಾರೆ ಕಾರ್ಯಕ್ರಮಗಳನ್ನು ಜಾರಿ ಮಾಡಲು ತಯಾರಿದ್ದೇವೆ ಎಂದು ಅವರು ತಿಳಿಸಿದರು.
ಜನರನ್ನು ದಾರಿ ತಪ್ಪಿಸಿದರು:
ಮಹದಾಯಿ ಯೋಜನೆ ಅನುಷ್ಠಾನ ಕುರಿತು ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಡಬಲ್ ಎಂಜಿನ್ ಸರ್ಕಾರ ಇತ್ತು. ಕೇಂದ್ರ, ರಾಜ್ಯ, ಗೋವಾ ಎಲ್ಲಾ ಕಡೆಯೂ ಬಿಜೆಪಿ ಸರ್ಕಾರಗಳಿದ್ದವು. ಸುಲಭವಾಗಿ ಸಮಸ್ಯೆ ಬಗೆಹರಿಸಬಹುದಿತ್ತು. ಈ ವಿಚಾರದಲ್ಲಿ ಮೋದಿ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರು ಜನರನ್ನು ದಾರಿ ತಪ್ಪಿಸುವ ಕೆಲಸ ಬಿಟ್ಟು ಬೇರೇನನ್ನೂ ಮಾಡಿಲ್ಲ. ಯಾವುದೇ ಮಾತನ್ನು ಕಾರ್ಯ ರೂಪಕ್ಕೆ ತರುತ್ತಿಲ್ಲ. ಬಿಜೆಪಿಯವರು ಕೇವಲ ಭಾವನಾತ್ಮಕವಾಗಿ ಚುನಾವಣೆ ದೃಷ್ಟಿಯಿಂದ ಮಾತನಾಡುತ್ತಾರೆ. ಇವರಿಗೆ ಜನರ ಬಗ್ಗೆ ಕಾಳಜಿಯಿಲ್ಲ ಎಂದು ಕಿಡಿಕಾರಿದರು.
ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದ ಮಳೆ ಕೊರೆತೆಯಾಗಿದೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಈಗಾಗಲೇ ಸಿಎಂ ಕೂಡ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾಹಿತಿ ಪಡೆದುಕೊಂಡಿದ್ದಾರೆ. ಎಲ್ಲಿಯೂ ಕುಡಿಯುವ ನೀರಿನ ಕೊರತೆಯಾಗದಂತೆ ಕಟ್ಟು ನಿಟ್ಟಿನ ಆದೇಶ ನೀಡಿದ್ದಾರೆ. ಕುಡಿಯುವ ನೀರಿನ ಅಭಾವ ನೀಗಿಸಲು ಬೋರ್‌ವೆಲ್ ಕೊರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಮಹಾರಾಷ್ಟ್ರ ಸರ್ಕಾರದ ಜೊತೆ ಮಾತನಾಡಿ, ಕೊಯ್ನಾ ಡ್ಯಾಮ್ ಮೂಲಕ 3 ಟಿಎಂಸಿ ನೀರನ್ನು ಕೃಷ್ಣ ನದಿಗೆ ಹರಿಸುವಂತೆ ಮನವಿ ಮಾಡಲಾಗಿದೆ. ಆದರೆ, ಮಹಾರಾಷ್ಟ್ರ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಅವರು ತಿಳಿಸಿದರು.